1985
ಬೆಂಗಳೂರಿನಲ್ಲಿ ಕುಖ್ಯಾತ ರೌಡಿ ಕೊತ್ವಾಲ ರಾಮಚಂದ್ರನ ಹಾವಳಿ ಮಿತಿ ಮೀರಿತ್ತು. ಸದಾಶಿವನಗರದಲ್ಲಿ ರಾಜಕಾರಣಿಯೊಬ್ಬರ ಮಗಳು ವಿದೇಶ ಪ್ರಯಾಣಕ್ಕೆ ಸಂಬಂಧಿಸಿದ ಟ್ರಾವೆಲ್‌ಸ್ ಕಚೇರಿ ಹೊಂದಿದ್ದರು. ಅಲ್ಲಿಗೆ ಹಾಡಹಗಲೇ ನುಗ್ಗಿ ದಾಂಧಲೆ ನಡೆಸುವ ಮೂಲಕ ಕೊತ್ವಾಲ ನಾಗರಿಕರಲ್ಲಿ ಭೀತಿ ಮೂಡಿಸಿದ್ದರು. ಈ ಘಟನೆಯಿಂದಾಗಿ ಬೆಂಗಳೂರು ಪೊಲೀಸರೂ ವಿಚಲಿತರಾದರು. ಶತಾಯಗತಾಯ ಆತನನ್ನು ಹಿಡಿದು ಜೈಲಿಗಟ್ಟಲು ವಿಶೇಷ ಪೊಲೀಸ್ ತಂಡಗಳ ರಚನೆಯಾದವು.
ಪೂರ್ವ ಟ್ರಾಫಿಕ್ ವಿಭಾಗದ ಡಿಸಿಪಿಯಾಗಿದ್ದ ಅಜಯ್‌ಕುಮಾರ್ ಸಿಂಗ್ ಟೀಮ್‌ನಲ್ಲಿ ಸಂಗ್ರಾಮ್ ಸಿಂಗ್, ನಾನು ಮತ್ತು ನಾಗೇಂದ್ರಕುಮಾರ್ ಇದ್ದೆವು. ಪಶ್ಚಿಮ ವಿಭಾಗದ ಡಿಸಿಪಿ ಮರಿಸ್ವಾಮಿ ತಂಡದಲ್ಲಿ ಪಳಗಿದ ಪೊಲೀಸ್ ಅಧಿಕಾರಿಯಾಗಿದ್ದ ಎಂ.ಕೆ. ಗಣಪತಿ, ಮುದ್ದಯ್ಯ, ಬಿ.ಕೆ. ಶಿವಕುಮಾರ್ ಇದ್ದರು. ವಿಶೇಷ ಪೊಲೀಸ್ ತಂಡ ರಚನೆಯಾಗುತ್ತಿದ್ದಂತೆ ಕೊತ್ವಾಲ ಬಿಲ ಸೇರಿಕೊಂಡುಬಿಟ್ಟ. ಶೂಟ್ ಅಟ್ ಸೈಟ್ ಆರ್ಡರ್ ಆಗಿದೆ ಎಂಬ ಸುದ್ದಿ ಹರಡಿ ಬೆಂಗಳೂರಿನ ರೌಡಿಗಳು ಚೆಲ್ಲಾಪಿಲ್ಲಿಯಾದರು.
ರಾಜಕಾರಣಿಯ ಮಗಳ ಕಚೇರಿಗೆ ಬಿಗಿ ಬಂದೋಬಸ್‌ತ್ ಏರ್ಪಡಿಸಲಾಯಿತು. ಸಿದ್ಧಮ್ಮ ಎಂಬ ಪೊಲೀಸ್ ಅಧಿಕಾರಿಯಂತೂ ಪರ್ಸ್‌ನಲ್ಲಿ ಲೋಡೆಡ್ ರಿವಾಲ್ವರ್ ಇಟ್ಟುಕೊಂಡು, ಸ್ವೆಟರ್ ಹೊಲೆಯುತ್ತಾ ಅಲ್ಲಿ ಕುಳಿತು ಬಿಟ್ಟಿದ್ದರು!
ವೃತ್ತಿಯ ಆರಂಭದಲ್ಲಿ ನಾನು ಟ್ರಾಫಿಕ್ ವಿಭಾಗದಲ್ಲಿದ್ದುದರಿಂದ ರೌಡಿಗಳ ಪರಿಚಯ ಅಷ್ಟಾಗಿ ಇರಲಿಲ್ಲ. ಆದರೆ ಈ ವಿಷಯದಲ್ಲಿ ಸಂಗ್ರಾಮ್ ಸಿಂಗ್ ಪರಿಣಿತರಾಗಿದ್ದರು. ಶ್ರೀರಾಂಪುರ ಎಂದರೆ ಆಗ ರೌಡಿಗಳ ಅಡ್ಡೆ ಎಂದೇ ಕುಖ್ಯಾತವಾಗಿತ್ತು. ಅಲ್ಲಿಯ ಠಾಣೆಯಲ್ಲಿ ಎಸ್‌ಐ ಆಗಿದ್ದ ಸಂಗ್ರಾಮ್, ರೌಡಿಗಳ ಪಾಲಿಗೆ ದುಃಸ್ವಪ್ನವಾಗಿದ್ದರು. ಸಂಗ್ರಾಮ್ ಸಿಂಗ್ ಎಂದರೆ ರೌಡಿಗಳು ಗಡಗಡ ನಡುಗುತ್ತಿದ್ದರು.
ನಾವು ಮಫ್ತಿಯಲ್ಲಿ ಶ್ರೀರಾಂಪುರ, ಮಲ್ಲೇಶ್ವರ, ಯಶವಂತಪುರ ಹಾಗೂ ವೈಯಾಲಿ ಕಾವಲ್‌ನ ಗಲ್ಲಿಗಲ್ಲಿಗಳಲ್ಲಿ ಹಗಲು ರಾತ್ರಿ ಓಡಾಡಿ ಕೊತ್ವಾಲನ ಜಾಡು ಹುಡುಕ ತೊಡಗಿದೆವು. ಸಂಜೆ 6ರಿಂದ 7ರೊಳಗೆ ವಿಧಾನಸೌಧ ಮತ್ತು ಶಾಸಕರ ಭವನದ ನಡುವಿನ ಮರದ ಕೆಳಗೆ ನಾವು, ಡಿಸಿಪಿ ಅಜಯ್‌ಕುಮಾರ್ ಸಿಂಗ್‌ಗೆ ದಿನದ ಪ್ರಗತಿ ತಿಳಿಸುತ್ತಿದ್ದೆವು. ಮುಂದಿನ ಕಾರ್ಯಾಚರಣೆ ಬಗ್ಗೆ ಅವರ ಮಾರ್ಗದರ್ಶನ ಪಡೆಯುತ್ತಿದ್ದೆವು.
ಕೊತ್ವಾಲನನ್ನು ಹಿಡಿಯುವ ವಿಚಾರದಲ್ಲಿ ನಮ್ಮ ಎರಡು ಟೀಮ್‌ಗಳ ನಡುವೆ ಆರೋಗ್ಯಕರ ಸ್ಪರ್ಧೆ ಏರ್ಪಟ್ಟಿತ್ತು. ಆದರೆ, ನಾವು ಎಷ್ಟೇ ಪ್ರಯತ್ನಪಟ್ಟರೂ ಆತನ ಸಣ್ಣ ಸುಳಿವೂ ಸಿಗದೆ ನಾವೆಲ್ಲ ಹತಾಶರಾದೆವು. ಕೊನೆಗೂ ಒಂದು ದಿನ ಆ ರೌಡಿಯ ಮನೆಯನ್ನು ಕಂಡು ಹಿಡಿದೆವು. ತಮಾಷೆ ಎಂದರೆ, ಅಂದಿನ ಇಂದಿರಾ ನಗರದ 13ನೇ ಕ್ರಾಸ್‌ನಲ್ಲಿ ಆತ ಬಾಡಿಗೆ ಮನೆ ಮಾಡಿಕೊಂಡಿದ್ದ! ನಾವು ಆ ಮನೆಯ ಸುತ್ತ ಕಾವಲು ಹಾಕಿದೆವು. ಆತ ಮನೆಗೆ ಬರುವುದನ್ನು ಕಾತರದಿಂದ ಕಾಯ ತೊಡಗಿದೆವು. ಆದರೆ ಆತ ಎಷ್ಟು ದಿನ ಕಳೆದರೂ ಆ ಮನೆಗೆ ಬರಲೇ ಇಲ್ಲ.
ಕೊನೆಗೆ ಗೊತ್ತಾಗಿದ್ದೇನೆಂದರೆ, ಕೊತ್ವಾಲನ ಪತ್ನಿ ಪೊಲೀಸರ ಚಲನವಲನದ ಬಗ್ಗೆ ಮಾಹಿತಿ ನೀಡುತ್ತಿದ್ದಳು. ಅದು ಹೇಗೆ ಗೊತ್ತಾ? ದೂರವಾಣಿ ಮೂಲಕ ಅಲ್ಲ. ಮನೆಯ ಚಾವಣಿ ಮೇಲಿನ ಟಿವಿ ಆ್ಯಂಟೆನಾಗೆ ತನ್ನ ಕೆಂಪು ರವಿಕೆಯನ್ನು ಒಣ ಹಾಕುವ ಮೂಲಕ! ಕೊತ್ವಾಲ ತನ್ನ ಮನೆಯ ಸ್ಥಳವನ್ನು ನೆಚ್ಚಿನ ಬಂಟರಿಗೂ ತಿಳಿಸುತ್ತಿರಲಿಲ್ಲ. ಮನೆಗೆ ಅಡ್ಡ ರಸ್ತೆ, ನೇರ ರಸ್ತೆಗಳಲ್ಲಿ ಸುತ್ತು ಹಾಕುತ್ತ ಅವರೆಲ್ಲರನ್ನು ದಾರಿ ತಪ್ಪಿಸಿ ಮನೆ ಸೇರಿಕೊಳ್ಳುತ್ತಿದ್ದ. ಆ್ಯಂಟೆನಾ ಮೇಲೆ ಕೆಂಪು ರವಿಕೆ ಇದೆಯೋ ಇಲ್ಲವೋ ಎಂದು ದೂರದಿಂದಲೇ ನೋಡುತ್ತಿದ್ದ. ರವಿಕೆ ಇದ್ದರೆ ವಾಪಸ್ ಹೋಗುತ್ತಿದ್ದ.
ಏನೇ ಮಾಡಿದರೂ ಕೊತ್ವಾಲ ಬಲೆಗೆ ಬೀಳದೆ ಪರಿತಪಿಸುತ್ತಿದ್ದ ನಮಗೆ ಒಂದು ಖಚಿತ ಮಾಹಿತಿ ಸಿಕ್ಕಿತು. ಎಂ.ಜಿ. ರಸ್ತೆ ಬಳಿಯ ಮ್ಯೂಸಿಯಂ ರೋಡ್ ನಲ್ಲಿರುವ ಗೌತಮ್ ಹೋಟೆಲ್‌ನಲ್ಲಿ ಆತ ರೂಮ್ ಮಾಡಿಕೊಂಡಿದ್ದಾನೆ ಎಂಬುದು ಆ ಮಾಹಿತಿಯ ಸಾರ. ನಾವೆಲ್ಲ ತಕ್ಷಣ ಅಲರ್ಟ್ ಆದೆವು. ಅಜಯ್‌ಕುಮಾರ್ ಸಿಂಗ್‌ಗೆ ಈ ವಿಷಯ ತಿಳಿಸಿ, ಕೆಎಸ್‌ಆರ್‌ಪಿ ತುಕಡಿಯೊಂದನ್ನು ತರಿಸಿ ಹೋಟೆಲ್‌ನ ಹಿಂಭಾಗದಲ್ಲಿ ಸಜ್ಜಾಗಿರಿಸಿದೆವು. ರಾತ್ರಿ 8 ಗಂಟೆ ಸುಮಾರಿಗೆ ನಾನು, ಸಂಗ್ರಾಮ್ ಸಿಂಗ್, ಬಿ.ಕೆ. ಶಿವರಾಮ್ ಸಿಬ್ಬಂದಿಗಳ ಜತೆ ಮಫ್ತಿಯಲ್ಲಿ ಹೋಟೆಲ್‌ಗೆ ಲಗ್ಗೆ ಹಾಕಿದೆವು. ರಿಸೆಪ್ಷನ್‌ನನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೊತ್ವಾಲನ ಫೋಟೋ ತೋರಿಸಿದೆವು.
ಆತ ಫೋಟೋ ನೋಡಿದ ಮರುಕ್ಷಣವೇ ‘ಹೌದು ಸರ್, ಇದೇ ವ್ಯಕ್ತಿ ಕಳೆದೆರಡು ದಿನಗಳಿಂದ ಮೇಲಿನ ಮಹಡಿಯಲ್ಲಿ ರೂಮ್ ಮಾಡಿಕೊಂಡಿದ್ದಾನೆ,’ ಎಂದು ಖಚಿತಪಡಿಸಿದ. ನಮ್ಮ ಆನಂದಕ್ಕೆ ಪಾರವೇ ಇರದಂತಾಯಿತು. ‘ಎಲಾ ಕೊತ್ವಾಲ…ನಾವು ನಿನಗಾಗಿ ಊರೆಲ್ಲಾ ಹುಡುಕಾಡುತ್ತಿದ್ದರೆ ನೀನು ಡಿಜಿ ನಿವಾಸದ ಹಿಂಭಾಗವೇ ಮನೆ ಮಾಡಿಕೊಂಡಿರುತ್ತೀಯಾ. ನಗರದ ಹೃದಯ ಭಾಗದ ಹೋಟೆಲ್‌ನಲ್ಲೆ ರೂಮ್ ಮಾಡುತ್ತೀಯ… ಎಷ್ಟು ಕೊಬ್ಬು ನಿನಗೆ’ ಎಂದುಕೊಂಡೆವು.
(ಆನಂತರ ಏನಾಯಿತು? ನಾಳೆ ಓದಿ)
Discussion about this post