ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನವದೆಹಲಿ: ಕೊರೋನಾ ವೈರಸ್ ಹಾವಳಿ ಹಿನ್ನೆಲೆಯಲ್ಲಿ ದೇಶದಾದ್ಯಂತ ಮೇ 3ರವರೆಗೂ ದೇಶದಾದ್ಯಂತ ಸಂಪೂರ್ಣ ಲಾಕ್ ಡೌನ್ ಘೋಷಿಸಿ ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ.
ದೇಶವನ್ನುದ್ದೇಶಿಸಿ ಇಂದು ಮಾತನಾಡಿದ ಅವರು, ಕೊರೋನಾ ವೈರಸ್ ವಿರುದ್ಧದ ಭಾರತದ ಹೋರಾಟ ಅದ್ಬುತವಾಗಿ ನಡೆಯುತ್ತಿದೆ. ಕೊರೋನಾ ವಿರುದ್ಧದ ಹೋರಾಟದಲ್ಲಿ ತೊಡಗಿಕೊಂಡಿರುವ ಎಲ್ಲರ ತ್ಯಾಗದಿಂದ ಇಂದು ಭಾರತ ಸುರಕ್ಷಿತವಾಗಿದೆ ಎಂದರು.
ನಿಮ್ಮ ತ್ಯಾಗದಿಂದ ಹಾನಿ ಕಡಿಮೆಯಾಗಿದೆ. ಎಲ್ಲರೂ ಶಿಸ್ತಿನ ಸಿಪಾಯಿಗಳಂತೆ ಕರ್ತವ್ಯ ನಿರ್ವಹಿಸಿದ್ದೀರಿ. ನಿಮ್ಮ ಪರಿಶ್ರಮದಿಂದಲೇ ಪರಿಣಾಮ ಕಡಿಮೆಯಾಗಿದ್ದು, ಇದರಿಂದ ಪಾರಾಗಬಹುದು. ಪ್ರಮುಖವಾಗಿ ಯಾರಿಗೂ ಸಹ ಊಟದ ತೊಂದರೆಯಾಗಿಲ್ಲ ಎನ್ನುವುದು ಸಮಾಧಾನಕರ ಸಂಗತಿ ಎಂದರು.
ಅಸಮಾನತೆಯ ವಿರುದ್ಧ ಹೋರಾಡಿದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮದಿನವಾದ ಇಂದು ದೇಶವಾಸಿಗಳ ಪರವಾಗಿ ಅವರಿಗೆ ನಮನ ಸಲ್ಲಿಸುತ್ತೇನೆ ಎಂದರು.
ಭಾರತದಲ್ಲಿ ಸದಾಕಾಲ ಉತ್ಸವಗಳು ನಡೆಯುತ್ತವೆ. ಅನೇಕ ರಾಜ್ಯಗಳಲ್ಲಿ ಹೊಸ ವರ್ಷದ ಹಬ್ಬಗಳ ಕಾಲವಿದು. ಆಯಾ ರಾಜ್ಯದ ಜನರಿಗೆ ನಾನು ಶುಭಾಷಯ ಕೋರುತ್ತೇನೆ ಎಂದರು.
Address to the nation. https://t.co/26sVP2br5n
— Narendra Modi (@narendramodi) April 14, 2020
ಕೊರೋನಾ ಪೀಡಿತ ದೇಶಗಳಿಂದ ಆಗಮಿಸುವ ವ್ಯಕ್ತಿಗಳನ್ನು ಪರೀಕ್ಷಿಸಲಾಗುತ್ತಿತ್ತು. ವಿವಿಧ ದೇಶಗಳಿಗೆ ಹೋಲಿಕೆ ಮಾಡಿದರೆ ನಾವು ಸುರಕ್ಷಿತವಾಗಿದ್ದೇವೆ. ಸೋಂಕಿತರ ಸಂಖ್ಯೆ 100 ಆಗಿದ್ದಾಗ 14 ದಿನ ಕ್ವಾರಂಟೈನ್ ಮಾಡಿದ್ದೇವೆ ಎಂದರು.
ಲಾಕ್ ಡೌನ್ ನಿಂದಾಗಿ ದೇಶದ ಆರ್ಥಿಕತೆಗೆ ದೊಡ್ಡ ಪೆಟ್ಟು ಬಿದ್ದಿದೆ. ಆದರೆ, ದೇಶವಾಸಿಗಳ ಜೀವಕ್ಕಿಂತಲೂ ಆರ್ಥಿಕತೆ ದೊಡ್ಡದಲ್ಲ. ನಿಮ್ಮ ಹಾಗೂ ನಿಮ್ಮ ಪರಿವಾರದ ಆರೋಗ್ಯದ ಕುರಿತಾಗಿ ನಾನು ಪ್ರಾರ್ಥಿಸುತ್ತೇನೆ ಎಂದರು.
ಕೊರೋನಾ ಹಾಟ್ ಸ್ಪಾಟ್ ಆಗಿ ಪರಿಣಮಿಸಿರುವ ಪ್ರದೇಶಗಳನ್ನು ಗುರ್ತಿಸಿ ಕಠೋರ ಕ್ರಮಗಳನ್ನು ಕೈಗೊಳ್ಳಬೇಕಿದೆ. ಹಾಟ್’ಸ್ಪಾಟ್ ಗಳಲ್ಲಿ ಈ ಹಿಂದಿನದ್ದಿಕ್ಕಿಂತಲೂ ಹೆಚ್ಚಿನ ಗಮನವಹಿಸಿ, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ. ಎಪ್ರಿಲ್ 20ರವರೆಗೆ ಲಾಕ್ ಡೌನ್ ಕಠಿಣ ಅನುಷ್ಠಾನಗೊಳಿಸಲಾಗುತ್ತದೆ. ಈ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಅವಲೋಕಿಸಿ ಆ ಬಳಿಕ ಕೆಲವೊಂದು ಅವಶ್ಯಕ ಸೇವೆಗಳಿಗೆ ಅನುಮತಿ ನೀಡುವ ಕುರಿತಾಗಿ ಯೋಚಿಸಲಾಗುವುದು. ಎಪ್ರಿಲ್ 20ರ ಬಳಿಕ ಲಾಕ್ ಡೌನ್ ಭಾಗಶಃ ತೆರವುಗೊಳಿಸುವ ಸ್ಥಳಗಳಲ್ಲಿ ಯಾವುದೇ ರೀತಿಯ ನಿಯಮ ಉಲ್ಲಂಘನೆಯಾಗುವಂತಿಲ್ಲ. ಈ ಕುರಿತಾಗಿ ವಿಸ್ತೃತ ಮಾರ್ಗಸೂಚಿಗಳನ್ನು ಸದ್ಯದಲ್ಲೇ ಬಿಡುಗಡೆ ಮಾಡಲಾಗುವುದು. ದೇಶದಲ್ಲಿ ಅವಶ್ಯಕ ಸಾಮಾಗ್ರಿಗಳು ಹಾಗೂ ಔಷಧಿಗಳ ದಾಸ್ತಾನು ಸಾಕಷ್ಟಿದೆ ಎಂದರು.
ಕೊರೋನಾ ಔಷಧಿ ಕಂಡು ಹಿಡಿಯುವ ನಿಟ್ಟಿನಲ್ಲಿ ಮುಂದಡಿ ಇಡುವಂತೆ ಭಾರತದ ಯುವ ವಿಜ್ಞಾನಿಗಳಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ವಿಶ್ವ ಕಲ್ಯಾಣ, ಭಾರತ ಕಲ್ಯಾಣಕ್ಕೆ ಕೈಜೋಡಿಸಿ ಕೊರೋನಾ ವಿರುದ್ಧ ಗೆಲುವು ಸಾಧಿಸೋಣ ಎಂದರು.
ಪ್ರಧಾನಿ ಮುಂದಿಟ್ಟ ಏಳು ಅಂಶಗಳು:
1. ಲಾಕ್ ಡೌನ್ ಮುಗಿಯುವವರೆಗೂ ಮನೆಯಲ್ಲೇ ಇರಿ, ಹಿರಿಯರ ಕುರಿತು ಕಾಳಜಿ ವಹಿಸಿ
2. ಆರೋಗ್ಯ ಹಾಗೂ ಶುಚಿತ್ವವನ್ನು ಕಾರ್ಯಕರ್ತರನ್ನು ಗೌರವಿಸಿ
3. ಲಾಕ್ ಡೌನ್ ಹಾಗೂ ಸಾಮಾಜಿಕ ಅಂತರ ಲಕ್ಷ್ಮಣ ರೇಖೆ ಪಾಲಿಸಿ
4. ನಿರ್ಗತಿಕರು ಹಾಗೂ ಬಡವರಿಗೆ ಸಹಾಯ ಮಾಡಿ
5. ದೇಶದಲ್ಲಿ ಯಾವುದೇ ನೌಕರರನ್ನು ಕೆಲಸದಿಂದ ತೆಗೆಯಬೇಡಿ
6. ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಮಾರ್ಗಸೂಚಿಗಳನ್ನು ಪಾಲಿಸಿ
7. ಆರೋಗ್ಯ ಸೇತು ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ
Get in Touch With Us info@kalpa.news Whatsapp: 9481252093
Discussion about this post