ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಕೈಬೀಸಿ ಕರೆಯುತ್ತಿರುವ ಫಲಪುಷ್ಪ ಪ್ರದರ್ಶನ. ಎಲ್ಲೆಂದರಲ್ಲಿ ನೋಡಿದರು ಕಣ್ಣಿಗೆ ಕಾಣುತ್ತಿರುವುದು ಸುಂದರವಾದ ಹೂವುಗಳು. ಅಲ್ಲಿ ಹೂವಿನ ಸ್ವರ್ಗವೇ ನಿರ್ಮಾಣವಾಗಿದೆ. ವಿವಿಧ ಪುಷ್ಪಗಳಿಂದ ಅಲಂಕರಿಸಲ್ಪಟ್ಟಿರುವ ಕಲಾಕೃತಿಗಳು, ಹಸಿರಿನ ಸೌಂದರ್ಯದ ಜೊತೆಗೆ ವೈವಿಧ್ಯಮಯ ತೋಟಗಾರಿಕಾ ಉತ್ಪನ್ನಗಳು, ವಿವಿಧ ಬಗೆಯ ಹೂವುಗಳು, ಹಣ್ಣು, ತರಕಾರಿ, ತೋಟದ ಬೆಳೆಗಳು ಸೇರಿದಂತೆ ಹೂವಿನಿಂದ ಮಾಡಿದ ಕಲಾಕೃತಿಗಳ ಪ್ರದರ್ಶನ ನೋಡುಗರನ್ನು ಬೇರೆ ಲೋಕಕ್ಕೆ ಸೆಳೆದಂತೆ ಭಾಸವಾಗುತ್ತಿದೆ.
ಹೌದು ಮಲೆನಾಡು ಪ್ರಕೃತಿ ಸೊಬಗಿನ ಶಿವಮೊಗ್ಗ ನಗರದ ಗಾಂಧಿ ಪಾರ್ಕ್‌ನ ತೋಟಗಾರಿಕೆ ಇಲಾಖೆ ಆವರಣದಲ್ಲಿ ಏರ್ಪಡಿಸಿರುವ ಫಲಪುಷ್ಪ ಪ್ರದರ್ಶನ ಮನಮೋಹಕವಾಗಿದೆ. ಮತ್ತೊಮ್ಮೆ ನೋಡಬೇಕೆಂಬ ಬಯಕೆ ಹೆಚ್ಚಾಗುತ್ತಿದೆ. ಬಣ್ಣ ಬಣ್ಣದ ಹೂವುಗಳಿಂದ ಬಸವಣ್ಣ ಮತ್ತು ನೇಗಿಲು ಹಿಡಿದು ನಿಂತಿರುವ ರೈತ ಹಾಗೂ ಮಿಸ್ಟರ್ ಭೀಮ್, ಔಷಧೀಯ ಸಸ್ಯಗಳು ಸೇರಿದಂತೆ ವಿವಿಧ ಬಗೆಯ ಫಲಪುಷ್ಪಗಳು ನೋಡುಗರ ಕಣ್ಣಿಗೆ ಖುಷಿಯನ್ನು ನೀಡುತ್ತಿತ್ತು. ಒಂದೇ ವೇದಿಕೆಯಲ್ಲಿ ಫಲಪುಷ್ಪ ಪ್ರದರ್ಶನ, ಹೂವಿನಲ್ಲಿ ಅರಳಿದ ನಾನಾ ಕಲಾಕೃತಿಗಳು, ತರಕಾರಿ, ಹಣ್ಣಿನಲ್ಲಿ ಮಾಡಿದ ವಿವಿಧ ಕಲಾಕೃತಿಗಳು ಜನರ ಮನಸೊರೆಗೊಳಿಸಿತ್ತು.
ಈ ಬಾರಿಯ ಹೂವಿನ ಲೋಕದಲ್ಲಿ ಕೇಸರಿ, ಬಿಳಿ, ಕೆಂಪು ಮತ್ತು ಹಳದಿ ಹೂವುಗಳಿಂದ ಡಕ್ ಮತ್ತು ಸೆಲ್ಫಿ ಫ್ರೆಮ್ ವಿನ್ಯಾಸ ಸೇರಿದಂತೆ ನಾನಾ ರೀತಿಯ ಹಣ್ಣುಗಳಿಂದ ವಿವಿಧ ಬಗ್ಗೆಯ ಕಲಾಕೃತಿಗಳ ಕೆತ್ತನೆಗಳು ನೋಡುಗರ ಗಮನ ಸೆಳೆಯುತ್ತಿದೆ.
ಈ ಬಾರಿ ಫಲ ಪುಷ್ಪ ಪ್ರದರ್ಶದಲ್ಲಿ ಹೆಣ್ಣು ಮಗುವಿನ ಪ್ರಾಮುಖ್ಯತೆಯನ್ನು ಸಾರುವ ಭೇಟಿ ಪಡಾವೋ-ಭೇಟಿ ಬಜಾವೋ ಹಾಗೂ ಮಹಿಳೆಯ ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಸಂದೇಶವನ್ನು ಸಾರುವ ಪ್ರಯತ್ನವನ್ನು ಮಾಡಲಾಗಿದೆ. ಅಮ್ಯೂಸ್’ಮೆಂಟ್ ಪಾರ್ಕ್ ಕೂಡ ಪ್ರದರ್ಶದಲ್ಲಿ ಹೆಚ್ಚು ಮಕ್ಕಳನ್ನು ಸೆಳೆಯುವ ಪ್ರಯತ್ನ ಮಾಡಿದೆ.
ಜನರನ್ನು ಸೆಳೆಯುವಲ್ಲಿ ಯಶಸ್ವಿ
ಫಲ ಪುಷ್ಪ ಪ್ರದರ್ಶನ ನಗರವಾಸಿಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ ಎಂದರೆ ತಪ್ಪಾಗಲಾರದು. ಪ್ರದರ್ಶನದ ಮೊದಲ ದಿನವೇ ಫಲಪುಷ್ಪ ಮೇಳವನ್ನು ವೀಕ್ಷಿಸಲು ಬೆಳಗ್ಗೆಯಿಂದಲೇ ಜನರು ದಂಡೇ ಆಗಮಿಸಿತ್ತು. ಮಕ್ಕಳು, ಮಹಿಳೆಯರು, ವಿವಿಧ ಕಾಲೇಜು ವಿದ್ಯಾರ್ಥಿಗಳು ಸೇರಿ ಮೇಳಕ್ಕೆ ಆಗಮಿಸಿದ್ದ ಸಾವಿರಾರು ಜನರು ಆಕರ್ಷಕವಾಗಿ ಸಿಂಗರಿಸಿದ್ದ ಫಲ ಪುಷ್ಪಗಳನ್ನು ವೀಕ್ಷಿಸಿ ಕಣ್ತುಂಬಿಕೊಂಡರು.
ಪ್ರದರ್ಶನದಲ್ಲಿ ಹಾಪ್’ಕಾಮ್ಸ್ ವತಿಯಿಂದ ಹಣ್ಣುಗಳ ಮೇಳವನ್ನು ಆಯೋಜಿಸಲಾಗಿತ್ತು. ಕಲ್ಲಂಗಡಿ, ಹಲಸು, ದಾಳಿಂಬೆ ಮತ್ತು ಕಿವಿ ಹಣ್ಣು ಹಾಗೂ ಮೊಟ್ಟೆ ಹಣ್ಣು ಸೇರಿದಂತೆ ವಿವಿಧ ತಳಿಯ ಹಣ್ಣುಗಳು ಮೇಳದಲ್ಲಿ ಜನರ ತಮ್ಮ ಕಡೆ ನೋಡುವಂತೆ ಮನವೊಲಿಸುತ್ತಿದ್ದವು ಹಾಗೂ ಪ್ರದರ್ಶನದಲ್ಲಿ ಫ್ರೂಟ್ ಸಲಾಡ್ ಮತ್ತು ಜ್ಯೂಸ್‌ಗಳನ್ನು ಸೇವಿಸಿ ಜನರು ಸಂತೋಷಪಟ್ಟರು.
ಆಕರ್ಷಿಕ ಕಲಾಕೃತಿಗಳು
ಕಲಾವಿದನ ಕೈಚಳಕದಲ್ಲಿ ತರಕಾರಿ ಕೆತ್ತನೆಯಲ್ಲಿ ಮೂಡಿ ಬಂದಿರುವ ನಾನಾ ಆಕೃತಿಗಳು ಜನರ ಗಮನ ಸೆಳೆಯುತ್ತಿವೆ. ನವಿಲು, ಕುವೆಂಪು, ಸ್ವಾಮಿ ವಿವೇಕಾನಂದರು, ಕಲ್ಪನಾ ಚಾವ್ಲಾ ಹೀಗೆ ನಾನಾ ಆಕೃತಿಗಳು ನೋಡುಗರನ್ನು ಒಂದು ಕ್ಷಣ ಹಿಡಿದು ನಿಲ್ಲಿಸುತ್ತವೆ.
ಈ ಬಾರಿ ಫಲ ಪುಷ್ಪ ಪ್ರದರ್ಶದಲ್ಲಿ ಬಸವಣ್ಣ, ಕಾಳಿಂಗ ಸರ್ಪದ ಮೇಲೆ ಕೃಷ್ಣನ ಮೂರ್ತಿ, ಮಿಸ್ಟರ್ ಬೀನ್, ನೆಗಿಲು ಹಿಡಿದು ನಿಂತಿರುವ ರೈತ ಸೇರಿದಂತೆ ಅನೇಕ ತಳಿಯ ಅಣಬೆಗಳು, ವಿವಿಧ ಜಾತಿ ಹಣ್ಣುಗಳು, ಬೋನ್ಸಾಯ್ ಗಿಡಗಳನ್ನು ಪ್ರದರ್ಶನದಲ್ಲಿ ಕಾಣಬಹುದಾಗಿದೆ. ಆಕರ್ಷಕವಾದ ಬಣ್ಣ ಬಣ್ಣದ ಹೂವಿನ ಗಿಡಗಳನ್ನು ಸಾಲು ಸಾಲುಗಿ ಪ್ರದರ್ಶನದಲ್ಲಿ ಜೋಡಿಸಿರುವುದರಿಂದ ಹೆಚ್ಚು ಆಕರ್ಷಣೆಯಾಗಿ ಜನರ ಗಮನ ಸೆಳೆಯುತ್ತಿತು.
ಸೆಲ್ಫಿ ಕ್ರೇಜ್
ಮಕ್ಕಳು, ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಸಸ್ಯಕಾಶಿಯ ಸೌಂದರ್ಯಕ್ಕೆ ಮನ ಸೋತು ಸೆಲ್ಫಿ ತೆಗೆದುಕೊಂಡರು. ಹೂವಿನ ಲೋಕವನ್ನು ತಮ್ಮ ಮೊಬೈಲ್‌ಗಳಲ್ಲಿ ಸೆರೆ ಹಿಡಿದು ಆನಂದಿಸಿದರೆ, ಹಲವು ಪುಷ್ಪ ಕಲಾಕೃತಿಗಳು ಮುಂದೆ ನಿಂತು ಸೆಲ್ಫಿ ತೆಗೆದುಕೊಂಡು ಖುಷಿಪಟ್ಟರು. ಫಲ ಪುಷ್ಪ ಪ್ರದರ್ಶನ ನೋಡುಗರನ್ನು ತನ್ನತ್ತ ಸೆಳೆಯುತ್ತಿತ್ತು.
ವಿವಿಧ ಮಳಿಗೆಗಳು
ತೋಟಗಾರಿಕೆ ಬೆಳೆಗಳ ಪ್ರದರ್ಶನಕ್ಕೆ ವಿವಿಧೆಡೆಯಿಂದ ಪ್ರಗತಿಪರ ರೈತರು ಹಾಗೂ ಸಣ್ಣ, ಅತಿ ಸಣ್ಣ ರೈತರು ತಮ್ಮ ಜಮೀನುಗಳಲ್ಲಿ ಬೆಳೆದ ತೆಂಗು, ಅಡಿಕೆ, ಬಾಳೆ ಸೇರಿದಂತೆ ಇತರೆ ತೋಟಗಾರಿಕಾ ಬೆಳೆ, ತರಕಾರಿ, ಧಾನ್ಯಗಳನ್ನು ಪ್ರದರ್ಶಿಸಿದರು.
ಒಟ್ಟಾರೆಯಾಗಿ ತೋಟಗಾರಿಕೆ ಇಲಾಖೆಯು ಹೊಸ ಹೊಸ ಪ್ರಯತ್ನಗಳೊಂದಿಗೆ ಸಾರ್ವಜನಿಕರ ಮನಸ್ಸಿನಲ್ಲಿ ಜಾಗ ಪಡೆಯುವ ನೂತನ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದೆ ಎಂದರೆ ತಪ್ಪಾಗಲಾರದು.
Get in Touch With Us info@kalpa.news Whatsapp: 9481252093
Discussion about this post