ಕಲ್ಪ ಮೀಡಿಯಾ ಹೌಸ್ | ಬೀದರ್ |
ರಾಜ್ಯ ಸರ್ಕಾರ ಜಾರಿಗೆ ತಂದಿರುವ ಎಲ್ಲಾ ಗ್ಯಾರಂಟಿಗಳು ಒಕೆ. ಆದರೆ ರೈತರ ಬೆಳೆಗಳಿಗೆ ಗ್ಯಾರಂಟಿ ಎಲ್ಲಿದೆ. ಗ್ಯಾರಂಟಿ ಗದ್ದಲದಲ್ಲಿ ಸರ್ಕಾರ ರೈತರನ್ನು ಮರೆಯಬಾರದು ಎಂದು ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕ ಬಂಡೆಪ್ಪ ಖಾಶೆಂಪುರ್ Bandeppa Khashempur ರವರು ಆಗ್ರಹಿಸಿದರು.
ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಗದಲ್ ಹತ್ತಿರ ಮಳೆ ನೀರು ನಿಂತು ಹಾಳಾದ ಬೆಳೆಗಳನ್ನು ವೀಕ್ಷಣೆ ನಡೆಸಿ ಮಾತನಾಡಿದ ಅವರು, ಇತ್ತೀಚೆಗೆ ನಿರಂತರವಾಗಿ ಸುರಿದ ಮಳೆಯಿಂದಾಗಿ ರಸ್ತೆಯ ಪಕ್ಕದ ಜಮೀನುಗಳಲ್ಲಿ ನೀರು ನಿಂತು ರೈತರು ಬಿತ್ತನೆ ಮಾಡಿದ್ದ ಉದ್ದು, ಹೆಸರು, ಸೋಯಾ, ಕಬ್ಬು ಸೇರಿದಂತೆ ಅನೇಕ ಬೆಳೆಗಳು ಹಾಳಾಗಿವೆ. ರೈತರ ಬೆಳೆಗಳಿಗೆ ಗ್ಯಾರಂಟಿ ಎಲ್ಲಿದೆ ಎಂದು ಪ್ರಶ್ನಿಸಿದರು.
ರೈತರು ಸಾಲಸೂಲ ಮಾಡಿ ಕಷ್ಟಪಟ್ಟು ಜಮೀನುಗಳನ್ನು ಹದಗೊಳಿಸಿ, ಬಿತ್ತನೆ ಮಾಡಿರುತ್ತಾರೆ. ಉತ್ತಮ ಬೆಳೆ ಬೆಳೆದು ಜೀವನ ಸುಧಾರಿಸಿಕೊಳ್ಳುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಸಂದರ್ಭದಲ್ಲೇ ನಿರಂತರವಾಗಿ ಸುರಿದ ಮಳೆಯಿಂದಾಗಿ ಬಿತ್ತನೆ ಮಾಡಿದ ಜಮೀನುಗಳಲ್ಲಿ ನೀರು ನಿಂತಿದ್ದು ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರ ಸೇರಿದಂತೆ ಜಿಲ್ಲೆಯ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಈ ವಿಷಯವನ್ನು ಸರ್ಕಾರ ಮತ್ತು ಮುಖ್ಯಮಂತ್ರಿಗಳು ಗಂಭೀರವಾಗಿ ಪರಿಗಣಿಸಬೇಕು. ಶೀಘ್ರವಾಗಿ ಬೆಳೆ ಹಾನಿ ಸಮೀಕ್ಷೆ ನಡೆಸಿ, ಬೆಳೆ ನಷ್ಟ ಅನುಭವಿಸಿದ ರೈತರಿಗೆ ಕೂಡಲೇ ಎಕರೆಗೆ ಕನಿಷ್ಠ 25 ಸಾವಿರ ರೂ. ಪರಿಹಾರ ಒದಗಿಸುವ ಕೆಲಸವನ್ನು ಸಿಎಂ ಸಿದ್ದರಾಮಯ್ಯರವರು ಮಾಡಬೇಕು ಎಂದು ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್ ರವರು ಒತ್ತಾಯಿಸಿದರು.
Also read: ಆ.9ರಂದು ಕ್ರಾಂತಿಕಾರಿ ಹಾಡುಗಾರ, ಪ್ರಜಾ ಗಾಯಕ ಗದ್ದರ್ ಅವರಿಗೆ ನುಡಿನಮನ
ಈ ಸಂದರ್ಭದಲ್ಲಿ ಶಿವಕುಮಾರ್, ನಾಗೇಶ್, ಮೋಯಿಜ್, ಪ್ರಕಾಶ್, ಸುರೇಶ್, ಪ್ರಭು, ವೀರು ಪಾಟೀಲ್, ಸಂಜುಕುಮಾರ್ ಸೇರಿದಂತೆ ಬಗದಲ್ ಹಾಗೂ ವಿವಿಧ ಗ್ರಾಮಗಳ ರೈತರು, ಮುಖಂಡರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post