ಭದ್ರಾವತಿ: ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯನವರನ್ನು ಸೋಲಿಸಲು ಪ್ರಯತ್ನಿಸಿದ ಮಾಜಿ ಪ್ರಧಾನಿ ದೇವೆಗೌಡ ಮತ್ತು ಕುಮಾರಸ್ವಾಮಿ ಈಗ ಅದೇ ಸಿದ್ಧರಾಮಯ್ಯನವರೊಂದಿಗೆ ಜಂಟಿ ಸುದ್ಧಿ ಘೋಷ್ಠಿ ಮಾಡುತ್ತಿರುವುದು ಅವರ ಸಮಯ ಸಾಧಕ ತನವನ್ನು ತೊರಿಸುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಅವರು ಶನಿವಾರ ರಾತ್ರಿ ಹಳೇನಗರದ ಬಸವೇಶ್ವರ ವೃತ್ತದಲ್ಲಿ ಏರ್ಪಡಿಸಿದ್ದ ಚುನಾವಣಾ ಪ್ರಚಾರದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.
ಸಮಿಶ್ರ ಸರಕಾರ ಬದುಕಿದ್ದೂ ಸತ್ತಂತಾಗಿದ್ದು ಜನತೆ ಇವರನ್ನು ಮರೆತಿದ್ದಾರೆ. ರಾಜ್ಯದಲ್ಲಿ 100 ಕ್ಕೂ ಅಧಿಕ ತಾಲ್ಲೂಕುಗಳು ಬರದಿಂದ ನರಳುತ್ತಿದ್ದರೆ ರಾಜ್ಯದಲ್ಲಿನ ಸರಕಾರ ಗಮನಹರಿಸುವುದನ್ನು ಬಿಟ್ಟು ಉನ್ನತ ಅಧಿಕಾರಿಗಳ ವರ್ಗಾವಣೆ ದಂಧೆಯಲ್ಲಿ ತೊಡಗಿ ಜನರಿಗೆ ಮೋಸ ಮಾಡುತ್ತಿದೆ.
ವಿಧಾನ ಸಭಾ ಚುನಾವಣೆಯಲ್ಲಿ ಈವರೆಗೆ ಈ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗೆ ಹಿನ್ನೆಡೆ ಆಗಿದ್ದರೂ ಸಹ ಲೋಕಸಭಾ ಚುನಾವಣೆಯಲ್ಲಿ ಮಾತ್ರ ಪ್ರತಿಭಾರಿ ಕ್ಷೇತ್ರದಲ್ಲಿ ಪಕ್ಷಕ್ಕೆ ಅತಿಹೆಚ್ಚಿನ ಮತ ನೀಡುತ್ತಾ ಬಂದಿದ್ದೀರಿ, ನಗರದಲ್ಲಿನ ಸರ್.ಎಂ.ವಿಶ್ವೇಶ್ವರಾಯ ರವರು ಸ್ಥಾಪಿಸಿದ ವಿಐಎಸ್‌ಎಲ್ ಕಾರ್ಖಾನೆಯ ಉಳಿವಿಗೆ ಹಾಗು ಕ್ಷೇತ್ರದ ಅಭಿವೃದ್ಧಿಗೆ ಬಿ.ವೈ.ರಾಘವೇಂದ್ರ ಅವರಿಗೆ ಅತಿ ಹೆಚ್ಚಿನ ಮತವನ್ನು ನೀಡುವ ಮೂಲಕ ಜಯಶಾಲಿಯಾಗಿ ಮಾಡಬೇಕೆಂದು ಯಡಿಯೂರಪ್ಪ ಮನವಿ ಮಾಡಿದರು.
ಲೋಕಸಭಾ ಅಭ್ಯರ್ಥಿ ಬಿ.ವೈ ರಾಘವೇಂದ್ರ ಮಾತನಾಡಿ 6 ತಿಂಗಳ ನಂತರ ಬರಲಿರುವ ಲೋಕಸಭಾ ಚುನಾವಣೆಗೆ ಈ ಉಪ ಚುನಾವಣೆ ದಿಕ್ಸೂಚಿ ಯಾಗಿರುವುದರಿಂದ ಉಪ ಚುನಾವಣೆ ಎಂದು ಉಪೇಕ್ಷಿಸದೆ ಪ್ರತಿಯೊಬ್ಬರೂ ಮತಗಟ್ಟೆಗೆ ಬಂದು ಬಿಜೆಪಿ ಅಭ್ಯರ್ಥಿಯಾಗಿ ನಿಂತಿರುವ ತಮಗೆ ಮತಚಲಾಯಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲ ಪಡಿಸಬೇಕು. ಇಲ್ಲಿನ ವಿಐಎಸ್‌ಎಲ್ ಕಾರ್ಖಾನೆಯನ್ನು ಉಳಿಸಿ ಬೆಳೆಸಲು ತಾವು ನಿಮ್ಮೊಂದಿಗಿರುತ್ತೇನೆ ಎಂದರು.
ಶೃಂಗೇರಿ ಕ್ಷೇತ್ರದ ಮಾಜಿ ಶಾಸಕ ಜೀವರಾಜ್ ಮಾತನಾಡಿ ಬಿಜೆಪಿಯಲ್ಲಿ ಜಾತಿಯತೆ ಇಲ್ಲ. ಆದರೆ ಒಕ್ಕಲಿಗೆ ಜನಾಂಗಕ್ಕೆ ಸೇರಿದ ಒಂದು ಕುಟುಂಬದಲ್ಲಿ ತಾವೇ ಸ್ಥಾಪಿಸಿರುವ ಪಕ್ಷದಲ್ಲಿ ಅಪ್ಪ ರಾಷ್ಟ್ರಾಧ್ಯಕ್ಷರು, ಓರ್ವ ಮಗ ಮುಖ್ಯಮಂತ್ರಿ, ಮತ್ತೊಬ್ಬ ಮಗ ಸರಕಾರ ಪ್ರಮುಖ ಖಾತೆ ಹೊಂದಿದ್ದಾರೆ. ಈ ರೀತಿ ಅಧಿಕಾರ ಆ ಕುಟುಂಬಸ್ಥರ ಕೈಯ್ಯಲ್ಲಿರುವಂತೆ ವ್ಯವಸ್ಥೆಮಾಡಿಕೊಂಡಿದೆ ಎಂದು ಜೆಡಿಎಸ್ ಪಕ್ಷದ, ದೇವೆಗೌಡರ, ಕುಮಾರಸ್ವಾಮಿ ಹಾಗು ರೇವಣ್ಣನ ಹೆಸರು ಹೆಸರು ಹೇಳದೆ ವ್ಯಂಗ್ಯವಾಡಿದರು. ಜನಾನುರಾಗಿಯಾಗಿರುವ ಯುವನಾಯಕ ಬಿ.ವೈರಾಘವೇಂದ್ರ ಅವರಿಗೆ ಮತ ನೀಡಬೇಕು ಎಂದರು.
ವೇದಿಕೆಯಲ್ಲಿ ಹೊನ್ನಾಳಿ ಮಾಜಿ ಶಾಸಕ ರೇಣುಕಾಚಾರ್ಯ, ವಿಧಾನ ಪರಿಷತ್ ಸದಸ್ಯ ರುದ್ರೇಗೌಡ, ಪಕ್ಷದ ನಗರಾಧ್ಯಕ್ಷ ಜಿ. ಆನಂದ ಕುಮಾರ್, ಗ್ರಾಮಾಂತರ ಅಧ್ಯಕ್ಷ ಮಂಗೋಟೆ ರುದ್ರೇಶ್, ಪ್ರಭಾರಿ ವಿ.ಕದಿರೇಶ್ ಮುಖಂಡರಾದ ದತ್ತಾತ್ರಿ, ಧರ್ಮಪ್ರಸಾದ್, ಶೋಭ, ವೆಂಕಟೇಶ್, ಎನ್. ವಿಶ್ವನಾಥರಾವ್, ರಾಘವೇಂದ್ರಾಚಾರ್, ವಿಶ್ವನಾಥ ಕೋಠಿ, ಸುರೇಶಪ್ಪ, ಬಿ.ಕೆ. ಶ್ರೀನಾಥ್, ಮಂಜುನಾಥ್, ಸುನಿತ ನಂಬಿಯಾರ್, ರಾಮಚಂದ್ರ, ಹೇಮಾವತಿ ಮುಂತಾದವರು ಉಪಸ್ಥಿತರಿದ್ದರು. ಗಾಯಿತ್ರಿ ಪ್ರಾರ್ಥಿಸಿ, ಮಂಜಪ್ಪ ನಿರೂಪಿಸಿದರು.
ವರದಿ: ಆರ್.ವಿ. ಕೃಷ್ಣ, ಭದ್ರಾವತಿ
Discussion about this post