ಕಲ್ಪ ಮೀಡಿಯಾ ಹೌಸ್
ನವದೆಹಲಿ: ದೇಶದಲ್ಲಿ 18 ವರ್ಷ ಮೀರಿದ ಎಲ್ಲರಿಗೂ ಉಚಿತ ಕೋವಿಡ್ ವ್ಯಾಕ್ಸಿನ್ ನೀಡಲು ನಿರ್ಧರಿಸಲಾಗಿದ್ದು, ಇದು ಜೂನ್ 21ರಿಂದ ಜಾರಿಗೆ ಬರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದರು.
ದೇಶವನ್ನುದ್ದೇಶಿಸಿ ಮಾತನಾಡಿದ ಅವರು, ಜೂನ್ 21ರಿಂದ ಇದು ಆರಂಭವಾಗಲಿದ್ದು, ಎಲ್ಲ ವರ್ಗದವರಿಗೂ ಉಚಿತ ಲಸಿಕೆ ನೀಡಲು ನಿರ್ಧರಿಸಲಾಗಿದೆ. ಇದರ ಸಂಪೂರ್ಣ ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸಲಿದ್ದು, ರಾಜ್ಯಗಳ ಮೇಲೆ ಹೊರ ಹಾಕುವುದಿಲ್ಲ ಎಂದರು.
ಖಾಸಗಿ ಆಸ್ಪತ್ರೆಗಳಿಗೆ ಶೇ.25 ರಷ್ಟು ಲಸಿಕೆ ಪೂರೈಕೆ ಮಾಡಲಿದ್ದು, ತಮಗೆ ದೊರೆತಿರುವ ಮೂಲಕ ಬೆಲೆಯ ಮೇಲೆ ಕೇವಲ 150 ರೂ. ಸೇವಾ ಶುಲ್ಕ ವಿಧಿಸಬಹುದಾಗಿದೆ. ಇಷ್ಟಪಟ್ಟ ನಾಗರಿಕರು ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಪಡೆಯಬಹುದಾಗಿದೆ ಎಂದರು.
ಕೊರೋನಾದ 2ನೆಯ ಅಲೆಯ ವಿರುದ್ಧ ದೇಶವಾಸಿಗಳ ಹೋರಾಟ ಮುಂದುವರೆದಿದೆ. ಇಂತಹ ಮಹಾಮಾರಿಯನ್ನು ಆಧುನಿಕ ವಿಶ್ವ ನೋಡಿಯೇ ಇಲ್ಲ. ಇದರ ವಿರುದ್ಧ ಇಡಿಯ ದೇಶ ಒಗ್ಗಟ್ಟಾಗಿ ಹೋರಾಡಿದ್ದು, ಇದು ಮುಂದುವರೆದಿದೆ. ವಿಶ್ವದ ಹಲವು ರಾಷ್ಟ್ರಗಳಂತೆ ಭಾರತವೂ ಸಹ ಇದರಿಂದ ಬಾಧಿತವಾಗಿದ್ದು, ಬಹಳಷ್ಟು ಕಷ್ಟ-ನಷ್ಟಗಳನ್ನು ಉಂಟು ಮಾಡಿದೆ. ಇದರಲ್ಲಿ ಮಡಿದವರಿಗೆಲ್ಲಾ ಸಂತಾಪು ಸೂಚಿಸುತ್ತೇನೆ ಎಂದರು.
ವೈದ್ಯಕೀಯ ಸೌಲಭ್ಯದಲ್ಲಿ ಭಾರತ ದಾಖಲೆ ಬರೆದಿದ್ದು, ಆಕ್ಸಿಜನ್, ಬೆಡ್ ಸೇರಿದಂತೆ ಹಲವು ಸೌಲಭ್ಯಗಳಿಗೆ ಹಿಂದೆ ಎಂದು ಕಾಣದಂತಹ ಬೇಡಿಕೆಗೆ ದೇಶ ಸಾಕ್ಷಿಯಾಗಿದೆ. ಮೆಡಿಕಲ್ ಆಕ್ಸಿಜನ್ ಪೂರೈಕೆ 10 ಪಟ್ಟು ಹೆಚ್ಚಾಗಿದೆ. ಆಕ್ಸಿಜನ್ ಪೂರೈಕೆಗೆ ರೈಲು, ವಾಯು ಸೇನೆಯನ್ನೂ ಸಹ ಬಳಸಿಕೊಂಡು ಸಮರೋಪಾದಿಯಲ್ಲಿ ಕೆಲಸ ಮಾಡಲಾಗುತ್ತಿದೆ ಎಂದರು.
ಪ್ರಮುಖವಾಗಿ ವ್ಯಾಕ್ಸಿನ್ ನಮಗೊಂದು ಸುರಕ್ಷಾ ಕವಚವಿದ್ದಂತೆ. ವಿದೇಶಗಳಿಂದ ನಾವು ಲಸಿಕೆ ಪಡೆಯಬೇಕಿದ್ದರೆ ದಶಕಗಳೇ ಹಿಡಿಯುತ್ತಿತ್ತು. ಪೋಲಿಯೋದಂತಹ ವ್ಯಾಕ್ಸಿನ್’ಗೂ ಸಹ ನಾವು ದಶಕಗಳ ಕಾಲ ಕಾದಿದ್ದೇವೆ. ಇಂತಹ ಸಂದರ್ಭದಲ್ಲಿ ಸ್ವದೇಶಿ ನಿರ್ಮಿತ ವ್ಯಾಕ್ಸಿನ್ ಇರದೇ ಇದ್ದರೆ ಭಾರತದ ಪರಿಸ್ಥಿತಿ ಏನಾಗಿರುತ್ತಿತ್ತು? ಹೀಗಿರುವಾಗ ಸ್ವದೇಶಿ ವ್ಯಾಕ್ಸಿನ್ ನಮ್ಮನ್ನು ಕಾಪಾಡುತ್ತಿದೆ ಎಂದರು.
ಎಲ್ಲ ಭಾರತೀಯರಿಗೂ ವ್ಯಾಕ್ಸಿನ್ ಕೊಡಲು 40 ವರ್ಷ ಬೇಕಿತ್ತು. ಈಗ ಮಿಷನ್ ಇಂದ್ರ ಧನುಷ್ ಆರಂಭಿಸಿದ್ದೇವೆ. 2014ರಲ್ಲಿ ಶೇ.60ರಷ್ಟು ಇದ್ದ ವ್ಯಾಕ್ಸಿನ್ ಉತ್ಪಾದನೆ ಈಗ ಶೇ.90ಕ್ಕೆ ಏರಿಕೆಯಾಗಿದೆ. ಪ್ರಸ್ತುತ ಯುದ್ದೋಪಾದಿಯಲ್ಲಿ ಲಸಿಕೆ ನೀಡುವ ಕಾರ್ಯ ನಡೆಯುತ್ತಿದೆ. ನೀಯತ್ತು ಸರಿಯಾಗಿದ್ದರೆ ಎಲ್ಲವೂ ಸರಿಯಾಗಿರುತ್ತದೆ. ಈವರೆಗೂ ದೇಶದ 23 ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ. ಸ್ಪಷ್ಟತೆ, ಪ್ರಾಮಾಣಿಕತೆ ಇದ್ದರೆ ಎಂತಹ ಗುರಿಯನ್ನಾದರೂ ಸಾಧಿಸಬಹುದು ಎಂಬುದು ನಮ್ಮ ಸರ್ಕಾರದ ಗುರಿಯಾಗಿದೆ ಎಂದರು.
ನಮಗೆ ನಮ್ಮ ವಿಜ್ಞಾನಿಗಳ ಬಗ್ಗೆ ವಿಶ್ವಾಸವಿತ್ತು. ಅದನ್ನು ಅವರು ಸಾಬೀತು ಮಾಡಿದ್ದಾರೆ. ಕಳೆದ ವರ್ಷದ ಎಪ್ರಿಲ್’ನಲ್ಲೇ ವ್ಯಾಕ್ಸಿನ್ ಟಾಸ್ಕ್ ಫೋರ್ಟ್ ರಚನೆ ಮಾಡಿದ್ದೆವು. ವ್ಯಾಕ್ಸಿನ್ ತಯಾರಿಕೆಯ ಪ್ರಕ್ರಿಯೆಯಲ್ಲಿ ಸರ್ಕಾರ ಬಲವಾಗಿ ನಿಂತಿತ್ತು. ಮುಂದಿನ ದಿನಗಳಲ್ಲಿ ವ್ಯಾಕ್ಸಿನ್ ಲಭ್ಯತೆ ಹೆಚ್ಚಲಿದ್ದು, ಇದಕ್ಕಾಗಿ ಕೋಟ್ಯಂತರ ರೂ. ಹಣವನ್ನು ಮೀಸಲಿಡಲಾಗಿದೆ ಎಂದರು.
ಈಗ 7 ಕಂಪೆನಿಗಳು ವ್ಯಾಕ್ಸಿನ್ ತಯಾರಿಕೆಯ ಅಂತಿಮ ಹಂತದಲ್ಲಿದ್ದು, ಮೂಗಿನಲ್ಲಿ ಸ್ಪ್ರೇ ಮಾಡಿಕೊಳ್ಳುವ ವ್ಯಾಕ್ಸಿನ್ ಸಹ ಸಂಶೋಧನೆ ಹಂತದಲ್ಲಿದೆ. ಇಷ್ಟು ಕಡಿಮೆ ಸಮಯದಲ್ಲಿ ವ್ಯಾಕ್ಸಿನ್ ತಯಾರಿಸಿ ಜನರ ಜೀವ ಉಳಿಸುವ ವಿಚಾರದಲ್ಲಿ ವಿಶ್ವದ ಪ್ರಮುಖ ರಾಷ್ಟ್ರಗಳಿಂತಲೂ ನಾವೂ ಮುಂದೆ ಇದ್ದು, ಇದು ನಮ್ಮ ಸಾಧನೆಯಾಗಿದೆ ಎಂದರು.
ಕೊರೋನಾ ಅಪಾಯ ಹೆಚ್ಚಾಗಿದ್ದವರಿಗೆ ಮೊದಲು ವ್ಯಾಕ್ಸಿನ್ ನೀಡಿಕೆಗೆ ಸಲಹೆ ದೊರೆತಿದ್ದು, ಮೊದಲ ಅಲೆಯ ನಂತರ ಕೋವಿಡ್ ವಾರಿಯರ್ಸ್‌ಗಳಿಗೆ ಮೊದಲ ಆದ್ಯತೆ ನೀಡಲಾಯಿತು. ಒಂದು ವೇಳೆ ಅವರಿಗೆಲ್ಲಾ ಮೊದಲು ಲಸಿಕೆ ನೀಡದೇ ಇದ್ದರೆ ಎಂತಹ ಪರಿಸ್ಥಿತಿ ಉಂಟಾಗುತ್ತಿತ್ತು ಎಂಬುದನ್ನು ಕಲ್ಪಿಸಿಕೊಳ್ಳಿ. ಎರಡನೆಯ ಅಲೆಯಲ್ಲಿ ನಮಗೆ ವೈದ್ಯರು, ನರ್ಸ್‌ಗಳು ಸೇರಿದಂತೆ ಹಲವು ವಾರಿಯರ್ಸ್‌ಗಳ ಕೊರತೆ ಉಂಟಾಗುತ್ತಿತ್ತು ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post