ಕಲ್ಪ ಮೀಡಿಯಾ ಹೌಸ್ | ಬೀದರ್ |
ಮುಂಬೈ ಮಹಾನಗರ ಪಾಲಿಕೆ #Mumbai Municipal Corporation ಸೇರಿದಂತೆ ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಗಳಿಸಿರುವುದು ಕರ್ನಾಟಕದಲ್ಲಿ ಬರುವ ದಿನಗಳಲ್ಲಿ ನಡೆಯಲಿರುವ ಪಂಚಾಯತ್ ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆ ಗೆಲುವಿಗೆ ದಿಕ್ಸೂಚಿಯಾಗಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ, ಬೀದರ್ ದಕ್ಷಿಣ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ #MLA Shylendra Beldale ಹೇಳಿದ್ದಾರೆ.
ಕಳೆದ ವರ್ಷ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ-ಶಿವಸೇನಾ ಮೈತ್ರಿ ಭರ್ಜರಿ ಜಯ ಗಳಿಸಿತ್ತು. ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ನೇತ್ರತ್ವದಲ್ಲಿ ಡಬಲ್ ಇಂಜಿನ್ ಸರ್ಕಾರ ಮಾಡುತ್ತಿರುವ ಜನಕಲ್ಯಾಣ ಕಾರ್ಯಕ್ರಮಕ್ಕೆ ಮತದಾರರು ಮನ್ನಣೆ ನೀಡಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಭಾರಿ ಗೆಲುವು ಕೊಟ್ಟಿದ್ದಾರೆ. ಬಿಜೆಪಿ ಮೇಲೆ ಜನರು ಇಟ್ಟಿರುವ ವಿಶ್ವಾಸಕ್ಕೆ ಈ ಫಲಿತಾಂಶ ಸಾಕ್ಷಿಯಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತದ ಎಲ್ಲ ರಂಗಗಳಲ್ಲಿ ವಿಫಲವಾಗಿದೆ. ಬರುವ ಏಪ್ರಿಲ್, ಮೇ ತಿಂಗಳಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ರಾಜ್ಯದ ಸ್ಥಳೀಯ ಸಂಸ್ಥೆ ಹಾಗೂ ಜಿಪಂ, ತಾಪಂಗಳಿಗೆ ಚುನಾವಣೆ ನಡೆಯುವ ಸಾಧ್ಯತೆಗಳಿವೆ. ಮಹಾರಾಷ್ಟ್ರ ಮಾದರಿಯಲ್ಲಿಯೇ ಇಲ್ಲಿ ಸಹ ಬಿಜೆಪಿ ಭರ್ಜರಿ ಜಯ ಗಳಿಸಿ ಕಾಂಗ್ರೆಸ್ ಗೆ ಮಣ್ಣು ಮುಕ್ಕಿಸುವುದು ಗ್ಯಾರಂಟಿ ಎಂದು ಹೇಳಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















