ಕಲ್ಪ ಮೀಡಿಯಾ ಹೌಸ್ | ಬೀದರ್ |
ದಕ್ಷಿಣ ವಿಧಾನಸಭೆ ಕ್ಷೇತ್ರದ ಮನ್ನಾಎಖ್ಖೆಳ್ಳಿಯಲ್ಲಿ ಅಗ್ನಿಶಾಮಕ ಠಾಣೆ ಸ್ಥಾಪನೆಗೆ ಜಿಲ್ಲಾಡಳಿತ ಎರಡು ವರ್ಷಗಳಿಂದ ಅಗತ್ಯವಾದ ಎರಡು ಎಕರೆ ಜಾಗ ಹುಡುಕಿ ಕೊಡುತ್ತಿಲ್ಲ. ರಾಜ್ಯ ಸರ್ಕಾರದಿಂದ ಮೂರು ಸಲ ಈ ಸಂಬಂಧ ಪತ್ರ ಬರೆದರೂ ಬೀದರ್ ಜಿಲ್ಲಾಧಿಕಾರಿ ಇದಕ್ಕೆ ಸ್ಪಂದಿಸಿಲ್ಲ! ಇದು ಗೃಹ ಸಚಿವ ಡಾ. ಪರಮೇಶ್ವರ #Home Minister Parameshwar ಅವರ ಅಸಹಾಯಕ ನುಡಿ.
ಮಂಗಳವಾರ ವಿಧಾನಸಭೆ ಅಧಿವೇಶನದಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ #MLA Shylendra Beldale ಅವರು ಈ ವಿಷಯ ಪ್ರಸ್ತಾಪಿಸಿದರು. ಇದಕ್ಕೆ ಉತ್ತರಿಸುವ ವೇಳೆ ಗೃಹ ಸಚಿವ ಪರಮೇಶ್ವರ ಅವರು ಮೂರು ಬಾರಿ ಪತ್ರ ಬರೆದರೂ ನಿಮ್ಮ ಜಿಲ್ಲಾಧಿಕಾರಿ ಜಾಗ ಕೊಡುತ್ತಿಲ್ಲ. ನೀವು ಡಿಸಿಯವರ ಜೊತೆಗೆ ಚರ್ಚಿಸಿ ಜಾಗ ಕೊಡಿಸಿ. ನಾನು ಅಗ್ನಿಶಾಮಕ ಠಾಣೆ ಮಂಜೂರಿ ಮಾಡಿಸಿ ಕೆಲಸ ಆರಂಭಿಸುವೆ ಎಂದು ಭರವಸೆ ನೀಡಿದರು.
ಸಚಿವರ ಉತ್ತರದಿಂದ ತೃಪ್ತರಾಗದ ಶಾಸಕ ಬೆಲ್ದಾಳೆ ಅವರು, ಮೂರು ಬಾರಿ ಸರ್ಕಾರದಿಂದ (ಗೃಹ ಇಲಾಖೆಯಿಂದ) ಪತ್ರ ಬರೆದರೂ ಡಿಸಿಯವರು ಸ್ಪಂದಿಸುತ್ತಿಲ್ಲ ಎಂದರೆ ಹೇಗೆ? ಸರ್ಕಾರ, ಸಚಿವರ ಪತ್ರಕ್ಕೆ ತಕ್ಷಣ ಸ್ಪಂದಿಸುವುದು ಡಿಸಿ (ಜಿಲ್ಲಾಡಳಿತದ) ಕೆಲಸವಲ್ಲವೆ? ಈ ತರಹ ಅಸಡ್ಡೆ ತೋರಿಸುವುದು ಜಿಲ್ಲಾಡಳಿತದ ಕಾರ್ಯವೈಖರಿ ಜೊತೆಗೆ ಸರ್ಕಾರದ ವ್ಯವಸ್ಥೆ ಮೇಲೂ ಪ್ರಶ್ನೆ ಚಿಹ್ನೆ ಹಾಕಿದೆ. ಸರ್ಕಾರದ ಪತ್ರಗಳಿಗೆ ಡಿಸಿ ಸ್ಪಂದಿಸಿಲ್ಲ ಎಂದಾದರೆ ಸರ್ಕಾರ ಏಕೆ ಸುಮ್ಮನೆ ಕುಳಿತಿದೆ ಎಂದರು.
ಈ ಚರ್ಚೆ ಇನ್ನಷ್ಟು ಮುಂದುವರಿಯುವುದು ಅರಿತ ಸಭಾಧ್ಯಕ್ಷ ಯು.ಟಿ.ಖಾದರ್ ಮಧ್ಯೆ ಪ್ರವೇಶಿಸಿ, ಜಿಲ್ಲಾಡಳಿತ ಜಾಗ ನೀಡಬೇಕಾದ ಸರ್ಕಾರದ ಪತ್ರಕ್ಕೆ ಸ್ಪಂದಿಸದೆ ಕಡೆಗಣಿಸಿದ ವಿಷಯದ ಬಗ್ಗೆ ಕಂದಾಯ ಸಚಿವರು ಗಮನ ಹರಿಸುತ್ತಾರೆ. ಬೇಕಾದರೆ ಈ ಬಗ್ಗೆ ನಿವು ಕಂದಾಯ ಸಚಿವರಿಗೆ ಪತ್ರ ಬರೆಯಿರಿ ಎಂದು ಶಾಸಕ ಬೆಲ್ದಾಳೆ ಅವರಿಗೆ ಸಲಹೆ ನೀಡಿದರು. ನೀವು ಸ್ಥಳೀಯರು. ಒಳ್ಳೆಯ ಶಾಸಕರು. ಈಗಾಗಲೇ ನಿಮ್ಮಲ್ಲಿ ಸುಮಾರು ೧೬ ಕೋಟಿ ರೂ.ನಷ್ಟವಾದ ಮಾಹಿತಿ ಸಹ ಬಂದಿದೆ. ಒಮ್ಮೆ ಡಿಸಿಯವರಿಗೆ ನೀವು ಭೇಟಿ ಮಾಡಿ ಚರ್ಚಿಸಿ ಜಾಗದ ಸಮಸ್ಯೆ ಬಗೆಹರಿಸಿಕೊಳ್ಳಿ. ಮುಂದಿನ ಕೆಲಸ ನಾನು ಬೇಗ ಮಾಡಿಕೊಟ್ಟು ಕ್ಷೇತ್ರದ ಜನರಿಗೆ ಅನುಕೂಲ ಕಲ್ಪಿಸುವೆ ಎಂದು ಗೃಹ ಸಚಿವರು ಸಹ ಬೆಲ್ದಾಳೆ ಅವರಿಗೆ ಸಲಹೆ ನೀಡಿ ಚರ್ಚೆಗೆ ತೆರೆ ಎಳೆದರು.
ಜನರ ಜೀವ, ಆಸ್ತಿಪಾಸ್ತಿ ರಕ್ಷಿಸಿ
ದಕ್ಷಿಣ ವಿಧಾನಸಭೆ ಕ್ಷೇತ್ರ ಸಂಪೂರ್ಣ ಹಳ್ಳಿಗಳಿಂದ ಕೂಡಿದೆ. ಕ್ಷೇತ್ರದಲ್ಲಿ ಅಗ್ನಿಶಾಮಕ ಠಾಣೆ ಇಲ್ಲದ ಕಾರಣ ಸಾಕಷ್ಟು ಆಸ್ತಿಪಾಸ್ತಿ, ಜೀವಹಾನಿ ಸಂಭವಿಸುತ್ತಿದೆ. ಏನಾದರೂ ಅಗ್ನಿ ಅವಘಡ ಸಂಭವಿಸಿದರೆ 40 ಕಿಮೀ ದೂರದ ಬೀದರ್, ಹುಮನಾಬಾದ್ ನಿಂದ ಅಗ್ನಿಶಾಮಕ ವಾಹನ ಬರಲು ವಿಳಂಬವಾಗುತ್ತಿದೆ. ಈ ವಾಹನ ಬರುವಷ್ಟಲ್ಲಿ ಪೂರ್ಣ ಹಾಳಾಗುತ್ತಿದೆ. ಜನರ ಜೀವ, ಆಸ್ತಿ ರಕ್ಷಣೆಗಾಗಿ ಕ್ಷೇತ್ರದ ಕೇಂದ್ರವಾದ ಮನ್ನಾಎಖ್ಖೆಳ್ಳಿಯಲ್ಲಿ ಅಗ್ನಿಶಾಮಕ ಠಾಣೆ ಸ್ಥಾಪನೆ ಅತ್ಯಂತ ಅಗತ್ಯವಿದೆ. ಜನಹಿತದ ಈ ವಿಷಯ ಹಿಂದಿನ ನಾಲ್ಕು ಅಧಿವೇಶನದಲ್ಲಿ ನಾನು ಪ್ರಸ್ತಾಪಿಸಿದರೂ ಸರ್ಕಾರ ಕ್ರಮ ಕೈಗೊಂಡಿಲ್ಲ ಎಂದು ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಪ್ರಶ್ನೋತ್ತರ ಚರ್ಚೆ ವೇಳೆ ಗಮನ ಸೆಳೆದರು. ಕ್ಷೇತ್ರದಲ್ಲಿ ಬೆಂಗಳೂರು-ಹೈದರಾಬಾದ್-ಪುಣೆ-ಮುAಬೈ ಹೆದ್ದಾರಿ 30 ಕಿಮೀ ಹಾದುಹೋಗಿದೆ. ಅಪಘಾತ ಸಂಭವಿಸಿದ ವೇಳೆ ಬೆಂಕಿ ಹೊತ್ತಿ ಹಾನಿಯಾದ ಉದಾಹರಣೆಗಳಿವೆ. ಅಪಾರ ಆಸ್ತಿಪಾಸ್ತಿ ನಷ್ಟವಾಗಿದೆ. ಬೆಳೆಗಳಿಗೆ ಬೆಂಕಿ ತಗುಲಿ ರೈತರು ಅಪಾರ ಹಾನಿ ಅನುಭವಿಸುತ್ತಿದ್ದಾರೆ. ಸಕಾಲಕ್ಕೆ ಅಗ್ನಿಶಾಮಕ ವಾಹನ ಸ್ಥಳಕ್ಕೆ ಬಂದು ಕಾರ್ಯಾಚರಣೆ ನಡೆಸಿದರೆ ಜನರ ಜೀವ ಜೊತೆಗೆ ಆಸ್ತಿಪಾಸ್ತಿ ರಕ್ಷಣೆ ಸಾಧ್ಯ. ತಕ್ಷಣ ಬೇಡಿಕೆಗೆ ಸ್ಪಂದಿಸಿ ಎಂದು ಕೋರಿದರು. ಎರಡು ಎಕರೆ ಜಾಗ ಸಿಕ್ಕ ಕೂಡಲೇ ಅಗ್ನಿಶಾಮಕ ಠಾಣೆ ಸ್ಥಾಪನೆಗೆ ಸರ್ಕಾರ ಬದ್ಧವಿದೆ. ಇದಕ್ಕೆ ಹಣದ ಕೊರತೆ ಸಹ ಇಲ್ಲ ಎಂದು ಗೃಹ ಸಚಿವ ಡಾ.ಪರಮೇಶ್ವರ ಹೇಳಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post