ಕಲ್ಪ ಮೀಡಿಯಾ ಹೌಸ್ | ಬೀದರ್ |
ರಾಜ್ಯ ಸರ್ಕಾರ ನಿದ್ರಾ ಸ್ಥಿತಿಯಲ್ಲಿದೆ. ಕೂಡಲೇ ನಿದ್ರೆಯಿಂದ ಎದ್ದು ರಾಜ್ಯದ ರೈತರ ಬೆನ್ನಿಗೆ ನಿಲ್ಲುವ ಕೆಲಸ ಮಾಡಬೇಕು ಎಂದು ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರು, ಜೆಡಿಎಸ್ ಕೋರ್ ಕಮಿಟಿಯ ಸದಸ್ಯರಾಗಿರುವ ಬಂಡೆಪ್ಪ ಖಾಶೆಂಪುರ್ Bandeppa Khashempur ಹೇಳಿದರು.
ಬೀದರ್ ನಗರದ ಪತ್ರಿಕಾ ಭವನದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಬಾರಿ ಬೀದರ್ ಜಿಲ್ಲೆಯಲ್ಲಿ ಬಿತ್ತನೆ ಮಾಡಲಾಗಿದ್ದ ಸೋಯಾ ಬೆಳೆ ಶೇಕಡಾ 10% ರಷ್ಟು ಕೂಡ ಫಲ ಕೊಟ್ಟಿಲ್ಲ. ತೊಗರಿ ಬೆಳೆ ಕೂಡ ಅರ್ಧಕ್ಕೆ ನಿಂತಿದೆ. ಮಳೆಯ ಕೊರತೆಯಿಂದ ತೇವಾಂಶವಿಲ್ಲದೆ ಅನೇಕ ಬೆಳೆಗಳು ಹಾಳಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಬೀದರ್ ಜಿಲ್ಲೆಯ ಬರ ಪರಿಹಾರಕ್ಕಾಗಿ ನಾಲ್ಕು ಕೋಟಿ ರೂ. ಕೊಟ್ಟರೆ ಸಾಕಾಗುತ್ತಾ? ಬರಗಾಲ ಘೋಷಣೆಯಾದ ನಂತರ ಮೇವು, ನೀರು, ಉದ್ಯೋಗ ಖಾತ್ರಿ ಕೆಲಸಕ್ಕೆ ಮಹತ್ವ ನೀಡಬೇಕಾಗಿತ್ತು. ಆದರೇ ಸರ್ಕಾರ ಆ ಕೆಲಸ ಮಾಡಲಿಲ್ಲ. ಬೀದರ್ ನಲ್ಲಿ ಉದ್ಯೋಗ ಖಾತ್ರಿ ಅವಶ್ಯಕತೆಯಿದೆ. ಮಾನವ ದಿನಗಳನ್ನು 150ಕ್ಕೆ ಹೆಚ್ಚಿಸುವ ಕೆಲಸ ಮಾಡಬೇಕು ಅದು ಆಗಿಲ್ಲ. ಮೇವು ಬ್ಯಾಂಕ್ ಗಳು ಎಲ್ಲಿಯೂ ಒಪನ್ ಆಗಿಲ್ಲ. ಕುಡಿಯುವ ನೀರಿಲ್ಲ.

ಮುಖ್ಯಮಂತ್ರಿ, ರಾಜ್ಯಪಾಲರಿಗೆ ಮನವಿ ಸಲ್ಲಿಸುತ್ತೇವೆ:
ನಮ್ಮ ಪಕ್ಷದಿಂದ ನಾವು ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿಯೂ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಮತ್ತು ರಾಜ್ಯಪಾಲರಿಗೆ ಮನವಿ ಸಲ್ಲಿಸುತ್ತಿದ್ದೇವೆ. ರಾಜ್ಯಮಟ್ಟದ ನಾಯಕರು ಮತ್ತು ಪಕ್ಷದ ಶಾಸಕರು ಎಲ್ಲಾ ಸೇರಿ ರಾಜ್ಯಪಾಲರನ್ನು ಭೇಟಿಯಾಗಿ ರಾಜ್ಯದ ಪರಿಸ್ಥಿತಿಯ ಬಗ್ಗೆ ತಿಳಿಸುತ್ತೇವೆ.

ಬರ ಪರಿಹಾರದ ದುಡ್ಡು ಬೀದರ್ ಜಿಲ್ಲೆಗೆ ಬಹಳಷ್ಟು ಕಡಿಮೆಯಿದೆ. ಅದನ್ನು ಹೆಚ್ಚಿಸುವ ಕೆಲಸವನ್ನು ಜಿಲ್ಲೆಯ ಜನಪ್ರತಿನಿಧಿಗಳು ಮಾಡಬೇಕು. ಮೊದಲು ರಾಜ್ಯದಿಂದ ಪರಿಹಾರ ನೀಡಿ ನಂತರ ಕೇಂದ್ರಕ್ಕೆ ಮನವಿ ಸಲ್ಲಿಸಬೇಕು. ಸ್ಕಾಲರ್ಶಿಪ್, ಶಾಸಕರ ಅನುದಾನವನ್ನು ಈ ಸರ್ಕಾರ ಕಡಿಮೆ ಮಾಡಿದೆ. ಗ್ಯಾರಂಟಿ ಗದ್ದಲದಲ್ಲಿ ಅಭಿವೃದ್ಧಿ ಕುಂಠಿತಗೊಳಿಸಿದೆ. ಗ್ಯಾರಂಟಿ ಕೂಡ ಸಮರ್ಪಕವಾಗಿ ಜಾರಿಗೆ ತರುತ್ತಿಲ್ಲ. ಸರ್ವರ್ ಅಲ್ಲ ಸರ್ಕಾರವೇ ಡೌನ್ ಇದೆ ಅನಿಸ್ತಿದೆ.
Also read: ಬೋಟ್ ಅಗ್ನಿ ದುರಂತದಿಂದ ಅಂದಾಜು 13 ಕೋಟಿ ರೂ. ನಷ್ಟ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಕಾಂಗ್ರೆಸ್ ಸ್ಥಳೀಯ ಪಕ್ಷವೋ ಇಲ್ಲವೇ ರಾಷ್ಟ್ರೀಯ ಪಕ್ಷವೋ ಎಂಬುದು ನನ್ನ ಪ್ರಶ್ನೆಯಾಗಿದೆ. ಸರ್ಕಾರ ಬರಲಾರದ ಕಡೆಗೆ ಆಶ್ವಾಸನೆ ನೀಡುತ್ತಿದ್ದಾರೆ. ನಮ್ಮಲ್ಲಿ ರೈತರ ಸಾಲಮನ್ನಾದ ಬಗ್ಗೆ ಮಾತನಾಡುತ್ತಿಲ್ಲ. ಇಲ್ಲಿಯ ರೈತರಿಗೆ ಏನು ಪರಿಹಾರ ಕೊಟ್ಟಿಲ್ಲ. ಅಲ್ಲಿ ಪರಿಹಾರ ಕೊಡ್ತಿನಿ ಎಂದಿದ್ದಾರೆ. ಇದ್ಯಾಕ್ ಈ ರೀತಿಯ ದ್ವಂದ್ವ ನಿಲುವುಗಳನ್ನು ಕಾಂಗ್ರೆಸ್ ನವ್ರು ಮಾಡ್ತಿದ್ದಾರೆ. ಕಾಂಗ್ರೆಸ್ ರಾಷ್ಟ್ರೀಯ ಪಕ್ಷವೇ ಇಲ್ಲವೇ ಗಲ್ಲಿ ಪಾರ್ಟಿಯೇ ಎಂದು ಬಂಡೆಪ್ಪ ಖಾಶೆಂಪುರ್ ರವರು ಖಾರವಾಗಿ ಪ್ರಶ್ನಿಸಿದರು.

ರಾಜ್ಯದಲ್ಲಿ ಭೀಕರ ಬರಗಾಲವಿದ್ದರೂ ಸರ್ಕಾರದಿಂದ ಒಂದೇ ಒಂದು ಆದೇಶ ಬಂದಿಲ್ಲ. ಜಿಲ್ಲಾ ಮಟ್ಟದಲ್ಲಿ ಜನಪರ ಕೆಲಸಗಳನ್ನು ಅವರು ಮಾಡಿಲ್ಲ. ಕಾಂಗ್ರೆಸ್ ನವ್ರು ಆಪರೇಷನ್ ಮಾಡಿದಾಗಲೆಲ್ಲಾ ಪೆಟ್ಟು ತಿಂದು ಮನೆನಲ್ಲಿ ಕುಳಿತಿದ್ದಾರೆ. ಮುಂದೆನೂ ಕುಳಿತುಕೊಳ್ಳುತ್ತಾರೆ. ಸ್ಪೀಕರ್ ಹುದ್ದೆಯ ಬಗ್ಗೆ ಜಮೀರ್ ಅಹಮದ್ ಹೇಳಿರುವುದು ಸರಿಯಲ್ಲ. ಸರ್ಕಾರ ನಿದ್ರೆಯಲ್ಲಿದ್ದಾಗ ಎದ್ದೇಳಿಸುವ ಕೆಲಸ ನಾವು ಮಾಡುತ್ತೇವೆ. ಬಿಜೆಪಿ ಜೊತೆಗಿನ ಮೈತ್ರಿ ವಿಷಯದಲ್ಲಿ ಏನು ಸಮಸ್ಯೆಗಳಿಲ್ಲ ಎಂದು ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್ ಹೇಳಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷರಾದ ರಮೇಶ್ ಪಾಟೀಲ್ ಸೋಲಪೂರ್, ಪ್ರಮುಖರಾದ ಐಲಿಂಜಾನ್ ಮಠಪತಿ, ಮೊಹಮ್ಮದ್ ಅಶುದುದ್ದೀನ್, ರಾಜಶೇಖರ್ ಜವಳೆ, ಸಜ್ಜದ್ ಸಾಹೇಬ್, ಅಶೋಕ್ ಕೊಡ್ಗೆ, ಅಭಿ ಕಾಳೆ, ತಾನಾಜಿ ತೋರಣೆಕರ್, ಸುರೇಶ್ ಸಿಗಿ, ಬಸವರಾಜ ಪಾಟೀಲ್ ಹಾರೂರಗೆರಿ, ಲಲಿತಾ ಕರಂಜೆ, ರೇವಣಸಿದ್ದಪ್ಪ ಶಿರಕಟ್ಟನಳ್ಳಿ, ರಾಜು ಚಿಂತಾಮಣಿ ಸೇರಿದಂತೆ ಅನೇಕರಿದ್ದರು.










Discussion about this post