ಶಿವಮೊಗ್ಗ: ನಮ್ಮನ್ನು ಮುನ್ನಡೆಸುತ್ತಿರುವ ಮುಖಂಡರಂತೆಯೇ ಪ್ರತಿ ಕಾರ್ಯಕರ್ತರೂ ಸಹ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯರಾಗಬೇಕು ಎಂದು ಬಿಜೆಪಿ ಸಾಮಾಜಿಕ ಜಾಲತಾಣದ ಜಿಲ್ಲಾ ಸಂಚಾಲಕ ಅವಿನಾಶ್ ಕರೆ ನೀಡಿದರು.
ಲೋಕಸಭಾ ಚುನಾವಣೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪಕ್ಷದ ಸಂಘಟನೆಗಳ ಬಗ್ಗೆ ಕೈಗೊಳ್ಳಬೇಕಾದ ವಿಚಾರಗಳ ಕುರಿತಾಗಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಹಾಗೂ ಶಾಸಕ ಕುಮಾರ್ ಬಂಗಾರಪ್ಪ ಅವರಂತಹ ನಾಯಕರು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯರಾಗುವ ಮೂಲಕ, ನಮ್ಮ ಸರ್ಕಾರದ ಸಾಧನೆಯನ್ನು ಜನರಿಗೆ ತಲುಪಿಸುವ ಕಾರ್ಯ ಮಾಡುತ್ತಿದ್ದಾರೆ. ಇದರಂತೆಯೇ ಪ್ರತಿ ಕಾರ್ಯಕರ್ತರೂ ಸಹ ಜಾಲತಾಣದಲ್ಲಿ ಸಕ್ರಿಯರಾಗಿ, ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಎಸ್. ಅರುಣ್ ಮಾತನಾಡಿ, ಎಲ್ಲ ಕಾರ್ಯಕರ್ತರೂ ಸಹ ಸಾಮಾಜಿಕ ಜಾಲತಾಣಗಳ ಖಾತೆಯನ್ನು ಹೊಂದಿರಬೇಕು. ಸಾಮಾಜಿಕ ಜಾಲತಾಣ ಈಗಿನ ದಿನಮಾನದಲ್ಲಿ ಜನರನ್ನು ತಲುಪುವ ಪರಿಣಾಮಕಾರಿ ಮಾಧ್ಯಮವಾಗಿದ್ದು, ಇದನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ಶ್ರಮಿಸಬೇಕು. ಇದಕ್ಕೆ ಪಕ್ಷದ ಜಾಲತಾಣ ವಿಭಾಗದ ಮುಖ್ಯಸ್ಥರ ಸಲಹೆಗಳನ್ನು ಪಡೆಯಿರಿ ಎಂದರು.
ಉಪ ಮಹಾಪೌರರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚನ್ನಬಸಪ್ಪ, ರಾಜ್ಯ ಸಾಮಾಜಿಕ ಜಾಲತಾಣದ ಸಂಚಾಲಕ ಪ್ರಶಾಂತ್ ಮಕನುರು, ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಭವಾನಿ ಮೋರೆ, ಜಿಲ್ಲಾಧ್ಯಕ್ಷ ಹೃಷಿಕೇಶ್ ಪೈ, ಸಾಮಾಜಿಕ ಜಾಲತಾಣದ ಸಹ ಸಂಚಾಲಕಿ ಸುರೇಖಾ ಮುರಳೀಧರ್, ಎಚ್.ಆರ್. ತೀರ್ಥೇಶ್, ಪವನ್ ಇನ್ನಿತರು ಹಾಜರಿದ್ದರು.
Discussion about this post