ಇಡೀ ಭಾರತ ದೇಶದಲ್ಲಿ ಮುಖ್ಯವಾಗಿ ಪೌರಾಣಿಕವಾದ ಭೌಗೋಳಿಕವಾಗಿ ಎರಡು ಭಾಗ. ರಾಮಾಯಣದಲ್ಲಿ ಈ ವಿಚಾರ ಅನೇಕ ಕಡೆಯಲ್ಲಿ ಬರುತ್ತದೆ. ಹನುಮಂತನು ವಿಂದ್ಯಾ ಪರ್ವತದಿಂದ ದಕ್ಷಿಣಾಭಿಮುಖವಾಗಿ ಸೀತಾನ್ವೇಷಣೆಗೆ ಹೊರಟದ್ದು, ರಾಮನ ವನವಾಸ ಮಾರ್ಗವೂ ವಿಂದ್ಯಾ ಪರ್ವತದ ಮೇಲಿನಿಂದಲೇ ಸಾಗಿತ್ತು ಎಂಬಿತ್ಯಾದಿ ಉಲ್ಲೇಖ ಇದೆ.
ಸರ್ಪಗಳೂ ವಿಂದ್ಯಾ ಪರ್ವತದಿಂದ ದಕ್ಷಿಣಕ್ಕೇ ವಾಸವಾಗಿದ್ದು ಕೂಡಾ ಇದೆ. ಅಂದರೆ ವಿಂದ್ಯಾ ಪರ್ವತದಿಂದ ಉತ್ತರಕ್ಕೆ ಕೈಲಾಸದವರೆಗೆ ಅದು ಶಿವನ ಕ್ಷೇತ್ರವೂ, ದಕ್ಷಿಣಕ್ಕೆ ಸೇನಾನಿ ಸುಬ್ರಹ್ಮಣ್ಯನ ಕ್ಷೇತ್ರವೂ ಆಗುತ್ತದೆ. ಈ ಮಧ್ಯೆ ತಿರುಪತಿ, ರಾಮ ಕ್ಷೇತ್ರ ಇತ್ಯಾದಿ ವಿಷ್ಣು ಸಾನ್ನಿಧ್ಯವೂ ಇದ್ದರೂ, ಭಾರತಕ್ಕೆ ಪ್ರಧಾನ ಈ ಎರಡು ಕ್ಷೇತ್ರ.

ಸೇನಾಧಿಪತಿಯ ಅನುಗ್ರಹವಿಲ್ಲದೇ ಯುದ್ಧ ಗೆಲುವು ಅಸಾಧ್ಯ
ತಾರಕಾಸುರನ ವಧೆಗಾಗಿ ಸ್ಕಾಂದ ಮತ ಪ್ರವರ್ತಕನಾಗಿ ಇಳಿದದ್ದೇ ಸ್ಕಂದ. ಇವನನ್ನು ಕಾರ್ತಿಕೇಯ, ಸುಬ್ರಹ್ಮಣ್ಯ ಇತ್ಯಾದಿ ಹೆಸರುಗಳಿಂದ ಪೂಜಿಸಿದರು. ಶಿವನ ಸೈನ್ಯಕ್ಕೆ ಪ್ರಧಾನ ಸೇನಾನಿಯೇ ಸುಬ್ರಹ್ಮಣ್ಯ. ಇವನು ಸಂಕರ್ಷಣಾ ರೂಪಿ ಭಗವಾನ್ ವಾಸುದೇವನ ಒಂದು ಪ್ರಧಾನ ಶಕ್ತಿ. ಸೇನಾಧಿಪತಿಯ ಅನುಗ್ರಹ ಇಲ್ಲದಿದ್ದರೆ ಯುದ್ಧದಲ್ಲಿ ಗೆಲುವು ಬರಲಾರದು ಎಂಬುದು ಸಾಮಾನ್ಯನಿಗೂ ಗೊತ್ತಿರುವ ವಿಚಾರ. ಅಲ್ಲದೆ ದಕ್ಷಿಣ ಭಾರತದ ಕುಕ್ಕೇ ಸುಬ್ರಹ್ಮಣ್ಯವು ತಾರಕಾಸುರನ ದಕ್ಷಿಣದ ಕೋಶಾಗಾರ. ಇದು ನಾಗ ಶಕ್ತಿಗಳ ಪ್ರಧಾನ ಕೇಂದ್ರ. ವಿಂದ್ಯಾ ಪರ್ವತದಿಂದ ದಕ್ಷಿಣಕ್ಕೆ ಸುಬ್ರಹ್ಮಣ್ಯ ಕ್ಷೇತ್ರವೇ ಆಗುತ್ತದೆ.

ಉತ್ತರದಲ್ಲಿ ನಾಗ ದೋಷ ಕಡಿಮೆಯೇ
ಸಂಕಲ್ಪಗಳಲ್ಲಿ ಬ್ರಹ್ಮ ಕ್ಷೇತ್ರ, ಗೋಕರ್ಣ ಕ್ಷೇತ್ರ, ಪರಶುರಾಮ ಕ್ಷೇತ್ರ ಇತ್ಯಾದಿ ವಿಂಗಡಣೆಗಳು ಒಂದು ರೀತಿಯ ಬೌಗೋಳಿಕ ತಿಳುವಳಿಕೆಯಾಗುತ್ತದೆಯಷ್ಟೆ. ಆದರೆ ಸುಬ್ರಹ್ಮಣ್ಯ ಕ್ಷೇತ್ರ ಮತ್ತು ಶಿವ ಕ್ಷೇತ್ರವೇ ಭಾರತದ ಪ್ರಧಾನ ಕ್ಷೇತ್ರಗಳಾಗಿವೆ. ಸಾಮಾನ್ಯವಾಗಿ ವಿಂದ್ಯಾ ಪರ್ವತದ ಉತ್ತರದ ಈ ಶಿವಕ್ಷೇತ್ರದಲ್ಲಿ ನಾಗ ದೋಷ ಕಡಿಮೆ. ನಾಗ ಹತ್ಯೆಯಾದರೆ ನೈಸರ್ಗಿಕವಾಗಿ ಅಪರಾಧವೇ ಆದರೂ, ಸಂತತಿ, ಪೀಳಿಗೆಗೆ ದೋಷ ಬರುವುದಿಲ್ಲ. ಆದರೆ ವಿಂದ್ಯಾ ಪರ್ವತದ ದಕ್ಷಿಣ ಭಾಗಕ್ಕೆ ನಾಗ ದೋಷಗಳು ಬಾಧಿಸುತ್ತದೆ. ತಮಿಳುನಾಡಿನಲ್ಲಿ, ಆಂಧ್ರದಲ್ಲಿ, ಕೇರಳಗಳಲ್ಲಿ ಸುಬ್ರಹ್ಮಣ್ಯ ಸಾನ್ನಿಧ್ಯಗಳಿದ್ದಷ್ಟು ಉತ್ತರ ಭಾರತದಲ್ಲಿ ಇಲ್ಲ. ಕನ್ಯಾಕುಮಾರಿಯಿಂದ ಮಹಾರಾಷ್ಟ್ರದವರೆಗೆ ನಾಗ ಲೋಕವೇ ಆಗಿರುವುದರಿಂದ ಇದು ಸುಬ್ರಹ್ಮಣ್ಯನಿಗೆ ಸಂಬಂಧಿಸಿದ ಕ್ಷೇತ್ರವೇ. ಈ ಸುಬ್ರಹ್ಮಣ್ಯನನ್ನು ಕಡೆಗಣಿಸಿದರೆ ತೊಂದರೆಗಳು ಸೃಷ್ಟಿಯಾಗುತ್ತದೆ.
ಮೋದಿ ಪ್ರಧಾನಿಯಾದ ಮೇಲೆ ಇಲ್ಲಿಗೆ ಬರಬೇಕಿತ್ತು
ಈಗ ಇದನ್ನು ಉತ್ತರದವರು ಕಡೆಗಣಿಸಿದ್ದಾರೆ. ಅಂದರೆ ಪ್ರಜೆಗಳು ಬರುವುದಿಲ್ಲವೋ ಎಂದಲ್ಲ. ಪ್ರಜಾಪ್ರತಿನಿಧಿಗಳು ವೈಯಕ್ತಿಕವಾಗಿ ಬಂದರೂ, ದೇಶದ ಸ್ವಾಸ್ಥ್ಯಕ್ಕಾಗಿ ಬರಲಿಲ್ಲ. ಪ್ರಧಾನಮಂತ್ರಿ ಮೋದಿಯವರನ್ನೇ ನೋಡಿ. ಪ್ರಧಾನಮಂತ್ರಿಯಾದ ಮೇಲೆ ರಾಜ ಮರ್ಯಾದೆಯಲ್ಲಿ ಬಂದು ದೇವರ ದರ್ಶನ ಮಾಡಬೇಕಿತ್ತು. ಆದರೆ ಅವರಿಗೆ ಈ ತಿಳುವಳಿಕೆ ಕೊಡುವವರಿಲ್ಲ. ಇದರ ಫಲವಾಗಿ ಕರ್ನಾಟಕದಲ್ಲಿ ಬಿಜೆಪಿ ಇದ್ದರೂ ಡೋಲಾಯಮಾನದಲ್ಲಿ ಸ್ಪಷ್ಟ ಬಹುಮತದಲ್ಲಿ ಇಲ್ಲ. ಒಂದೊಮ್ಮೆ ಇದ್ದರೂ ಅದು ಒಡೆದು ಹೋಯ್ತು. ತಮಿಳುನಾಡಿನಲ್ಲಿ, ಕೇರಳದಲ್ಲಿ ಬಿಜೆಪಿಯ ಒಂದು ಬೀಜವೂ ನೆಲಕ್ಕೆ ಬೀಳದ ಸ್ಥಿತಿಯಲ್ಲಿದೆ. ಬಿದ್ದರೆ ಮಾತ್ರವಲ್ಲವೇ ಮೊಳಕೆ ಬರುವುದು? ಇನ್ನು ಆಂಧ್ರದಲ್ಲೂ ಬಿಜೆಪಿಯು ಬಲಿಷ್ಟ ಇಲ್ಲ. ಗೋವಾದಲ್ಲೂ ಬಿಜೆಪಿ ಇರಿಸು ಮುರಿಸಿನಲ್ಲೇ ಇದೆ. ಹಿಂದೆ ಕಾಂಗ್ರೆಸ್ ಇರುವಾಗಲೂ ಇದೇ ರೀತಿ ಇತ್ತು. ಕಾರಣ ಸುಬ್ರಹ್ಮಣ್ಯನನ್ನು ಕಡೆಗಣಿಸಿದ ಫಲ. ಬಹಳ ಪೂರ್ವದಲ್ಲಿ ಚಂಪಾ ಮಹರಾಜರು ಸುಬ್ರಹ್ಮಣ್ಯನಿಗೆ ಸಹಸ್ರ ಪುತ್ಥಳಿಯಲ್ಲಿ ಅರ್ಚನೆ ಮಾಡಿ ಬಲಿಷ್ಟರೂ ಆದರು ಮತ್ತು ಚರ್ಮವ್ಯಾಧಿಯಿಂದ ಮುಕ್ತರಾದರು.


ಎಂದಿನವರೆಗೆ ಅವರು ಬರುವುದಿಲ್ಲವೋ ಅಂದಿನವರೆಗೆ ಭಾರತೀಯ ಜನತಾ ಪಕ್ಷ ಹೀಗೆಯೇ ಕುಂಟುವುದು ನಿಶ್ಚಿತ. ರಾಮ ಜನ್ಮ ಭೂಮಿಗಾಗಿ(ಧರ್ಮ) ಹುಟ್ಟಿಕೊಂಡಿತು ಬಿಜೆಪಿ ಪಕ್ಷ. ಉತ್ತರದಲ್ಲಿ ಫಲ ಸಿಕ್ಕಿದೆ. ಹಾಗೆಯೇ ದಕ್ಷಿಣದಲ್ಲಿ ಫಲ ಸಿಗಬೇಕಾದರೆ, ಕುಕ್ಕೇ ಸುಬ್ರಹ್ಮಣ್ಯನ ದರ್ಶನವನ್ನು ನರೇಂದ್ರ ಮೋದಿಯವರು ಮಾಡಲೇಬೇಕಿದೆ. ಇದೊಂದು ಕೋಮುವಿಚಾರ ಎಂದು ಯಾರಾದರೂ ನಿಂದಿಸಿದರೆ ಅದು ಅವರ ತಿಳುವಳಿಕೆ ರಹಿತ ಹೇಳಿಕೆಯಷ್ಟೆ. ಸುಬ್ರಹ್ಮಣ್ಯನು ಸೇನಾನಿ. ಹೇಗೆ ದೇಶದ ಪ್ರಧಾನ ದಂಡ ನಾಯಕನೋ ಹಾಗೆಯೇ ಇದು. ದಂಡನಾಯಕನನ್ನು ಕೋಮುವಾದಿ ಎಂದು ಮೂರ್ಖರು ಮಾತ್ರ ಹೇಳಬಹುದಷ್ಟೆ. ನಿಂದಕರು ನಿಂದಿಸಲಿ. ನಮಗೇನೂ ಬಾಧೆ ಇಲ್ಲ. ನಮಗೆ ಬಾಧೆ ಇರುವುದು ಸುಬ್ರಹ್ಮಣ್ಯನನ್ನು ಮರೆತಾಗ ಮಾತ್ರ.
Get In Touch With Us info@kalpa.news Whatsapp: 9481252093








Discussion about this post