1989
ಅಂದು ಆ ರೈಟರ್ ಮಂಜುನಾಥ್ ಸಿಂಗ್ ಒಂದು ಜೆರಾಕ್ಸ್ ಕಾಪಿ ತೆಗೆದು, ಯಾವುದಕ್ಕೂ ಇರಲಿ ಇಟ್ಕೊಂಬಿಡಿ ಸಾರ್ ಎನ್ನದೇ ಹೋಗಿದ್ದರ…? ನಾನೀಗ ಈ ಅಂಕಣ ಬರೆಯುವ ಸ್ಥಿತಿಯಲ್ಲಿ ಇರುತ್ತಿರಲಿಲ್ಲ. ಯಾವತ್ತೋ ನನ್ನ ಕೆಲಸ ಹೋಗುತ್ತಿತ್ತು. ಆದಾಗಲೇ ನನಗೆ ಬಂದಿದ್ದ ಎರಡು ರಾಷ್ಟ್ರಪತಿ ವಾಪಸ್ ಪಡೆಯುತ್ತಿದ್ದರು. ನನ್ನ ಆಸ್ತಿ-ಪಾಸ್ತಿಯೆಲ್ಲ ಜಪ್ತಯಾಗಿ ಕೇರಾಫ್ ಫುಟ್ ಪಾತ್ ಆಗುತ್ತಿದ್ದೆ. ವಂಚನೆಯ ಆರೋಪ ಹೊತ್ತು ಜೈಲು ಸೇರುತ್ತಿದ್ದೆ. ನನ್ನ ಹೆಸರಿನ ಮುಂದೆ ಇದ್ದ ‘ಟೈಗರ್’ ಬಿರುದಿನ ಬದಲು ‘ಚೀಟರ್’ ಎಂದಿರುತ್ತಿತ್ತೇನೋ!
ಟಿವಿ ಕಂಪನಿಗೆ ಕೋಟ್ಯಂತರ ರೂ. ವಂಚಿಸಿದ ಮ್ಯಾನೇಜರ್ ಅಕ್ರಮ್‌ನನ್ನು ಕಸ್ಟಡಿಗೆ ತೆಗೆದುಕೊಂಡು, ಆತನ ಆಸ್ತಿಪಾಸ್ತಿ ವಶಪಡಿಸಿಕೊಳ್ಳುವ ಕಾರ್ಯದಲ್ಲಿ ತೊಡಗಿದ್ದೆ. ಪ್ರತಿ ರಾತ್ರಿ 8 ಗಂಟೆ ಸುಮಾರಿಗೆ ಕಮಿಷನರ್‌ರನ್ನು ಭೇಟಿಯಾಗಿ ಅಂದು ವಶಪಡಿಸಿಕೊಂಡ ವಸ್ತುಗಳನ್ನು ತೋರಿಸಬೇಕಿತ್ತು. ಚಿನ್ನಾಭರಣಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಕೊಂಡು ಅವರ ಟೇಬಲ್ ಮೇಲಿಡುತ್ತಿದ್ದೆ. ಇದನ್ನು ಕಂಡು ಕಮಿಷನರ್ ಆರ್. ರಾಮಲಿಂಗಂ ‘ಏನಯ್ಯಾ.. ಲಕ್ಷಾಂತರ ರೂ. ಬೆಲೆ ಬಾಳುವ ಒಡವೆಗಳನ್ನು ತರಕಾರಿ ತರೋ ಹಾಗೆ ತರ‌್ತಾ ಇದ್ದೀಯಲ್ಲಯ್ಯ?, ಎಂದು ತಮಾಷೆ ಮಾಡುತ್ತಿದ್ದರು. ರಾಷ್ಟ್ರೀಕೃತ ಬ್ಯಾಂಕ್‌ಗಳ ಲಾಕರ್‌ಗಳಲ್ಲಿ ಅಕ್ರಮ್, ಕೆಜಿಗಟ್ಟಲೆ ಚಿನ್ನಾಭರಣಗಳನ್ನು ಬಿಳಿ ಬಟ್ಟೆಯಲ್ಲಿ ಸುತ್ತಿಟ್ಟಿದ್ದ. ಅಷ್ಟೇ ಅಲ್ಲ. ಬೆಂಗಳೂರಿನ ಆಯಕಟ್ಟಿನ ಭಾಗಗಳಲ್ಲಿ ವಾಣಿಜ್ಯ ಮಳಿಗೆಗಳನ್ನು ಖರೀದಿಸಿ ಪತ್ನಿ ಮತ್ತು ತಂದೆಯ ಹೆಸರಿನಲ್ಲಿ ನೋಂದಣಿ ಮಾಡಿಸಿದ್ದ. ಹೀಗೆ ಆತನಿಂದ ಸುಮಾರು 30 ಲಕ್ಷರೂ. ಮೌಲ್ಯದ ಚಿನ್ನಾಭರಣ 40 ಲಕ್ಷರೂ. ನಗದು ಮತ್ತು ಸುಮಾರು 1.30 ಕೋಟಿ ರೂ. ಮೌಲ್ಯದ ಆಸ್ತಿ-ಪಾಸ್ತಿಗಳನ್ನು ಸೀಜ್ ಮಾಡಿದೆ.
ಮೇಲ್ನೋಟಕ್ಕೆ ಅಕ್ರಮ್ ಸರಳ, ಸಭ್ಯ ಮನುಷ್ಯನಂತೆ ಕಾಣುತ್ತಿದ್ದ. ಆತನಿಗೆ ಕುಡಿತದ ಚಟವೂ ಇರಲಿಲ್ಲ. ಆದರೆ ಹುಡುಗಿಯರ ಸಹವಾಸಕ್ಕೆ ಹಪಹಪಿಸುತ್ತಿದ್ದ. ಶನಿವಾರ ರಾತ್ರಿ ಗೆಳೆಯನೊಬ್ಬನ ಜತೆ ವಿಮಾನದಲ್ಲಿ ಮುಂಬಯಿಗೆ ಹೋಗಿ ಪಂಚತಾರಾ ಹೋಟೆಲ್‌ನಲ್ಲಿ ತಂಗುತಿದ್ದ. ಅಲ್ಲೇ ಹೈಟೆಕ್ ವೇಶ್ಯೆಯರನ್ನು, ನಟಿಯರನ್ನು ಕರೆಸುತ್ತಿದ್ದ. ಆತ ಹೇಳಿದ ಬಾಲಿವುಡ್ ನಟಿಯರ ಹೆಸರು ಕೇಳಿ ನಾನು ದಂಗಾಗಿ ಹೋದೆ. ಅವರು ಆ ಹೊತ್ತಿನ ಹಿಂದಿ ಚಿತ್ರರಂಗದ ಸೂಪರ್ ಸ್ಟಾರ್‌ಗಳು ತಲಾ 10 ಲಕ್ಷ ರೂ. ಕೊಟ್ಟು ಈತ ಅವರ ಜತೆ ರಾತ್ರಿ ಕಳೆದಿದ್ದನಂತೆ! ಅಂಥವರ ಮೇಲೆ ಚೆಲ್ಲಿದ ಹಣವನ್ನು ನಾವು ವಶಪಡಿಸಿಕೊಳ್ಳುವುದಾದರೂ ಹೇಗೆ? ತಿಂಗಳಿಗೊಮ್ಮೆ ಬ್ಯಾಂಕಾಕ್, ದುಬೈ, ಈಜಿಪ್ತ್, ಅಮೆರಿಕಾಗೆ ಹೋಗಿ ಮಜಾ ಉಡಾಯಿಸುತ್ತಿದ್ದ. ಆಗಾಗ ಬೆಂಗಳೂರಿನ ಲೈವ್‌ಬ್ಯಾಂಡ್‌ಗಳಿಗೆ ಭೇಟಿ ನೀಡುತ್ತಿದ್ದ.
ಈತ ಬಂದನೆಂದರೆ ಅಲ್ಲಿಯ ಹುಡುಗಿಯರಿಗೆ ಖುಷಿಯೋ ಏಕೆಂದರೆ ಅವರ ಮೇಲೆ ಸಾವಿರಾರು ರೂ.ಗಳ ನೋಟುಗಳನ್ನು ಕಸದಂತೆ ಚೆಲ್ಲುತ್ತಿದ್ದ. ವೇಯ್ಟರ್‌ಗಳಿಗಂತೂ ಟಿಪ್ಸ್‌ನ ಸುಗ್ಗಿಯೋ ಸುಗ್ಗಿ. ಲೈವ್‌ಬ್ಯಾಂಡ್ ಹೊರಗೆ ಗಸ್ತಿನಲ್ಲಿರುತ್ತಿದ್ದ ಇಬ್ಬರು ಪೇದೆಗಳಿಗೆ ಪ್ರತಿಬಾರಿ ನೂರು ರೂ.ಗಳ ನೋಟು ಕೈಗಿಟ್ಟು ಹೋಗುತ್ತಿದ್ದನಂತೆ. ಹಾಗಾಗಿ ಈತನನ್ನು ಕಾಣುತ್ತಲೇ ಅವರೂ ಸೆಲ್ಯುಟ್ ಹೊಡೆಯುತ್ತಿದ್ದರು. ಒಮ್ಮೆ ಮಾತ್ರ ಅವರಲೊಬ್ಬ ಪೇದೆ ‘ಸುಖಾಸುಮ್ಮನೆ ಇವನ್ಯಾಕೆ ನಮಗೆ ಇಷ್ಟೊಂದು ಹಣ ಕೊಡುತ್ತಾನೆ? ಬಹುಶಃ ಇವನ್ಯಾರೋ ದೊಡ್ಡ ಸ್ಮಗ್ಲರ್ ಇರಬೇಕು.’ ಎಂದು ಗೊಣಗಿದ್ದನಂತೆ. ಅಕ್ರಮ್‌ನೇ ವಿಚಾರಣೆ ವೇಳೆ ವಿಷಯ ತಿಳಿಸಿ ನಕ್ಕಿದ್ದ. ಮರುದಿನ ಬೆಳಗ್ಗೆ ಈತ ಹವಾಯಿ ಚಪ್ಪಲಿ, ಹಳೆಯ ಬಟ್ಟೆ ಧರಿಸಿ, ಸರಕಾರಿ ಬಸ್‌ನಲ್ಲಿ ಕಚೇರಿಗೆ ಹೋಗುತ್ತಿದ್ದ. ಅಲ್ಲಿ ವಿಧೇಯತೆಯಿಂದ ಕೆಲಸ ಮಾಡುತ್ತಿದ್ದ. ಹಾಗಾಗಿ ಈತನ ‘ಮುಸ್ಸಂಜೆಯ ಮಜಾ ಪ್ರಸಂಗ’ ಯಾರ ಗಮನಕ್ಕೂ ಬರಲಿಲ್ಲ.
ಚಿನ್ನ, ಬೆಳ್ಳಿ, ವಜ್ರದ ಆಭರಣ, ಚೆಕ್‌ಗಳು, ಆಸ್ತಿಯ ನೋಂದಣಿ ಪ್ರತ, ಭಾರಿ ಪ್ರಮಾಣದ ನಗದು ನನ್ನ ವಶಕ್ಕೆ ಬಂದವು. ‘ಇವುಗಳನ್ನೆಲ್ಲ ಠಾಣೆಯ ಬೀರುವಿನಲ್ಲಿ ಇರಿಸಿಕೊಳ್ಳುವುದು ಸುರಕ್ಷಿತವಲ್ಲ, ಬ್ಯಾಂಕ್ ಲಾಕರ್‌ನಲ್ಲಿ ಇಟ್ಟು ಎಂದು ಕಮಿಷನರ್ ಸಲಹೆ ನೀಡಿದರು. ಸೇಂಟ್‌ಪಾಕ್ಸ್ ರಸ್ತೆಯ ಬ್ಯಾಂಕ್‌ವೊಂದಕ್ಕೆ ಹೋಗಿ ನನ್ನ ಹೆಸರಿನಲ್ಲಿ ನಾಲ್ಕು ಸೇಫ್ ಲಾಕರ್ ತೆಗೆದು, ಅವುಗಳಲ್ಲಿ ವಶಪಡಿಸಿಕೊಂಡ ವಸ್ತುಗಳನ್ನು ಇಟ್ಟೆ. ಅಕ್ರಮ್‌ನನ್ನು ಕೋರ್ಟ್‌ಗೆ ಹಾಜರುಪಡಿಸಿ ಸೆಂಟ್ರಲ್ ಜೈಲ್‌ಗೆ ಕಳಿಸಿದೆ. ಮುಂದೆ 1990ರಲ್ಲಿ ನಾನು ವೀರಪ್ಪನ್ ಸೆರೆಗೆ ರಚಿಸಲಾಗಿದ್ದ ಎಸ್‌ಟಿಎಫ್‌ಗೆ ಸೇರ್ಪಡೆಗೊಂಡೆ. ಈ ಮಹಾ ವಂಚನೆ ಕಷ್ಟಮ್ಸ್ ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗೆ ಸೇರಿದ ಕಾರಣ ಪ್ರಕರಣ ಸಿಬಿಐಗೆ ವರ್ಗಾವಣೆಯಾಯಿತು.
(ಮುಂದುವರೆಯುವುದು)
Discussion about this post