ನವದೆಹಲಿ: ಒಂದು ವರ್ಷದ ಮುನ್ನವೇ ತೀವ್ರ ಕುತೂಹಲ ಕೆರಳಿಸಿರುವ ಲೋಕಸಭಾ ಚುನಾವಣೆಗೆ ಬಿಜೆಪಿ ಈಗಾಗಲೇ ತಂತ್ರಗಾರಿಕೆ ಆರಂಭಿಸಿದ್ದು, ಶತಾಯಗತಾಯ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳನ್ನು ಸೋಲಿಸಿ ಮತ್ತೊಮ್ಮೆ ಅಧಿಕಾರಕ್ಕೇರಲೇಬೇಕು ಎಂದು ಶಪಥ ಮಾಡಿದೆ.
ಉತ್ತರಪ್ರದೇಶ ಹಾಗೂ ಕರ್ನಾಟಕ ರಾಜ್ಯ ಚುನಾವಣೆಗೆ ಟಿಕೇಟ್ ನೀಡಲು ಅನುಸರಿಸಿದ್ದ ತಂತ್ರಗಾರಿಕೆಯನ್ನೇ ಉನ್ನತೀಕರಿಸಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಜೋಡಿ, ಕ್ಷೇತ್ರವಾರು ಇರುವ ಶಾಸಕರ ಮೂಲಕ ಅಭಿಪ್ರಾಯ ಸಂಗ್ರಹಿಸಿ ಗೆಲ್ಲುವ ಕಾರ್ಯತಂತ್ರ ರೂಪಿಸಲಿದ್ದಾರೆ ಎಂದು ತಿಳಿದುಬಂದಿದೆ.
ಅಲ್ಲದೆ ಕಳೆದ ನಾಲ್ಕು ವರ್ಷಗಳಲ್ಲಿ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳ ಕುರಿತಾಗಿ ಶಾಸಕರ ಜೊತೆ ಖುದ್ದಾಗಿ ಮಾತನಾಡಲಿದ್ದಾರೆ ಎಂದು ತಿಳಿದುಬಂದಿದೆ.
ಈ ಕುರಿತಂತೆ ರಾಷ್ಟ್ರೀಯ ಮಾಧ್ಯಮದ ವರದಿಯೊಂದರ ಪ್ರಕಾರ, ಮೋದಿ ನಮೋ ಆಪ್ ಮೂಲಕ ತಮ್ಮ ಅಭಿಪ್ರಾಯವನ್ನು ಆಯಾ ಕ್ಷೇತ್ರಗಳಿಗೆ ಸಂಬಂಧಿಸಿದ ಹಾಗೆ ಹಂಚಿಕೊಳ್ಳಲಿದ್ದಾರೆ. ಅಲ್ಲದೇ ರಾಜ್ಯವಾರು ಇರುವ ಪ್ರಮುಖ ನಾಯಕರ ಮಾಹಿತಿಯ ವಿವರಣೆಯನ್ನು ಕೇಳಲಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು 2019 ಕ್ಕೆ ಬಿಜೆಪಿಯ ಲೋಕಸಭಾ ಅಭ್ಯರ್ಥಿಗಳನ್ನು ಮೋದಿಯವರೇ ಸ್ವತಃ ಆಯ್ಕೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ. ಶಾಸಕರ ಜೊತೆಗೆ ಅಭಿಪ್ರಾಯ ಸಂಗ್ರಹಿಸುವುದಲ್ಲದೆ ಸ್ವತಃ ಸ್ಥಳೀಯ ಜನರ ಅಭಿಪ್ರಾಯಗಳನ್ನು ಸಹ ಅವರು ಸಂಗ್ರಹಿಸಲಿದ್ದಾರೆ ಎನ್ನಲಾಗಿದೆ.
ಅತ್ಯಂತ ಪ್ರಮುಖವಾಗಿ ಬಿಜೆಪಿ ಸರ್ಕಾರ ಜಾರಿಗೊಳಿಸಿರುವ ಯೋಜನೆಗಳ ಹಿನ್ನೆಲೆಯಲ್ಲಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸುವ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಲಾಗಿದ್ದು, ಈ ಮೂಲಕ ಜನರನ್ನು ಚುನಾವಣೆಯಲ್ಲಿ ತೊಡಗಿಸಿಕೊಳ್ಳಲು ಯೋಜನೆ ರೂಪಿಸಿದೆ.
Discussion about this post