ಶಿವಮೊಗ್ಗ: ಪ್ರತಿಷ್ಟಿತ ಕರ್ನಾಟಕ ಸಂಘದ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ, 2018ನೆಯ ಸಾಲಿನಲ್ಲಿ ಪ್ರಕಟವಾದ ಕನ್ನಡ ಪುಸ್ತಕಗಳಿಗೆ ಕರ್ನಾಟಕ ಸಂಘದ ಗೌರವ ಸದಸ್ಯರ ಹೆಸರಿನಲ್ಲಿ ನೀಡಲಾಗುವ ಬಹುಮಾನಗಳಿಗಾಗಿ ಲೇಖಕರಿಂದ ಮತ್ತು ಪ್ರಕಾಶಕರಿಂದ ಕೃತಿಗಳನ್ನು ಆಹ್ವಾನಿಸಲಾಗಿದೆ.
ಕಾದಂಬರಿ ವಿಭಾಗದಲ್ಲಿ ಕುವೆಂಪು ಪ್ರಶಸ್ತಿ, ಅನುವಾದಿತ ಕೃತಿಗೆ ಪ್ರೊ. ಎಸ್.ವಿ. ಪರಮೇಶ್ವರ ಭಟ್ಟ ಪ್ರಶಸ್ತಿ, ಮಹಿಳಾ ಸಾಹಿತ್ಯಕ್ಕೆ ಎಂ.ಕೆ. ಇಂದಿರಾ ಪ್ರಶಸ್ತಿ, ಮುಸ್ಲಿಂ ಬರಹಗಾರರ ಕೃತಿಗಳಿಗೆ ಪಿ. ಲಂಕೇಶ್ ಪ್ರಶಸ್ತಿ, ಕವನ ಸಂಕಲನಕ್ಕಾಗಿ ಡಾ. ಜಿ. ಎಸ್. ಶಿವರುದ್ರಪ್ಪ ಪ್ರಶಸ್ತಿ, ಅಂಕಣ ಬರಹಗಾರರಿಗೆ ಡಾ. ಹಾ. ಮಾ. ನಾಯಕ ಪ್ರಶಸ್ತಿ, ಸಣ್ಣ ಕಥಾ ಸಂಕಲನಕ್ಕಾಗಿ ಡಾ. ಯು. ಆರ್. ಅನಂತಮೂರ್ತಿ ಪ್ರಶಸ್ತಿ, ನಾಟಕ ಕೃತಿಗಾಗಿ ಡಾ. ಕೆ. ವಿ. ಸುಬ್ಬಣ್ಣ ಪ್ರಶಸ್ತಿ, ಪ್ರವಾಸ ಸಾಹಿತಕ್ಕಾಗಿ ಕುಕ್ಕೆ ಸುಬ್ರಹ್ಮಣ್ಯ ಶಾಸ್ತಿ ಪ್ರಶಸ್ತಿ, ವಿಜ್ಞಾನ ಸಾಹಿತಕ್ಕಾಗಿ ಹಸೂಡಿ ವೆಂಕಟಶಾಸ್ತಿ ಪ್ರಶಸ್ತಿ, ಮಕ್ಕಳ ಸಾಹಿತಕ್ಕಾಗಿ ಡಾ. ನಾ. ಡಿಸೋಜ ಪ್ರಶಸ್ತಿö ಹಾಗೂ ವೈದ್ಯ ಸಾಹಿತಕ್ಕಾಗಿ ಡಾ. ಹೆಚ್. ಡಿ. ಚಂದ್ರಪ್ಪಗೌಡರವರ ಹೆಸರಿನಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತಿದೆ.
ಈ ಪುಸ್ತಕ ಬಹುಮಾನಕ್ಕೆ ಮರುಮುದ್ರಣಗೊಂಡ ಕೃತಿಗಳಿಗೆ ಮತ್ತು ಹಸ್ತ ಪ್ರತಿಗಳಿಗೆ, ಸಂಪಾದಿತ ಕೃತಿಗಳಿಗೆ, ಕರ್ನಾಟಕ ಸಂಘದ ಸದಸ್ಯರುಗಳ ಕೃತಿಗಳಿಗೆ ಅವಕಾಶವಿರುವುದಿಲ್ಲ. ಈ ಹಿಂದೆ ಕರ್ನಾಟಕ ಸಂಘದ ಪುಸ್ತಕ ಬಹುಮಾನ ಪಡೆದವರೂ ಸಹ, ಅದೇ ವಿಭಾಗಕ್ಕೆ ಅಥವಾ ಇನ್ನಿತರೆ ಯಾವುದೇ ವಿಭಾಗಕ್ಕೆ ಲೇಖಕರು, ಪ್ರಕಾಶಕರು, ಅಭಿಮಾನಿಗಳು ಪುಸ್ತಕಗಳನ್ನು ಕಳುಹಿಸಬಹುದು. ಪ್ರಶಸ್ತಿಗೆ ಕಳುಹಿಸಿದ ಪುಸ್ತಕಗಳನ್ನು ಹಿಂದಿರುಗಿಸಲಾಗುವುದಿಲ್ಲ. ಈ ಪುಸ್ತಕಗಳನ್ನು ಕರ್ನಾಟಕ ಸಂಘದ ಗ್ರಂಥಾಲಯಕ್ಕೆ ತೆಗೆದುಕೊಳ್ಳಲಾಗುವುದು.
ಈ ವಿವಿಧ ಸಾಹಿತ್ಯ ಪ್ರಕಾರಗಳ ಕೃತಿಗಳ 03 (ಮೂರು) ಪ್ರತಿಗಳನ್ನು ಫೆ. 28, 2018ರ ಒಳಗಾಗಿ ಗೌರವ ಕಾರ್ಯದರ್ಶಿ, ಕರ್ನಾಟಕ ಸಂಘ, ಬಿ.ಹೆಚ್.ರಸ್ತೆ, ಶಿವಮೊಗ್ಗ-577201 ಇಲ್ಲಿಗೆ ಕಳುಹಿಸಬಹುದು.
ಅತ್ಯುತ್ತಮವೆಂದು ಆಯ್ಕೆ ಆದ ಕೃತಿಗಳಿಗೆ ರೂ.10.000-00(ಹತ್ತು ಸಾವಿರ) ನಗದು ಮತ್ತು ಬಹುಮಾನ ಪತ್ರವನ್ನು ನೀಡಲಾಗುವುದು. ತೀರ್ಪುಗಾರರ ತೀರ್ಮಾನವೇ ಅಂತಿಮ ಎಂದು ಗೌರವ ಕಾರ್ಯದರ್ಶಿ ಡಾ. ಹೆಚ್.ಎಸ್. ನಾಗಭೂಷಣನವರು ತಿಳಿಸಿದ್ದಾರೆ.
ಹೆಚ್ಚಿನ ವಿವರಗಳಿಗೆ ಕರ್ನಾಟಕ ಸಂಘದ ಕಛೇರಿ (08182 277406)ಯನ್ನು ಸಂಪರ್ಕಿಸಲು ಕೋರಲಾಗಿದೆ.
(ವರದಿ: ಡಾ.ಸುಧೀಂದ್ರ, ಶಿವಮೊಗ್ಗ)
Discussion about this post