ಕಲ್ಪ ಮೀಡಿಯಾ ಹೌಸ್ | ಗೋವಾ/ಚಿತ್ರದುರ್ಗ |
ತಾನೇ ಜನ್ಮ ನೀಡಿದ ನಾಲ್ಕು ವರ್ಷದ ಕರುಳಕುಡಿಯನ್ನೇ ಕೊಂದು ಬ್ಯಾಗಿನಲ್ಲಿ ಸಾಗಿಸುತ್ತಿದ್ದ ಸ್ಟಾರ್ಟ್ ಅಪ್ ಕಂಪೆನಿಯ ಮಹಿಳಾ ಸಿಇಒ ಸುಚನಾ ಸೇಠ್ (39)ರನ್ನು ಚಿತ್ರದುರ್ಗದಲ್ಲಿ ಬಂಧಿಸಲಾಗಿದೆ.
ಬೆಂಗಳೂರಿನ ಮೈಂಡ್ಫುಲ್ ಎಐ ಲ್ಯಾಬ್ ಎಂಬ ಕೃತಕ ಬುದ್ಧಿಮತ್ತೆ ಕಂಪೆನಿಯ ಸಹ ಸಂಸ್ಥಾಪಕಿ ಸುಚನಾ ಸೇಠ್’ರನ್ನು ಕಾರು ಚಾಲಕನೇ ಆರೋಪಿಯನ್ನು ಪೊಲೀಸರಿಗೆ ಹಿಡಿದುಕೊಟ್ಟಿದ್ದು, ಮೃತದೇಹವನ್ನು ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ.
ಆರೋಪಿ ಮಹಿಳೆಯನ್ನು ಗೋವಾ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.
ಘಟನೆ ಹಿನ್ನೆಲೆಯೇನು?
ಇದೇ ಜನವರಿ 6 ರಂದು ಸುಚನಾ ಸೇಠ್, ಉತ್ತರ ಗೋವಾದ ಕ್ಯಾಂಡೋಲಿಮ್’ನಲ್ಲಿ ತನ್ನ ಮಗನೊಂದಿಗೆ ಸರ್ವಿಸ್ ಅಪಾರ್ಟ್ಮೆಂಟ್ ಒಂದರಲ್ಲಿ ಬಾಡಿಗೆಗೆ ಇದ್ದಳು. ಒಂದೆರಡು ದಿನ ಅಲ್ಲಿಯೇ ತಂಗಿದ್ದ ಸೇಠ್, ತಾನು ಯಾವುದೋ ಕೆಲಸಕ್ಕಾಗಿ ಬೆಂಗಳೂರಿಗೆ ಹೋಗಬೇಕೆಂದಿರುವೆ ಎಂದು ಅಪಾರ್ಟ್ಮೆಂಟ್ ಸಿಬ್ಬಂದಿಗೆ ತಿಳಿಸಿ ಟ್ಯಾಕ್ಸಿಗೆ ವ್ಯವಸ್ಥೆ ಮಾಡುವಂತೆ ಕೇಳಿಕೊಂಡಿದ್ದಾಳೆ.
ಈ ವೇಳೆ ಅಲ್ಲಿನ ಸಿಬ್ಬಂದಿ, ದುಬಾರಿ ಟ್ಯಾಕ್ಸಿಯನ್ನು ಬಾಡಿಗೆಗೆ ತೆಗೆದುಕೊಳ್ಳುವ ಬದಲು ಬೆಂಗಳೂರಿಗೆ ವಿಮಾನದಲ್ಲಿ ಹೋಗುವಂತೆ ಸೂಚಿಸಿದ್ದಾರೆ. ಆಗ ಸೇಠ್, ತಾನು ಟ್ಯಾಕ್ಸಿಯಲ್ಲಿಯೇ ಹೋಗಬೇಕು ಎಂದು ಹಠಕ್ಕೆ ಬಿದ್ದಳು. ಹೀಗಾಗಿ ಜನವರಿ 8 ರಂದು ಆಕೆಗೆ ವಾಹನದ ವ್ಯವಸ್ಥೆ ಮಾಡಲಾಗಿದ್ದು, ಬೆಳಗ್ಗೆ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಳು.
Also read: ಪಿಎಂ ಯೋಜನೆಗಳಿಗೆ ಜಿಲ್ಲೆಯಲ್ಲಿ ನೊಂದಣಿಯಾದ ಸಂಖ್ಯೆ ಎಷ್ಟು? ಬಾಣಂತನಕ್ಕೆ ಸಿಗುವ ಸಹಾಯವೆಷ್ಟು?
ಸುಚನಾ ಸೇಠ್, ಸೋಮವಾರ ಕೊಠಡಿ ತೆರವುಗೊಳಿಸಿ ಏಕಾಂಗಿಯಾಗಿ ಹೊರಬಂದಿದ್ದಳು. ಬೆಂಗಳೂರಿಗೆ ಮರಳಲು ಟ್ಯಾಕ್ಸಿ ಬಾಡಿಗೆ ಕೇಳಿದ್ದಳು. ಅನುಮಾನಗೊಂಡ ಹೋಟೆಲ್ ಸಿಬ್ಬಂದಿ ಬಾಲಕನ ಬಗ್ಗೆ ವಿಚಾರಿಸಿದ್ದರು. ಸಂಬಂಧಿಕರ ಮನೆಯಲ್ಲಿ ಬಾಲಕನನ್ನು ಬಿಟ್ಟು ಬಂದಿರುವುದಾಗಿ ಮಹಿಳೆ ಸಬೂಬು ನೀಡಿ ಹೊರಬಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕೊಠಡಿ ಶುಚಿಗೊಳಿಸುವಾಗ ರಕ್ತದ ಕಲೆಗಳನ್ನು ಗಮನಿಸಿದ ಹೋಟೆಲ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿ ಮಹಿಳೆ ತೆರಳುತ್ತಿದ್ದ ಕಾರಿನ ಚಾಲಕನನ್ನು ಫೋನ್ ಮೂಲಕ ಸಂಪರ್ಕಿಸಿದ್ದಾರೆ. ಕೊಂಕಣಿಯಲ್ಲಿ ಮಾತನಾಡಿದ ಪೊಲೀಸರು, ಘಟನೆ ಬಗ್ಗೆ ಚಾಲಕನಿಗೆ ವಿವರಿಸಿದ್ದಾರೆ. ಆರೋಪಿಯನ್ನು ಪೊಲೀಸರಿಗೆ ಹಿಡಿದುಕೊಡಲು ಸೂಚನೆ ನೀಡಿದ್ದಾರೆ.
ಚಾಲಕನಿಗೆ ಈ ಮಾಹಿತಿ ತಿಳಿದಾಗ ಕಾರು ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಚಿತ್ರದುರ್ಗದಿಂದ ಹಿರಿಯೂರು ಕಡೆಗೆ ಸಾಗುತ್ತಿತ್ತು. ಐಮಂಗಲ ಸಮೀಪದ ಪೊಲೀಸ್ ಠಾಣೆ ಗಮನಿಸಿದ ಚಾಲಕ, ನೇರವಾಗಿ ಠಾಣೆಗೆ ಕಾರು ತಂದಿದ್ದಾರೆ. ಕಾರಿನ ಡಿಕ್ಕಿ ತೆರೆದಾಗ ಸೂಟ್ ಕೇಸ್ ಬ್ಯಾಗಿನಲ್ಲಿ ಬಾಲಕನ ಮೃತದೇಹ ಪತ್ತೆಯಾಗಿದೆ. ಮಹಿಳೆಯನ್ನು ಬಂಧಿಸಿ ಗೋವಾ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ಸದ್ಯ ಜಕಾರ್ತದಲ್ಲಿರುವ ಆರೋಪಿಯ ಪತಿ ವೆಂಕಟ್ ರಾಮನ್ ಅವರಿಗೆ ಘಟನೆಯ ಬಗ್ಗೆ ಪೊಲೀಸರು ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post