ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಶೇಕ್ ಹಸೀನಾ ಬಾಂಗ್ಲಾದೇಶದ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ದೇಶ ತೊರೆದು, ಅಲ್ಲಿನ ಸೇನೆ ಅಧಿಕಾರವನ್ನು ತನ್ನ ತೆಕ್ಕೆಗೆ ತೆಗೆದುಕೊಂಡ ಬೆನ್ನಲ್ಲೇ ಭಾರತ-ಬಾಂಗ್ಲಾ ಗಡಿಯಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.
ಸೇನಾ ಧಂಗೆಯ ನಡುವೆಯೇ ಮಾಜಿ ಪ್ರಧಾನಿ ಶೇಖ್ ಹಸೀನಾ ದೇಶದಿಂದ ನಿರ್ಗಮಿಸಿದ ನಂತರ ಸೋಮವಾರ ಬಾಂಗ್ಲಾದೇಶದ ಪಕ್ಕದಲ್ಲಿರುವ ಭಾರತದ ಗಡಿಯ 2039 ಕಿಮೀ ವ್ಯಾಪ್ತಿಯಲ್ಲಿ ಅತಿ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ.
ಬಿಎಸ್’ಎಫ್ ಮಹತ್ವದ ಸಭೆ
ಬಿಎಸ್’ಎಫ್ ಡಿಜಿ ದಲ್ಜಿತ್ ಸಿಂಗ್ ಚೌಧರಿ ಅವರು ಪೂರ್ವ ಕಮಾಂಡ್ ಹೆಚ್ಚುವರಿ ಮಹಾನಿರ್ದೇಶಕ ರವಿ ಗಾಂಧಿ, ಪೂರ್ವ ಕಮಾಂಡ್ ಹೆಚ್ಚುವರಿ ಮಹಾನಿರ್ದೇಶಕ ಮತ್ತು ದಕ್ಷಿಣ ಬಂಗಾಳದ ಇನ್ಸ್’ಪೆಕ್ಟರ್ ಜನರಲ್ ಮಣಿಂದರ್ ಪ್ರತಾಪ್ ಸಿಂಗ್ ಅವರೊಂದಿಗೆ ಉತ್ತರ 24 ಪರಗಣ ಜಿಲ್ಲೆ ಮತ್ತು ಪಶ್ಚಿಮ ಬಂಗಾಳದ ಸುಂದರ್ಬನ್ಸ್ ಪ್ರದೇಶಕ್ಕೆ ಭೇಟಿ ನೀಡಿದರು.
ಗಡಿಯಾದ್ಯಂತ ಎಂತಹ ಪರಿಸ್ಥಿತಿಯನ್ನು ಎದುರಿಸಲು ಸಿದ್ದತೆ ಹಾಗೂ ಕಾರ್ಯತಂತ್ರದ ಕುರಿತಾಗಿ ಪರಿಶೀಲಿಸಿ, ಚರ್ಚೆ ನಡೆಸಲಾಗಿದೆ.
ಗಡಿಯಲ್ಲಿ ಯುದ್ದ ವಿಮಾನ ಹಾರಾಟ
ಇದೇ ವೇಳೆ, ಬಾಂಗ್ಲಾದೇಶದ ಇ-130 ವಿಮಾನವು ಭಾರತೀಯ ವಾಯುಪ್ರದೇಶವನ್ನು ಪ್ರವೇಶಿಸಿದೆ. ತತಕ್ಷಣವೇ ಭಾರತೀಯ ವಾಯುಪಡೆಯ ಯುದ್ಧ ವಿಮಾನಗಳು ವಾಯುಗಾಮಿಯಾಗಿವೆ ಮತ್ತು ಸ್ವಲ್ಪ ಸಮಯದವರೆಗೆ ಅದರ ಮೇಲೆ ಕಣ್ಣಿಟ್ಟವು.
ಭಾರತೀಯ ವಾಯುಪಡೆ ಮತ್ತು ಭಾರತೀಯ ಸೇನೆಯು ಯಾವುದೇ ಅನಿಶ್ಚಿತತೆಯನ್ನು ಎದುರಿಸಲು ಸಿದ್ಧವಾಗಿದೆ ಎಂದು ವರದಿಯಾಗಿದೆ.
ಏರ್ ಇಂಡಿಯಾ ಹಾರಾಟ ರದ್ದು
ಬಾಂಗ್ಲಾದೇಶದ ಪ್ರಕ್ಷುಬ್ದ ಪರಿಸ್ಥಿತಿ ಹಿನ್ನೆಲೆಯಲ್ಲಿ ಭಾರತದಿಂದ ಢಾಕಾಗೆ ಏರ್ ಇಂಡಿಯಾ ತನ್ನ ವಿಮಾನ ಹಾರಾಟವನ್ನು ರದ್ದುಗೊಳಿಸಿದೆ.
ಈ ಕುರಿತಂತೆ ಏರ್ ಇಂಡಿಯಾ ಅಧಿಕೃತ ಟ್ವೀಟರ್’ನಲ್ಲಿ ಮಾಹಿತಿ ಪ್ರಕಟಿಸಿದ್ದು, ಬಾಂಗ್ಲಾದೇಶದ ಸದ್ಯದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ನಾವು ಢಾಕಾಕ್ಕೆ ಮತ್ತು ಅಲ್ಲಿಂದ ಹೊರಡುವ ನಮ್ಮ ವಿಮಾನಗಳ ನಿಗದಿತ ಕಾರ್ಯಾಚರಣೆಯನ್ನು ತಕ್ಷಣವೇ ರದ್ದುಗೊಳಿಸಿದ್ದೇವೆ ಎಂದಿದೆ.
ನಮ್ಮ ಅತಿಥಿಗಳು ಹಾಗೂ ಸಿಬ್ಬಂದಿಗಳ ಸುರಕ್ಷತೆ ನಮಗೆ ಮುಖ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ವಿಮಾನ ಹಾರಾಟವನ್ನು ರದ್ದುಗೊಳಿಸಿದ್ದೇವೆ ಎಂದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post