ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ (Reality show) ಬಿಗ್ ಬಾಸ್ ಸೀಸನ್ 13 (Bigg Boss 13) ಆರಂಭದಲ್ಲೇ ಕ್ಯಾಪ್ಟನ್ಸಿ ವಿಚಾರದಲ್ಲಿ ಕುತೂಹಲ ಮೂಡಿಸಿದೆ. ದೊಡ್ಮನೆಯ ಮೊದಲ ಕ್ಯಾಪ್ಟನ್ ಆಯ್ಕೆಗಾಗಿ ನಡೆದ ಸ್ಪರ್ಧೆಯಲ್ಲಿ ಸಂಗೀತಾ ಭಟ್ ಅವರು ಆಸಿಯಾ ಅವರನ್ನು ಮಣಿಸಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಸೀಸನ್ 13ರ ಮೊದಲ ಕ್ಯಾಪ್ಟನ್ ಆಗಿ ಸಂಗೀತಾ ಭಟ್ (Sangeetha Bhat) ಅಧಿಕಾರ ವಹಿಸಿಕೊಂಡಿದ್ದಾರೆ.
ದೊಡ್ಮನೆಗೆ ಮೊದಲ ಪೈಲಟ್ ಆಗಿ ಆಯ್ಕೆಯಾಗಿದ್ದ ಸಂಗೀತಾ ಭಟ್, ತಮ್ಮ ಕೋ-ಪೈಲಟ್ ಆಗಿ ಆಸಿಯಾ ಅವರನ್ನು ಆಯ್ಕೆ ಮಾಡಿದ್ದರು. ಬಳಿಕ ಇಬ್ಬರ ನಡುವೆ ಕ್ಯಾಪ್ಟನ್ಸಿಗಾಗಿ ಪೈಪೋಟಿ ಏರ್ಪಟ್ಟಿತ್ತು. ಬಿಗ್ ಬಾಸ್ ನೀಡಿದ ವಿಶೇಷ ಟಾಸ್ಕ್‌ನಲ್ಲಿ ಇಬ್ಬರೂ ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದು, ಅಂತಿಮವಾಗಿ ಸಂಗೀತಾ ಭಟ್ ಗೆಲುವಿನ ನಗೆ ಬೀರಿದ್ದಾರೆ.
Bigg Boss 13: ಏನಿತ್ತು ಕ್ಯಾಪ್ಟನ್ಸಿ ಟಾಸ್ಕ್?
ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಸಂಗೀತಾ ಭಟ್ ಮತ್ತು ಆಸಿಯಾ ಅವರು ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದರು. ಏಣಿಗೆ ಕಟ್ಟಲಾಗಿದ್ದ ಹಗ್ಗದ ಸಹಾಯದಿಂದ ಅಭ್ಯರ್ಥಿಗಳು ಕೆಳಗೆ ಬೀಳದಂತೆ ಅವರ ಸಹಾಯಕರು ಸಂಭಾಳಿಸಬೇಕಿತ್ತು.
ಟಾಸ್ಕ್‌ನ ಮುಂದಿನ ಹಂತದಲ್ಲಿ ನಿರ್ದಿಷ್ಟ ಸ್ಥಾನದಲ್ಲಿದ್ದ ಬಿಲ್ಲೆಗಳ ಚೀಲವನ್ನು ಪಡೆದುಕೊಂಡು ಅಭ್ಯರ್ಥಿಗಳು ಮತ್ತೆ ತಮ್ಮ ಮೂಲ ಸ್ಥಾನಕ್ಕೆ ಮರಳಬೇಕಿತ್ತು. ಬಳಿಕ ಸಂಗ್ರಹಿಸಿದ ಬಿಲ್ಲೆಗಳನ್ನು ಸಾಲಾಗಿ ಜೋಡಿಸಬೇಕಾಗಿತ್ತು.
ಅಂತಿಮ ಹಂತದಲ್ಲಿ ಎದುರಾಳಿ ಅಭ್ಯರ್ಥಿಯ ಫೋಟೊ ಇರುವ ಬಿಲ್ಲೆಗಳನ್ನು ಈಜುಕೊಳಕ್ಕೆ ಬೀಳಿಸುವುದು ಟಾಸ್ಕ್‌ನ ಪ್ರಮುಖ ಗುರಿಯಾಗಿತ್ತು. ಈ ಹಂತದಲ್ಲಿ ಎದುರಾಳಿಯ ಬಿಲ್ಲೆಗಳನ್ನು ಯಶಸ್ವಿಯಾಗಿ ಕೆಳಗೆ ಬೀಳಿಸುವ ಸ್ಪರ್ಧಿ ಕ್ಯಾಪ್ಟನ್ ಆಗಿ ಆಯ್ಕೆಯಾಗಬೇಕಿತ್ತು.
ಸಂಗೀತಾ ಭಟ್‌ಗೆ ಗೆಲುವು
ಬಿಗ್ ಬಾಸ್ ನೀಡಿದ ಈ ಸವಾಲಿನ ಟಾಸ್ಕ್‌ನಲ್ಲಿ ಸಂಗೀತಾ ಭಟ್ ಅವರು ಆಸಿಯಾ ವಿರುದ್ಧ ಮೇಲುಗೈ ಸಾಧಿಸಿದರು. ಅಂತಿಮ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿದ ಸಂಗೀತಾ ಗೆಲುವು ದಾಖಲಿಸುವ ಮೂಲಕ ಸೀಸನ್ 13ರ ಮೊದಲ ಕ್ಯಾಪ್ಟನ್ ಪಟ್ಟ ಅಲಂಕರಿಸಿದ್ದಾರೆ.
Also Read>> ಕಸ್ತೂರಿ ರಂಗನ್ ಚರ್ಚೆ ಮಧ್ಯೆ ‘ವಂದೇ ಮಾತರಂ’ ವಿವಾದ: ತೀರ್ಥಹಳ್ಳಿ ಸಭೆಯಲ್ಲಿ ಕೆಲಕಾಲ ಹೈಡ್ರಾಮಾ
ಮೊದಲ ಪೈಲಟ್ ಆಗಿ ಆಯ್ಕೆಯಾಗಿದ್ದ ಸಂಗೀತಾ ಭಟ್ ಇದೀಗ ದೊಡ್ಮನೆಯ ಮೊದಲ ಕ್ಯಾಪ್ಟನ್ ಆಗಿರುವುದು ಅವರ ಆಟಕ್ಕೆ ಮತ್ತಷ್ಟು ಮಹತ್ವ ನೀಡಿದೆ. ಮುಂದಿನ ದಿನಗಳಲ್ಲಿ ಕ್ಯಾಪ್ಟನ್ ಆಗಿ ಅವರು ಮನೆಯ ಸದಸ್ಯರನ್ನು ಹೇಗೆ ಮುನ್ನಡೆಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










