ಭದ್ರಾವತಿ: ಮನೆಗಳಲ್ಲಿ ಮಾಡುವ ವಿವಾಹಾದಿಗಳು ಎರಡೂ ಕುಟುಂಬಗಳ ಅಭಿವೃದ್ಧಿಗಾಗಿ ಮಾಡಲಾಗುತ್ತದೆ, ಆದರೆ ದೇವತಾ ಕಲ್ಯಾಣೋತ್ಸವಗಳು ಲೋಕ ಕಲ್ಯಾಣಾರ್ಥವಾಗಿ ಮಾಡುವ ಪುಣ್ಯಕಾರ್ಯವಾಗಿರುತ್ತದೆ ಎಂದು ಹಳೇನಗರದ ಶ್ರೀಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯದ ಪ್ರಧಾನ ಅರ್ಚಕ ರಂಗನಾಥ ಶರ್ಮ ಹೇಳಿದರು.
ಅವರು ತಾಲೂಕಿನ ಬಾರಂದೂರು ಗ್ರಾಮದ ಶ್ರೀಪದ್ಮಾವತಿ ಶ್ರೀ ಶ್ರೀನಿವಾಸ ದೇವಾಲಯದ ಆವರಣದಲ್ಲಿ ದೇವಾಲಯದ ಸಮಿತಿ ಮತ್ತು ವಂದೇಮಾತರಂ ಟ್ರಸ್ಟ್ ಹಾಗೂ ಸ್ಥಳೀಯ ಸಂಘ ಸಂಸ್ಥಗಳು ಸಂಯುಕ್ತವಾಗಿ ಏರ್ಪಡಿಸಿದ್ದ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿವಾಹ ಕಾಲದಲ್ಲಿ ಹೇಳಲಾಗುವ ವೇದ ಮಂತ್ರಗಳಿಗೆ ಅದರದೇ ಆದ ಮಹತ್ವ ಶಕ್ತಿಇದೆ. ಅದನ್ನು ಗ್ರಹಿಸುವಿಕೆಯಿಂದ ಪಾಪಗಳು ಪರಿಹಾರವಾಗಿತ್ತದೆ ಎಂಬ ನಂಬಿಕೆ ಇದೆ. ಸರ್ವೇಜನಾಃ ಸುಖಿನೋಭವಂತು ಎಂಬ ಉದಾತ್ತ ಭಾವನೆಯಿಂದ ನಡೆಸಲ್ಪಡುವ ಧಾರ್ಮಿಕ ಕಾರ್ಯಕ್ರಮಗಳಿಗೆ ಜನತೆ ಸರ್ವ ರೀತಿಯ ಸಹಕಾರವನ್ನು ನೀಡುವ ಮೂಲಕ ಪುಣ್ಯಕಾರ್ಯದಲ್ಲಿ ಭಾಗಿಗಳಾಗಬೇಕು. ದೇವಾಲಯಗಳನ್ನು ಕಟ್ಟುವುದು ಎಷ್ಟುಮುಖ್ಯವೋ ಆ ದೇವಾಲಯಗಳಲ್ಲಿ ಪ್ರತಿನಿತ್ಯ ಶಾಸ್ತ್ರೋಕ್ತವಾಗಿ ಪೂಜೆ ನಡೆಯಲು ವ್ಯವಸ್ಥೆ ಮಾಡುವುದೂ ಅಷ್ಟೇ ಮುಖ್ಯ ಎಂದರು.
ದೇವಾಲಯಗಳಲ್ಲಿ ಅರ್ಚಕರು ಪುರಜನರ ಹಿತಕ್ಕಾಗಿ ದೇವರನ್ನು ಪೂಜಿಸುತ್ತಾರೆ, ಅದೇ ಅರ್ಚಕರ ಕುಟುಂಬದ ಜೀವನ ನಿರ್ವಹಣೆಗೆ ಸೂಕ್ತ ವ್ಯವಸ್ಥೆಮಾಡುವುದು ಪುರಜನರ ಕರ್ತವ್ಯ ಮತ್ತು ಜವಾಬ್ಧಾರಿ ಎಂಬುದನ್ನು ಅರಿತು ದೇವಾಲಯದಲ್ಲಿ ಪ್ರತಿನಿತ್ಯದ ಪೂಜೆಗೆ ಅಗತ್ಯವಾದ ವ್ಯವಸ್ಥೆಯನ್ನು ಗ್ರಾಮಸ್ಥರು ಮಾಡಬೇಕೆಂದರು.
ಸ್ಥಳೀಯ ದೇವಾಲಯದ ಅರ್ಚಕ ಶ್ರೀಧರ ಅಡಿಗ ಮಾತನಾಡಿ ಸದರಿ ದೇವಾಲಯದಲ್ಲಿ ಕೆಲವು ವರ್ಷಗಳಿಂದ ನಡೆಸುತ್ತಾ ಬರುತ್ತಿರುವ ಶ್ರೀ ಶ್ರೀನಿವಾಸ ಶ್ರೀ ಪದ್ಮಾವತಿ ಅಮ್ಮನವರ ಕಲ್ಯಾಣೋತ್ಸವ ವರ್ಷದಿಂದ ವರ್ಷಕ್ಕೆ ವಿಜೃಂಭಣೆಯಿಂದ ನಡೆಯುತ್ತಿರುವುದು ಭಗವಂತನ ಕೃಪೆ ಮತ್ತು ಭಕ್ತಾದಿಗಳ ಸಹಕಾರ ಎಂದರು.
ವಂದೇಮಾತರಂ ಟ್ರಸ್ಟ್ ಮುಖ್ಯಸ್ಥ ಪ್ರಸನ್ನ ಮಾತನಾಡಿ ಇಂತಹ ದೇವತಾ ಕಾರ್ಯಕ್ರಮಗಳಿಗೆ ಗ್ರಾಮದ ಸಮಸ್ಥರೂ ಸರ್ವರೀತಿಯ ಸಹಕಾರ ನೀಡಬೇಕು ಆಗ ಇನ್ನೂ ಹೆಚ್ಚಿನ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಸಾಧ್ಯವಾಗುತ್ತದೆ ಎಂದರು.
ಉತ್ಸವ:
ಭೂದೇವಿ ಶ್ರೀದೇವಿ ಸಹಿತನಾದ ಶ್ರೀ ಶ್ರೀನಿವಾಸನ ಉತ್ಸವ ಹಾಗೂ ಪದ್ಮಾವತಿ ಅಮ್ಮನವರ ಉತ್ಸವವನ್ನು ಮಂಗಳವಾದ್ಯ ಸಹಿತವಾಗಿ ನಗರದ ಬಿ.ಹೆಚ್.ರಸ್ತೆಯಿಂದ ದೇವಾಲಯದವರೆಗೆ ನಡೆಸಲಾಯಿತು. ನಂತರ ವೇದಮಂತ್ರ ಪಠಣದೊಂದಿಗೆ ದೇವಾಲಯದ ಪಕ್ಕದಲ್ಲಿ ನಿರ್ಮಿಸಿದ್ದ ವೇದಿಕೆಯಲ್ಲಿ ಶ್ರೀಶ್ರೀನಿವಾಸ ಪದ್ಮಾವತಿ ಅಮ್ಮನವರ ಕಲ್ಯಾಣೋತ್ಸವವನ್ನು ವೇ.ಬ್ರ.ರಂಗನಾಥಶರ್ಮ, ಶ್ರೀನಿವಾಸ್ ಅವರು ನಡೆಸಿಕೊಟ್ಟರು.
ಶ್ರೀಲಕ್ಷ್ಮೀನರಸಿಂಹಸ್ವಾಮಿ ವೇದಪಾಠಶಾಲೆ ವಿದ್ಯಾರ್ಥಿಗಳು ವೇದಮಂತ್ರ ಪಠಣ ಮಾಡಿದರು. ದೇವಾಲಯದ ಸಮಿತಿ ಪದಾಧಿಕಾರಿಗಳು, ವಂದೇಮಾತರಂ ಟ್ರಸ್ಟ್ ಪದಾಧಿಕಾರಿಗಳು ಹಾಗು ನೂರಾರು ಭಕ್ತರು ಕಲ್ಯಾಣೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವರ ದರ್ಶನ ಪುನೀತರಾದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post