ಕಲ್ಪ ಮೀಡಿಯಾ ಹೌಸ್ | ಭೋಪಾಲ್ |
ಸರ್ಕಾರಿ ಆಂಬುಲೆನ್ಸ್ ಸಿಗದೇ ಎಂಟು ವರ್ಷದ ಬಾಲಕನೊಬ್ಬ ತನ್ನ 2 ವರ್ಷದ ತಮ್ಮನ ಶವವನ್ನು ಮಡಿಲಿಯಲ್ಲಿ ಮಲಗಿಸಿಕೊಂಡು ಅಸಹಾಯಕನಾಗಿ ರಸ್ತೆ ಬದಿಯಲ್ಲಿ ಕುಳಿತಿರುವ ಮನಕಲುಕುವ ದೃಶ್ಯ ಮಧ್ಯಪ್ರದೇಶದಲ್ಲಿ ನಡೆದಿದೆ.
ಇಲ್ಲಿನ ಮೊರೆನಾದಲ್ಲಿ ಈ ಘಟನೆ ನಡೆದಿದ್ದು, ಈ ದೃಶ್ಯಗಳು ಈಗ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವೈರಲ್, ಜನರು ವ್ಯವಸ್ಥೆಗೆ ಹಿಡಿ ಶಾಪ ಹಾಕುತ್ತಿದ್ದಾರೆ.
ಏನಿದು ಘಟನೆ?
ಪೂಜಾರಾಮ್ ಜಾಧವ್ ಅವರ ಎರಡು ವರ್ಷದ ಮಗು ರಾಜನ ಆರೋಗ್ಯ ಹದಗೆಟ್ಟಿತು. ಆರಂಭದಲ್ಲಿ ಮನೆಯಲ್ಲಿಯೇ ಮಗನನ್ನು ಗುಣಪಡಿಸಲು ಅವರು ಪ್ರಯತ್ನಿಸಿದ್ದರು. ಆದರೆ ಮಗುವಿಗೆ ಹೊಟ್ಟೆ ನೋವು ತೀವ್ರವಾಗಿದ್ದರಿಂದ, ಮೊರೆನಾ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಇದೇ ವೇಳೆ ಅವರು ಹಿರಿಯ ಮಗ ಗುಲ್ಶನ್ ಕೂಡ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಮಗು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
Also read: ಸೇತುವೆ ಮೇಲಿಂದ ಹಾರಿದ ಕಾರು ಬೈಕ್ ಮೇಲೆ ಬಿದ್ದು ಸವಾರ ದಾರುಣ ಸಾವು
ನಂತರ ಮಗುವಿನ ಶವವನ್ನು ಗ್ರಾಮಕ್ಕೆ ಕೊಂಡೊಯ್ಯಲು ಪೂಜಾರಾಮ್ ಅವರು ಆಂಬುಲೆನ್ಸ್ ವ್ಯವಸ್ಥೆ ಕಲ್ಪಿಸಿಕೊಡುವಂತೆ ಆಸ್ಪತ್ರೆಯ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಆದರೆ ಆಂಬುಲೆನ್ಸ್ ನೀಡಲು ಆಸ್ಪತ್ರೆ ಅಧಿಕಾರಿಗಳು ತಿರಸ್ಕರಿಸಿದ್ದಾರೆ.
ನಂತರ ಆಸ್ಪತ್ರೆಯಿಂದ ಹೊರಗೆ ಮಗುವಿನ ಶವ ಎತ್ತುಕೊಂಡು ಬಂದ ಜಾಧವ್ ಅವರು, ವಾಹನಗಳಿಗಾಗಿ ಹುಡುಕಾಟ ನಡೆಸಿದ್ದು, ಹೊರಗಿನವರು ಕೇಳಿದಷ್ಟು ಹಣ ನೀಡಲು ಸಾಧ್ಯವಾಗದೇ, ವಾಹನ ವ್ಯವಸ್ಥೆಯೂ ಸಹ ಆಗಲಿಲ್ಲ. ಕೊನೆಗೆ ಬೇರೆ ದಾರಿ ಕಾಣದೇ, ಅವರು ತಮ್ಮ ಹಿರಿಯ ಮಗ ಗುಲ್ಶನ್ ಅವರನ್ನು ಆಸ್ಪತ್ರೆಯ ಹೊರಗೆ ಶವದೊಂದಿಗೆ ಬಿಟ್ಟು ಮನೆಗೆ ಹೊರಡಲು ನಿರ್ಧರಿಸಿ ಹೋದರು.
ಗುಲ್ಶನ್ ತನ್ನ ಸತ್ತ ತಮ್ಮನ ತಲೆಯನ್ನು ತನ್ನ ಮಡಿಲಿನಲ್ಲಿ ಇಟ್ಟುಕೊಂಡು ಅರ್ಧ ಗಂಟೆಗೂ ಹೆಚ್ಚು ಕಾಲ ತಂದೆ ಹಿಂದಿರುಗುವವರೆಗೂ ಕಾಯುತ್ತಾ ಬೀದಿ ಬದಿಯಲ್ಲಿ ಕುಳಿತುಕೊಂಡಿದ್ದನು. ಈ ವೇಳೆ ಬಾಲಕನನ್ನು ಗಮನಿಸಿದ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸ್ ಅಧಿಕಾರಿಗಳು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿ ಚಾಲಕನನ್ನು ಜಾಧವ್ ಅವರ ಮನೆಗೆ ತೆರಳುವಂತೆ ಸೂಚಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post