ಭದ್ರಾವತಿ: ಕೇಂದ್ರದಲ್ಲಿ ನಾಲ್ಕುವರೆ ವರ್ಷಗಳ ಹಿಂದೆ ಆಡಳಿತ ಚುಕ್ಕಾಣಿ ಹಿಡಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಎಲ್ಲಾ ವರ್ಗದವರಿಗೂ ಸಂವಿಧಾನ ಬದ್ದ ನ್ಯಾಯ ಒದಗಿಸಿಕೊಟ್ಟಿದ್ದಾರೆ ಎಂದು ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾಧ್ಯಕ್ಷ ಕೆ.ಎಸ್. ಅರುಣ್ ಕುಮಾರ್ ಹೇಳಿದರು.
ಮಂಗಳವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಹಿಂದುಳಿದ ವರ್ಗಗಳಿಗೆ ರಾಷ್ಟ್ರೀಯ ಆಯೋಗ ರಚಿಸುವ ಮೂಲಕ ಸೂಕ್ತ ಸ್ಥಾನ ಮಾನ ನೀಡಿ ಬಡವ ಬಲ್ಲಿದರೆನ್ನದೆ ಎಲ್ಲಾ ವರ್ಗಗಳಿಗೂ ಮುದ್ರಾ ಯೋಜನಾ ಮೂಲಕ ಸಾಲ ಸೌಲಭ್ಯ ನೀಡಿ ನಿರುದ್ಯೋಗ ನಿವಾರಣೆಗೆ ಶ್ರಮಿಸಿದ್ದಾರೆ.
ಕೇವಲ ಭರವಸೆ ನೀಡದೆ ಹಿಂದುಳಿದ ಸಮಾಜಗಳಿಗೆ ಹೆಚ್ಚಿನ ಸ್ಥಾನ ಮಾನ ನೀಡುವ ಮೂಲಕ ರಾಜಕೀಯ, ಆರ್ಥಿಕವಾಗಿ ಅನೇಕ ಅವಕಾಶ ಕಲ್ಪಿಸಿರುವ ಕೀರ್ತಿ ಮೋದಿ ರವರದ್ದಾಗಿದ್ದು, ಸಬ್ ಕೇ ಸಾಥ್-ಸಬ್ ಕಾ ವಿಕಾಸ್ ಎಂಬ ಘೋಷಣೆಯಡಿ ಎಲ್ಲರು ಭಾರತೀಯರೆಂಬ ವಿಶಾಲ ದೃಷ್ಟಿ ಕೋನವನ್ನು ತೋರಿಸಿಕೊಟ್ಟಿದ್ದಾರೆ.
ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಪ್ರತ್ಯೇಕ ಸಚಿವಲಾಯ ಸ್ಥಾಪನೆ ಮಾಡುವ ಮೂಲಕ ಶ್ರಮಿಸಿದ್ದರು. ದೇವರಾಜ ಅರಸು ಅಭಿವೃದ್ದಿ ನಿಗಮಕ್ಕೆ ಸಾವಿರ ಕೋಟಿ ಅನುದಾನ ಸಣ್ಣ ಸಣ್ಣ ಯೋಜನೆಗಳ ಮೂಲಕ ಅಭಿವೃದ್ದಿಗೆ ಕಾರಣ ಕರ್ತರಾಗಿದ್ದಾರೆ. ಪ್ರತ್ಯೇಕವಾಗಿ ಹಿಂದುಳಿದ ವರ್ಗಗಳ ಅಭಿವೃದ್ದಿಗಾಗಿ 75 ಕೋಟಿ ವಿಶೇಷ ಅನುದಾನ ನೀಡಿದ್ದು ಸ್ಮರಣಿಯ.
ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಹೆಚ್ಚಿನ ಸ್ಥಾನ ಮಾನ ನೀಡುವ ಮೂಲಕ ಹೆಚ್ಚು ಶಾಸಕರನ್ನು ಗೆಲ್ಲಿಸಲು ಭಾರತೀಯ ಜನತಾ ಪಕ್ಷವು ಶ್ರಮಿಸಿದೆ. ಆದರೆ ಕಳೆದ 70 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷವು ಅಭಿವೃದ್ದಿ ಪಡಿಸದೆ ಕೇವಲ ಸುಳ್ಳು ಭರವಸೆಗಳನ್ನು ನೀಡುತ್ತಾ ಜನರನ್ನು ಮೋಸ ಮಾಡುವ ಪ್ರಯತ್ನಕ್ಕೆ ತಳ್ಳಿರುವುದು ದುರಂತವಾಗಿದೆ ಎಂದು ಕಿಡಿ ಕಾರಿದರು.
ಗೋಷ್ಟಿಯಲ್ಲಿ ಪಕ್ಷದ ತಾಲೂಕು ಅಧ್ಯಕ್ಷ ಜಿ.ಆನಂದಕುಮಾರ್, ಮುಖಂಡರಾದ ದೇವಪ್ಪ, ನಲ್ಲಿ ರೇವಣ್ಣ, ತೀರ್ಥಪ್ಪ, ಶಾಮಿಯಾನ ಸಂತೋಷ್, ಸುಬ್ರಮಣ್ಯ, ರಾಜುರೇವಣಕರ್, ಕಾಂತರಾಜ್ ಮುಂತಾದವರಿದ್ದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post