ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಮೈಸೂರಿನ ನ್ಯಾಯಾಲಯದ ಆವರಣದಲ್ಲಿ ಗುರುವಾರ ಪ್ರಪ.ಭಗವಾನ್ ಮುಖಕ್ಕೆ ಮೀರಾ ರಾಘವೇಂದ್ರ ಎಂಬ ಯುವ ನ್ಯಾಯವಾದಿಯೊಬ್ಬರು ಮಸಿಬಳಿದ ಘಟನೆಯನ್ನು ಖಂಡಿಸಿ ಪ್ರಗತಿಪರರು ರಂಗಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದರೆ, ಅದೇ ಸಂದರ್ಭದಲ್ಲಿ ಅದೇ ಸ್ಥಳದಲ್ಲಿ ಮಸಿ ಬಳಿದ ಘಟನೆಯನ್ನು ಬೆಂಬಲಿಸಿ ಬಜರಂಗದಳ ಮತ್ತು ಹಿಂದೂ ಪರ ಸಂಘಟನೆಗಳು ಏಕಕಾಲದಲ್ಲಿ ಘೋಷಣೆ ಕೂಗಿದ ಕ್ಷಣಕ್ಕೆ ಉಕ್ಕಿನ ನಗರ ಸಾಕ್ಷಿಯಾಗಿದೆ.
ಭಗವಾನಗೆ ಜೈಕಾರ-ಮಿರಾಗೆ ಧಿಕ್ಕಾರದ ಘೋಷಣೆ
ಖಂಡನಾ ಪ್ರತಿಭಟನೆಯಲ್ಲಿ ಎಸ್.ಡಿ.ಪಿ.ಐ ಹಾಗೂ ದಲಿತ ಸಂಘಟನೆಯ ಪ್ರಮುಖರಾದ ಮುರ್ತುಝಾ ಖಾನ್, ಸುರೇಶ್, ಚಿನ್ನಯ್ಯ, ಚೆನ್ನಪ್ಪ, ರಾಜೇಂದ್ರ, ರಾಜು ಮುಂತಾದವರು ಭಾಗವಹಿಸಿ ಮೀರಾ ರಾಘವೇಂದ್ರ ವಿರುದ್ಧ ಘೋಷಣೆ ಕೂಗಿ ಭಗವಾನ್ ಗೆ ಜೈಕಾರ ಹಾಕಿದರು.
ಮೈಸೂರಿನ ಘಟನೆ ಖಂಡಿಸಿ ವಕೀಲೆ ಮೀರಾ ಅವರ ನ್ಯಾಯವಾದಿ ಸಂಘದ ಸನ್ನದನ್ನು ರದ್ಧುಗೊಳಿಸಬೇಕೆಂದು ಆಗ್ರಹಿಸಿ ರಂಗಪ್ಪ ವೃತ್ತದಿಂದ ನ್ಯಾಯಾಲಯದ ಪ್ರವೇಶದ್ವಾರದ ಬಳಿವರೆಗೆ ತೆರಳಿ ವಕೀಲರ ಸಂಘದ ಅಧ್ಯಕ್ಷ ವಿ. ವೆಂಕಟೇಶ್ ಅವರಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ವಿ. ವೆಂಕಟೇಶ್ ಮನವಿಯನ್ನು ಬಾರ್ ಕೌನ್ಸಿಲ್’ಗೆ ಕಳುಹಿಸಿಕೊಡುತ್ತೇವೆ. ನಿಮ್ಮ ಹೋರಾಟ ಮುಂದುವರೆಸಿ ಎಂದರು.
ನಂತರ ಪ್ರತಿಭಟನಾಕಾರರು ತಾಲೂಕು ಕಚೇರಿಗೆ ತೆರಳಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ರೀತಿ ಘಟನೆ ನ್ಯಾಯಾಲಯದ ಆವರಣದಲ್ಲಿ ನಡೆದಿರುವುದು ಸಂವಿಧಾನದ ತತ್ವ ಸಿದ್ಧಾಂತಕ್ಕೆ ವಿರುದ್ದವಾದುದಾಗಿದೆ ಎಂದು ಹೇಳಿದರು.
ಮೀರಾ ರಾಘವೇಂದ್ರ ಪರ ಜಯಘೋಷ-ಭಗವಾನ್‌ಗೆ ಧಿಕ್ಕಾರ
ಅದೇ ಸಮಯದಲ್ಲಿ ಮೈಸೂರಿನಲ್ಲಿ ಮಸಿ ಬಳಿದ ಘಟನೆಯನ್ನು ಬೆಂಬಲಿಸಿ ಬಜರಂಗದಳ ಮತ್ತು ಹಿಂದೂಪರ ಸಂಘಟನೆಗಳ ಮುಖಂಡರಾದ ಧರ್ಮಪ್ರಸಾದ್, ಸವಾಯ್ ಸಿಂಗ್, ಕೃಷ್ಣ, ಧನುಷ್, ಜಯಂತಿ, ವೇಲು, ಶ್ರೀಕಾಂತ್, ಪ್ರದೀಪ, ಜಾನಕಿ ಸೇರಿದಂತೆ ಅನೇಕ ಯುವಕರು ಮತ್ತು ಮಹಿಳೆಯರು ರಂಗಪ್ಪ ವೃತ್ತದಲ್ಲಿ ಜಮಾಯಿಸಿ ಭಗವಾನ್‌ಗೆ ಧಿಕ್ಕಾರ ಕೂಗುತ್ತಾ ನ್ಯಾಯವಾದಿ ಮೀರಾ ರಾಘವೇಂದ್ರ ಪರ ಜಯಕಾರ ಹಾಕುತ್ತಾ ಘಟನೆಯನ್ನು ಬೆಂಬಲಸಿ ಸಂಭ್ರಮಿಸಿದರು. ಸ್ಥಳದಲ್ಲಿ ಕೆಲಕಾಲ ಪರಿಸ್ಥಿತಿ ಅಸಹಜವಾದ ವಾತಾವರಣಕ್ಕೆ ಕಾರಣವಾಯಿತು. ಸ್ಥಳದಲ್ಲಿ ಪೋಲಿಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಜರಿದ್ದು ಪರಿಸ್ಥಿತಿ ನಿಭಾಯಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post