ಭದ್ರಾವತಿ: ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಿ ಸಾಧಿಸಿದ ಫಲವಾಗಿ ಇಂದು ವಿಶ್ವದಾದ್ಯಂತ ಮಹಿಳೆಯರ ದಿನಾಚರಣೆ ಆಚರಿಸುವಂತಾಗಿದೆ ಎಂದು ಶಿವಮೊಗ್ಗ ಕಾರಾಗೃಹ ಅಧೀಕ್ಷಕರಾದ ದಿವ್ಯಶ್ರೀ ಹೇಳಿದರು.
ಅವರು ಗುರುವಾರ ನ್ಯೂಟೌನ್ ಕರುಣಾ ಸೇವಾ ಕೇಂದ್ರವು ಸೇಂಟ್ ಚಾಲ್ಸ್ ಕಾನ್ವೆಂಟ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕರ್ತವ್ಯ ನಿರ್ವಹಿಸುತ್ತಿದ್ದ ಸ್ಥಳಗಳಲ್ಲಿ ತಮ್ಮ ಹಕ್ಕುಗಳಾದ ರಜೆ ಸೌಲಭ್ಯ, ಸಮಾನ ವೇತನ ಮತ್ತಿತರೆ ಸೌಲತ್ತುಗಳನ್ನು ಪಡೆಯಲು ಹೋರಾಟ ರೂಪಿಸಿದ್ದರು. ಕಲಿತ ನಾರಿ ಪ್ರಗತಿಗೆ ದಾರಿ ಎಂಬಂತೆ ಇಂದು ಎಲ್ಲಾ ಮಹಿಳೆಯರು ಸ್ವಾಭಿಮಾನದಿಂದ ಮುಂದೆ ಬರುತ್ತಿರುವುದು ಸಂತಸದ ಸಂಗತಿಯಾಗಿದೆ.
ನಗರೀಕರಣದ ನೆಪದಲ್ಲಿ ಸಾಲು ಮರಗಳನ್ನು ಕಡಿದು ನಾಶ ಮಾಡುತ್ತಿರುವ ಹಿನ್ನಲೆಯಲ್ಲಿ ತಾಪಮಾನ ಹೆಚ್ಚಾಗಿದೆ. ಇದನ್ನು ಮನಗಂಡ ಅಕ್ಷರಾಭ್ಯಾಸ ಮಾಡದ ಅಸಾಮಾನ್ಯ ಮಹಿಳೆ ಸಾಲುಮರದ ತಿಮ್ಮಕ್ಕ ಸಾವಿರಾರು ಮರಗಿಡಗಳನ್ನು ಬೆಳೆಸುವ ಮೂಲಕ ಕೇವಲ ರಾಜ್ಯಕ್ಕೆ ಮಾತ್ರವಲ್ಲದೆ ವಿಶ್ವಕ್ಕೆ ಮಾದರಿಯಾಗಿದ್ದಾರೆ. ನಗರ ಪ್ರದೇಶವನ್ನೆ ಕಾಣದೆ ಕತ್ತಲ ಮಾರ್ಗದಲ್ಲಿದ್ದ ಅನೇಕ ಮಹಿಳೆಯರು ಬೆಳಕಿನ ಮಾರ್ಗಕ್ಕೆ ನಡೆಯಲು ಅನೇಕ ವೀರ ಮಹಿಳೆಯರು ಸಾಕ್ಷಿಕರಿಸಿದ್ದಾರೆ. ಇಂತಹ ಅರಿವು ಮೂಡಿಸುವ ಕಾರ್ಯಗಳು ನಾನಾ ಮಹಿಳಾ ಸಂಘ ಸಂಸ್ಥೆಗಳು ಮಹಿಳೆಯರಿಗೆ ಅರಿವು ಮೂಡಿಸುವಂತಾಗಿ ಇಂದು ಅನೇಕ ಮಹಿಳೆಯರು ಮೌಲ್ಯಗಳನ್ನು ಅರಿತು ಸಾಧನೆಯತ್ತ ಸಾಗಿದ್ದಾರೆ.
ಸರಕಾರದಿಂದ ಜಾರಿಯಾಗುವ ಅನೇಕ ಯೋಜನೆಗಳನ್ನು ದಕ್ಕದೆ ಕಂಗೆಟ್ಟ ಗ್ರಾಮೀಣ ಮಟ್ಟದ ಮಹಿಳೆಯರಿಗೆ ಸೇವಾ ಸಂಸ್ಥೆಗಳ ಮೂಲಕ ಅರಿವು ಮೂಡಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ತಾಯಿ, ತಂಗಿ, ಅಕ್ಕ, ಮಗಳು ಹೀಗೆ ಕುಟುಂಬದಲ್ಲಿ ಮಕ್ಕಳ ಹಿತಚಿಂತನೆ ಕುರಿತು ಯೋಚಿಸುವ ಅನೇಕ ಸ್ತ್ರೀಯರು ಕುಟುಂಬದ ಆಸರೆಯಾಗಿದ್ದಾರೆಂದರು.
ಕಾನ್ವೆಂಟ್ ಮುಖ್ಯಸ್ಥೆ ರೀಟಾ ವರ್ಗೀಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಗರಸಭಾ ಸದಸ್ಯೆ ಎಂ.ಎಸ್.ಸುಧಾಮಣಿ, ಮಹಿಳಾ ಸೇವಾ ಸಮಾಜದ ನಿರ್ದೇಶಕಿ ಅನ್ನಪೂರ್ಣ ಸತೀಶ್, ಡಾನ್ ಬಾಸ್ಕೋ ಸಂಸ್ಥೆಯ ಆಡಳಿತಾಧಿಕಾರಿ ವಿವೇಕ್ ದೇವಿಕಾಂತ್, ಮಾತನಾಡಿದರು. ಕರುಣಾ ಸೇವಾ ಕೇಂದ್ರದ ನಿರ್ದೇಶಕಿ ಎಲೀಸ್, ಮಹಿಳಾ ಒಕ್ಕೂಟದ ಅಧ್ಯಕ್ಷೆ ಶಾಂತಿ, ಲೂಸಿ ಮಸ್ಕರೇನಸ್, ಅಲೆಕ್ಸ್, ಮುಂತಾದವರು ಇದ್ದರು. ಇದೇ ಸಂದರ್ಭದಲ್ಲಿ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.
ವಿಕ್ಟೋರಿಯಾ ಮಹಿಳಾ ತಂಡದವರು ಪ್ರಾರ್ಥಿಸಿ, ವಿನ್ನಿ ಸ್ವಾಗತಿಸಿದರೆ, ಜಿನ್ಸಿಜಾನ್ ಮತ್ತು ಪ್ರಮೀಳ ವರದಿ ವಾಚಿಸಿದರು. ರುಕ್ಮಿಣಿ ವಂದಿಸಿ, ಜಾನೆಟ್ ಹಾಗು ಗ್ರೇಸಿ ನಿರೂಪಿಸಿದರು. ಬಿಪಿಸಿ ಮುಖ್ಯಸ್ಥ ಅಂತೋಣಿ ವಿಲ್ಸನ್ ಬಹಮಾನ ವಿತರಿಸಿದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)







Discussion about this post