ಮೈಸೂರು: ತನ್ನ ಸ್ನೇಹಿತನ ಎದುರಿನಲ್ಲೇ ಯುವತಿಯೋರ್ವಳ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ನಡೆಸಿರುವ ಭೀಕರ ಘಟನೆ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ನಡೆದಿದೆ.
ನಿನ್ನೆ ರಾತ್ರಿ 10 ಗಂಟೆ ವೇಳೆಗೆ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಲಿಂಗಾಪುರ ಗ್ರಾಮದಲ್ಲಿ ಆರು ಮಂದಿ ದುಷ್ಕರ್ಮಿಗಳು ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ದೂರು ದಾಖಲಿಸಲಾಗಿದೆ.
ಮೊದಲು, ಯುವತಿಯ ಸ್ನೇಹಿತನ ಮೇಲೆ ದುಷ್ಕರ್ಮಿಗಲು ಕಲ್ಲಿನಿಂದ ಹಲ್ಲೆ ನಡೆಸಿದ ಪರಿಣಾಮ ಆತ ಅಸ್ವಸ್ಥಗೊಂಡಿದ್ದಾನೆ. ಹಲ್ಲೆಯಿಂದ ಆತ ನರಳುತ್ತಿದ್ದ ವೇಳೆ ಆತನ ಎದುರಿನಲ್ಲೇ ಆರು ಮಂದಿ ದುಷ್ಕರ್ಮಿಗಳು ಒಬ್ಬರಾದ ನಂತರ ಒಬ್ಬರಂತೆ ಯುವತಿಯ ಮೇಲೆ ಅತ್ಯಾಚಾರ ನಡೆಸಿ, ವಿಕೃತ ಕ್ರೌರ್ಯ ಮೆರೆದಿದ್ದಾರೆ.
ಹಲ್ಲೆಗೊಳಗಾದ ಯುವಕನ ತಲೆಗೆ ಗಂಭೀರ ಪೆಟ್ಟು ಬಿದ್ದಿದ್ದು, ಆತನ ಕಾಲಿನ ಮೇಲೆ ಕಲ್ಲಿ ಎತ್ತಿಹಾಕಿದ ಪರಿಣಾಮ ಆತನ ಮೂಳೆ ಮುರಿದಿದೆ.
ಈ ಕುರಿತಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಕುಮಾರ್ ಸಿಂಗ್ ಅವರು ಮಾಧ್ಯಮಗಳಿಗೆ ಮಾತನಾಡಿದ್ದು, ಘಟನೆ ನಿನ್ನೆ ರಾತ್ರಿ 11 ಗಂಟೆ ವೇಳೆಗೆ ನಡೆದಿದೆ ಎಂಬ ಮಾಹಿತಿ ದೊರೆಕಿತು. ತತಕ್ಷಣವೇ ಸ್ಥಳಕ್ಕೆ ಧಾವಿಸಲಾಗಿ, ಅತ್ಯಾಚಾರಕ್ಕೆ ಒಳಗಾದ ಯುವತಿ ಹಾಗೂ ಹಲ್ಲೆಗೆ ಒಳಗಾದ ಆಕೆಯ ಸ್ನೇಹಿತ ಅಲ್ಲೇ ನರಳುತ್ತಿದ್ದರು ಎಂದಿದ್ದಾರೆ.
ಘಟನೆ ಕುರಿತಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಎಂಟು ದಕ್ಷ ಅಧಿಕಾರಿಗಳ ತಂಡ ರಚನೆ ಮಾಡಿ, ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ. ಕೃತ್ಯದಲ್ಲಿ ಆರು ಮಂದಿ ಭಾಗಿಯಾಗಿದ್ದಾರೆ ಎಂದು ಹೇಳಲಾಗಿದೆ. ಆದರೆ, ಇನ್ನೂ ಹೆಚ್ಚಿನ ಮಂದಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಈ ಕುರಿತಂತೆ ತನಿಖೆ ಆರಂಭವಾಗಿದೆ ಎಂದಿದ್ದಾರೆ.
ಘಟನೆ ಕುರಿತಂತೆ ಯುವತಿ ಪೊಲೀಸರಿಗೆ ನೀಡಿರುವ ಹೇಳಿಕೆಯಂತೆ, ಸುಮಾರು 3-4 ಮಂದಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ.

















