ಹಾಸನ: ನನ್ನ ಗೆಲುವಿಗೆ ನಾನು ಸಂಭ್ರಮಿಸುವುದಿಲ್ಲ. ಬದಲಾಗಿ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ, ದೇವೇಗೌಡರಿಗೇ ಬಿಟ್ಟುಕೊಡುಲು ತೀರ್ಮಾನಿಸಿರುವುದಾಗಿ ಪ್ರಜ್ವಲ್ ರೇವಣ್ಣ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿರುವ ಅವರು, ನನ್ನ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ, ಅಜ್ಜನನ್ನು ಮತ್ತೆ ಈ ಕ್ಷೇತ್ರದಿಂದ ಆಯ್ಕೆ ಮಾಡಿ ಸಂಸತ್‌ಗೆ ಕಳುಹಿಸಬೇಕೆಂದು ನಿರ್ಧರಿಸಿದ್ದೇನೆ. ಪಕ್ಷದ ಕಾರ್ಯಕರ್ತರಿಗೆ ಹುರುಪು, ಹುಮ್ಮಸ್ಸು ಬರಬೇಕಾದರೆ ಅಜ್ಜ ಮತ್ತೊಮ್ಮೆ ಈ ಸ್ಥಾನ ತುಂಬಬೇಕು. ನಾನು ರಾಜೀನಾಮೆ ಕೊಟ್ಟು, ಸ್ಥಾನ ಬಿಟ್ಟುಕೊಟ್ಟು ಮತ್ತೊಮ್ಮೆ ವಿಜಯೋತ್ಸವ ಆಚರಿಸಲು ನಿರ್ಧರಿಸಿದ್ದೇನೆ ಎಂದಿದ್ದಾರೆ.
ಪ್ರಜ್ವಲ್ ಅವರ ಈ ನಿರ್ಧಾರ ಜೆಡಿಎಸ್ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳಿಗೆ ಅಚ್ಚರಿ ಮೂಡಿಸಿದ್ದು, ತೀವ್ರ ಕುತೂಹಲ ಕೆರಳಿಸಿದೆ.
ಮೊಮ್ಮಗನ ಮೇಲಿನ ಮಮಕಾರದಿಂದಾಗಿ ತಮ್ಮ ಭದ್ರಕೋಟೆ ಹಾಸನ ಕ್ಷೇತ್ರವನ್ನು ಪ್ರಜ್ವಲ್ ರೇವಣ್ಣ ಅವರಿಗೆ ಬಿಟ್ಟುಕೊಟ್ಟ ತುಮಕೂರಿನಲ್ಲಿ ನಿಂತು ಸೋತಿದ್ದರು. ಇದೀಗ ತಾತನ ಸೋಲಿನಿಂದ ಬೇಸರಗೊಂಡಿರುವ ಪ್ರಜ್ವಲ್ ತಮ್ಮ ಸಂಸದ ಸ್ಥಾನಕ್ಕೆ ರಾಜಿನಾಮೆಗೆ ಮುಂದಾಗಿದ್ದಾರೆ.
ಹಾಸನ ಲೋಕಸಭಾ ಕ್ಷೇತ್ರದಿಂದ ಪ್ರಜ್ವಲ್ ರೇವಣ್ಣ ಅವರು ಎ. ಮಂಜು ವಿರುದ್ಧ 1 ಲಕ್ಷಕ್ಕೂ ಹೆಚ್ಚು ಮತಗಳಿಂದ ಗೆಲುವು ಸಾಧಿಸಿದ್ದಾರೆ.
Discussion about this post