ಕಲ್ಪ ಮೀಡಿಯಾ ಹೌಸ್ | ಬೀದರ್ |
ಮೂರು ಸಾವಿರ ವರ್ಷಗಳ ಐತಿಹಾಸಿಕ ಹಿನ್ನೆಲೆ ಹೊಂದಿದೆ ಎಂದು ಹೇಳಲಾಗುತ್ತಿರುವ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಂಗನಕೋಟ್ ನಲ್ಲಿರುವ ಐತಿಹಾಸಿಕ ಸಿದ್ದೇಶ್ವರ ದೇವಸ್ಥಾನಕ್ಕೆ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ MLA Bandeppa Khashempur ಭೇಟಿ ನೀಡಿದರು.
ಕಂಗನಕೋಟ್ ಗ್ರಾಮದ ಹೊರವಲಯದಲ್ಲಿರುವ ಸಿದ್ದೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಅವರು, ಈ ದೇವಸ್ಥಾನ ಐತಿಹಾಸಿಕ ಹಿನ್ನೆಲೆ ಹೊಂದಿದೆ ಎನ್ನಲಾಗುತ್ತಿದೆ. ದೇವಸ್ಥಾನದ ಅಭಿವೃದ್ಧಿಗಾಗಿ ಗ್ರಾಮಸ್ಥರು ಮನವಿ ಮಾಡುತ್ತಿದ್ದಾರೆ. ದೇವಸ್ಥಾನದ ಜೀರ್ಣೋದ್ಧಾರಕ್ಕೆ ಕ್ರಮಕೈಗೊಳ್ಳುತ್ತೇನೆ. ಸಂಬಂಧಿಸಿದವರಿಗೆ ತಿಳಿಸುತ್ತೇನೆ ಎಂದರು.

ದೇವಸ್ಥಾನದ ಜೀರ್ಣೋದ್ಧಾರಕ್ಕೆ ನಾನು ವೈಯಕ್ತಿಕ ಧನಸಹಾಯ ಮಾಡುತ್ತೇನೆ. ಅಷ್ಟೇ ಅಲ್ಲದೇ ಯಾವು ರೂಪದಲ್ಲಿ ಅನುದಾನ ಒದಗಿಸಲು ಸಾಧ್ಯವಾಗುತ್ತದೆಯೋ ಆ ರೂಪದಲ್ಲಿ ಅನುದಾನವನ್ನು ಒದಗಿಸಿಕೊಡುತ್ತೇನೆ. ಐತಿಹಾಸಿಕ ಹಿನ್ನೆಲೆ ಇರುವ ದೇವಸ್ಥಾನಗಳನ್ನು ಉಳಿಸಿಕೊಂಡು, ಬೆಳಸಿಕೊಂಡು ಸಾಗಬೇಕಾಗಿದೆ. ಇದು 2023ರಲ್ಲಿ ನಾನು ಭೇಟಿ ನೀಡುತ್ತಿರುವ ಮೊದಲ ಗ್ರಾಮವಾಗಿದೆ. ಅದರಲ್ಲೂ ಇಂತಹ ಐತಿಹಾಸಿಕ ಸ್ಥಳಕ್ಕೆ ಭೇಟಿ ನೀಡಿರುವುದು ವಿಶೇಷ ಎನಿಸುತ್ತಿದೆ ಎಂದು ಹೇಳಿದರು.

ಮಕ್ಕಳಿಗೆ ಕಾಯಿಲೆಗಳು ಬಂದಾಗ ಈ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಿದರೆ ಕಾಯಿಲೆಗಳು ವಾಸಿಯಾಗುತ್ತವೆ. ಹುಣ್ಣುಗಳು, ತುರಿಕೆ ಕಾಯಿಲೆಗಳು ಬಂದಾಗ ದೇವರ ಸನ್ನಿಧಿಗೆ ಬಂದು ವಿಶೇಷ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರೆ ಕಾಯಿಲೆಗಳಿಂದ ಮುಕ್ತಿ ದೊರೆಯುತ್ತದೆ ಎಂಬ ಮಾಹಿತಿಯನ್ನು ಗ್ರಾಮಸ್ಥರು ಹಂಚಿಕೊಂಡರು.












Discussion about this post