1989
ಗೇಟು ಟನ್ ಎಂದು ಸದ್ದು ಮಾಡಿದ್ದೇ ತಡ, ಎರಡು ಡಾಬರ್‌ಮನ್ ನಾಯಿಗಳು ವಿಕಾರವಾಗಿ ಬೊಗಳುತ್ತ ನಮ್ಮತ್ತ ನೆಗೆಯಲಾರಂಭಿಸಿದವು. ಉಪಾಯವಾಗಿ ಆ ನಾಯಿಗಳ ಬಾಯಿ ಮುಚ್ಚಿಸಿದೆವು. ಅದು ಓಲ್ಡ್ ಮದ್ರಾಸ್ ರಸ್ತೆಯ ಟಿನ್ ಫ್ಯಾಕ್ಟರಿ ಬಳಿಯ ಕಚ್ಚಾ ಮಾರ್ಗ, ಖಚಿತ ಮಾಹಿತಿ ಆಧರಿಸಿ ಆ ಮನೆಯ ಆವರಣಕ್ಕೆ ಲಗ್ಗೆ ಹಾಕಿದ್ದೆವು. ಮೊದಲೇ ಪ್ಲ್ಯಾನ್ ಮಾಡಿಕೊಂಡಂತೆ ಆ ಮನೆಯ ಬಾಗಿಲನ್ನು ಒಂದೇ ಏಟಿಗೆ ಒಡೆದು ಒಳ ನುಗ್ಗಿದೆವು. ನಮಗೆ ಬೇಕಾದ ವ್ಯಕ್ತಿ ಒಳ ಕೋಣೆಯ ಮುರುಕು ಮಂಚದ ಮೇಲೆ ಯಾವುದರ ಪರಿವೆಯೇ ಇಲ್ಲವೆಂಬಂತೆ ಅರೆನಗ್ನವಾಗಿ ಅಂಗಾತ ಬಿದ್ದುಕೊಂಡಿದ್ದ. ಸುತ್ತಲೂ ಗವ್ವೆನ್ನುವ ಕತ್ತಲು. ಕರ‌್ರಗೆ ಡಾಮರಿನಂತಹ ಮೈಬಣ್ಣ, ಸಾಲದೆಂಬಂತೆ ಅದೇ ಬಣ್ಣದ ಒಳ ಉಡುಪು! ಹಾಸಿಗೆಯ ಮೇಲೆ ಕಪ್ಪು ಬಣ್ಣದ ಹೆಬ್ಬಾವು ಬಿದ್ದುಕೊಂಡಿದೆಯೇನೋ ಎಂಬಂತೆ ಭಾಸವಾಯಿತು. ಮಿಸುಕಾಡಲೂ ಬಿಡದಂತೆ ಆತನಿಗೆ ಕೈಕೋಳ ಹಾಕಿ ನಮ್ಮ ವಾಹನದೊಳಕ್ಕೆ ಕೂರಿಸಿಕೊಂಡೆವು. ಆತ ಗಣೇಶ್ ಅಲಿಯಾಸ್ ಕಾಲಾ ಪತ್ಥರ್. ‘ಮೋಸ್ಟ್ ವಾಂಟೆಂಡ್’ ಆರೋಪಿಯ ಬಗ್ಗೆ ಆತನಿಂದ ಮಾಹಿತಿ ಬಯಸಿದೆವು. ತನಗೆ ಗೊತ್ತೇ ಇಲ್ಲ ಎಂದು ವಾದಿಸತೊಡಗಿದ. ಸೂಕ್ತ ‘ಉಪಚಾರ’ ಸಿಕ್ಕ ಮೇಲೆ ಕುಂಯೋಮುರ‌್ರೊ ಎನ್ನುತ್ತ ಬಾಯಿ ಬಿಟ್ಟ. ಆದರೆ ಒಂದು ಕೋರಿಕೆ ಸಲ್ಲಿಸಿದ. ‘ಆತನ ಅಡ್ಡಾ ಎಲ್ಲಿದೆ ಎನ್ನುವುದನ್ನು ಪೊಲೀಸರಿಗೆ ಹೇಳಿದ್ದು ಗೊತ್ತಾದರೆ, ಜೈಲಿನಿಂದ ಹೊರ ಬಂದ ತಕ್ಷಣ ನನ್ನನ್ನು ಮುಗಿಸಿ ಬಿಡುತ್ತಾನೆ. ಹಾಗಾಗಿ ನಿಮ್ಮಲ್ಲಿಬ್ಬರು ನನ್ನ ಜತೆ ಬರಲಿ. ಆ ಮನೆ ತೋರಿಸುತ್ತೇನೆ. ನಾನು ವಾಪಸ್ ಈ ಸ್ಥಳಕ್ಕೆ ಬಂದ ಬಳಿಕವೇ ನೀವು ಅಲ್ಲಿ ರೈಡ್ ಮಾಡಿ ಸರ್; ಎಂದ. ನಾವು ಯಸ್ ಅಂದೆವು. ಆ ದಿನಗಳಲ್ಲಿ ಪ್ರವರ್ಧಮಾನಕ್ಕೆ ಬರುತ್ತಿದ್ದ ಕುಖ್ಯಾತ ರೌಡಿಯೊಬ್ಬನ ಸೆರೆಗಾಗಿ ನಾವು ಕೈಗೊಂಡಿದ್ದ ಮಧ್ಯರಾತ್ರಿ ಕಾರ್ಯಾಚರಣೆ ಆಗ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದು ನಿಂತಿತು. ಬಾಣಸವಾಡಿ ಠಾಣೆ ವ್ಯಾಪ್ತಿಯ ಕಮ್ಮನಹಳ್ಳಿಯ ಮುನೇಗೌಡ ರಸ್ತೆಯಲ್ಲಿರುವ ಒಂದು ಅಂತಸ್ತಿನ ಪುಟ್ಟ ಮನೆಯಲ್ಲಿ ಆತ ಇರುವುದು ಪಕ್ಕಾ ಆಯಿತು. ಆತನ ಹೆಸರು ಶೇಖರ್ ಅಲಿಯಾಸ್ ಸ್ಟೇಷನ್ ಶೇಖರ್, ಭೂಗತ ಜಗತ್ತಿನ ಕುಖ್ಯಾತ ಡಾನ್ ಎಂ.ಪಿ. ಜಯರಾನ್‌ನ ಬಲಗೈ ಬಂಟ ಆತ. ಚಿತ್ತೂರಿನಿಂದ ನಾಡ ಪಿಸ್ತೂಲು ಮತ್ತು ಕಚ್ಚಾ ಬಾಂಬ್‌ಗಳನ್ನು ತಂದು ಬೆಂಗಳೂರಿಗೆ ಪರಿಚಯಿಸಿದ್ದೇ ಆತನ. ಅಲ್ಲಿಯವರೆಗೆ ಮಚ್ಚು, ಲಾಂಗ್ ಹಿಡಿದು ಬಡಿದಾಡುತ್ತಿದ್ದ ರೌಡಿಗಳು ಪಿಸ್ತೂಲ್ ಜಳಪಿಸಲು ಶುರು ಮಾಡಿದ್ದೇ ಈತನಿಂದಾಗಿ.
ಶೇಖರ್ ಅಪ್ಪ ಪಿ.ನಾಗರಾಜ್ ಅಲಿಯಾಸ್ ಆಚಾರಪ್ಪ ಎಂಬುವರು ಸಿಟಿ ರೈಲ್ವೆ ಸ್ಟೇಷನ್ ಬಳಿ ‘ಸೀಗಲ್ ಟೂರ್ಸ್ ಆ್ಯಂಡ್ ಟ್ರಾವೆಲ್ಸ್’ ನಡೆಸುತ್ತಿದ್ದ. ಅದು ಟ್ರಾವೆಲ್ಸ್ ಮಾಫಿಯಾದ ಪರ್ವ ಕಾಲ. ಅಂಡರ್‌ವರ್ಲ್ಡ್ ಡಾನ್‌ಗಳ ಕೃಪಾಕಟಾಕ್ಷವಿಲ್ಲದೆ ಮೆಜೆಸ್ಟಿಕ್ ಸುತ್ತಮುತ್ತ ಟ್ರಾವೆಲ್ಸ್ ವ್ಯವಹಾರ ನಡೆಸುವಂತೆಯೇ ಇರಲಿಲ್ಲ. ಇದೇ ವ್ಯವಹಾರಕ್ಕೆ ಸಂಬಂಧಿಸಿ ಶ್ರೀರಾಂಪುರದ ಕುಖ್ಯಾತ ರೌಡಿ ರಾಜೇಂದ್ರ ಎಂಬಾತನನ್ನು ಶೇಖರ್ ಹಾಡಹಗಲೇ, ನೂರಾರು ಜನರ ಸಮ್ಮುಖದಲ್ಲಿ ಕೊಚ್ಚಿ ಕೊಂದಿದ್ದ. ಇಷ್ಟೇ ಅಲ್ಲ, ರೈಲು ನಿಲ್ದಾಣದ ಮುಂಭಾಗದಲ್ಲಿದ್ದ ಕಾರಂಜಿಯ ನೀರಿನಲ್ಲಿ ರಕ್ತಸಿಕ್ತ ಮಚ್ಚನ್ನು ಶುಚಿಗೊಳಿಸಿ ಆಟೊ ಹಿಡಿದು ಮನೆಗೆ ಹೋಗಿದ್ದ! ಅಲ್ಲೇ ಒಂದು ಟ್ರಾಫಕ್ ಪೊಲೀಸ್ ಚೌಕಿ ಇತ್ತು. ಪೊಲೀಸರೆಲ್ಲ ಈ ದೃಶ್ಯವನ್ನು ನಿಸ್ಸಹಾಯಕರಾಗಿ ನಿಂತು ನೋಡಿದ್ದರು. ಈ ಘಟನೆ ಆಗ ದೊಡ್ಡ ಸುದ್ದಿಯಾಗಿತ್ತು. ಈ ಪ್ರಕರಣದ ಬಳಿಕ ಶೇಖರ್, ಸ್ಟೇಷನ್ ಶೇಖರ್ ಎಂಬ ‘ಬಿರುದಾವಳಿ’ಯೊಂದಿಗೆ ಕೆನೆದಾಡತೊಡಗಿದೆ.
(ಭಾಗ ಮುಂದುವರೆಯುವುದು)
Discussion about this post