ಭದ್ರಾವತಿ: ನಗರಸಭೆಯ ವಿಶೇಷ ಸಾಮಾನ್ಯ ಸಭೆಯಲ್ಲಿ ದಸರಾ, ಅವೈಜ್ಞಾನಿಕ ಅಮೃತ್ ಯೋಜನೆ ಮತ್ತಿತರೆ ಟೆಂಡರ್, ಪೌರ ಕಾರ್ಮಿಕರ ದಿನಾಚರಣೆಯ ಆಹ್ವಾನ ಪತ್ರಿಕೆಯಲ್ಲಿ ಶಾಸಕರ ಹೆಸರು ಕೈಬಿಟ್ಟ ವಿಚಾರಗಳು ಸಭೆಯ ಆರಂಭದಲ್ಲಿ ಪ್ರಸ್ತಾಪಗೊಂಡು ಸದಸ್ಯರ ಮತ್ತು ಅಧಿಕಾರಿಗಳ ನಡುವೆ ಪರಸ್ಪರ ಮಾತಿನ ಚಕಮಕಿ ನಡೆದು ಕಾಲಹರಣಗೊಂಡ ಪ್ರಕರಣ ನಡೆಯಿತು.
ಸಭೆಯ ಆರಂಭ ವಾಗುತ್ತಿದ್ದಂತೆ ಬಿಜೆಪಿ ಸದಸ್ಯೆ ರೇಣುಕಾ ಸರಕಾರದ ಕಾರ್ಯಕ್ರಮವಾದ ಪೌರ ಕಾರ್ಮಿಕರ ದಿನಾಚರಣೆಯ ಆಹ್ವಾನ ಪತ್ರಿಕೆಯಲ್ಲಿ ಶಾಸಕ ಬಿ.ಕೆ.ಸಂಗಮೇಶ್ವರ್ ರವರ ಹೆಸರು ಕೈ ಬಿಟ್ಟಿರುವುದು ಸರಿಯಲ್ಲವೆಂದು ಅಧಿಕಾರಿಗಳ ನಿರ್ಲಕ್ಷತನದ ವರ್ತನೆಯನ್ನು ಖಂಡಿಸುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಜೆಡಿಎಸ್ ಹಿರಿಯ ಸದಸ್ಯ ಆರ್.ಕರುಣಾಮೂರ್ತಿ ಶಾಸಕರ ಹೆಸರು ಮುದ್ರಿಸದೆ ಅವರ ಸ್ಥಾನಕ್ಕೆ ಅಗೌರವ ತಂದಿದ್ದೀರಿ ಸಂಬಂಧಿಸಿದವರ ವಿರುದ್ದ ಕಾರಣ ಕೇಳಿ ನೋಟೀಸ್ ಜಾರಿ ಮಾಡಬೇಕೆಂದು ಆಗ್ರಹಿಸಿದರು. ಪರಿಸರ ಇಂಜಿನಿಯರ್ ರುದ್ರೇಗೌಡ ಶಾಸಕರ ಹೆಸರನ್ನು ಕೈಬಿಟ್ಟ ಬಗೆಯನ್ನು ತಿದ್ದಿಕೊಳ್ಳುವುದಾಗಿ ಹಾಗು ಆಗಿರುವ ತಪ್ಪನ್ನು ಮುಂದಿನ ದಿನಗಳಲ್ಲಿ ಸರಿಪಡಿಸಿಕೊಳ್ಳುವುದಾಗಿ ಸಮಜಾಯಿಸಿ ನೀಡಿದರು.
ರಾಜ್ಯದ ಹಲವೆಡೆ ಪ್ರಕೃತಿ ವಿಕೋಪದಿಂದಾಗಿ ದಸರಾ ಹಬ್ಬವನ್ನು ಸರಳವಾಗಿ ಆಚರಿಸಬೇಕೆಂದು ಜಿಲ್ಲಾಧಿಕಾರಿಗಳು ಹೇಳಿರುವುದರಿಂದ ಪ್ರಸ್ತುತ ವರ್ಷ 15 ಲಕ್ಷ ರೂ ನಿಗದಿ ಮಾಡಿ ಯೋಜನೆ ರೂಪಸಲಾಗುತ್ತಿದೆ. ಕಳೆದ ವರ್ಷ ಅದ್ದೂರಿಯಾಗಿ ಆಚರಿಸಲು 25 ಲಕ್ಷ ರೂಗಳನ್ನು ವಿನಿಯೋಗಿಸಲಾಗಿತ್ತು. ಸದಸ್ಯರು ಸಹಕರಿಸುವಂತೆ ಪೌರಾಯುಕ್ತ ಶ್ರೀಕಂಠಸ್ವಾಮಿ ಹೇಳಿದರು. ಇದನ್ನು ವಿರೋಧಿಸಿದ ಅನೇಕ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ ನಿಗಧಿ ಪಡಿಸಲಾಗಿರುವ 15 ಲಕ್ಷ ರೂಗಳ ಜೊತೆ ಹೆಚ್ಚುವರಿಯಾಗಿ 10 ಲಕ್ಷ ರೂ ನೀಡುವಂತೆ ಒತ್ತಾಯಿಸಿದರು. ಜೆಡಿಎಸ್ ಸದಸ್ಯ ಬದರಿನಾರಾಯಣ ದಿನಬಳಕೆಯ ವಸ್ತುಗಳು ಮತ್ತು ಜನರೇಟರ್ ಬಳಕೆಗೆ ಡಿಸೇಲ್, ಪೆಟ್ರೋಲ್ ಬೆಲೆ ಗಗನಕ್ಕೇರಿರುವುದರಿಂದ 25 ಲಕ್ಷ ರೂ ಬೇಕಾಗುತ್ತದೆ ಎಂದು ಆಗ್ರಹಿಸಿದರು.
ಇದಕ್ಕೆ ಪೌರಾಯುಕ್ತ ಶ್ರೀಕಂಠಸ್ವಾಮಿ ಸಮಜಾಯಿಸಿ ನೀಡಿ ಜಿಲ್ಲಾಧಿಕಾರಿಗಳು ಇತ್ತೀಚಿಗೆ ಸಭೆಯ ಕರೆದು ಅಮೃತ್ ಯೋಜನೆ ಕಾಮಗಾರಿ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಿದಿದ್ದರೆ ಹಣ ವಾಪಸ್ಸು ಹೋಗುತ್ತದೆ ಎಂದು ಹೇಳಿದ್ದಾರೆ. ಅದ್ದರಿಂದ ಅಮೃತ್ ಯೋಜನೆಯ ಟೆಂಡರ್ ವಿಷಯವನ್ನು ಸಭೆಗೆ ತರಲಾಗಿದೆ ಎಂದು ತಿಳಿಸಿದರು. ಇದಕ್ಕೆ ದನಿ ಗೂಡಿಸಿದ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಬಿ.ರವಿಕುಮಾರ್ ಊರಿನ ಅಭಿವೃದ್ದಿ ಕಾಮಗಾರಿಗಳಿಗೆ ಎಲ್ಲರೂ ಸಹಮತ ವ್ಯಕ್ತಪಡಿಸಿ, ಕಾಮಗಾರಿಗಳು ಪೂರ್ಣಗೊಂಡಲ್ಲಿ ಸರ್ವರಿಗೂ ಒಳಿತಾಗುತ್ತದೆ.
ಜೆಡಿಎಸ್ ಸದಸ್ಯ ಶಿವರಾಜ್ ಮಾತನಾಡಿ ಗುತ್ತಿಗೆ ಪೌರ ಕಾರ್ಮಿಕರಿಗೆ ಮೂಲಭೂತ ಸೌಲಭ್ಯಗಳು ನೀಡದೆ ವಂಚಿಸಲಾಗುತ್ತಿದೆ. ಪರಿಸರ ಇಂಜಿನಿಯರ್ ರುದ್ರೇಗೌಡ ಗುತ್ತಿಗೆ ಕಾರ್ಮಿಕರನ್ನು ಮಲತಾಯಿ ಮಕ್ಕಳಂತೆ ಕಾಣುತ್ತಾ ಅವರಿಗೆ ಸೇರಬೇಕಾದ ಸೌಲತ್ತುಗಳಿಂದ ವಂಚಿಸುತ್ತಿರುವುದು ಸಲ್ಲದು. ರುದ್ರೇಗೌಡರಿಗೆ ವರ್ಗಾವಣೆಯಾಗಿದ್ದರು ಸಹ ಸ್ಥಳಕ್ಕೆ ನಿಯೋಜನೆ ಮಾಡುವಂತೆ ಆಗ್ರಹಿಸಿದರು. ಬಿಜೆಪಿ ಸದಸ್ಯ ಜಿ.ಆನಂದಕುಮಾರ್ ವಾರ್ಡ್ ನಂ: 15-16 ರಲ್ಲಿ ಮಾಜಿ ನಗರಸಭಾ ಸದಸ್ಯ ಪುಟ್ಟೇಗೌಡ ಸೇರಿದಂತೆ ಅನೇಕರಿಗೆ ಡೆಂಗ್ಯೂ ಜ್ವರ ಬಂದು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ನಗರಸಭೆಯ ಆರೋಗ್ಯ ಇಲಾಖೆಯು ಸಂಪೂರ್ಣ ನೆಲೆ ಕಳೆದುಕೊಂಡಿದೆ ಎಂದರು.
ನಗರಸಭಾಧ್ಯಕ್ಷೆ ಎಸ್.ಹಾಲಮ್ಮ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಮೀನಾಕ್ಷಿ ಉಪಸ್ಥಿತರಿದ್ದರು. ಪೌರಾಯುಕ್ತ ಶ್ರೀಕಂಠಸ್ವಾಮಿ ಸ್ವಾಗತಿಸಿದರು.
ವರದಿ: ಆರ್.ವಿ. ಕೃಷ್ಣ, ಭದ್ರಾವತಿ
Discussion about this post