ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರೋಗಿಗಳ ಅನುಭವ ಕಥನಗಳನ್ನು ಬರೆಸುವುದು, ವೈದ್ಯರು #Doctor ತಮ್ಮ ವೃತ್ತಿ ಅನುಭವಗಳನ್ನು ಕಥೆ, ಕವನ ಹಾಗೂ ಕಾದಂಬರಿಗಳ ಮೂಲಕ ವೈದ್ಯ ಸಾಹಿತ್ಯವನ್ನು ಜನಸಾಮಾನ್ಯರಿಗೆ ತಲುಪಿಸಬೇಕು ಎಂದು 4ನೆಯ ಕನ್ನಡ ವೈದ್ಯ ಬರಹಗಾರರ ರಾಜ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ.ಕೆ.ಆರ್. ಶ್ರೀಧರ್ ಕರೆ ನೀಡಿದರು.
ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಐಎಂಎ ಕರ್ನಾಟಕ ಶಾಖೆ, #IMA ಕನ್ನಡ ವೈದ್ಯ ಬರಹಗಾರರ ಸಮಿತಿ, ಶಿವಮೊಗ್ಗ #Shivamogga ಭಾರತೀಯ ವೈದ್ಯಕೀಯ ಸಂಘದ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿರುವ 4ನೆಯ ಕನ್ನಡ ವೈದ್ಯ ಬರಹಗಾರರ ರಾಜ್ಯ ಸಮ್ಮೇಳನದ ಡಾ.ಕೆ.ಎ. ಅಶೋಕ್ ಪೈ ವೇದಿಕೆಯಲ್ಲಿ ಅವರು ಮಾತನಾಡಿದರು.

ವೈದ್ಯಕೀಯ ವಿದ್ಯಾರ್ಥಿಗಳಿಗೆ ರೋಗಿಗಳೊಂದಿಗಿನ ಅವರ ಅನುಭವಗಳನ್ನು ಬರೆಯಲು ಪ್ರೋತ್ಸಾಹಿಸಬೇಕು. ಇದರಿಂದ ಅವರು ಭವಿಷ್ಯದಲ್ಲಿ ವೈದ್ಯ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಳ್ಳಲು ಅನುಕೂಲವಾಗುತ್ತದೆ. ಅದಕ್ಕಾಗಿ ವೈದ್ಯಕೀಯ ಕಾಲೇಜುಗಳಲ್ಲಿ ವೈದ್ಯ ಸಾಹಿತ್ಯದ ಶಿಬಿರಗಳನ್ನು ವರ್ಷಕ್ಕೊಂದು ಅಥವಾ ಎರಡು ಬಾರಿ ಹಮ್ಮಿಕೊಳ್ಳಬೇಕು ಎಂದರು.

ಪ್ರಖ್ಯಾತ ಚಿಂತಕ ಡಾ.ರಾಜೇಂದ್ರ ಚೆನ್ನಿ ಮಾತನಾಡಿ, ಇಂಗ್ಲೀಷ್ ಭಾಷೆಗೆ ಮಾತ್ರ ಸೀಮಿತ ಎಂಬಂತಾಗಿರುವ ವೈದ್ಯ ಸಾಹಿತ್ಯವನ್ನು ಕನ್ನಡದ ಮೂಲಕ ಜಗದಗಲ ಪಸರಿಸುವ ಕಾರ್ಯವನ್ನು ವೈದ್ಯ ಸಾಹಿತಿಗಳು ಮಾಡಬೇಕು ಎಂದರು.
ವೈದ್ಯ ಸಾಹಿತ್ಯ ಅಕ್ಷರ ಬಲ್ಲಂತಹ ಎಲ್ಲರಿಗೂ ತಲುಪಬೇಕು. ಕನ್ನಡ ವೈದ್ಯಕೀಯ ಸಾಹಿತ್ಯ, ಬರಹಗಾರರು ನಿರಂತರವಾಗಿ ಕನ್ನಡ ಭಾಷೆಯ ಮೂಲಕ ಜ್ಞಾನ ಭಂಡಾರವನ್ನು ವೃದ್ದಿಸಬೇಕು. ಬರಹ ಎನ್ನುವುದು ಕೇವಲ ಹವ್ಯಾಸವಲ್ಲ. ಅದೊಂದು ಅಭಿವ್ಯಕ್ತಿಯಾಗಿ ಸಾಹಿತ್ಯದ ಮೂಲಕ ಹೊರಹೊಮ್ಮುವ ಒಂದು ದೊಡ್ಡ ಶಕ್ತಿಯಾಗಿದೆ ಎಂದರು.

ಜನ ಸಾಮಾನ್ಯರಲ್ಲಿ ಆರೋಗ್ಯದ ಬಗ್ಗೆ ಇರುವ ಅನಾರೋಗ್ಯಕರ ಭ್ರಮೆಗಳನ್ನು ವೈದ್ಯರುಗಳೇ ದೂರ ಮಾಡಬೇಕಿದೆ. ವೈದ್ಯ ಬರಹಗಾರರು ತಮ್ಮ ಈ ಸಾಹಿತ್ಯದ ಮೂಲಕ ಆರೋಗ್ಯ ಸಂಬಂಧಿತ ಸಾಹಿತ್ಯವನ್ನು ಸರಳವಾಗಿ ಜನರಿಗೆ ತಿಳಿಸಬೇಕು ಎಂದರು.
ಇನ್ನು, ವೈದ್ಯ ವೃತ್ತಿಯಲ್ಲಿ ನೈತಿಕತೆಯೊಂದಿಗೆ ಮಾನವೀಯ ನೆಲೆಯ ಆಧಾರದಲ್ಲಿ ನೋಡಿ ತುರ್ತು ಸಂದರ್ಭಗಳಲ್ಲಿ ನಿರ್ಧಾರ ಕೈಗೊಳ್ಳಬೇಕು. ವೃತ್ತಿ ನೈತಿಕತೆ ಎಷ್ಟು ಮುಖ್ಯವೋ, ಮಾನವೀಯತೆಯೂ ಸಹ ಅಷ್ಟೇ ಮುಖ್ಯ ಎಂದರು.

ವೈದ್ಯ ಸಾಹಿತ್ಯ ಎನ್ನುವುದು ವಿಶಾಲವಾದ ಅವಕಾಶವಾಗಿದೆ. ಇದರಲ್ಲಿ ಕನ್ನಡ ವೈದ್ಯ ಸಾಹಿತ್ಯ ಹೆಚ್ಚು ಹೆಚ್ಚು ಹೊರಬರಬೇಕಿದೆ. ಇದಕ್ಕಾಗಿ ಅಧ್ಯಯನಗಳು ಹೆಚ್ಚಾಗಬೇಕು. ಮಾತ್ರವಲ್ಲ ಇಂತಹ ಸಮ್ಮೇಳನಗಳು ಹೆಚ್ಚು ಹೆಚ್ಚು ನಡೆಯುವ ಮೂಲಕ ಇದರ ಅವಕಾಶಗಳು ಮತ್ತಷ್ಟು ಸೃಷ್ಠಿಯಾಗಬೇಕು ಎಂದರು.
ಹಿರಿಯ ಮನೋವೈದ್ಯ, ವೈದ್ಯ ಸಾಹಿತಿ ಡಾ.ಸಿ.ಆರ್. ಚಂದ್ರಶೇಖರ್ ಅವರು ಮಾತನಾಡಿ, ಡಾ.ಡಿ.ಎಸ್. ಶಿವಪ್ಪ ಅವರು 60 ಸಾವಿರ ಪದಗಳನ್ನು ಕನ್ನಡ ವೈದ್ಯ ಸಾಹಿತ್ಯಕ್ಕೆ ಸೃಷ್ಠಿ ಮಾಡಿದ್ದಾರೆ. ಹಂಪಿ ವಿಶ್ವವಿದ್ಯಾಲಯ ಹಾಗೂ ರಾಜೀವ್ ಗಾಂಧಿ ವಿಶ್ವವಿದ್ಯಾಲಯ ಜೊತೆಗೂಡಿ ವೈದ್ಯ ಸಾಹಿತ್ಯಕ್ಕಾಗಿ ಕಾರ್ಯಗಳು ನಡೆಯುತ್ತಿದ್ದು, ಇದು ನಿರಂತರವಾಗಿ ನಡೆಯಬೇಕು ಎಂದರು.

ಅದ್ದೂರಿ ಮೆರವಣಿಗೆ
ಸಮ್ಮೇಳನ ಉದ್ಘಾಟನೆಗೂ ಮುನ್ನ ಸರ್ವಾಧ್ಯಕ್ಷ ಡಾ.ಕೆ.ಆರ್. ಶ್ರೀಧರ್ ಹಾಗೂ ಉದ್ಘಾಟನಾಧ್ಯಕ್ಷ ಡಾ.ರಾಜೇಂದ್ರ ಚೆನ್ನಿ ಅವರುಗಳನ್ನು ಕಾಲೇಜಿನ ಆಡಳಿತ ಕಚೇರಿಯಿಂದ ಡಾ.ಅಶೋಕ್ ಪೈ ವೇದಿಕೆವರೆಗೂ ಅದ್ದೂರಿ ಮೆರಣಿಗೆಯ ಮೂಲಕ ಕರೆತರಲಾಯಿತು.

ಕಾರ್ಯಕ್ರಮದಲ್ಲಿ ಭಾರತೀಯ ವೈದ್ಯಕೀಯ ಸಂಘದ ರಾಜ್ಯಾಧ್ಯಕ್ಷರಾದ ಡಾ.ಎಸ್.ಬಿ. ಲಕ್ಕೋಳ, ಸುಬ್ಬಯ್ಯ ವೈದ್ಯಕೀಯ ಕಾಲೇಜಿನ ವೈದ್ಯಕೀಯ ನಿರ್ದೇಶಕ ಡಾ.ಎಸ್. ನಾಗೇಂದ್ರ, ಕನ್ನಡ ವೈದ್ಯ ಬರಹಗಾರರ ಸಮಿತಿ ಅಧ್ಯಕ್ಷ ಡಾ.ಶಿವಾನಂದ ಕುಬಸದ್, ಕಾರ್ಯಾಧ್ಯಕ್ಷ ಡಾ.ಬಿ.ಪಿ. ಕರುಣಾಕರ್, ಕಾರ್ಯದರ್ಶಿ ಡಾ.ಕೆ.ಎನ್. ಗುರುದತ್, ಐಎಂಎ ಶಿವಮೊಗ್ಗ ಅಧ್ಯಕ್ಷ ಡಾ.ಎಂ.ಎಸ್. ಅರುಣ್, ಕಾರ್ಯದರ್ಶಿ ಡಾ.ರಕ್ಷಾ ರಾವ್, ಸಂಘಟನಾ ಕಾರ್ಯದರ್ಶಿಗಳಾದ ಡಾ.ವಿನಯ ಶ್ರೀನಿವಾಸ್ ಹಾಗೂ ಡಾ.ಕೆ.ಎಸ್. ಶುಭ್ರತಾ ಸೇರಿದಂತೆ ಹಲವರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post