ಕಲ್ಪ ಮೀಡಿಯಾ ಹೌಸ್ | ಸೊರಬ |
ಮಳೆಗಾಲದಲ್ಲಿ ಸೋರಿಕೆಯುಂಟಾಗುತ್ತಿದ್ದ ತಾಲೂಕಿನ ಶಂಕ್ರಿಕೊಪ್ಪ ಸರ್ಕಾರಿ ಪ್ರಾಥಮಿಕ ಶಾಲೆಯ ಕೊಠಡಿಯ ಮೇಲ್ಬಾಗದಲ್ಲಿ ಶೀಟ್ ಅಳವಡಿಕೆ ಮಾಡುವ ಮೂಲಕ ಅಧಿಕಾರಿಗಳು ಇಲ್ಲಿನ ಸಮಸ್ಯೆಗೆ ತಾತ್ಕಾಲಿಕವಾಗಿ ಪರಿಹಾರ ಮಾಡಿದ್ದಾರೆ.
ಈ ಶಾಲಾ ಕಟ್ಟಡ ಸೋರಿಕೆ ಕುರಿತಾಗಿ ಜುಲೈ 20ರಂದು `ಸೊರಬ | ಸೋರುತ್ತಿವೆ ಕೊಠಡಿಗಳು, ಜೀವಭಯದಲ್ಲೇ ಪಾಠ ಕೇಳುವ ಅನಿವಾರ್ಯತೆಯಲ್ಲಿ ಮಕ್ಕಳು’ ಎಂಬ ಶೀರ್ಷಿಕೆ ಅಡಿಯಲ್ಲಿ ಕಲ್ಪ ನ್ಯೂಸ್’ನಲ್ಲಿ ವರದಿ ಪ್ರಕಟಿಸುವ ಮೂಲಕ ಅಧಿಕಾರಿಗಳ ಗಮನ ಸೆಳೆಯುವ ಪ್ರಯತ್ನ ಮಾಡಿತ್ತು. ಈ ವರದಿ ಹಿನ್ನೆಲೆಯಲ್ಲಿ ಎಚ್ಚೆತ್ತ ಸಂಬಂಧಿಸಿದ ಅಧಿಕಾರಿಗಳು 3-4 ದಿನಗಳ ಹಿಂದೆ ಸೋರುತ್ತಿದ್ದ ಶಾಲಾ ಕೊಠಡಿಯ ಮೇಲ್ಬಾಗದಲ್ಲಿ ಶೀಟ್ ಅಳವಡಿಕೆ ಮಾಡುವ ಮೂಲಕ ತುರ್ತು ಪರಿಹಾರ ಕಾರ್ಯವನ್ನು ಮಾಡಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಬಿಇಒ ಆರ್. ಪುಷ್ಪ, ಈ ಬಾರಿ ಅತಿ ಹೆಚ್ಚು ಮಳೆಯಾಗಿದ್ದರಿಂದ ಶಾಲಾ ಕೊಠಡಿಗಳು ಸೋರಿಕೆಯಾಗಿವೆ. ಶಿಥಿಲಾವಸ್ಥೆಯಲ್ಲಿರುವ ಕೊಠಡಿಗಳ ನೆಲಸಮಕ್ಕೆ ಇಲಾಖೆ ಆದೇಶ ಮಾಡಿದೆ. ರಿಪೇರಿ ಆಗಬೇಕಿರುವ ಕೊಠಡಿಗಳ ತುರ್ತು ದುರಸ್ಥಿಗೂ ಸಹ ಸೂಚನೆ ನೀಡಲಾಗಿದೆ ಎಂದಿದ್ದಾರೆ.
Also read: ಯಾತ್ರೆ ವೇಳೆ ಡಿಜೆ ವಾಹನಕ್ಕೆ ಹೈಟೆಕ್ಷನ್ ತಂತಿ ತಗುಲಿ ದುರಂತ | 9 ಯಾತ್ರಿಗಳ ಸಾವು
ಇನ್ನು, ಈ ಬಾರಿ ಅತಿ ಹೆಚ್ಚು ಮಳೆಯಾಗಿರುವ ಕಾರಣ ಶಂಕ್ರಿಕೊಪ್ಪ ಸೇರಿದಂತೆ ಕೆಲವು ಶಾಲಾ ಕೊಠಡಿಗಳ ಗೋಡೆಯೊಳಗೆ ನೀರು ಇಳಿದು ಸಮಸ್ಯೆಯಾಗಿತ್ತು. ವಿಚಾರ ನಮ್ಮ ಗಮನಕ್ಕೆ ಬಂದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ತುರ್ತು ಪರಿಹಾರದ ಹಿನ್ನೆಲೆಯಲ್ಲಿ ಎಸ್’ಡಿಎಂಸಿ ಸದಸ್ಯರು, ಶಾಲಾ ಶಿಕ್ಷಕರು, ಪೋಷಕರು ಹಾಗೂ ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಿ ಸೋರುತ್ತಿರುವ ಕೊಠಡಿಯ ಮೇಲ್ಬಾಗಕ್ಕೆ ತತಕ್ಷಣವೇ ಶೀಟ್ ಅಳವಡಿಕೆ ಮಾಡಲಾಗಿದೆ. ಈ ಮೂಲಕ ಮಕ್ಕಳ ಹಿತದೃಷ್ಠಿಯಿಂದ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.
ನಲಿಕಲಿ ಮಕ್ಕಳಿಗೆ ಮಳೆಗಾಲದಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ, ತಂಡಿ ಏರದಂತೆ ಕುಳಿತುಕೊಳ್ಳುವ ಉತ್ತಮ ವ್ಯವಸ್ಥೆಯನ್ನೂ ಸಹ ಕಲ್ಪಿಸಿದ್ದೇವೆ ಎಂದು ತಿಳಿಸಿದ್ದಾರೆ.
ಇನ್ನು, ಈ ಕುರಿತಂತೆ ಮಾತನಾಡಿದ ಎಸ್’ಡಿಎಂಸಿ ಅಧ್ಯಕ್ಷ ಶ್ರೀಕಾಂತ್, ಅತಿಯಾದ ಮಳೆಯ ಪರಿಣಾಮ ನಮ್ಮ ಶಾಲೆಯ ಕೊಠಡಿ ಸೋರಿಕೆ ಉಂಟಾಗುತ್ತಿತ್ತು. ಈ ವಿಚಾರ ತಿಳಿದು `ಕಲ್ಪ ನ್ಯೂಸ್’ ಚಿತ್ರ ಸಹಿತ ವಿವರವಾದ ವರದಿಯನ್ನು ಪ್ರಕಟಿಸುವ ಮೂಲಕ ಅಧಿಕಾರಿಗಳ ಗಮನ ಸೆಳೆಯುವ ಪ್ರಯತ್ನ ಮಾಡಿತ್ತು. ಇದರಿಂದ ಎಚ್ಚೆತ್ತು ಅಧಿಕಾರಿಗಳು ತಕ್ಷಣವೇ ಸ್ಪಂದಿಸಿ ಕೊಠಡಿ ಮೇಲ್ಬಾಗದಲ್ಲಿ ಶೀಟ್ ಅಳವಡಿಸುವ ಜೊತೆಯಲ್ಲಿ ಎಲ್ಲ ರೀತಿಯ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ. ಇದಕ್ಕಾಗಿ ವರದಿ ಪ್ರಕಟಿಸಿದ `ಕಲ್ಪ ನ್ಯೂಸ್’ ಹಾಗೂ ಸ್ಪಂದಿಸಿದ ಅಧಿಕಾರಿಗಳಿಗೆ ಧನ್ಯವಾದ ಅರ್ಪಿಸುತ್ತೇವೆ ಎಂದರು.
ಶಾಲೆ ವಿದ್ಯಾರ್ಥಿನಿ ದೀಕ್ಷಾ ಮಾತನಾಡಿ, ಮಳೆಯ ನೀರು ಕೊಠಡಿಯೊಳಕ್ಕೆ ಇಳಿದು ನಮಗೆ ಕುಳಿತುಕೊಳ್ಳುವುದು, ಪಾಠ ಕೇಳುವುದು ಕಷ್ಟವಾಗಿತ್ತು. ಏನಾಗುತ್ತದೋ ಎಂಬ ಆತಂಕ ಕಾಡುತ್ತಿತ್ತು. ಈಗ ಕೊಠಡಿ ಮೇಲೆ ಶೀಟ್ ಅಳವಡಿಸಿ ಇದನ್ನು ಸರಿ ಮಾಡಲಾಗಿದೆ. ಇದಕ್ಕಾಗಿ ಬಿಇಒ ಪುಷ್ಪ ಮೇಡಂ, ಎಸ್’ಡಿಎಂಸಿ ಅಧ್ಯಕ್ಷರಾದ ಶ್ರೀಕಾಂತ್ ಸರ್, ಎಲ್ಲ ಶಿಕ್ಷಕರು ಹಾಗೂ ವರದಿ ಪ್ರಕಟಿಸಿದ ಕಲ್ಪ ನ್ಯೂಸ್’ಗೆ ಧನ್ಯವಾದ ಅರ್ಪಿಸುತ್ತೇನೆ ಎಂದರು.
ಹೀಗಿತ್ತು ಅಂದು ಪ್ರಕಟಿಸಿದ್ದ ವರದಿ
ಸೊರಬ | ಸೋರುತ್ತಿವೆ ಕೊಠಡಿಗಳು, ಜೀವಭಯದಲ್ಲೇ ಪಾಠ ಕೇಳುವ ಅನಿವಾರ್ಯತೆಯಲ್ಲಿ ಮಕ್ಕಳು
ಶಿಕ್ಷಣ ಸಚಿವರ ಕ್ಷೇತ್ರದಲ್ಲಿನ ವಿದ್ಯಾರ್ಥಿಗಳ ಗೋಳು ದೇವರಿಗೇ ಪ್ರೀತಿ | ಪರಿಹಾರ ದೊರೆಯುವುದೇ?
ಸೊರಬ: ಹೆಸರಿಗಷ್ಟೇ ಶಿಕ್ಷಣ ಸಚಿವರ ಕ್ಷೇತ್ರ. ಆದರೆ, ಇಲ್ಲಿನ ಈ ಒಂದು ಶಾಲೆಯಲ್ಲಿ ಜೀವ ಒತ್ತಯಿಟ್ಟು ಪಾಠ ಕೇಳಬೇಕಾದ ಅನಿವಾರ್ಯತೆಯಲ್ಲಿರುವ ವಿದ್ಯಾರ್ಥಿಗಳ ಗೋಳು ಮಾತ್ರ ದೇವರಿಗೆ ಪ್ರೀತಿ…
ಹೌದು… ಇದು ಸೊರಬ ತಾಲೂಕಿನ ಶಂಕ್ರಿಕೊಪ್ಪ ಸರ್ಕಾರಿ ಪ್ರಾಥಮಿಕ ಶಾಲೆಯ ಹಾಗೂ ಮಕ್ಕಳು ಮಳೆಗಾಲದಲ್ಲಿ ಎದುರಿಸುತ್ತಿರುವ ಸಮಸ್ಯೆಯಿದು. ಮಳೆಗಾಲವನ್ನು ಆನಂದಿಸಬೇಕಾದ ಈ ಶಾಲೆಯ ಮಕ್ಕಳಿಗೆ ಈ ಕಾಲವೇ ಸಂಕಷ್ಟ ತಂದೊಡ್ಡಿದೆ. ಇದಕ್ಕೆ ಕಾರಣ ಶಾಲೆಯ ಕೊಠಡಿಗಳು ಸೋರುತ್ತಿರುವುದು.
ಜಿಲ್ಲೆ ಸೇರಿದಂತೆ ತಾಲೂಕಿನಲ್ಲೂ ನಿರಂತರವಾಗಿ ಕಳೆದ ಕೆಲ ದಿನಗಳಿಂದ ಮಳೆ ಸುರಿಯುತ್ತಿದ್ದು, ಕೊಠಡಿಗಳು ಸೋರುತ್ತಿವೆ. ತಾಲೂಕಿನ ಶಂಕ್ರಿಕೊಪ್ಪ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 35ಕ್ಕೂ ಹೆಚ್ಚು ಮಕ್ಕಳು ಓದುತ್ತಿದ್ದಾರೆ. ಆದರೆ ವಿಪರೀತವಾಗಿ ಮಳೆಗೆ ಮಕ್ಕಳು ಶಾಲೆಯಲ್ಲಿ ಪರದಾಡುವ ಸ್ಥಿತಿ ಇಲ್ಲಿ ಬಾಧಿಸುತ್ತಿದೆ.
ಒಂದಡೆ ಕೊಠಡಿಗಳು ಕಳಪೆ ಕಾಮಗಾರಿಯಿಂದ ಸೋರಿದರೆ, ಇನ್ನೊಂದಡೆ ಮಳೆ ನೀರು ಕೋಣೆಯೊಳಗೆ ಬೀಳುವುದರಿಂದ ಮಕ್ಕಳು ಮಳೆ ನೀರಲ್ಲಿಯೇ ಪಾಠ ಕೇಳುತ್ತಿದ್ದಾರೆ.
ಯಾವಾಗ ಕಟ್ಟಡ ನಿರ್ಮಾಣವಾಗಿತ್ತು?
ಎಸ್’ಎಸ್’ಎ ಯೋಜನೆಯಡಿಯಲ್ಲಿ 2019-20ರಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಎಸ್’ಡಿಎಂಸಿ ಖಾತೆಯ ಮೂಲಕ ಜಂಟಿಯಾಗಿ ಈ ಶಾಲಾ ಕೊಠಡಿಯ ಕಟ್ಟಡ ನಿರ್ಮಾಣ ಆರಂಭಗೊಂಡು, 2011-12ರಲ್ಲಿ ಪೂರ್ಣ ಪ್ರಮಾಣದಲ್ಲಿ ಮುಕ್ತಾಯಗೊಂಡಿತ್ತು.
ಈ ಕೊಠಡಿಯ ಕಟ್ಟಡ ನಿರ್ಮಾಣಕ್ಕೆ 3.80 ಲಕ್ಷ ರೂ. ವೆಚ್ಚ ಮಾಡಲಾಗಿತ್ತು. ಆದರೆ, 2012-13ರಿಂದಲೇ ಮಳೆಗಾಲದಲ್ಲಿ ಕಟ್ಟಡದ ಒಳಗೆ ನೀರು ಸಿಡಿಯಲು ಆರಂಭವಾಗಿತ್ತು. ಅದು ಮಕ್ಕಳಿಗೆ ಮಳೆಗಾಲದಲ್ಲಿ ಸಮಸ್ಯೆಯಾಗಿ ಪರಿಣಮಿಸಿತು.
ಇನ್ನೊಂದೆಡೆ, 2022-23ರಲ್ಲಿ ಪಂಚಾಯ್ತಿ ಕಾರ್ಯಾಲಯ ಶಕುನವಳ್ಳಿ ವತಿಯಿಂದ ಸುಮಾರು 70 ಮೀಟರ್’ಗಳಷ್ಟು ಕಾಂಪೌಂಡ್ ಗೋಡೆಯನ್ನು ಅಂದಾಜು 3 ಲಕ್ಷ ರೂ.ಗಳಲ್ಲಿ ನಿರ್ಮಾಣ ಎಂದು ಫಲಕ ಮಾತ್ರ ಇದೆ. ಆದರೆ, ಕಾಂಪೌಂಡ್ ಗೋಡೆ ಮಾತ್ರ ಕಾಣೆಯಾಗಿದೆ.
ಈ ಕಟ್ಟಡದ ದುಸ್ಥಿತಿಯ ಕುರಿತಾಗಿ ಕಳೆದ 3 ವರ್ಷಗಳಿಂದ ಜನಪ್ರತಿನಿಧಿಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಿ, ಹೊಸ ಕೊಠಡಿಗಳ ನಿರ್ಮಾಣ ಹಾಗೂ ಸೋರುತ್ತಿರುವ ಕೊಠಡಿಗಳ ದುರಸ್ಥಿಗೆ ಕ್ರಮ ಕೈಗೊಂಡಿಲ್ಲ ಎನ್ನುವುದು ಗ್ರಾಮಸ್ಥರ ಆರೋಪವಾಗಿದೆ.
ಇನ್ನು, ಶೌಚಾಲಯ ಕೊಠಡಿಗಳ ಗೋಡೆ ಬಿರುಕು ಬಿಟ್ಟಿದ್ದು ಯಾವಾಗ ಕುಸಿದು ಬೀಳುತ್ತೋ ಅನ್ನೋ ಆತಂಕ ಮಕ್ಕಳನ್ನು ಕಾಡುತ್ತಿದೆ. ಕೊಠಡಿಯ ಗೋಡೆ ಮೇಲೆ ನೀರಿಳಿದು ವಿದ್ಯುತ್ ಮೀಟರ್ ಸುತ್ತ ಆವರಿಸಿದೆ. ಶಾಲಾ ಬಾಗಿಲು ಕಬ್ಬಿಣದಾಗಿದ್ದು, ಮಕ್ಕಳಿಗೆ ಕರೆಂಟ್ ತಗುಲುವ ಸಾಧ್ಯತೆ ಹೆಚ್ಚಿದೆ.
ಕಳಪೆ ಕಾಮಗಾರಿ, ಭ್ರಷ್ಟಾಚಾರ?
ಇನ್ನು ಕೆಲವು ವರ್ಷಗಳ ಹಿಂದೆ ನಿರ್ಮಾಣವಾದ ಈ ಶಾಲಾ ಕೊಠಡಿಗಳು ಸೋರುತ್ತಿವೆ. ಶೌಚಾಲಯ ಬಿರುಕುಬಿಟ್ಟು ಬೀಳುವ ಹಂತಕ್ಕೆ ತಲುಪಿವೆ. ಇದಕ್ಕೆ ಕಾರಣ ಕಳಪೆ ಕಾಮಗಾರಿ. ಗುತ್ತಿಗೆ ಪಡೆದವರು ಮತ್ತು ಅಧಿಕಾರಿಗಳು ಶಾಮೀಲಾಗಿ, ಕಳಪೆ ಕೊಠಡಿಗಳ ಕಾಮಗಾರಿ ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.
ಕೆಲವೇ ವರ್ಷಗಳ ಹಿಂದೆ ನಿರ್ಮಾಣ ಮಾಡಿರುವ ಕೊಠಡಿಗಳು ಅವೈಜ್ಞಾನಿಕ ಕಾಮಗಾರಿಯಿಂದ ಕೂಡಿದ ಎನ್ನುವುದು ಮೇಲ್ನೋಟಕ್ಕೆ ಖಾತ್ರಿಯಗುತ್ತದೆ. ಕಾಂಪೌಂಡ್ ನಿರ್ಮಾಣದ ಕೆಲಸ ಉದ್ಯೋಗ ಖಾತ್ರಿ ಯೋಜನೆಯಡಿ 2 ವರ್ಷಗಳ ಹಿಂದೆ ನೀಡಿದ್ದರೂ ಇನ್ನು ನಿರ್ಮಾಣಗೊಂಡಿಲ್ಲ ಎನ್ನುವುದೂ ಸಹ ಆರೋಪವಾಗಿದೆ.
ಇನ್ನು ಮಕ್ಕಳು ಜೀವ ಭಯದಲ್ಲಿಯೇ ಪಾಠ ಕೇಳುತ್ತಿದ್ದಾರೆ. ಕೊಠಡಿ ಸೋರಿ ವಿದ್ಯುತ್ ಗ್ರೌಂಡಿಂಗ್ ಆಗಿ ದೊಡ್ಡ ಅನಾಹುತಕ್ಕೆ ಎಡೆಮಾಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಇದರೊಂದಿಗೆ ಮಳೆಯಿಂದ ರಕ್ಷಿಸಿಕೊಳ್ಳಲು ತಾತ್ಕಾಲಿಕವಾಗಿ ಟಾಡ್ಪಾಲ್ ಆದರೂ ಒದಗಿಸಿ ಎಂದು ಬೇಡಿಕೆ ಇಟ್ಟರೂ ಅದಕ್ಕೂ ಯಾವುದೇ ಅಧಿಕಾರಿಗಳು ಸ್ಪಂದಿಸಿಲ್ಲ ಎನ್ನುವುದು ಆರೋಪವಾಗಿದೆ.
ಇಲ್ಲಿನ ಅವ್ಯವಹಾರದ ಬಗ್ಗೆ ತನಿಖೆ ನಡೆಸಿದರೆ ದೊಡ್ಡ ಭ್ರಷ್ಟಾಚಾರವೇ ಹೊರಬರುತ್ತೆ ಎಂದು ಎಸ್’ಡಿಎಂಸಿ ಸದಸ್ಯರು ಹೇಳುತ್ತಾರೆ.
ಶಿಕ್ಷಣ ಸಚಿವರ ಕ್ಷೇತ್ರದಲ್ಲೇ ಈ ಗೋಳು
ಸರ್ಕಾರಿ ಶಾಲೆಗಳಲ್ಲಿ ಇತ್ತೀಚೆಗೆ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಸೌಲಭ್ಯಗಳ ಕೊರತೆಯಿಂದ ಅನೇಕರು ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿದ್ದಾರೆ. ಹೀಗಿರುವಾಗ ಶಿಕ್ಷಣ ಸಚಿವರು ಪ್ರತಿನಿಧಿಸುವ ಕ್ಷೇತ್ರದ ಒಂದು ಸರ್ಕಾರಿ ಶಾಲೆಯ ಸ್ಥಿತಿಯೇ ಹೀಗಾದರೆ ಹೇಗೆ?
ಹತ್ತಾರು ಭಾಗ್ಯಗಳನ್ನು ನೀಡುತ್ತಿರುವ ಸರ್ಕಾರ, ಮಕ್ಕಳ ಭವಿಷ್ಯವನ್ನು ರೂಪಿಸುವ ಸರ್ಕಾರಿ ಶಾಲೆಗಳ ದುರಸ್ಥಿ ಮತ್ತು ಹೊಸ ಕೊಠಡಿಗಳ ನಿರ್ಮಾಣ ಭಾಗ್ಯವನ್ನು ಕೂಡಾ ನೀಡಬೇಕಾಗಿದೆ. ಆ ಮೂಲಕ ಮಕ್ಕಳು ಭಯಮುಕ್ತ, ಆತಂಕಮುಕ್ತವಾಗಿ ಪಾಠ ಕೇಳುವಂತಹ ಸ್ಥಿತಿ ನಿರ್ಮಾಣ ಮಾಡಬೇಕಿದೆ.
ಇನ್ನಾದರೂ ಸರ್ಕಾರ ಈ ಕೊಠಡಿಗಳ ದುರಸ್ಥಿ, ಹೊಸ ಕೊಠಡಿಗಳ ನಿರ್ಮಾಣಕ್ಕೆ ಮುಂದಾಗಬೇಕಿದೆ. ಜೊತೆಗೆ ಕಳಪೆ ಗುಣಮಟ್ಟದ ಕೊಠಡಿಗಳ ನಿರ್ಮಾಣ ಮಾಡಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ. ಶಿಕ್ಷಣ ಸಚಿವರು ಈ ಬಗ್ಗೆ ಶೀಘ್ರ ಗಮನ ಹರಿಸಿಯಾರೆ?
ಜೀವ ಭಯದಲ್ಲಿಯೇ ಪಾಠ ಕೇಳುವ ಸ್ಥಿತಿ ಎದುರಾಗಿದೆ. ಕೊಠಡಿ ಸೋರಿ ವಿದ್ಯುತ್ ಗ್ರೌಂಡಿಂಗ್ ಆಗಿ ದೊಡ್ಡ ಅನಾಹುತಕ್ಕೆ ಎಡೆಮಾಡಿಕೊಡುವ ಸಾಧ್ಯತೆಯಿದೆ. ಹೀಗಾಗಿ ಸಂಬಂಧಿಸಿದ ಅಧಿಕಾರಿಗಳು ಶೀಘ್ರ ಹೊಸ ಕೊಠಡಿ ನಿರ್ಮಾಣ ಮಾಡಿಕೊಡಬೇಕು.
-ರಶ್ಮಿ, ವಿದ್ಯಾರ್ಥಿನಿ
ಕೊಠಡಿಗಳ ದುರಸ್ಥಿ, ಹೊಸ ಕೊಠಡಿಗಳ ನಿರ್ಮಾಣಕ್ಕೆ ಸರ್ಕಾರ ಮುಂದಾಗಬೇಕಿದೆ. ಜೊತೆಗೆ ಕಳಪೆ ಗುಣಮಟ್ಟದ ಕೊಠಡಿಗಳ ನಿರ್ಮಾಣ ಮಾಡಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲಿನ ಅವ್ಯವಹಾರದ ಬಗ್ಗೆ ತನಿಖೆ ನಡೆಸಿದರೆ ದೊಡ್ಡ ಭ್ರಷ್ಟಾಚಾರವೇ ಹೊರಬರುತ್ತದೆ.
-ಶ್ರೀಕಾಂತ್, ಎಸ್’ಡಿಎಂಸಿ ಸದಸ್ಯರು
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post