ಭದ್ರಾವತಿ: ತಾಲ್ಲೂಕಿನ ಸಿಂಗನಮನೆ, ತಾವರೆಗಟ್ಟ ಹಾಗು ಕಲ್ಲಹಳ್ಳಿ ಮೂರು ಗ್ರಾಮ ಪಂಚಾಯಿತಿಗಳ ತೆರವಾಗಿದ್ದ ಸ್ಥಾನಕ್ಕೆ ಮೇ: 29 ರಂದು ಚುನಾವಣೆ ನಡೆದು ಫಲಿತಾಂಶ ಪ್ರಕಟಗೊಂಡು ಮೂರು ಮಂದಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.
ಕಲ್ಲಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 717 ಮತಗಳ ಪೈಕಿ ಬಿ. ಅನಂದ್ 495 ಮತಗಳನ್ನು ಪಡೆದು ಆಯ್ಕೆಯಾದರೆ, ಪ್ರತಿಸ್ಪರ್ಧಿಗಳಾದ ದೇವೇಂದ್ರ 68, ನಾಗೇಶ್ 146, ತಿರಸ್ಕೃತ 08 ಮತಗಳು ಬಿದ್ದಿವೆ. ಚುನಾವಣಾಧಿಕಾರಿಯಾಗಿ ದೈಹಿಕ ಶಿಕ್ಷಕ ಎನ್.ಕೆ.ಪಾಲಾಕ್ಷಪ್ಪ, ಸಹಾಯಕರಾಗಿ ಪಿಡಿಒ ಶರ್ಮಿಳಾ ಕಾರ್ಯನಿರ್ವಹಿಸಿದ್ದರು.
ಸಿಂಗನಮನೆ ಗ್ರಾಮ ಪಂಚಾಯಿತಿಯ ಶಂಕರಘಟ್ಟ ಕ್ಷೇತ್ರದಲ್ಲಿ 638 ಮತಗಳಿದ್ದು ಮಂಜಪ್ಪ 255 ಮತಗಳನ್ನು ಪಡೆದು ಜಯಶಾಲಿ ಆದರೆ ಬೆನಕಾಚಾರ್ 175, ಮಹಮ್ಮದ್ ಗೌಸ್ 38, ಮೋಹನ್ ಕುಮಾರ್ 162 ಮತಗಳನ್ನು ಪಡೆದು ಪರಾಭವಗೊಂಡರೆ 8 ಮತಗಳು ತಿರಸ್ಕೃತಗೊಂಡಿವೆ.
ಚುನಾವಣಾಧಿಕಾರಿ ಉಪನ್ಯಾಸಕ ಹಾಲೇಶ್, ಸಹಾಯಕರಾಗಿ ಪಿಡಿಒ ಎಂ.ಸೋಮಶೇಖರ್ ಕರ್ತವ್ಯ ನಿರ್ವಹಿಸಿದರು.
ತಾವರೆಗಟ್ಟ ಗ್ರಾಮ ಪಂಚಾಯಿತಿಯ ಖಾಲಿ ಸ್ಥಾನಕ್ಕೆ ನಡೆದ ಚುನಾವಣಾ ಕ್ಷೇತ್ರದಲ್ಲಿ 659 ಮತಗಳ ಪೈಕಿ ತಿಮ್ಮಣ್ಣ 429 ಮತಗಳನ್ನು ಪಡೆದು ಜಯ ಸಾಧಿಸಿದರೆ, ಶೇಖರಪ್ಪ 218 ಮತಗಳನ್ನು ಪಡೆದು ಪರಾಭವಗೊಂಡರೆ 12 ಮತಗಳು ತಿರಸ್ಕೃತಗೊಂಡಿದೆ. ಚುನಾವಣಾಧಿಕಾರಿ ದೈಹಿಕ ಶಿಕ್ಷಕ ಎಂ.ಎಚ್. ನಾಗರಾಜ್ ಸಹಾಯಕರಾಗಿ ಪಿಡಿಒ ಪ್ರಕಾಶ್ ಕಾರ್ಯ ನಿರ್ವಹಿಸಿದ್ದರು.
Discussion about this post