ಕಲ್ಪ ಮೀಡಿಯಾ ಹೌಸ್ | ಬೊಕಾರೋ (ಜಾರ್ಖಂಡ್) |
ಇಲ್ಲಿನ ಬೊಕಾರೋ ಉಕ್ಕು ಕಾರ್ಖಾನೆಗೆ ಎರಡು ದಿನಗಳ ಭೇಟಿ ನೀಡಿರುವ ಕೇಂದ್ರ ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ #H D Kumaraswamy ಅವರು ಮಂಗಳವಾರದಂದು ₹20,000 ಕೋಟಿ ಹೂಡಿಕೆಯ ವಿಸ್ತರಣಾ ಯೋಜನೆಗೆ ಚಾಲನೆ ನೀಡಿದರು.
ದೇಶೀಯವಾಗಿ ಉಕ್ಕು ಉದ್ಯಮದಲ್ಲಿ ಸ್ವಾವಲಂಬನೆ ಸಾಧಿಸುವ ಏಕೈಕ ಉದ್ದೇಶದಿಂದ ಸಚಿವರು, ಕಾರ್ಖಾನೆಯ ಉತ್ಪಾದನಾ ಸಾಮರ್ಥ್ಯವನ್ನು ಗಮನಾರ್ಹವಾಗಿ ಹೆಚ್ಚಿಸುವ ಉದ್ದೇಶದಿಂದ ಮಹತ್ವಾಕಾಂಕ್ಷೆಯ ವಿಸ್ತರಣಾ ಯೋಜನೆಗೆ ಚಾಲನೆ ಕೊಟ್ಟರು.

ಈ ಸಂದರ್ಭದಲ್ಲೇ ಮಾತನಾಡಿದ ಸಚಿವ ಕುಮಾರಸ್ವಾಮಿ ಅವರು; ಬೊಕಾರೊ ಉಕ್ಕು ಕಾರ್ಖಾನೆ 1965ರಲ್ಲಿ ಸ್ಥಾಪನೆಯಾಯಿತು. 1972ರಲ್ಲಿ ತನ್ನ ಮೊದಲ ಬ್ಲಾಸ್ಟ್ ಫರ್ನೇಸ್ (ಊದು ಕುಲುಮೆ) ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಆರಂಭದಲ್ಲಿ ವಾರ್ಷಿಕ 1.7 ದಶಲಕ್ಷ ಟನ್ ಉಕ್ಕು ಉತ್ಪಾದನೆ ಸಾಮರ್ಥ್ಯ ಹೊಂದಿತ್ತು. ನಂತರದ ವರ್ಷಗಳಲ್ಲಿ ಇದರ ಪ್ರಮಾಣ 5.25 ದಶಲಕ್ಷ ಟನ್ ಗಳಿಗೆ ಮುಟ್ಟಿದೆ. ಈಗ ವಿಸ್ತರಣಾ ಯೋಜನೆ ಪೂರ್ಣಗೊಂಡ ನಂತರ ಈ ಕಾರ್ಖಾನೆಯು ವಾರ್ಷಿಕ 7.55 ದಶಲಕ್ಷ ಟನ್ ಉಕ್ಕು ಉತ್ಪಾದನೆ ಮಾಡಲಿದೆ ಎಂದು ಹೇಳಿದರು.
Also read: ಹೊಸನಗರ | ಅತಿಯಾದ ರಕ್ತಸ್ರಾವದಿಂದ ಮಹಿಳೆ ಸಾವು
ಉಕ್ಕು ಉತ್ಪಾದನೆಯಲ್ಲಿ ಭಾರತ ಸ್ವಾವಲಂಬನೆ ಸಾಧಿಸುವುದು ಎಷ್ಟು ಮುಖ್ಯವೋ, ಬೊಕಾರೋ ಕಾರ್ಖಾನೆಯಲ್ಲಿ ಸರ್ಕಾರ ಕೈಗೊಂಡಿರುವ ವಿಸ್ತರಣಾ ಯೋಜನೆಗಳು ಅಷ್ಟೆ ಮಹತ್ವ ಹೊಂದಿವೆ. 2030ರ ವೇಳೆಗೆ ವಾರ್ಷಿಕ 300 ದಶಲಕ್ಷ ಟನ್ ಉಕ್ಕು ಉತ್ಪಾದನೆ ಮಾಡುವುದು ಪ್ರಧಾನಿ ನರೇಂದ್ರ ಮೋದಿ ಅವರು ನಿಗದಿ ಮಾಡಿರುವ ಗುರಿ. ಆ ಗುರಿ ಮುಟ್ಟಲು ನಾವು ಅವಿರತ ಶ್ರಮ ಹಾಕುತ್ತಿದ್ದೇವೆ ಎಂದು ಕೇಂದ್ರ ಸಚಿವರು ಹೇಳಿದರು.
ವಿಸ್ತರಣಾ ಯೋಜನೆಯಿಂದ ಉದ್ಯೋಗ ಸೃಷ್ಟಿ ಮತ್ತು ಇಂಗಾಲ ಹೊರಸೂಸುವಿಕೆ ಶೂನ್ಯ ಮಟ್ಟಕ್ಕೆ:
ಬೊಕಾರೋ ಕಾರ್ಖಾನೆ ವಿಸ್ತರಣಾ ಯೋಜನೆಯಿಂದ ಉಕ್ಕು ಉತ್ಪಾದನೆ ಗುರಿ ಒಂದೆಡೆ ಇದ್ದರೆ, ಇನ್ನೊಂದೆಡೆ 2,500 ಕಾಯಂ ಉದ್ಯೋಗಗಳನ್ನು ಮತ್ತು 10,000ಕ್ಕೂ ಹೆಚ್ಚು ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸಲಾಗುವುದು. ಇದು ಈ ಭಾಗದಲ್ಲಿ ಆರ್ಥಿಕ, ಸಾಮಾಜಿಕ ಪರಿವರ್ತನೆಗೆ ದೊಡ್ಡ ಕೊಡುಗೆ ನೀಡಲಿದೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಅಲ್ಲದೆ, 2030ರ ವೇಳೆಗೆ 2.67 ಟನ್ ಕಚ್ಚಾ ಉಕ್ಕಿನ ಇಂಗಾಲದ ಹೊರಸೂಸುವಿಕೆಯನ್ನು 2.2 ಟನ್‌ಗೆ ಇಳಿಸಲು ಬೊಕಾರೋ ಉಕ್ಕು ಕಾರ್ಖಾನೆ ಬದ್ಧವಾಗಿದೆ ಎಂದು ಹೇಳುವ ಮೂಲಕ ಸಚಿವರು ಇಂಗಾಲ ಹೊರಸೂಸುವಿಕೆ ತಡೆಗಟ್ಟುವ, ಅದನ್ನು ಶೂನ್ಯ ಮಟ್ಟಕ್ಕೆ ಇಳಿಸುವ ಸರ್ಕಾರದ ಪ್ರಯತ್ನಗಳ ಬಗ್ಗೆ ಒತ್ತಿ ಹೇಳಿದರು.
ಈ ಉಕ್ಕು ಸ್ಥಾವರವು ತನ್ನ ಕಾರ್ಯಾಚರಣೆಯಲ್ಲಿ ನ ಇಂಧನ ಬಳಕೆಯನ್ನು ಪರಿಣಾಮಕಾರಿಯಾಗಿ ಮಾಡುತ್ತಿದೆ. 50 ಮೆಗಾವ್ಯಾಟ್ ಸೌರ ವಿದ್ಯುತ್ ಉತ್ಪಾದನೆ, 100 ಮೆಗಾವ್ಯಾಟ್ ನವೀಕರಿಸಬಹುದಾದ ಇಂಧನವನ್ನು ವಿವಿಧ ಮೂಲಗಳಿಂದ ಕಾರ್ಖಾನೆ ಪಡೆಯುತ್ತಿದೆ. ಇಂಗಾಲ ಹೊರಸೂಸುವಿಕೆ ಪರಿಣಾಮಕಾರಿಯಾಗಿ ತಡೆಗಟ್ಟಲು ಈ ಕ್ರಮಗಳು ಹೆಚ್ಚು ಉಪಯುಕ್ತವಾಗಿವೆ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ವೇಳೆ ಸಚಿವ ಕುಮಾರಸ್ವಾಮಿ ಅವರು; ತಸ್ರಾ ಕಲ್ಲಿದ್ದಲು ಗಣಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆಮದು ಕಲ್ಲಿದ್ದಲಿನ ಮೇಲಿನ ಭಾರತದ ಅವಲಂಬನೆಯನ್ನು ಕಡಿಮೆ ಮಾಡುವ ಗುರಿಯನ್ನು ಭಾರತ ಹೊಂದಿದ್ದು, ಈ ಗಣಿಯಲ್ಲಿ ಉತ್ಪಾದನೆ ಹೆಚ್ಚಿಸುವ ನಿಟ್ಟಿನಲ್ಲಿ ಸಚಿವರು ಅಧಿಕಾರಿಗಳ ಜತೆ ಚರ್ಚೆ ನಡೆಸಿದರು.
ಇದೇ 2025 ಸೆಪ್ಟೆಂಬರ್ ನಲ್ಲಿ ಕಾರ್ಯಾರಂಭವಾದ ಈ ಗಣಿಯು ವಾರ್ಷಿಕ 3.5 ದಶಲಕ್ಷ ಟನ್ ಕಲ್ಲಿದ್ದಲನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ನಂತರ ಅವರು ಚಸ್ನಲ್ಲಾ ಕಲ್ಲಿದ್ದಲು ಸಂಸ್ಕರಣಾ ಘಟಕಕ್ಕೆ ಭೇಟಿ ನೀಡಿದರು. ಈ ಘಟಕ ವಾರ್ಷಿಕ 2 ದಶಲಕ್ಷ ಕಲ್ಲಿದ್ದಲು ಸಂಸ್ಕರಣೆ ಮಾಡುವ ಸಾಮರ್ಥ್ಯ ಹೊಂದಿದ್ದು, ಕಲ್ಲಿದ್ದಲಿನಲ್ಲಿ ಬೂದಿ ಹೊರಸೂಸುವಿಕೆಯನ್ನು 28% ರಿಂದ 17%ಕ್ಕೆ ತಗ್ಗಿಸುತ್ತಿದೆ.
“ತಸ್ರಾ ಕಲ್ಲಿದ್ದಲು ಗಣಿ ಮತ್ತು ಚಸ್ನಲ್ಲಾ ಕಲ್ಲಿದ್ದಲು ಸಂಸ್ಕರಣಾ ಘಟಕಗಳು ಕಲ್ಲಿದ್ದಲು ಪೂರೈಕೆಯಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡುವಲ್ಲಿ ನಿರ್ಣಾಯಕ ವಹಿಸುತ್ತಿವೆ. ವಿಕಸಿತ ಭಾರತ ದೃಷ್ಟಿಕೋನಕ್ಕೆ ಅನುಗುಣವಾಗಿ ಇವು ಕೆಲಸ ಮಾಡುತ್ತಿವೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಉಕ್ಕು ಇಲಾಖೆಯ ಸಹಾಯಕ ಸಚಿವ ಭೂಪತಿರಾಜು ಶ್ರೀನಿವಾಸ ವರ್ಮ, ಭಾರತೀಯ ಉಕ್ಕು ಪ್ರಾಧಿಕಾರದ ಅಧ್ಯಕ್ಷ (SAIL) ಅಮರೇಂದು ಪ್ರಕಾಶ್ ಸೇರಿದಂತೆ ಅನೇಕ ಉನ್ನತ ಅಧಿಕಾರಿಗಳು ಸಚಿವರ ಜತೆಯಲ್ಲಿ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post