ವಾಷಿಂಗ್ಟನ್: ಅತ್ಯಂತ ಮಹತ್ವದ ಬೆಳವಣಿಗೆಯೊಂದರಲ್ಲಿ ಅಮೆರಿಕಾ ಸೇನಾಪಡೆ ನಡೆಸಿದ ಭಾರೀ ಕಾರ್ಯಾಚರಣೆಯಲ್ಲಿ ಐಸಿಸ್ ಉಗ್ರ ಸಂಘಟನೆಯ ಮುಖ್ಯಸ್ಥ ಅಬು ಬಕರ್ ಅಲ್ ಬಾಗ್ದಾದಿಯನ್ನು ಬೇಟೆಯಾಡಿ ಹತ್ಯೆ ಮಾಡಿದೆ.
ಈ ಕುರಿತಂತೆ ಅಮೆರಿಕಾ ಮಾಧ್ಯಮಗಳು ವರದಿ ಮಾಡಿದ್ದು, ಇದಕ್ಕೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡಿರುವ ಟ್ವೀಟ್ ಸಹ ಪುಷ್ಠಿ ನೀಡಿದೆ.
ಬಾಗ್ದಾದಿಯ ಹತ್ಯೆ ಮಾಡಲಾಗಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿರುವ ವಿಚಾರ ಒಂದೆಡೆಯಾದರೆ, ‘ಅತ್ಯಂತ ಮಹತ್ವದ ದೊಡ್ಡ ಘಟನೆಯೊಂದು ನಡೆದಿದೆ ಎಂದು ಟ್ರಂಪ್ ಟ್ವೀಟ್ ಮಾಡಿರುವುದು’ ಇದಕ್ಕೆ ಪುಷ್ಠಿ ನೀಡಿದೆ.
Something very big has just happened!
— Donald J. Trump (@realDonaldTrump) October 27, 2019
ವಿಶ್ವದ ಮೋಸ್ಟ್ ವಾಂಟೆಡ್ ನಟೋರಿಯಸ್ ಉಗ್ರ ಬಾಗ್ದಾದಿ, ಐಸಿಸ್ ಸಂಘಟನೆಯ ನೇತೃತ್ವವನ್ನು ವಹಿಸಿದ್ದ. 2014 ರಿಂದ ಭೂಗತನಾಗಿದ್ದ ಈತ ಕಳೆದ ಏಪ್ರಿಲ್’ನಲ್ಲಿ ಏಕಾಏಕಿ ವಿಡಿಯೋವೊಂದರಲ್ಲಿ ಕಾಣಿಸಿಕೊಂಡಿದ್ದ. ಆದರೆ, 2017 ರಲ್ಲಿ ಅಮೆರಿಕಾ ನಡೆಸಿದ ವಾಯುದಾಳಿಯಲ್ಲಿ ಬಾಗ್ದಾದಿ ಗಂಭೀರ ಗಾಯಗೊಂಡಿದ್ದ ಎಂದು ಅಮೇರಿಕಾ ಸೇನೆ ಹೇಳಿತ್ತು.
ಆನಂತರ ತನ್ನ ಪ್ರದೇಶ ಸಂಪೂರ್ಣವಾಗಿ ನಾಶವಾದ ಬಳಿಕ ತಲೆಮರೆಯಿಸಿಕೊಂಡಿದ್ದ ಈತ ಎಲ್ಲಿದ್ದಾನೆ ಎಂದು ಸುಳಿವು ನೀಡಿದವರಿಗೆ 25 ಮಿಲಿಯನ್ ಡಾಲರ್ ಬಹುಮಾನ ನೀಡುವುದಾಗಿಯೂ ಸಹ ಘೋಷಣೆ ಮಾಡಿತ್ತು.
ಆದರೆ ಇಂದು ನಡೆದ ದಾಳಿಯಲ್ಲಿ ಅಮೆರಿಕಾ ಸೇನೆ ಬಾಗ್ದಾದಿಯನ್ನು ಹತ್ಯೆ ಮಾಡಿದೆ ಎಂದು ಮಾಧ್ಯಮ ವರದಿ ಮಾಡಿದ್ದರೂ, ಈ ಕುರಿತಂತೆ ಅಲ್ಲಿನ ಸೇನೆ ಮಾತ್ರ ಯಾವುದೇ ರೀತಿಯ ಅಧಿಕೃತ ಹೇಳಿಕೆ ನೀಡಿಲ್ಲ.
ಅಮೆರಿಕಾ ನಡೆಸಿದ ಈ ಕಾರ್ಯಾಚರಣೆಯಲ್ಲಿ ಬಾಗ್ದಾದಿ ಹತ್ಯೆಯಾಗಿರುವುದು ಸತ್ಯವೇ ಆದಲ್ಲಿ, ಉಗ್ರರ ವಿರುದ್ಧದ ವಿಶ್ವದ ಕಾರ್ಯಾಚರಣೆಯಲ್ಲಿ ಇದೊಂದು ಮಹತ್ವದ ಘಟ್ಟವಾಗುತ್ತದೆ. ಅಲ್ಲದೇ, ಅಮೆರಿಕಾ ಸೇನೆಗೆ ಅತಿ ದೊಡ್ಡ ಜಯವೂ ಸಹ ಎನಿಸಿಕೊಳ್ಳಲಿದೆ.
Discussion about this post