ಇಂಥ ಚೇಸಿಂಗ್‌ಗಾಗಿಯೇ ಕಾಯುತ್ತಿದ್ದ ನಾನು ಹಳೆ ವಿಮಾನ ನಿಲ್ದಾಣ ರಸ್ತೆಯಿಂದ ದೊಮ್ಮಲೂರಿನ ಕಡೆಗೆ ಬುಲೆಟ್ ಓಡಿಸಿದೆ.
ನಾನು ಇಂದಿರಾನಗರದ 100 ಅಡಿ ರಸ್ತೆಯ ಜಂಕ್ಷನ್‌ಗೆ ಬರುತ್ತಿದ್ದಂತೆ ಆ ಮಾರುತಿ ನೂರಡಿ ರಸ್ತೆಯ ಕಡೆ ವೇಗವಾಗಿ ಮುನ್ನುಗ್ಗುತ್ತಿದ್ದುದು ಕಣ್ಣಿಗೆ ಬಿತ್ತು. ನಿಲ್ಲಿಸುವಂತೆ ಕೈ ಮಾಡಿದರೂ ಆತ ಧಿಕ್ಕರಿಸಿ ಮುನ್ನಡೆದ. ಅಲ್ಲಿಂದ ನನ್ನ ಬುಲೆಟ್ ಚೇಸಿಂಗ್ ಶುರುವಾಯಿತು. ನಾನು ಸೈರನ್ ಮತ್ತು ಹೆಡ್ ಲೈಟ್ ಹಾಕಿಕೊಂಡು 80 ರಿಂದ 100 ಕಿಮೀ ವೇಗದಲ್ಲಿ ಆ ಕಾರನ್ನು ಬೆನ್ನಟ್ಟಿದೆ.
ಆತ ಅದೇ ವೇಗದಲ್ಲಿ ಸಿಎಂಎಚ್ ರಸ್ತೆ ಸೇರಿ, ಅಲ್ಲಿಂದ ಜೋಡು ರಸ್ತೆಯೊಂದಕ್ಕೆ ಅಡ್ಡಾದಿಡ್ಡಿ ನುಗ್ಗಿದ. ನಾನು ಓವರ್‌ಟೇಕ್ ಮಾಡದಂತೆ ಕಾರನ್ನು ಎಡಕ್ಕೆ ಬಲಕ್ಕೆ ನಾನು ಆ ಕಾರನ್ನು ಗುರುತಿಸಿ ಬೆನ್ನಟ್ಟುತ್ತಿರುವ ಸಂಗತಿಯನ್ನು ಆಗಿಂದಾಗ ವೈರ್‌ಲೆಸ್ ಮೂಲಕ ಕಮಿಷನರ್‌ಗೆ ತಲುಪಿಸುತ್ತಿದ್ದೆ. ದೊಡ್ಡ ಬಂಗಲೆಯೊಂದರ ಬಳಿ ಕಾರಿನ ವೇಗ ತುಸು ಕಡಿಮೆಯಾಯಿತು. ನಾನು ಓವರ್‌ಟೇಕ್ ಮಾಡಿ ಬುಲೆಟ್‌ಅನ್ನು ಅಡ್ಡಹಾಕಿ ಕಾರು ನಿಲ್ಲಿಸಿದೆ. ಕಾರಿನ ಕೀಯನ್ನು ಕಿತ್ತುಕೊಂಡು, ಕೊರಳ ಪಟ್ಟಿಗೆ ಕೈ ಹಾಕಿ, ಇನ್ನೇನು ಎರಡು ಬಾರಿಸಬೇಕು ಎನ್ನುವಷ್ಟರಲ್ಲಿ…
ಆ ಘಟನೆಯ ನಂತರವೂ ಕುಮಾರ್ ಬಂಗಾರಪ್ಪ ಅವರು ನಾನು ಎದುರಾದಾಗಲೆಲ್ಲ ಆತ್ಮೀಯತೆಯಿಂದಲೇ ಮಾತನಾಡುತ್ತಿದ್ದರು. ಮುಂದೆ ಸಹೋದರಿ ಗೀತಾ ನಟ ಶಿವರಾಜ್‌ಕುಮಾರ್ ಮದುವೆಯ ಆಮಂತ್ರಣ ಪತ್ರವನ್ನು ಕುಮಾರ್ ಬಂಗಾರಪ್ಪ ತಮ್ಮ ತಾಯಿಯ ಜತೆ ನನ್ನ ಕಚೇರಿಗೆ ಬಂದು ಕೊಟ್ಟು ಸೌಜನ್ಯ ಮೆರೆದಿದ್ದರು. ಮುಂದೆ ನಾನು ಕಬ್ಬನ್ ಪಾರ್ಕ್ ಠಾಣೆಯಲ್ಲಿ ಡ್ಯೂಟಿಯಲ್ಲಿದ್ದಾಗ ಅವರು, ‘ನವತಾರೆ’ ಎಂಬ ಕನ್ನಡ ಚಿತ್ರದಲ್ಲಿ ನಾಯಕ ನಟನಾಗಿ ನಟಿಸುತ್ತಿದ್ದರು. ಅದರ ನಿರ್ದೇಶಕ, ಹಾಸನದಲ್ಲಿ ನನ್ನ ಸಹಪಾಠಿಯಾಗಿದ್ದ ಎನ್.ಆರ್. ನಂಜುಂಡೇಗೌಡ , ಕ್ರಿಕೆಟ್ ಸ್ಟೇಡಿಯಂನಲ್ಲಿ ಶೂಟಿಂಗ್ ನಡೆಯುತ್ತಿತ್ತು. ಪಕ್ಕದಲ್ಲೇ ಇದ್ದ ನನ್ನ ಕ್ವಾರ್ಟ್ರಸ್‌ಗೆ ಕುಮಾರ ಬಂಗಾರಪ್ಪ ಬಂದು ಚೇಂಜ್‌ಮಾಡಿ, ಮೇಕಪ್ ಮಾಡಿಕೊಂಡು ಹೋಗಿದ್ದರು.
ಇನ್ನೊಮ್ಮೆ ಇಂಥದ್ದೇ ಘಟನೆ ನಡೆಯಿತು. ಆಗಸ್ಟೇ ಹೆಲ್ಮೆಟ್ ಕಡ್ಡಾಯ ನಿಯಮ ಜಾರಿಗೆ ಬಂದಿತ್ತು. ಆದರೆ, ಮೆಡಿಕಲ್ ವಿದ್ಯಾರ್ಥಿಯೊಬ್ಬ ಹೆಲ್ಮೆಟ್ ಹಾಕದೆ ಮಿತಿ ಮೀರಿದ ವೇಗದಲ್ಲಿ ಬೈಕ್ ಓಡಿಸುತ್ತಿದ್ದ. ಸಾಲದೆಂಬಂತೆ ತನ್ನ ಯೆಜ್ಡಿ ಬೈಕ್‌ನ ಸೈಲೆನ್ಸರ್ ಕಿತ್ತು ತೆಗೆದು ಕರ್ಕಶವಾಗಿ ಸದ್ದು ಮಾಡುತ್ತ ಸಾಗುತ್ತಿದ್ದ. ಹಲವು ಬಾರಿ ಆತನನ್ನು ಬೆನ್ನಟ್ಟಿದ್ದರೂ ಸಿಕ್ಕಿರಲಿಲ್ಲ. ಆತ ಎಂಥ ಕಿಲಾಡಿ ಎಂದರೆ… ಒಂದು ದಿನ ಸಂಜೆ 6 ಗಂಟೆ ನಾನು ಹಲಸೂರು ಠಾಣೆಯಲ್ಲಿ ಕೂತಿದ್ದಾಗ, ಠಾಣೆ ಪಕ್ಕದ ಕಾಯಿನ್ ಬೂತ್‌ನಿಂದ ನನಗೆ ಫೋನ್ ಮಾಡಿ ‘ತಾಕತ್ತಿದ್ದರೆ ಇವತ್ತು ನನ್ನನ್ನು ಚೇಸ್ ಮಾಡಿ’ ಎಂದು ಸವಾಲು ಹಾಕಿದ! ನಾನು ಹೊರಗೆ ಓಡಿ ಬರುವಷ್ಟರಲ್ಲಿ ಬೈಕ್ ಸ್ಟಾರ್ಟ್ ಮಾಡಿಕೊಂಡು ಹೊರಟ. ನಾನು ಬೆನ್ನಟ್ಟಿ ಕೊನೆಗೂ ಇಂದಿರಾನಗರದಲ್ಲಿ ಹಿಡಿದೆ. ವಿಚಾರಿಸಿದಾಗ ಗೊತ್ತಾಗಿದ್ದೇನೆಂದರೆ, ಆತ ಸರಕಾರದ ಆಯಕಟ್ಟಿನ ಹುದ್ದೆಯಲ್ಲಿದ್ದ ಹಿರಿಯ ಐಎಎಸ್ ಅಧಿಕಾರಿಯ ಮಗನಾಗಿದ್ದ!
ಆತನನ್ನು ಠಾಣೆಗೆ ತಂದು ಕೂರಿಸಿ, ಬೈಕ್ ಸೀಜ್ ಮಾಡಿಸಿದೆ. 8 ಗಂಟೆ ಹೊತ್ತಿಗೆ ಆತನ ಅಪ್ಪ ಠಾಣೆಗೆ ಬಂದರು. ‘ಈತನ ಬೈಕ್ ಶೋಕಿ ಮಿತಿ ಮೀರಿದೆ. ಇವನನ್ನು ನೀವು ಲಾಕಪ್‌ಗೆ ತಳ್ಳಿದರೂ ನನಗೆ ಬೇಜಾರಿಲ್ಲ. ಯಾವುದೇ ಕಾರಣಕ್ಕೂ ಈ ಬೈಕ್ ಮಾತ್ರ ವಾಪಸ್ ಕೊಡಲೇಬೇಡಿ,’ ಎಂದು ಹೇಳಿ, ಒಂದೂವರೆ ಸಾವಿರ ರೂ. ದಂಡ ಕಟ್ಟಿ ಮಗನನ್ನು ಕರೆದುಕೊಂಡು ಹೋದರು. ಸುಮಾರು ಆರು ತಿಂಗಳು ಠಾಣೆ ಮುಂದೆಯೇ ಆ ಬೈಕ್ ಧೂಳು ತಿನ್ನುತ್ತ ನಿಂತಿತ್ತು. ಬಳಿಕ ಆ ಅಧಿಕಾರಿ ಬೈಕ್‌ಅನ್ನು ಬೇರೆಯವರಿಗೆ ಮಾರಿಸಿದರೇ ಹೊರತು, ಮನೆಗೆ ತೆಗೆದುಕೊಂಡು ಹೋಗಲಿಲ್ಲ.
ತಮ್ಮ ಮಕ್ಕಳು ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿ ಸಿಕ್ಕಿ ಬಿದ್ದಾಗ ಹಣವಂತರು, ರಾಜಕಾರಣಿಗಳು, ಅಧಿಕಾರಿಗಳು ತಮ್ಮ ಪ್ರಭಾವ ಬಳಸಿ ಪಾರು ಮಾಡಲು ಯತ್ನಿಸುವುದು ಸಾಮಾನ್ಯ. ಆದರೆ ಈ ಪ್ರಕರಣ ಭಿನ್ನ, ಪ್ರಭಾವಿ ರಾಜಕಾರಣಿಯೊಬ್ಬರು. ತಮ್ಮ ಮಗ ಟ್ರಾಫಿಕ್ ಪೊಲೀಸರ ಕೈಗೆ ಸಿಕ್ಕಿ ಬಿದ್ದಾಗ ಯಾರಿಗೂ ಫೋನ್ ಮಾಡದೆ ಮಗನಿಗೇ ಗದರಿಸಿ ಬುದ್ಧಿ ಹೇಳಿದರು. ತಮ್ಮ ಪತ್ನಿಯ ಕೈಯಿಂದ ದಂಡ ಕಟ್ಟಿಸಿದರು!
Discussion about this post