ಇತ್ತೀಚೆಗೆ ಕಳುವಾದ ಬಗ್ಗೆ ಯಾರಾದರು ದೂರು ನೀಡಿದ್ದಾರೆನೇ ಎನ್ನುವುದನ್ನು ಪರಿಶೀಲಿಸಿದೆ. ಮೆಡಿಕಲ್ ವಿದ್ಯಾರ್ಥಿಯೊಬ್ಬ ದೂರು ನೀಡಿದ್ದು ಗೊತ್ತಾಯಿತು. ಆ ವಿದ್ಯಾರ್ಥಿ, ಓದುತ್ತಿರುವ ಮತ್ತು ಕೊಲೆಯಾದ ವ್ಯಕ್ತಿಯ ಮಗ ಸೇರಬೇಕಿರುವ ಕಾಲೇಜು ಒಂದೇ ಎಂಬ ಅಂಶ ನನ್ನನ್ನು ಅಲರ್ಟ್ ಮಾಡಿತು. ಕಾರು ಕಳುವಿನ ದೂರು ನೀಡಿದ ವಿದ್ಯಾರ್ಥಿಯನ್ನು ಕರೆದು ವಿಚಾರಿಸಿದಾಗ ಮತ್ತೊಂದು ಅಚ್ಚರಿ ಕಾದಿತ್ತು.
ಆತ ಅಂದಿನ ರಾಷ್ಟ್ರಪತಿಯವರ ಮೊಮ್ಮಗ ಮೆಹರ್‌ಬಾನ್ ಸಿಂಗ್ ಆಗಿದ್ದ. ಅವರ ಕುಟುಂಬ ಸಿಖ್ ಭಯೋತ್ಪಾದಕರ ಹಿಟ್ ಲಿಸ್ಟ್‌ನಲ್ಲಿತ್ತು. ಹಾಗಾಗಿ ಆತನ ತಲೆಗೂದಲು ಕತ್ತರಿಸಿ. ಗಡ್ಡ ಬೋಳಿಸಿ ಬೆಂಗಳೂರಿನ ಕಾಲೇಜಿಗೆ ಸೇರಿಸಲಾಗಿತ್ತು. ಆತ ಸಿಖ್ ಹುಡುಗ ಎಂದು ಗೊತ್ತಾಗುತ್ತಲೇ ಇರಲಿಲ್ಲ. ಈ ವಿಷಯವನ್ನು ಅತ್ಯಂತ ಗುಪ್ತವಾಗಿ ಇಡಲಾಗಿತ್ತು. ಜೂನ್ 4ರಂದು ಸ್ನೇಹಿತ ಚಂದನ್ ಸಿಂಘ ಜತೆ ಹೋಟೆಲ್ ಅಶೋಕಾದ ಈಜುಕೊಳಕ್ಕೆ ಹೋಗಿ ಬರುವಷ್ಟರಲ್ಲಿ ಕಾರು ನಾಪತ್ತೆಯಾಗಿತ್ತು ಎಂದಾತ ಹೇಳಿದ.
ಆ ಮೇಲೆ ಹೊರಬಿದ್ದ ಸತ್ಯ ಏನೆಂದರೆ, ಚಂದನ್ ಸಿಂಗ್‌ನೇ ಕಾರು ಕದ್ದಿದ್ದ! ಆತ ಹಲವಾರು ದುಶ್ಚಟ ಬೆಳೆಸಿಕೊಂಡಿದ್ದ. ಸ್ನೇಹಿತರ ಪಡೆದು, ಹುಡುಗಿಯರನ್ನು ಕೂರಿಸಿಕೊಂಡು ಶೋಕಿ ಮಾಡುತ್ತಿದ್ದ. ಕೊನೆಗೊಂದು ದಿನ ಸ್ನೇಹಿತ ಮೆಹರ್ ಬಾನ್ ಸಿಂಗ್‌ನ ಮಾರುತಿ ಕಾರು ಕದಿಯುವ ಪ್ಲ್ಯಾನ್ ಹಾಕಿದ. ಅವರಿಬ್ಬರು ಆಗಾಗ ಈಜಲು ಹೋಗುತ್ತಿದ್ದರು. ಒಂದು ದಿನ ಈಜಲು ಹೋದಾಗ ಕಾರಿನ ಕೀಯನ್ನು ಸಹಪಾಠಿ ಬಕ್ರಿ ಸಹೋದರರಿಗೆ ಕೊಟ್ಟು ಡೂಪ್ಲಿಕೇಟ್ ಮಾಡಿಸಿಕೊಂಡ. ಇನ್ನೊಂದು ದಿನ ಆ ಡೂಪ್ಲಿಕೇಟ್ ಕೀಯಿಂದ ಕಾರು ಕಳವು ಮಾಡಿಸಿದ. ಕಾರು ನಾಪತ್ತೆಯಾದಾಗ ಚಂದನ್ ತನ್ನ ಜತೆಗೇ ಈಜುತ್ತಿದ್ದುದರಿಂದ ಮೆಹರ್‌ಬಾನ್‌ಗೆ ಆತನ ಮೇಲೆ ಬರಲಿಲ್ಲ. ಮರುದಿನ ಚಂದನ್ ಮತ್ತು ಬಕ್ರಿ ಸಹೋದರರು ಪುಣೆಗೆ ಹೋದರು. ಅಲ್ಲಿ ಆ ಕಾರನ್ನು ಮಾರಲು ಯತ್ನಿಸಿದರಾದರು ದಾಖಲೆಪತ್ರ ಸರಿ ಇಲ್ಲದ ಕಾರಣ ಯಾರೂ ಕೊಳ್ಳಲಿಲ್ಲ. ಬೇರೆ ದಾರಿ ಕಾಣದೆ. ಬಿಳಿ ಬಣ್ಣದ ಕಾರಿಗೆ ಮಾಸಿದ ಬಣ್ಣ ಹೊಡೆಸಿ ಬೆಂಗಳೂರಿಗೆ ವಾಪಸಾದರು.
ಯಾರಿಗೂ ಅನುಮಾನ ಬರಬಾರದು ಎಂಬ ಕಾರಣದಿಂದ ಕಾರನ್ನು ಕಾಲೇಜಿನ ಹಾಸ್ಟೆಲ್‌ಗಿಂತ ಸಾಕಷ್ಟು ದೂರವೇ ಪಾರ್ಕ್ ಮಾಡುತ್ತಿದ್ದರು. ಕೊನೆಗೆ ಆ ಮೂವರು ಆ ಕಾರನ್ನು ಡಾ.ಪ್ಯಾರಾ ಸಿಂಗ್ ಕೊಲೆಗೆ ಬಳಸಿದರು. ನಾನು ಮೆಹರ್‌ಬಾನ್‌ನನ್ನು ಠಾಣೆಗೆ ಕರೆಸಿ ಆ ಕಾರನ್ನು ತೋರಿಸಿದೆ. ಆತ ‘ಹೌದು, ಈ ಕಾರು ನನ್ನದೇ,’ ಎಂದ. ಆದರೆ ‘ಚಂದನ್ ಈ ಕಾರು ಕದಿಯಲು ಸಾಧ್ಯವೇ ಇಲ್ಲ. ಆತ ನನ್ನ ಆತ್ಮೀಯ ಮಿತ್ರ’ ಎಂದು ಹೇಳಿ ಹೋದ. ನಾನು, ಯಾವುದಕ್ಕೂ ಇರಲಿ ಎಂದುಕೊಂಡು ಮೆಡಿಕಲ್ ಕಾಲೇಜಿನ ಹಾಸ್ಟೆಲ್‌ಗೆ ಭೇಟಿ ಕೊಟ್ಟೆ.
‘ನಾನೊಬ್ಬ ವಿಧೇಯ ವಿದ್ಯಾರ್ಥಿ. ನಾನು ಇಲ್ಲಿಗೆ ಬಂದಿದ್ದು ಚೆನ್ನಾಗಿ ಓದಿ ಡಾಕ್ಟರ್ ಆಗಬೇಕು ಎಂಬ ನೀವು ನನ್ನಂಥ ಪ್ರಾಮಾಣಿಕ ವಿದ್ಯಾರ್ಥಿಯನ್ನು ಅಪರಾಧಿ ಎಂಬಂತೆ ನೋಡುತ್ತಿದ್ದೀರಿ. ಈಗಾಗಲೇ ಹಾಸ್ಟೆಲ್‌ಗೆ ಹಲವಾರು ಪೊಲೀಸ್ ತಂಡಗಳು ಬಂದು ನನ್ನನ್ನು ವಿಚಾರಿಸಿಕೊಂಡು, ನಾನು ನಿರಪರಾಧಿ ಎಂದು ಖಾತರಿಪಡಿಸಿಕೊಂಡು ಹೋಗಿವೆ. ಈಗ ಮತ್ತೆ ನೀವು ನನ್ನ ಓದಿಗೆ ತೊಂದರೆ ಮಾಡುವುದು ಸರಿಯಲ್ಲ.’ ಎಂದು ಚಂದನ್ ವಾದಿಸಿದ. ನನಗೂ ಆತನ ಮಾತು ಹೌದೆನಿಸಿತು. ಆದರೆ ಆತ ತುಂಬ ಹೊತ್ತಿನವರೆಗೆ ಎಡಗೈಯನ್ನು ಪ್ಯಾಂಟಿನ ಜೇಬಿನಲ್ಲಿ ಇಳಿಬಿಟ್ಟುಕೊಂಡಿದ್ದ. ನನ್ನ ಪೊಲೀಸ್‌ಬುದ್ಧಿ ಜಾಗೃತವಾಯಿತು.
ಅಷ್ಟರಲ್ಲಿ ಹಾಸ್ಟೆಲ್‌ನ ವಾರ್ಡನ್ ಬಾಕ್ಸ್ ತಂದು ತಗೊಳ್ಳಿ ಸಾರ್ ಎಂದ. ನೀನೂ ತಗೊಳಪ್ಪ ಎಂದು ನಾನು ಬಾಕ್ಸ್ ಅನ್ನು ಚಂದನ್‌ನತ್ತ ಚಾಚಿದೆ. ಆತ ಅಭ್ಯಾಸಬಲದಿಂದ ಪ್ಯಾಂಟ್ ಕಿಸೆಯೊಳಗಿನ ಕೈ ತೆಗೆದು ಚಾಚಿದ. ಬೆರಳುಗಳಿಗೆ ಪ್ಲಾಸ್ಟರ್ ಹಾಕಲಾಗಿತ್ತು. ಬೆರಳಿಗೇನಾಯ್ತು ಎಂದೆ. ನನ್ನ ಪ್ರಶ್ನೆಗೆ ಗಾಬರಿಗೊಳ್ಳದೆ ‘ಫ್ರೆಂಡ್‌ವೊಬ್ಬನ ಜತೆ ಜಗಳವಾಯ್ತು. ಆತ ಕೈ ಕಚ್ಚಿದ,’ ಎಂದ. ವಿಚಾರಿಸಿಬಿಡೋಣ ಎಂದುಕೊಂಡು, ಕೈಕಚ್ಚಿದ್ದಾನೆಂದು ಹೇಳಿದ ವಿದ್ಯಾರ್ಥಿಯನ್ನು ಭೇಟಿಯಾಗಿ ವಿಚಾರಿಸಿದೆ. ‘ಬೆರಳು ಕಚ್ಚೋದಿರಲಿ, ಕಳೆದ ಒಂದು ವರ್ಷದಿಂದ ನಾನು ಚಂದನ್ ಮಾತೇ ಆಡಿಲ್ಲ,’ ಎಂದ ಆತ. ಹಾಜರಿ ಪುಸ್ತಕ ಪರಿಶೀಲಿಸಿದಾಗ, ಕೊಲೆಯಾದ ದಿನ ಚಂದನ್ ಮತ್ತು ಆತನ ಇಬ್ಬರು ಸಹಪಾಠಿಗಳು ಕಾಲೇಜಿಗೆ ಚಕ್ಕರ್ ಹಾಕಿದ್ದು ಪಕ್ಕಾ ಆಯಿತು.
ಚಂದನ್‌ನನ್ನು ಠಾಣೆಗೆ ಕರೆಸಿದೆ. ಆಗಲೂ ಆತ ನಿರ್ಭೀತಿಯಿಂದಲೇ ಇದ್ದ. ಯಾವಾಗ ನಾನು ಆ ಕಾರಿನ ಮುಂದೆ ಆತನನ್ನು ನಿಲ್ಲಿಸಿ ‘ಇದನ್ನು ಕದ್ದಿದ್ದು ಯಾರು ಗೊತ್ತಾ,’ ಎಂದೆನೋ ಆಗ ಆತನ ಮುಖದ ಬಣ್ಣ ಬದಲಾಗಿ ಹೋಯಿತು. ಸುಮ್ಮನೆ ಆತನ ಹೆಗಲ ಮೇಲೆ ಕೈ ಆತನ ಮೈ ಸಣ್ಣಗೆ ಕಂಪಿಸುತ್ತಿರುವುದು ಸ್ಪಷ್ಟವಾಯಿತು. ಕಾಲರ್ ಪಟ್ಟಿ ಹಿಡಿದು ಠಾಣೆಯೊಳಗೆ ಎಳೆದುತಂದವನೇ ಹಗ್ಗ ಬಿಗಿದೆ. ‘ಏರೋಪ್ಲೇನ್’ ಅರ್ಧ ಏರುವಷ್ಟರಲ್ಲಿ ಆತ ಕೊಲೆಯ ಸಂಪೂರ್ಣ ವೃತ್ತಾಂತ ಬಿಡಿಸಿಟ್ಟ! ಹಂತಕರಿಂದ ತಪ್ಪಿಸಿಕೊಳ್ಳುವ ಧಾವಂತದಲ್ಲಿ ಡಾ.ಪ್ಯಾರಾ ಸಿಂಗ್ ಅವರು ಚಂದನ್‌ನ ಕೈ ಕಚ್ಚಿ ಬೆರಳು ತುಂಡು ಮಾಡಿದ್ದರು. ಹೆಣವನ್ನು ಸೀಟ್ ಮೇಲೆ ಕುಳಿತ ಸ್ಥಿತಿಯಲ್ಲೇ ಇರಿಸಿ, ಮೆಡಿಕಲ್ ಕಾಲೇಜ್ ಬಳಿ ಕಾರ್ ಪಾರ್ಕ್ ಮಾಡಿ ಬೆರಳಿಗೆ ಚಂದನ್ ಚಿಕಿತ್ಸೆ ಪಡೆದಿದ್ದನಂತೆ!
ಚಿಕ್ಕವನಿದ್ದಾಗ ಎತ್ತಿಕೊಂಡು ಆಟವಾಡಿಸಿದ್ದ. ಆತನ ಉತ್ತಮ ಭವಿಷ್ಯವನ್ನೇ ಬಯಸಿದ್ದ ಆಪ್ತಮಿತ್ರನ ಮಗನೇ ಹಂತಕನಾಗಿ ಡಾ.ಪ್ಯಾರಾ ಸಿಂಗ್‌ರ ಪ್ರಾಣ ತೆಗೆದಿದ್ದ.
Discussion about this post