ಕಲ್ಪ ಮೀಡಿಯಾ ಹೌಸ್ | ಬೀದರ್ |
12ನೇ ಶತಮಾನದಲ್ಲಿ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಕ್ರಾಂತಿ ಮಾಡಿದ ವಿಶ್ವಗುರು ಬಸವಣ್ಣನವರ ಮೂರ್ತಿ ಮತ್ತು 21ನೇ ಶತಮಾನದ ಪಕ್ಕ ಬಸವಣ್ಣನವರ ಅನುಯಾಯಿಯಾಗಿ ಈ ಭಾಗದಲ್ಲಿ ನಿಜಾಮರ ಕಾಲದಲ್ಲಿ ಕನ್ನಡವನ್ನು ಉಳಿಸಿ, ಬೆಳೆಸಿ ನಡೆದಾಡುವ ದೇವರು ಎಂಬ ಪ್ರಖ್ಯಾತಿ ಪಡೆದ ಡಾ. ಚನ್ನಬಸವ ಪಟ್ಟದ್ದೆವರುರವರ ಮೂರ್ತಿಗಳನ್ನು ಅನಾವರಣ ಮಾಡಿರುವುದು ನಮ್ಮ ಪೂರ್ವ ಜನ್ಮದ ಪೂಣ್ಯವಾಗಿದೆ ಎಂದು ಕೇಂದ್ರ ರಾಜ್ಯ ರಸಗೊಬ್ಬರ ಸಚಿವ ಭಗವಂತ ಖೂಬಾ Union Minister Bhagwant Khooba ಹೇಳಿದರು.
ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಪಲಾಪೂರ (ಎ) ಗ್ರಾಮದಲ್ಲಿ ನಿರ್ಮಿಸಲಾದ ವಿಶ್ವಗುರು ಬಸವಣ್ಣನವರ ಮತ್ತು ಡಾ. ಚನ್ನಬಸವ ಪಟ್ಟದ್ದೆವರುರವರ ಮೂರ್ತಿಗಳನ್ನು ಶಾಸಕ ಬಂಡೆಪ್ಪ ಖಾಶೆಂಪುರ್ ಸೇರಿದಂತೆ ಅನೇಕ ಗಣ್ಯರ ಮತ್ತು ಪರಮಪೂಜ್ಯರ ನೇತೃತ್ವದಲ್ಲಿ ಶುಕ್ರವಾರ ಅನಾವರಣಗೊಳಿಸಿ ಅವರು ಮಾತನಾಡಿದರು.
ಮನುಷ್ಯ ಸುಖ, ಶಾಂತಿಯಿಂದ ಜೀವನ ಸಾಗಿಸಲು ಮಹಾಪುರುಷರ ಆಶೀರ್ವಾದ ಸದಾ ನಮ್ಮ ಮೇಲೆ ಇದ್ದಾಗ ಮಾತ್ರ ಸಾಧ್ಯವಾಗುತ್ತದೆ. ಇಬ್ಬರು ಮಹಾಪುರುಷರು ತಮ್ಮ ತಮ್ಮ ಕಾಲದಲ್ಲಿ ಕ್ರಾಂತಿ ಮಾಡಿದ್ದಾರೆ. ಅವರ ನಡೆ, ನುಡಿ ಸಮಾಜಕ್ಕೆ ಮಾದರಿಯಾಗಿದೆ. ಅದೇ ಕಾರಣಕ್ಕಾಗಿ ಮಹಾತ್ಮರು ನಮ್ಮ ಮಧ್ಯದಲ್ಲಿ ಇನ್ನೂ ಇದ್ದಾರೆ ಎಂದು ಹೇಳಿದರು.
ಶಾಸಕ ಬಂಡೆಪ್ಪ ಖಾಶೆಂಪುರ್ ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣನವರು ವಿಶ್ವಕ್ಕೆ ಮಾದರಿಯಾಗುವಂತ ಸಾಮಾಜಿಕ ಕ್ರಾಂತಿ ಮಾಡಿದ್ದರು. ನಿಜಾಮರ ಕಾಲದಲ್ಲಿ ಹೊರಗಡೆ ಉರ್ದು ಬೋರ್ಡ್ ಹಾಕಿ ಒಳಗಡೆ ಕನ್ನಡ ಕಲಿಸುವ ಕೆಲಸವನ್ನು ಶ್ರೀ ಡಾ. ಚನ್ನಬಸವ ಪಟ್ಟದ್ದೆವರು ಮಾಡಿದ್ದಾರೆ. ಅಂತ ಇಬ್ಬರು ಮಹಾತ್ಮರ ಮೂರ್ತಿಗಳನ್ನು ಅನಾವರಣ ಮಾಡಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.
ನಾವು ಮಹಾತ್ಮರ ಮೂರ್ತಿಗಳನ್ನು ನಿರ್ಮಿಸುವುದಷ್ಟೇ ಅಲ್ಲ ಅವರ ತತ್ವಾದರ್ಶಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಸಾಗಬೇಕಾಗಿದೆ. ಬಸವಣ್ಣನವರು ಆಗಿನ ಕಾಲದಲ್ಲೇ ಇತಿಹಾಸ ನಿರ್ಮಿಸಿದ್ದಾರೆ. ಅಂದಿನ ಕಾಲದಲ್ಲಿ ಅವರು ಅನುಭವ ಮಂಟಪದಲ್ಲಿ ಮೀಸಲಾತಿ ಕಲ್ಪಿಸಿ, 12ನೇ ಶತಮಾನದಲ್ಲಿಯೇ ಸಾಮಾಜಿಕ ಕ್ರಾಂತಿ ಮಾಡಿದ್ದರು.
21ನೇ ಶತಮಾನದಲ್ಲಿ ಚನ್ನಬಸವ ಪಟ್ಟದ್ದೆವರು ಶೈಕ್ಷಣಿಕ ಕ್ರಾಂತಿ ಮಾಡಿದ್ದಾರೆ. ಅದರಂತೆಯೇ ಬಾಬಾ ಸಾಹೇಬ್ ಡಾ. ಬಿ.ಆರ್ ಅಂಬೇಡ್ಕರ್ ರವರು ಸಂವಿಧಾನದ ಮೂಲಕ ಮೀಸಲಾತಿ ಕಲ್ಪಿಸಿಕೊಟ್ಟಿದ್ದಾರೆ. ಸಮಾನತೆಗಾಗಿ ಹೋರಾಡಿದ್ದಾರೆ. ಇವತ್ತಿನ ಪರಿಸ್ಥಿತಿಯಲ್ಲಿ ಶಿಕ್ಷಣದಲ್ಲಿ ಕ್ರಾಂತಿಯಾಗುವುದು ಅವಶ್ಯಕವಾಗಿದೆ. ಶಿಕ್ಷಣದಲ್ಲಿ ಕ್ರಾಂತಿ ಆಗಬೇಕೆಂದರೆ, ಪ್ರತಿ ಹಳ್ಳಿಯಲ್ಲಿನ ಮಕ್ಕಳು ಶಿಕ್ಷಣವಂತರಾಗಬೇಕು. ಪ್ರತಿಯೊಬ್ಬರಿಗೂ ಶಿಕ್ಷಣ ಒದಗಿಸಿಕೊಡಬೇಕು ಎಂಬ ಗುರಿಯೊಂದಿಗೆ ಚನ್ನಬಸವ ಪಟ್ಟದ್ದೆವರು ಕೆಲಸ ಮಾಡಿದ್ದಾರೆ. ಸಿದ್ದರಾಮಪ್ಪ ಕಪಲಾಪೂರೆರವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಅವರ ಕೆಲಸವನ್ನು ಪ್ರೋತ್ಸಾಹಿಸಬೇಕಾಗಿದೆ. ಮುಂದಿನ ದಿನಗಳಲ್ಲಿ ಕಪಲಾಪೂರದ ಈ ಆಶ್ರಮಕ್ಕೆ ಅನುದಾನ ಒದಗಿಸಿಕೊಡುವ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದ್ದೆವರು, ಹುಲಸೂರು ಶ್ರೀ ಗುರು ಬಸವೇಶ್ವರ ಸಂಸ್ಥಾನ ಮಠದ ಡಾ. ಶಿವಾನಂದ ಮಹಾಸ್ವಾಮಿಗಳು, ಭಾಲ್ಕಿ ಹಿರೇಮಠ ಸಂಸ್ಥಾನದ ಶ್ರೀ ಗುರುಬಸವ ಪಟ್ಟದ್ದೆವರು, ಹಿರೇಮಠ ಸಂಸ್ಥಾನ ಭಾಲ್ಕಿಯ ಶ್ರೀ ಮಹಾಲಿಂಗ ಮಹಾಸ್ವಾಮಿಗಳು, ಕಪಲಾಪೂರದ ಪೂರ್ಣಾನಂದ ಮಹಾಸ್ವಾಮಿಗಳು, ಕೆಎಸ್‌ಐಐಡಿಸಿ ಅಧ್ಯಕ್ಷ ಡಾ. ಶೈಲೇಂದ್ರ ಬೆಳ್ದಾಳೆ, ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬು ವಾಲಿ, ಪ್ರಮುಖರಾದ ಸೂರ್ಯಕಾಂತ್ ನಾಗಮರಪಳ್ಳಿ, ಶಂಕರ್ ಪಾಟೀಲ್, ಈಶ್ವರಿ, ಹಣುಮಂತರಾವ್ ಮೈಲಾರಿ, ಸಿದ್ದರಾಮಪ್ಪ ಕಪಲಾಪೂರೆ, ಶಕುಂತಲಾ ಬೆಲ್ದಾಳೆ, ಶಂಕರಪ್ಪ ಪಾಟೀಲ್, ನವಲಿಂಗ ಪಾಟೀಲ್ ಸೇರಿದಂತೆ ಅನೇಕರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post