ಕಲ್ಪ ಮೀಡಿಯಾ ಹೌಸ್
ಮೇ 9 ರಂದು ವರಾಹ ಜಯಂತಿ. ಈ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿರುವ ಕಲ್ಲಹಳ್ಳಿಯ ಅಪರೂಪದ ಭೂವರಾಹನಾಥಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯುತ್ತದೆ.
ದಶಾವತಾರ ಸ್ವರೂಪದಲ್ಲಿ ಒಂದಾದ ವರಾಹಸ್ವಾಮಿಗೆ ದೇವಾಲಯಗಳು ಅಪರೂಪ. ಬಹುತೇಕ ದೇವಾಲಯಗಳ ಹೊರಭಿತ್ತಿಯಲ್ಲಿ ಕಾಣಿಸುವ ಈ ಅವತಾರದ ಶಿಲ್ಪ ಗರ್ಭಗುಡಿಯಲ್ಲಿ ಪೂಜಿಸುವುದನ್ನು ನೋಡಿದರೆ ಭೂದೇವಿ ಸಮೇತನಾಗಿ ಕಾಣಿಸುವ ಅಪರೂಪದ ಶಿಲ್ಪವೊಂದು ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲೂಕಿನಲ್ಲಿರುವ ಕಲ್ಲಹಳ್ಳಿಯಲ್ಲಿದೆ.
ದೇವಾಲಯದ ಬಗ್ಗೆ
ಸುತ್ತ ಕಣ್ಣಾಯಿಸಿದಷ್ಟು ಹಸಿರು ತುಂಬಿದ ಬಯಲು, ಪಕ್ಕದಲ್ಲೇ ಹರಿಯುವ ಹೇಮಾವತಿ ನದಿಯ ಸೊಬಗು.ಈ ನದಿಯ ದಂಡೆಯ ಮೇಲಿರುವುದೇ ಸಾಲಿಗ್ರಾಮಶಿಲೆಯ ಲಕ್ಷ್ಮೀ ಭೂ ವರಾಹಸ್ವಾಮಿ ದೇಗುಲ.
15 ಅಡಿಯ ವಿಗ್ರಹ
ಇಲ್ಲಿನ ದೇವರ ವಿಗ್ರಹವೇ ವಿಶಿಷ್ಟ. ಇದು 15 ಅಡಿ ಎತ್ತರದ ಸಾಲಿಗ್ರಾಮದ ಏಕಶಿಲೆಯಿಂದ ಕೆತ್ತಲಾಗಿದೆ. ದೇವಾಲಯ ಪ್ರವೇಶಿಸುತ್ತಲೇ ಸಭಾ ಮಂಟಪದ ಎದುರು ಗರ್ಭಗುಡಿ ಇದೆ. ಒಳಗಡೆ ಪೀಠದ ಮೇಲೆ ವರಾಹಸ್ವಾಮಿ ವಿಗ್ರಹವಿದೆ. ವರಾಹಾವತಾರದ ವಿಷ್ಣುವಿನ ಆಜಾನುಬಾಹು ದೇಹ, ಬಲಿಷ್ಠ ತೋಳುಗಳು, ಎತ್ತರವಾದ ನಿಲುವಿನ ಭಂಗಿಯಲ್ಲಿರುವ ಮೂರ್ತಿ, ಎಡತೊಡೆಯ ಮೇಲೆ ಪತ್ನಿ ಲಕ್ಷ್ಮೀ ಭೂದೇವಿಯನ್ನು ಕೂರಿಸಿಕೊಂಡಿರುವ ಭಂಗಿಯಲ್ಲಿದೆ. ಕೈಯಲ್ಲಿ ಕಮಲದ ಹೂವು. ವರಾಹಸ್ವಾಮಿಯ ಒಂದು ಕೈಯಲ್ಲಿ ಚಕ್ರ, ಮತ್ತೊಂದು ಕೈಯಲ್ಲಿ ಶಂಖ, ಎಡತೊಡೆಯ ಮೇಲೆ ಕುಳಿತಿರುವ ಪತ್ನಿ ಲಕ್ಷ್ಮಿಯನ್ನು (ಭೂದೇವಿ) ಎಡಗೈನಿಂದ ತಬ್ಬಿಕೊಂಡಿರುವಂತೆ ಕೆತ್ತಿರುವ ವಿಗ್ರಹವಿದು.
ಭಕ್ತರ ನಂಬಿಕೆ
ಈ ಭೂವರಾಹಸ್ವಾಮಿಗೆ ಹರಕೆ ಹೊತ್ತರೆ, ಭೂವಿವಾದಗಳು ಇತ್ಯರ್ಥವಾಗುತ್ತವೆ ಎಂಬ ನಂಬಿದೆ ಇಲ್ಲಿದೆ. ಮರಳು, ಮಣ್ಣು ಅಥವಾ ಇಟ್ಟಿಗೆಯನ್ನು ದೇವರ ಮುಂದಿಟ್ಟು ಪೂಜೆ ಸಲ್ಲಿಸಿ, ದೇವಾಲಯದ ಪಕ್ಕದಲ್ಲಿ ಅದೇ ಸಾಮಗ್ರಿಗಳಿಂದ ಗೂಡು ಕಟ್ಟಿ ಹರಿಕೆ ಸಲ್ಲಿಸಿದರೆ, ಗೃಹ ನಿರ್ಮಾಣದ ಬಯಕೆ ಸಿದ್ಧಿಸುತ್ತದೆ ಎಂಬುದು ಭಕ್ತರ ನಂಬಿಕೆ.
ಪುರಾಣ, ಪೂಜೆ ವಿಶೇಷ
ಹಿರಣ್ಯಕಶಿಪುವಿನ ಸಹೋದರ ಹಿರಣ್ಯಾಕ್ಷನು ಭೂದೇವಿಯನ್ನು ಹೊತ್ತೊಯ್ದು ಸಮುದ್ರದಲ್ಲಿ ಬಂಧಿಸಿಡುತ್ತಾನೆ. ಮಹಾವಿಷ್ಣುವು ವರಾಹಾವತಾರವನ್ನು ತಾಳಿ ಹಿರಾಣ್ಯಾಕ್ಷನನ್ನು ಕೊಂದು ಭೂದೇವಿಯನ್ನು ರಕ್ಷಿಸಿದ ಎಂಬುದು ಪುರಾಣದ ಕಥೆ. ಈ ವರಾಹಾವತಾರದ ಮಹಿಮೆಯನ್ನು ಈ ಸುಂದರ ದೇವಾಲಯ ಹೇಳುತ್ತಿರುವಂತಿದೆ. ಆಲಯದ ಬಯಲಿನಲ್ಲಿ ಶಾಸನವೂ ದೊರೆತಿದೆ.
ತಲುಪುವುದು ಹೇಗೆ?
ಬೆಂಗಳೂರಿನಿಂದ 180 ಕಿಮೀ, ಮೈಸೂರಿನಿಂದ 53 ಕಿಮೀ. ಕೆ.ಆರ್. ಪೇಟೆ ಮಾರ್ಗವಾಗಿ 18 ಕಿಮೀ ದೂರದಲ್ಲಿ ಈ ದೇವಾಲಯವಿದೆ. ಕೆಆರ್ ಪೇಟೆ-ಮೇಲುಕೋಟೆ-ಕಲ್ಲಹಳ್ಳಿಗೆ ಬಸ್ ಸೌಲಭ್ಯವಿದೆ. ಸ್ವಂತ ವಾಹನದಲ್ಲಿ ಬರುವವರು ಈ ದೇವಾಲಯ ಭೇಟಿಯೊಂದಿಗೆ ಸುತ್ತಲಿನ ಪ್ರವಾಸಿ ತಾಣಗಳಿಗೂ ಭೇಟಿ ನೀಡಬಹುದು.
ಸದ್ಯ ಭಕ್ತಾದಿಗಳಿಗೆ ದೇವರ ದರ್ಶನ ಇಲ್ಲ
ಕೊರೋನಾ ಹಿನ್ನೆಲೆಯಲ್ಲಿ ಸದ್ಯ ತಾತ್ಕಾಲಿಕವಾಗಿ ದೇವಾಲಯಕ್ಕೆ ಭಕ್ತರಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ. ದೇಶ ವ್ಯಾಪಿ ಹರಡಿರುವ ಕರೊನಾ ನಿರ್ಮೂಲನೆ ಆಗುವಂತೆ ದೇವಾಲಯದ ಪ್ರಧಾನ ಅರ್ಚಕರು ವಿಶೇಷ ಪೂಜೆ ಸಲ್ಲಿಸಿ ಶ್ರೀ ಸ್ವಾಮಿಯಲ್ಲಿ ಬೇಡಿಕೊಳ್ಳುತ್ತಾರೆ ಎಂದು ದೇವಸ್ಥಾನದ ಮ್ಯಾನೇಜಿಂಗ್ ಟ್ರಸ್ಟಿ ಶ್ರೀನಿವಾಸ ರಾಘವನ್ ತಿಳಿಸಿದ್ದಾರೆ.
ಕೋವಿಡ್ ನಿಯಮಗಳನ್ನು ಅನುಸರಿಸಿ ಧಾರ್ಮಿಕ ಕಾರ್ಯಕ್ರಮಗಳನ್ನು ಆಚರಿಸಲಾಗುವುದು ಎಂದು ಹೇಳಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news








Discussion about this post