ಗೌರಿಬಿದನೂರು: ತಾಲೂಕಿನ ಗುಂಡಾಪುರದ ಹೊರವಲಯದಲ್ಲಿ ಭಾನುವಾರ ಸಂಜೆ ಖಾಸಗಿ ಬಸ್ ಹಾಗೂ ಆಟೋ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಹಿಳೆಯರು ಸ್ಥಳದಲ್ಲೇ ಧಾರುಣವಾಗಿ ಸಾವನ್ನಪ್ಪಿದ್ದು, ಐದಕ್ಕೂ ಹೆಚ್ಚು ಮಂದಿಗೆ ತೀವ್ರವಾಗಿ ಗಾಯಗೊಂಡಿದ್ದಾರೆ.
ಹಬ್ಬದ ಪ್ರಯುಕ್ತ ಭಾನುವಾರವೂ ಕೂಡ ಗಾರ್ಮೆಂಟ್ಸ್’ನಲ್ಲಿ ಕೆಲಸಕ್ಕೆ ತೆರಳಿದ್ದ ಮಹಿಳೆಯರು ಕೆಲಸ ಮುಗಿಸಿಕೊಂಡು ಆಟೋದಲ್ಲಿ ಗೌರಿಬಿದನೂರು ಕಡೆಯಿಂದ ಹೊಸೂರು ಕಡೆಗೆ ಹೋಗುದ್ದರು. ಇದೇ ಸಮಯದಲ್ಲಿ ಕೋಟಾಲದಿನ್ನೆ ಕಡೆಯಿಂದ ನಗರದ ಕಡೆ ಬರುತ್ತಿದ್ದ ಖಾಸಗಿ ಬಸ್ ಏಕಾಏಕಿ ಎದುರಿಗೆ ಬರುತ್ತಿದ್ದ ಆಟೋಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಆಟೋ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಇಬ್ಬರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನುಳಿದ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೃತ ಮಹಿಳೆಯರನ್ನು ಯಶೋಧಮ್ಮ (48) ಹಾಗೂ ಗೌರಮ್ಮ (45) ಎಂದು ಗುರುತಿಸಲಾಗಿದೆ. ಗಾಯಳುಗಳನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿ ಪ್ರಥಮ ಚಿಕಿತ್ಸೆ ನೀಡಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನಿಸಲಾಗಿದೆ.
ರಸ್ತೆ ಸುರಕ್ಷತೆಯನ್ನು ಪಾಲಿಸದೆ ಹಾಗೂ ಮಿತಿಮೀರಿದ ವೇಗದಿಂದ ಈ ಅವಘಡ ಸಂಭವಿಸಿದೆ ಎಂದು ಸ್ಥಳೀಯರು ದೂರಿದ್ದಾರೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
(ವರದಿ: ಬಿ.ಎಂ. ಅಜಯ್, ಗೌರಿಬಿದನೂರು)
Discussion about this post