ಭದ್ರಾವತಿ: ಹಿಂದೂ ಸಂಸ್ಕೃತಿ ಉಳಿಯಲು ಮರಾಠ ಸಮಾಜ ಮತ್ತು ಕ್ಷತ್ರಿಯ ಮರಾಠ ಸಮಾಜಗಳ ಕೊಡುಗೆ ಅಪಾರವಾಗಿದೆ. ಇವೆಲ್ಲ ಹಿಂದುಳಿದ ಸಮಾಜಗಳಿಗೆ ಹಿಂದಿನ ಕಾಂಗ್ರೆಸ್ ಸರಕಾರಗಳು ನೀಡಬೇಕಾದ ಸೌಲಭ್ಯಗಳು ನೀಡದೆ ವಂಚಿಸಿವೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಮಂಗಳವಾರ ಟಿಕೆ ರಸ್ತೆಯ ದೈವಜ್ಞ ಸಭಾಭವನದಲ್ಲಿ ಬಿಜೆಪಿ ಏರ್ಪಡಿಸಿದ್ದ ಮರಾಠ, ಭಾವಸಾರ, ನಾಮದೇವ, ಸಿಂಪಿ, ರಜಪೂತ, ಗೋಂದೂಳಿ, ಗೌಳಿಗ, ಹಕ್ಕಿಪಿಕ್ಕಿ, ಮೋಚಿ ಮತ್ತು ಕ್ಷತ್ರಿಯ ಮರಾಠ ಸಮಾಜಗಳ ಸ್ನೇಹ ಮಿಲನ ಕಾರ್ಯಕ್ರಮ ಉದ್ಘಾಟಿಸಿ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಪರ ಮತ ಯಾಚಿಸಿ ಅವರು ಮಾತನಾಡಿದರು.
ಹಿಂದುಳಿದ ವರ್ಗಗಳಿಗೆ ಸಲ್ಲಬೇಕಾದ ಸೌಲಭ್ಯಗಳು ನಮ್ಮ ಸರಕಾರದಲ್ಲಿ ಮಾತ್ರ ಲಭ್ಯವಾಗಿದೆ ವಿನಾ ಹಿಂದಿನ ಕಾಂಗ್ರೆಸ್ ಸರಕಾರದಲ್ಲಿ ಲಭ್ಯವಾಗದೆ ವಂಚಿತರಾಗಿದ್ದಾರೆ. ಹೆಣ್ಣು ಮಕ್ಕಳಿಗೆ ಭವಿಷ್ಯ ರೂಪಿಸಲು ಭಾಗ್ಯಲಕ್ಷ್ಮಿ ಯೋಜನೆ ಜಾರಿಗೆ ತಂದಿದ್ದೇನೆ. ಅದರಂತೆ ಅನೇಕ ಯೋಜನೆಗಳನ್ನು ರೂಪಿಸಿದ್ದೇನೆ. ಎಲ್ಲಾ ಸಮಾಜಗಳು ಶೈಕ್ಷಣಿಕ, ಆರ್ಥಿಕವಾಗಿ ಬಲಾಢ್ಯರಾಗಲು ಅಗತ್ಯ ಕ್ರಮಗಳನ್ನು ಕೈಗೊಂಡ ಸರಕಾರ ನಮ್ಮದಾಗಿದೆ. ಕ್ಷೇತ್ರದಲ್ಲಿ ನಿರುದ್ಯೋಗಿಗಳಿಗೆ ಮತ್ತು ಮಹಿಳೆಯರಿಗೆ ಉದ್ಯೋಗ ಕೊಡಿಸುವ ಹಂಬಲ ಹೊತ್ತು ಶಾಹಿ ಗಾರ್ಮೆಂಟ್‌ಸ್ ನಿರ್ಮಿಸುವ ಮೂಲಕ 8 ಸಾವಿರಕ್ಕೂ ಅಧಿಕ ಉದ್ಯೋಗ ಕೊಡಿಸಿದ್ದೇನೆ. ನಗರದ ಕಾರ್ಖಾನೆಗಳನ್ನು ಉಳಿಸಬೇಕಾಗಿದೆ ಎಂದರು.
ವಿಶ್ವವೇ ಮೆಚ್ಚುವ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕಾಗಿದೆ. ದೇಶದೆಲ್ಲೆಡೆ ಪ್ರಧಾನಿ ಮೋದಿ ಗಾಳಿ ಬೀಸುತ್ತಿದೆ. ಅವರ ಕೈ ಬಲ ಪಡಿಸಲು 2019 ರ ಸಾರ್ವತ್ರಿಕ ಚುನಾವಣೆಯಲ್ಲಿ 23-26 ಲೋಕಸಭಾ ಸ್ಥಾನಗಳನ್ನು ಗೆಲ್ಲುವುದರಲ್ಲಿ ಅನುಮಾನವಿಲ್ಲ. ಅದಕ್ಕೆ ಪೂರಕವಾಗಿ ನ.3 ರಂದು ನಡೆಯುವ ಉಪ ಚುನಾವಣೆಯ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರಿಗೆ ಎಲ್ಲರೂ ಆಶೀರ್ವದಿಸಿ ಈ ಕ್ಷೇತ್ರದಲ್ಲಿ 25 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿ ಎಂದು ಮನವಿ ಮಾಡಿದ ಬಿಎಸ್‌ವೈ ನಮ್ಮ ಮನೆಯ ಬಾಗಿಲು 24 ಗಂಟೆ ತೆರೆದಿರುತ್ತದೆ. ಜನರ ಸಮಸ್ಯೆಗಳನ್ನು ನಿವಾರಿಸುತ್ತದೆ ಎಂದರು.
ಹುಬ್ಬಳಿ ಮಾಜಿ ಶಾಸಕ ಹಾಗೂ ಮರಾಠ ಸಮಾಜದ ಮುಖಂಡ ಅಶೋಕ್ ಖಾಟ್ವೆ, ಮೈಸೂರಿನ ಡಾ.ಮಂಜುನಾಥ್, ಹೇಮಾವತಿ ವಿಶ್ವನಾಥರಾವ್, ಬೆಳಗಾವಿಯ ಶಂಕರ ಬಿ. ಪಾಟೀಲ್ ಮುಂತಾದವರು ಮಾತನಾಡಿದರು. ನಂಜನಗೂಡಿನ ಶಾಸಕ ಹರ್ಷವರ್ಧನ್, ಮುಖಂಡರಾದ ಎಸ್.ಎನ್. ಬಾಲಕೃಷ್ಣ, ವಿ. ಕದಿರೇಶ್, ಪ್ರವೀಣ್ ಪಟೇಲ್, ಅನ್ನಪೂರ್ಣ, ಕೃಷ್ಣೋಜಿರಾವ್, ತಾತೋಜಿರಾವ್, ಮಂಜುನಾಥ್ ಪವಾರ್, ಸತೀಶ್ ಕುಮಾರ್, ರಘು, ಜಯಪ್ರಕಾಶ್, ಮಂಗೋಟೆ ರುದ್ರೇಶ್, ಜಿ. ಆನಂದಕುಮಾರ್, ಎನ್. ಪ್ರಕಾಶ್ ಉಪಸ್ಥಿತರಿದ್ದರು. ಜಿಲ್ಲಾ ಮುಖಂಡ ದತ್ತಾತ್ರಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸರಸ್ವತಿ ಪ್ರಾರ್ಥಿಸಿ, ಎನ್. ವಿಶ್ವನಾಥರಾವ್ ಸ್ವಾಗತಿಸಿದರು. ಮಂಜುನಾಥ್ ನಿರೂಪಿಸಿದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post