ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಭದ್ರಾ ಜಲಾಶಯದ ವ್ಯಾಪ್ತಿಯಲ್ಲಿ ನಿರಂತರವಾಗಿ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಜಲಾಶಯಕ್ಕೆ ನೀರಿನ ಒಳಹರಿವು ಹೆಚ್ಚಾಗಿದ್ದು, ಜಲಾಶಯದ ಸುರಕ್ಷತೆ ದೃಷ್ಟಿಯಿಂದ ಪ್ರತಿದಿನ 1600ಕ್ಯೂಸೆಕ್ಸ್ ನೀರನ್ನು ಹರಿಯಬಿಡಲಾಗುತ್ತಿದೆ ಎಂದು ಭದ್ರಾ ಜಲಾಶಯದ ಸೂಪರಿಂಟೆಂಡೆಂಟ್ ಇಂಜಿನಿಯರ್ ಚಂದ್ರಹಾಸ ಹೇಳಿದರು.
ಅವರು ಇಂದು ಜಲಾಶಯದ ನಾಲ್ಕು ಗೇಟುಗಳ ಮುಖಾಂತರ ನೀರನ್ನು ಹರಿಯಬಿಟ್ಟ ನಂತರ ಮಾಧ್ಯಮದ ಪ್ರತಿನಿಧಿಗಳಿಗೆ ವಿವರ ನೀಡಿ ಮಾತನಾಡುತ್ತಿದ್ದರು.
ಪ್ರಸ್ತುತ ಸಂದರ್ಭದಲ್ಲಿ ಹಲವು ದಶಕಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಳೆಗಾಲದ ಆರಂಭದಲ್ಲಿಯೇ ಜಲಾಶಯ ಭರ್ತಿಯಾಗುವ ಹಂತ ತಲುಪಿದೆ. ಜಲಾಶಯ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಲು ಇನ್ನೂ ಒಂದೂವರೆ ಅಡಿ ಬಾಕಿ ಇದೆ. ನೀರಿನ ಒಳಹರಿವು ಹೀಗೆಯೆ ಮುಂದುವರೆದಲ್ಲಿ ಶೀಘ್ರದಲ್ಲಿ ಜಲಾಶಯ ಭರ್ತಿಯಾಗಲಿದೆ ಎಂದ ಅವರು ಒಳಹರಿವಿನ ಪ್ರಮಾಣವನ್ನು ನೋಡಿಕೊಂಡು ನೀರನ್ನು ಹೊರಬಿಡಲಾಗುವುದು ಎಂದರು.
ಜಲಾಶಯದ ತುಂಬುವ ಹಂತದಲ್ಲಿದ್ದು, ಯಾವುದೇ ಕ್ಷಣದಲ್ಲಿ ನೀರನ್ನು ಹೊಡಬಿಡುವ ಸಾಧ್ಯತೆ ಇದ್ದ ಹಿನ್ನೆಲೆಯಲ್ಲಿ ನದಿಪಾತ್ರದ ಜನರು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಗೊಳ್ಳುವಂತೆ ನದಿ ಪಾತ್ರ ಜನರಿಗೆ ಹಾಗೂ ಜಾನುವಾರುಗಳನ್ನು ಮೇಯಿಸದಂತೆ ಈಗಾಗಲೇ ಸೂಚಿಸಲಾಗಿದೆ ಎಂದರು.
ಪ್ರಸ್ತುತ 15206ಕ್ಯೂಸೆಕ್ಸ್ ಒಳಹರಿವು ಇದ್ದು, ಭದ್ರಾ ಬಲದಂಡೆ ಮತ್ತು ಬಲದಂಡೆ, ವಿದ್ಯುತ್ ಉತ್ಪಾದನಾ ಘಟಕ ಮುಂತಾದ ನಾಲೆಗಳು ಸೇರಿದಂತೆ ಒಟ್ಟು 3911ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ. ಒಳಹರಿವು ಹೆಚ್ಚಳವಾದಂತೆ ಹೊರಬಿಡುವ ನೀರನ್ನು ಹೆಚ್ಚಿಸಲು ಉದ್ದೇಶಿಸಲಾಗಿದೆ ಎಂದರು.
ಈ ನೀರು ತುಂಗಭದ್ರಾ ನದಿ ಹಾಗೂ ಏತನೀರಾವರಿ ಯೋಜನೆಗಳು, ನೆರೆಯ ಜಿಲ್ಲೆಗಳ ಕೆರೆ ಕಟ್ಟೆ ಕಾಲುವೆಗಳನ್ನು ಭರ್ತಿ ಮಾಡಲು ಅನುಕೂಲವಾಗಲಿದೆ ಅಲ್ಲದೇ ಅಚ್ಚುಕಟ್ಟು ಪ್ರದೇಶದ ರೈತರ ಬೆಳೆಗೆ ಸಹಕಾರಿಯಾಗಲಿದೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಪವಿತ್ರಾ ರಾಮಯ್ಯ ಮಾತನಾಡಿ, ಈ ಅವಧಿಯಲ್ಲಿ ಪ್ರತಿ ವರ್ಷಕ್ಕಿಂತ ಹೆಚ್ಚಿನ ನೀರು ತುಂಬಿರುವುದು ರೈತರಲ್ಲಿ ಹರ್ಷ ಮೂಡಿಸಿದೆ. ಇದರಿಂದಾಗಿ ರೈತರ ಕೃಷಿ ಚಟುವಟಿಕೆಗಳಿಗೆ ಹಾಗೂ ಅಚ್ಚುಕಟ್ಟು ಪ್ರದೇಶದ ಕೊನೆಯ ರೈತರ ಹೊಲಗಳಿಗೆ ನೀರು ಹರಿಯುವ ವಿಶ್ವಾಸ ತಮಗಿರುವುದಾಗಿ ತಿಳಿಸಿದರು.
ಜಲಾಶಯದ ಪಾತ್ರದಲ್ಲಿ ಆಗಿರುವ ಕಾಮಗಾರಿ ಕಳಪೆಯಾಗಿರುವ ಬಗ್ಗೆ ಮಾಹಿತಿ ಇರುವ ಬಗ್ಗೆ ತಜ್ಞರಿಂದ ಮಾಹಿತಿ ಪಡೆದುಕೊಂಡಿದ್ದು, ಇದರಿಂದಾಗಿ ರೈತರಿಗೆ ಯಾವುದೇ ಹಾನಿಯಾಗುವುದಿಲ್ಲ. ಇದರಿಂದಾಗಿ ರೈತರು ಆತಂಕಪಡುವ ಅಗತ್ಯವಿಲ್ಲ ಎಂದ ಅವರು, ಈ ಸಂಬಂಧ ಮೂವರು ತಜ್ಞರ ಸಮಿತಿಯೊಂದನ್ನು ರಚಿಸಿದ್ದು, ಶೀಘ್ರದಲ್ಲಿ ವರದಿ ದೊರೆಯಲಿದೆ. ನಂತರ ಕ್ರಮ ಕೈಗೊಳ್ಳಬೇಕಾದ ವಿಷಯಗಳ ಬಗ್ಗೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗುವುದು ಎಂದರು.
ನಿರೀಕ್ಷೆಯಂತೆ ಜಲಾಶಯ ತುಂಬಿರುವುದರಿಂದ ಅಚ್ಚುಕಟ್ಟು ಪ್ರದೇಶದ ರೈತರು ತಮ್ಮ ಅಪೇಕ್ಷೆಯ ಬೆಳೆ ಬೆಳೆಯಲು ಆಕ್ಷೇಪಣೆ ಇಲ್ಲ. ಈ ಬಗ್ಗೆ ಯಾವುದೇ ನಿರ್ಬಂಧ ವಿಧಿಸುವುದನ್ನು ನಾವು ವಿರೋಧಿಸುವುದಾಗಿ ಅವರು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಸದಸ್ಯರು, ಇಂಜಿನಿಯರರು, ಸ್ಥಳೀಯರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post