ಕಲ್ಪ ಮೀಡಿಯಾ ಹೌಸ್ | ಬೀದರ್ |
ಬೀದರ್ ದಕ್ಷಿಣ ಕ್ಷೇತ್ರ ವ್ಯಾಪ್ತಿಯ ಮಂಗಲಗಿಯ ಶ್ರೀನಿವಾಸರೆಡ್ಡಿ ತಂದೆ ಸಂಜುರೆಡ್ಡಿ ಕೊಂತಮ್ ಎಂಬ ರೈತರ ಮೂರು ಎಕರೆ ಕಬ್ಬು ಅ.25ರಂದು ಜೆಸ್ಕಂ ಲೈನ್ ಗಳಿಂದ ಉಂಟಾದ ಬೆಂಕಿಯಿಂದ ಸುಟ್ಟು ಕರಕಲಾಗಿದ್ದು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರಾಗಿರುವ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಂಗಲಗಿಯ ರೈತ ಶ್ರೀನಿವಾಸರೆಡ್ಡಿ ಜಮೀನಿಗೆ ಭೇಟಿ ನೀಡಿದ ಶಾಸಕ ಬಂಡೆಪ್ಪ ಖಾಶೆಂಪುರ್, ಕಬ್ಬು ಕಳೆದುಕೊಂಡ ರೈತ, ಜೆಸ್ಕಂ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದರು. ಇದೇ ವೇಳೆ ಜೆಸ್ಕಂ ನ ಹಿರಿಯ ಅಧಿಕಾರಿಗಳಿಗೆ ಕರೆ ಮಾಡಿ ಮಾತನಾಡಿ, ಮೂರು ಎಕರೆಗೂ ಹೆಚ್ಚಿನ ಕಬ್ಬು ವಿದ್ಯುತ್ ತಂತಿ ತಗುಲಿ ನಾಶವಾಗಿದ್ದು, ರೈತ ಸಂಕಷ್ಟಕ್ಕೆ ಸಿಲುಕಿದ್ದಾನೆ. ಕೂಡಲೇ ಪರಿಹಾರ ಒದಗಿಸಿಕೊಡುವಂತೆ ಸೂಚಿಸಿದರು. ಕೂಡಲೇ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿ ಪರಿಹಾರ ಒದಗಿಸಿಕೊಡುವಂತೆ ಸ್ಥಳದಲ್ಲಿದ್ದ ಜೆಸ್ಕಂ ಅಧಿಕಾರಿಗಳಿಗೂ ಸೂಚಿಸಿದರು.
ಇದೇ ವೇಳೆ ಮಾತನಾಡಿದ ರೈತ ಶ್ರೀನಿವಾಸರೆಡ್ಡಿ, ನಮ್ಮ ಕಬ್ಬಿನ ತೋಟದ ಮೇಲೆ ಜೆಸ್ಕಂ ಕಂಬಗಳು, ತಂತಿಗಳು ಹೋಗಿದ್ದು, ತಂತಿ ತಗುಲಿದ ಪರಿಣಾಮ ಕಬ್ಬ ಸುಟ್ಟು ಹೋಗಿದೆ. ಕಬ್ಬು ಬೆಳೆಯಲು ತೊಂಬತ್ತು ಸಾವಿರಕ್ಕೂ ಅಧಿಕ ಹಣ ಖರ್ಚು ಮಾಡಲಾಗಿತ್ತು. ಕಟಾವು ಮಾಡಬೇಕು ಎನ್ನುವಷ್ಟರಲ್ಲೇ ಈ ಅವಘಡ ಸಂಭವಿಸಿ, ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿದೆ ಪರಿಹಾರ ಒದಗಿಸಿಕೊಡಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜೆಸ್ಕಂ ಎಇಇ ಅನಿಲ್ ಪಾಟೀಲ್, ಮನ್ನಾಎಖೇಳ್ಳಿ ಸೆಕ್ಷನ್ ಆಫೀಸರ್ ಖಾಸಿನಾಥ್ ಪವರ್, ಮನ್ನಾಎಖೇಳ್ಳಿ ಪಿಎಸ್ಐ ಮಡಿವಾಳಪ್ಪ ಬಾಗೋಡಿ, ಮುಖಂಡರಾದ ನಾರಾಯಣರೆಡ್ಡಿ, ಮೋಹನರೆಡ್ಡಿ, ಚಾಂದ್, ಕಮಲರೆಡ್ಡಿ, ಕೃಷ್ಣರೆಡ್ಡಿ ಸೇರಿದಂತೆ ಅನೇಕರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post