ಕಲ್ಪ ಮೀಡಿಯಾ ಹೌಸ್
ಬೀದರ್ : ಕೊರೋನಾ ವೈರಸ್ ಹಾವಳಿಯಿಂದಾಗಿ ಶಿಕ್ಷಣ ವ್ಯವಸ್ಥೆಯಲ್ಲಿ ಬಹಳ ಸಮಸ್ಯೆಗಳು ಉಂಟಾಗಿದ್ದು, ಕಲಿಕಾ ವ್ಯವಸ್ಥೆಯಲ್ಲಿ ಬದಲಾವಣೆಗಳಾಗಿವೆ. ಈ ಪರಿಸ್ಥಿತಿಯಲ್ಲಿ ಗುಣಾತ್ಮಕ ಶಿಕ್ಷಣ ನೀಡುವ ಕಡೆಗೆ ಹೆಚ್ಚಿನ ಮಹತ್ವ ನೀಡಬೇಕೆಂದು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರಾಗಿರುವ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ ಸಲಹೆ ನೀಡಿದರು.
ಕ್ಷೇತ್ರ ವ್ಯಾಪ್ತಿಯ ಖಾಶೆಂಪುರ್ ಗ್ರಾಮದ ಹೊರವಲಯದಲ್ಲಿರುವ ತಮ್ಮ ನಿವಾಸದಲ್ಲಿ ಬೀದರ್ ಹಾಗೂ ಹುಮನಾಬಾದ್ ವ್ಯಾಪ್ತಿಯ ಬಿಇಒಗಳು ಹಾಗೂ ಇಒಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಭಾರತಕ್ಕೆ ಕೊರೋನಾ ವೈರಸ್ ಕಾಲಿಟ್ಟಾಗಿನಿಂದ ಇಲ್ಲಿಯವರೆಗೂ ಅನೇಕ ಭಾರಿ ಲಾಕ್ ಡೌನ್ ಮಾಡಲಾಗಿದೆ. ಲಾಕ್ ಡೌನ್ ಪರಿಣಾಮವಾಗಿ ಶಾಲಾ, ಕಾಲೇಜುಗಳು ಬಾಗಿಲು ಮುಚ್ಚಿವೆ. ಮಕ್ಕಳ ಕಲಿಕೆಗಾಗಿ ಆನ್ ಲೈನ್ ವ್ಯವಸ್ಥೆ ಜಾರಿ ಮಾಡಲಾಗಿದೆ. ಆದರೇ ಆನ್ ಲೈನ್ ಕಲಿಕೆಗೆ ಬೇಕಾಗುವ ಎಲ್ಲಾ ಸೌಕರ್ಯಗಳು ಎಲ್ಲಾ ಕಡೆಗಳಲ್ಲಿ ಸಿಗುತ್ತಿಲ್ಲ ಎಂದರು..
ಮುಂದಿನ ಶೈಕ್ಷಣಿಕ ವ್ಯವಸ್ಥೆಗಳಲ್ಲಿ ಮಕ್ಕಳ ವಿದ್ಯಾಭ್ಯಾಸವನ್ನು ಗುಣಾತ್ಮಕಗೊಳಿಸುವ ಕೆಲಸ ಮಾಡಬೇಕಾಗಿದೆ. 8, 9, 10ನೇ ತರಗತಿ ವಿದ್ಯಾರ್ಥಿಗಳನ್ನು ಯಾವ ರೀತಿಯಾಗಿ ವಿದ್ಯಾಭ್ಯಾಸದಲ್ಲಿ ತೊಡಗಿಸಬೇಕು ಎಂಬ ಬಗ್ಗೆ ಚಿಂತನೆ ನಡೆಸಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಕ್ರಮಗಳನ್ನು ಶಿಕ್ಷಣ ಇಲಾಖೆಯ ಅಧಿಕಾರಿಗಳು ಕೈಗೊಳ್ಳಬೇಕಾಗಿದೆ ಎಂದು ಹೇಳಿದರು.
ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳ ಸಂಖ್ಯೆ ಸುಮಾರು 6 ಸಾವಿರಕ್ಕೂ ಹೆಚ್ಚಿಗೆ ಇದೆ. ಐದೈದು ಜನ ವಿದ್ಯಾರ್ಥಿಗಳ ಗುಂಪು ರಚಿಸಿ ಅವರಿಗೆ ಬೇಕಾಗುವ ಸ್ಟಡಿ ಮೆಟೀರಿಯಲ್ಸ್ ಗಳನ್ನು ಓದಗಿಸಿಕೊಡುವ ಹಾಗೂ ಆನ್ ಲೈನ್ ಎಜುಕೇಶನ್ ನೀಡುವ ಸಲುವಾಗಿ ವಿನೂತನ ಯೋಜನೆ ರೂಪಿಸಬೇಕಾಗಿದೆ. ಈ ಸಂಬಂಧ 15 ದಿನಗಳಲ್ಲಿ ಪ್ರಪೋಸಲ್ ರೆಡಿ ಮಾಡಿ ಕೊಡಿ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಸೂಚಿಸಿದರು.
ಈ ಸಂದರ್ಭದಲ್ಲಿ ಬೀದರ್ ಕ್ಷೇತ್ರ ಶಿಕ್ಷಣ ಅಧಿಕಾರಿ ಸುರ್ಯಕಾಂತ ಮಧಾನೆ, ಹುಮನಾಬಾದ್ ಕ್ಷೇತ್ರ ಶಿಕ್ಷಣ ಅಧಿಕಾರಿ ಶಿವಗೊಂಡಪ್ಪ, ಬೀದರ್ ಶಿಕ್ಷಣ ಅಧಿಕಾರಿ ತುಳಿಸಿರಾಮ್ ದೊಡ್ಡೆ ಸೇರಿದಂತೆ ಅನೇಕರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post