ಭದ್ರಾವತಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ದಂತ ಭಾಗ್ಯ ಯೋಜನೆಯು ಅತ್ಯಂತ ಉಪಯುಕ್ತಕರವಾಗಿರುವ ಯೋಜನೆಯಾಗಿದೆ ಎಂದು ಶಿವಮೊಗ್ಗ ದಂತ ವೈದ್ಯ ವಿಭಾಗದ ನೋಡಲ್ ಅಧಿಕಾರಿ ಡಾ.ಗಿರಿಜಾ ತಿಳಿಸಿದರು.
ಸಾರ್ವಜನಿಕ ಆಸ್ಪತ್ರೆಯಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ, ದಂತಭಾಗ್ಯ ಯೋಜನೆ ಮತ್ತು ನ್ಯಾಷನಲ್ ಒರಲ್ ಹೆಲ್ತ್‍ಪ್ರೋಗ್ರಾಮ್, ಆರೋಗ್ಯ ಇಲಾಖೆ, ಸುಬ್ಬಯ್ಯ ದಂತ ಮಹಾ ವಿದ್ಯಾಲಯ, ರೋಟರಿ ಕ್ಲಬ್ ಆಶ್ರಯದಲ್ಲಿ ಏರ್ಪಡಿಸಿದ್ದ ಉಚಿತ ಪಂಕ್ತಿ ಶಿಬಿರ ಹಾಗು ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
ವೈದ್ಯಕೀಯ ಶಿಬಿರಗಳಂತೆ ದಂತ ತಪಾಸಣಾ ಹಾಗು ದಂತ ಪಂಕ್ತಿ ಜೋಡಣಾ ಶಿಬಿರವನ್ನು ಆಯೋಜಿಸುವ ಮೂಲಕ ಸಮಾಜದ ಬಡ ಹಾಗು ಮದ್ಯಮ ವರ್ಗದವರಿಗೆ ಅನುಕೂಲವಾಗಿದೆ. ದಂತ ಯೋಜನೆ ಪಂಕ್ತಿ ಶಿಬಿರವನ್ನು ಆಯೋಜಿಸುವ ಮೂಲಕ ಹಲ್ಲಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸಲಾಗುತ್ತಿದೆ. ಸರಕಾರದ ಶಿಬಿರಗಳೆಂದು ಸಾರ್ವಜನಿಕರು ತಾತ್ಸಾರ ಭಾವನೆಯನ್ನು ತೋರದೆ ಸದುಪಯೋಗಕ್ಕೆ ಮುಂದಾಗಿ ಎಂದರು.
ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಓ.ಮಲ್ಲಪ್ಪ ಮಾತನಾಡಿ ಇಂತಹ ಶಿಬಿರವು ಮೊದಲನೆಯ ಶಿಬಿರವಾಗಿದೆ. ಸಾಧಕ ಭಾದಕಗಳನ್ನು ಗಮನಿಸಿ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಶಿಬಿರನ್ನು ಆಯೋಜಿಸಲಾಗುವುದು ಎಂದರೆ, ತಾಲೂಕು ವೈದ್ಯಾಧಿಕಾರಿ ಡಾ.ಆರ್.ಎಂ.ಗಾಯಿತ್ರಿ 45 ವರ್ಷ ಮೇಲ್ಪಟ್ಟ ಫಲಾನುಭವಿಗಳು ಇದರ ಸದುಪಯೋಗ ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ ಎಂದರು.
ಸುಬ್ಬಯ್ಯ ದಂತ ಮಹಾ ವಿದ್ಯಾಲಯದ ಡಾ.ಚೇತನ್ ಮಾತನಾಡಿ ಹಲ್ಲಿನ ಸೆಟ್ಟಗಳನ್ನು ರೋಗಿಗಳ ಅಳತೆಗಳೊಂದಿಗೆ ನಿರ್ಮಾಣ ಮಾಡಿಕೊಡಲಾಗುವುದು. ಸಣ್ಣ ಪುಟ್ಟ ಸಮಸ್ಯೆಗಳಿದ್ದಲ್ಲಿ ಇಲ್ಲಿಯ ವೈದ್ಯರೆ ಸರಿಪಡಿಸಿಕೊಡುತ್ತಾರೆ. ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗ ಸುಬ್ಬಯ್ಯ ದಂತ ಆಸ್ಪತ್ರೆಯಲ್ಲಿ ಉಚಿತವಾಗಿ ಸೂಕ್ತ ಸಲಹೆ ಹಾಗು ಚಿಕಿತ್ಸೆ ನೀಡಲಾಗುವುದು ಎಂದರು.
ರೋಟರಿ ಕ್ಲಬ್ ಅಧ್ಯಕ್ಷ ಕೆ.ಹೆಚ್. ತೀರ್ಥಯ್ಯ ಕಾರ್ಯಕ್ರಮ ಉದ್ಘಾಟಿಸಿದರು. ಡಾ.ಗಿರಿಜಾ, ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾದ ಸುಂದರ್ ಬಾಬು, ನಾಗೇಶ್, ಸಾರ್ವಜನಿಕ ಆಸ್ಪತ್ರೆಯ ಡಾ.ಮಯೂರಿ ಸುಬ್ಬಯ್ಯ ದಂತ ಮಹಾ ವಿದ್ಯಾಲಯದ ಡಾ.ನವೀನ್, ಡಾ.ಪ್ರಮೋದ್, ಡಾ,ಮಹೇಶ್ ರೆಡ್ಡಿ, ರೋಟರಿ ಕಾರ್ಯದರ್ಶಿ ಅಡವೀಶಯ್ಯ, ಕುಸುಮಾ, ಮತ್ತಿತರರಿದ್ದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post