ಕಲ್ಪ ಮೀಡಿಯಾ ಹೌಸ್ | ಭಾಲ್ಕಿ (ಶಿವಮೊಗ್ಗ) |
ಮನುಕುಲದ ವಿಕಸನದಲ್ಲಿ ಇತಿಹಾಸ ಪ್ರಮುಖ ಪಾತ್ರ ವಹಿಸುತ್ತದೆ. ತಿಳಿದಿಲ್ಲದ ವಿಚಾರಗಳನ್ನು ಹುಡುಕಿ, ಸಂಶೋಧಿಸಿ ದಾಖಲಿಸುವುದೇ ಇತಿಹಾಸದ ಪ್ರಮುಖ ಉದ್ದೇಶ ಎಂದು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ (Ishwar Khandre) ಹೇಳಿದರು. ಭಾಲ್ಕಿಯ (Bhalki) ಕರಡ್ಯಾಳದಲ್ಲಿರುವ ಶ್ರೀ ಚನ್ನಬಸವೇಶ್ವರ ಗುರುಕುಲದ ಅನುಭವಮಂಟಪದಲ್ಲಿ ಬೆಂಗಳೂರಿನ ಕರ್ನಾಟಕ ಇತಿಹಾಸ ಅಕಾಡೆಮಿ ಹಾಗೂ ಭಾಲ್ಕಿ ಹಿರೇಮಠ ಸಂಸ್ಥಾನ ವಿದ್ಯಾಪೀಠದ ಸಹಯೋಗದಲ್ಲಿ ಆಯೋಜಿಸಿರುವ ಮೂರು ದಿನಗಳ ಕರ್ನಾಟಕ ಇತಿಹಾಸ ಅಕಾಡೆಮಿಯ 40ನೇ ವಾರ್ಷಿಕ ರಾಷ್ಟ್ರೀಯ ಸಮ್ಮೇಳನ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
Bhalki: ಇತಿಹಾಸ ಸಂಶೋಧನೆಗೆ ಯುವಜನತೆ ಮುಂದಾಗಬೇಕು
ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ನಾಡಿನ ಇತಿಹಾಸ ಅನನ್ಯವಾಗಿದೆ. ನಾಡಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹೆಮ್ಮೆ ನಮ್ಮದಾಗಿದೆ. ಇತಿಹಾಸವನ್ನು ಕೇವಲ ಹಿಂದಿನ ಘಟನೆಗಳ ದಾಖಲೆಯಾಗಿ ನೋಡದೆ, ಹೊಸ ವಿಚಾರಗಳನ್ನು ಹುಡುಕಿ, ಸಂಶೋಧಿಸಿ ದಾಖಲಿಸುವ ಕ್ಷೇತ್ರವಾಗಿ ಬೆಳೆಸಬೇಕಿದೆ ಎಂದು ಈಶ್ವರ ಖಂಡ್ರೆ ಹೇಳಿದರು.
ಇತಿಹಾಸ ಅಕಾಡೆಮಿಯು ಯುವಜನರು ಸಂಶೋಧನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹಿಸಬೇಕು. ಇಂತಹ ಸಮ್ಮೇಳನಗಳು ವಿದ್ಯಾರ್ಥಿಗಳಲ್ಲಿ ಸಂಶೋಧನೆಯ ಆಸಕ್ತಿ ಮತ್ತು ಕಿಚ್ಚನ್ನು ಮೂಡಿಸಬೇಕು ಎಂದು ಅವರು ಸಲಹೆ ನೀಡಿದರು.
ಇತಿಹಾಸದ ಅಧ್ಯಯನವನ್ನು ಕೇವಲ ಇತಿಹಾಸ ವಿದ್ಯಾರ್ಥಿಗಳಿಗೆ ಸೀಮಿತಗೊಳಿಸದೆ ಎಂಜಿನಿಯರಿಂಗ್ ಸೇರಿದಂತೆ ವಿವಿಧ ನಿಕಾಯಗಳ ವಿದ್ಯಾರ್ಥಿಗಳಲ್ಲೂ ಇತಿಹಾಸದ ಬಗ್ಗೆ ಆಸಕ್ತಿ ಮೂಡಿಸುವ ಕೆಲಸ ನಡೆಯಬೇಕು. ರಾಜ್ಯದ ಎಲ್ಲ ಶಾಲಾ-ಕಾಲೇಜುಗಳಲ್ಲಿ ಇತಿಹಾಸದ ಬಗ್ಗೆ ಆಸಕ್ತಿ ಬೆಳೆಸುವ ಕಾರ್ಯಕ್ರಮಗಳನ್ನು ಆಯೋಜಿಸಿ, ವಿದ್ಯಾರ್ಥಿಗಳಲ್ಲಿ ಜೀವನೋತ್ಸಾಹ ಹಾಗೂ ಸಂಶೋಧನಾ ಮನೋಭಾವ ಬೆಳೆಸಬೇಕು ಎಂದು ಹೇಳಿದರು.
ಬೀದರ್ನ ಐತಿಹಾಸಿಕ ಕೊಡುಗೆ ಸ್ಮರಣೆ
ಬೀದರ್ ಜಿಲ್ಲೆ ಐತಿಹಾಸಿಕವಾಗಿ ಮಹತ್ವ ಹೊಂದಿರುವ ಭೂಮಿ. ಭಾಷಾವಾರು ಪ್ರಾಂತ ರಚನೆಯ ಹೋರಾಟದಲ್ಲಿ ಭಾಲ್ಕಿ ಹಿರೇಮಠ ಸಂಸ್ಥಾನದ ಅಂದಿನ ಶ್ರೀಗಳಾದ ಚನ್ನಬಸವ ಪಟ್ಟದ್ದೇವರು ಹಾಗೂ ತಮ್ಮ ತಂದೆ ಭೀಮಣ್ಣ ಖಂಡ್ರೆ ಅವರು ಮುಂಚೂಣಿಯಲ್ಲಿದ್ದುದನ್ನು ಸಚಿವರು ಸ್ಮರಿಸಿದರು.
ಪ್ರಜಾಪ್ರಭುತ್ವದ ಮೌಲ್ಯಗಳು ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಪ್ರತಿಪಾದಿಸಿದ ಸಮಸಮಾಜದ ಪರಿಕಲ್ಪನೆಗೆ ಬೀದರ್ ಜಿಲ್ಲೆ ಮಹತ್ವದ ಕೊಡುಗೆ ನೀಡಿದೆ ಎಂದು ಅವರು ಹೇಳಿದರು.
ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ಅಗತ್ಯ
ಕರ್ನಾಟಕದ ಕೆಲವು ಭಾಗಗಳು ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿದ್ದರೆ, ಇನ್ನೂ ಕೆಲವು ಪ್ರದೇಶಗಳು ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಹೊಂದಿಲ್ಲ ಎಂದು ಈಶ್ವರ ಖಂಡ್ರೆ ಬೇಸರ ವ್ಯಕ್ತಪಡಿಸಿದರು.
ಮೈಸೂರು ಭಾಗವು ನೈಸರ್ಗಿಕ ಸಂಪತ್ತಿನ ಜೊತೆಗೆ ಅಲ್ಲಿನ ಅರಸರು ಹಾಗೂ ಸರ್ ಎಂ. ವಿಶ್ವೇಶ್ವರಯ್ಯ ಅವರಂತಹ ದಿವಾನರ ದೂರದೃಷ್ಟಿ ಮತ್ತು ದೂರಗಾಮಿ ಚಿಂತನೆಯಿಂದ ಔದ್ಯೋಗಿಕ ಹಾಗೂ ಶೈಕ್ಷಣಿಕವಾಗಿ ಸಾಕಷ್ಟು ಅಭಿವೃದ್ಧಿ ಹೊಂದಿದೆ. ಆದರೆ ಕಲ್ಯಾಣ ಕರ್ನಾಟಕ ಪ್ರದೇಶವು ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಹೊಂದಿಲ್ಲ. ಈ ಅಸಮತೋಲನವನ್ನು ಸರಿಪಡಿಸುವ ಅಗತ್ಯವಿದೆ ಎಂದು ಹೇಳಿದರು.

₹650 ಕೋಟಿ ವೆಚ್ಚದಲ್ಲಿ ಆಧುನಿಕ ಅನುಭವ ಮಂಟಪ
ಬಸವಣ್ಣನವರ ಬಸವಕಲ್ಯಾಣದಲ್ಲಿ ₹650 ಕೋಟಿ ವೆಚ್ಚದಲ್ಲಿ ಆಧುನಿಕ ಅನುಭವ ಮಂಟಪ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅವಧಿಯಲ್ಲಿ ₹250 ಕೋಟಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅವಧಿಯಲ್ಲಿ ₹250 ಕೋಟಿ ಅನುದಾನ ನೀಡಲಾಗಿದೆ. ಹಾಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ₹50 ಕೋಟಿ ನೀಡಿದ್ದಾರೆ ಎಂದು ಸಚಿವರು ವಿವರಿಸಿದರು.
ಇನ್ನೂ ₹250 ಕೋಟಿ ಅಗತ್ಯವಿದ್ದು, ಬರುವ ಬಸವ ಜಯಂತಿಗೂ ಮುನ್ನ ಕಾಮಗಾರಿ ಪೂರ್ಣಗೊಳಿಸಿ ಆಧುನಿಕ ಅನುಭವ ಮಂಟಪವನ್ನು ಲೋಕಾರ್ಪಣೆ ಮಾಡಲಾಗುವುದು ಎಂದು ಈಶ್ವರ ಖಂಡ್ರೆ ಭರವಸೆ ನೀಡಿದರು.
178 ಸಂಶೋಧನಾ ಪ್ರಬಂಧಗಳ ಮಂಡನೆ
ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಕೆ. ರವೀಂದ್ರನಾಥ್ ಅವರು ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದರು. ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಡಿ.ವಿ. ಪರಮಶಿವಮೂರ್ತಿ ಅವರು ಆರು ಪುಸ್ತಕಗಳನ್ನು ಬಿಡುಗಡೆಗೊಳಿಸಿದರು.
ಸಮ್ಮೇಳನದಲ್ಲಿ ಒಟ್ಟು 178 ಸಂಶೋಧನಾ ಪ್ರಬಂಧಗಳು ಮಂಡನೆಯಾಗಲಿವೆ. ಡಾ. ಎಫ್.ಟಿ. ಹಳ್ಳೀಕೇರಿ ಅವರು ‘ಇತಿಹಾಸ ದರ್ಶನ’ ಸಂಪುಟ 41ನ್ನು ಬಿಡುಗಡೆಗೊಳಿಸಿದರು.
Also Read>> ಹೆಣ್ಣುಮಕ್ಕಳು ಅಬಲೆಯರಲ್ಲ, ಸಬಲೆಯರು ಎಂದು ಸಾಬೀತುಪಡಿಸಿದ ರಾಣಿ ಚೆನ್ನಮ್ಮ: ಶಾಸಕ ಚನ್ನಬಸಪ್ಪ
ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ
ಸಮ್ಮೇಳನದ ಅಂಗವಾಗಿ ಇತಿಹಾಸ ಕ್ಷೇತ್ರದಲ್ಲಿ ವಿವಿಧ ಪ್ರಕಾರಗಳಲ್ಲಿ ಸಾಧನೆ ಮಾಡಿದ ಡಾ. ಕೆ.ಬಿ. ಶಿವತಾರಕ, ಡಾ. ಶಿವರುದ್ರಸ್ವಾಮಿ ಎಸ್.ಎನ್., ಡಾ. ಹಂ.ಗು. ರಾಜೇಶ್, ಡಾ. ಜೆ.ಎಂ. ನಾಗಯ್ಯ, ಡಾ. ಸ್ಮಿತಾ ಸುರೇಬಾನಕರ್, ಡಾ. ರವಿಕುಮಾರ ಕೆ. ನವಲಗುಂದ, ಡಾ. ಸುಜಾತಾ ಎಸ್. ನೆಟೇಕಲ್, ಟಿ.ಎಚ್.ಎಂ. ಬಸವರಾಜು, ಡಾ. ಟಿ. ಮುರುಗೇಶಿ, ಡಾ. ಶಿವಾನಂದ ಬಂಟನೂರು, ಎಂ.ಎನ್. ಪ್ರಭಾಕರ ಹಾಗೂ ಜಗನ್ನಾಥ್ ಯು. ಅವರಿಗೆ ಅಕಾಡೆಮಿಯ ವಿವಿಧ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.
ಬಸವಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ಹಾಗೂ ಹಿರೇಮಠ ಸಂಸ್ಥಾನ ಮಠದ ಶ್ರೀ ಗುರುಬಸವ ಪಟ್ಟದ್ದೇವರು ಸಮಾರಂಭದ ಸಾನ್ನಿಧ್ಯ ವಹಿಸಿದ್ದರು.
ಕರ್ನಾಟಕ ಇತಿಹಾಸ ಅಕಾಡೆಮಿಯ ಅಧ್ಯಕ್ಷ ಡಾ. ದೇವರಕೊಂಡಾ ರೆಡ್ಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಿರೇಮಠ ಸಂಸ್ಥಾನದ ಆಡಳಿತಾಧಿಕಾರಿ ಮೋಹನ ರೆಡ್ಡಿ, ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಕೆ.ಎಲ್. ರಾಜಶೇಖರ ಸೇರಿದಂತೆ ಹಲವು ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮೂರು ದಿನಗಳ ರಾಷ್ಟ್ರೀಯ ಸಮ್ಮೇಳನವು ಕರ್ನಾಟಕದ ಇತಿಹಾಸ, ಸಂಸ್ಕೃತಿ, ಪರಂಪರೆ ಹಾಗೂ ವಿವಿಧ ಐತಿಹಾಸಿಕ ವಿಚಾರಗಳ ಕುರಿತು ಹೊಸ ಸಂಶೋಧನೆ ಮತ್ತು ಚರ್ಚೆಗೆ ವೇದಿಕೆಯಾಗಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









