ಅಂದ ಹಾಗೆ ‘ನಕಲಿ ಎನ್‌ಕೌಂಟರ್’ ದೂರಿನ ಹಿಂದಿನ ಸೂತ್ರಧಾರ ಅಂದಿನ ಕುಖ್ಯಾತ ಡಾನ್ ಎಂ.ಪಿ. ಜಯರಾಜ್. ಪೊಲೀಸರೆಂದರೆ ಆತ ಕೆಂಡಕಾರುತ್ತಿದ್ದ. ಪೊಲೀಸರನ್ನು ವಾಚಾಮಗೋಚರ ನಿಂದಿಸಲೆಂದೇ ‘ಗರೀಬಿ ಹಟಾವೊ’ ಹೆಸರಿನ ಪತ್ರಿಕೆ ಹೊರತರುತ್ತಿದ್ದ. ಆತ ಎಂಥ ವಿಲಕ್ಷಣ ಆಸಾಮಿ ಎಂದರೆ, ಒಮ್ಮೆ ಎಂಎಲ್‌ಸಿ ಚುನಾವಣೆಗೆ ಸ್ಪರ್ಧಿಸಿದ್ದ. ಆತನ ಚುನಾವಣಾ ಗುರುತು ಹುಲಿ. ಸರ್ಕಸ್‌ನಿಂದ ಜೀವಂತ ಬೋನಿನಲ್ಲಿಟ್ಟಿದ್ದ ಹುಲಿಯನ್ನು ತರಿಸಿ ಪ್ರಚಾರದ ಮೆರವಣಿಗೆ ನಡೆಸಿದ್ದ. ಪ್ರಕರಣವೊಂದರಲ್ಲಿ ಸೆಂಟ್ರಲ್ ಜೈಲ್ ಸೇರಿದ್ದ ಆತ, ಅಲ್ಲಿಂದಲೇ ಸಂಚು ರೂಪಿಸಿ ತನ್ನ ವಕೀಲ ಎಂ.ವಿ. ವರ್ಧಮಾನಯ್ಯ ಎಂಬುವರ ಮೂಲಕ ಮಹಿಳೆಯೊಬ್ಬಳನ್ನು ಎತ್ತಿ ಕಟ್ಟಿ ನಕಲಿ ಎನ್‌ಕೌಂಟರ್‌ನ ದೂರು ಕೊಡಿಸಿದ್ದ.
ರಶೀದ್ ಕೊಲೆ ಪ್ರಕರಣದ ತನಿಖೆ ನಡೆಸುತ್ತಿದ್ದ ಸಿಬಿಐ ಅಧಿಕಾರಿಯ ಕೈಗೇ ಈ ತನಿಖೆಯೂ ಹಸ್ತಾಂತರವಾಯಿತು. ಹಾಗಾಗಿ ನಮ್ಮ ಬಂಧನ ಗ್ಯಾರಂಟಿ ಎಂಬ ಮಾತು ಕೇಳಿ ಬಂತು. ರಾಜ್ಯದ ಜನತಾ ಪಕ್ಷದ ಸರಕಾರವನ್ನು ಬೀಳಿಸಲು ಕೇಂದ್ರದ ಕಾಂಗ್ರೆಸ್ ಸರಕಾರ ಹವಣಿಸುತ್ತಿದೆ. ಹಾಗಾಗಿ ಅದು ಸಿಬಿಐಯನ್ನು ಬಳಸಿಕೊಂಡು, ಈ ಪ್ರಕರಣದಲ್ಲಿ ರಾಜ್ಯ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲಿದೆ ಎಂಬ ಮಾತೂ ಕೇಳಿ ಬಂತು.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ, ಲೋಕಾಯುಕ್ತರಾಗಿ ಖ್ಯಾತಿ ಗಳಿಸಿ ನಿವೃತ್ತರಾಗಿರುವ ನ್ಯಾ.ಎನ್.ಸಂತೋಷ್ ಹೆಗ್ಡೆ ಅವರು ಆಗ ಹೈಕೋರ್ಟ್ ವಕೀಲರಾಗಿದ್ದರು. ನಾವು ಅವರನ್ನು ಲೇವಲ್ಲಾ ರಸ್ತೆಯಲ್ಲಿದ್ದ ಅವರ ಕಛೇರಿಯಲ್ಲಿ ಭೇಟಿಯಾಗಿ ಸುಖಾಸುಮ್ಮನೆ ನಮ್ಮನ್ನು ತನಿಖೆಯ ಬಲೆಯಲ್ಲಿ ಸಿಲುಕಿಸಿದರೆ ನಿರ್ಭಯವಾಗಿ ಕರ್ತವ್ಯ ನಿರ್ವಹಿಸುವುದಾದರು ಹೇಗೆ ಎಂದು ಅಳಲು ತೋಡಿಕೊಂಡೆವು. ಅವರು ಸಿಬಿಐ ತನಿಖೆ ವಿರುದ್ಧ ಹೈಕೋರ್ಟ್‌ನಲ್ಲಿ ರಿಟ್ ಸಲ್ಲಿಸಿದರು. ಮುಖ್ಯ ನ್ಯಾಯಮೂರ್ತಿ ಪೀಠದ ಮುಂದೆ ಅರ್ಜಿ ವಿಚಾರಣೆಗೆ ಬಂತು. ನ್ಯಾ. ಸಂತೋಷ್ ಹೆಗ್ಡೆ ಸುಮಾರು ಒಂದು ಗಂಟೆ ಕಾಲ ನಿರರ್ಗಳವಾಗಿ ಸಾಕ್ಷ್ಯಾಧಾರ ಸಮೇತ ವಾದಿಸಿದರು.
ಸಿಬಿಐ ತನಿಖೆಯ ಆದೇಶವನ್ನು ವಜಾ ಮಾಡಿದ ನ್ಯಾಯಪೀಠ, ಇಲಾಖಾ ತನಿಖೆಗೆ ಆದೇಶಿಸಿತು. ಡಿಸಿಪಿ ಟಿ.ಜಯಪ್ರಕಾಶ್ ತನಿಖೆ ನಡೆಸಿ, ಆರೋಪ ನಿರಾಧಾರ ಎಂದು ವರದಿ ಸಲ್ಲಿಸಿದರು. ಈ ವರದಿಯನ್ನ ಆ ಮಹಿಳೆ ಮೂಲಕ ಮತ್ತೆ ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಯಿತು. ಡಿಸಿಪಿ ಬೇಕಲ್ ಮೂಲಕ ಮತ್ತೊಮ್ಮೆ ತನಿಖೆ ನಡೆಯಿತು. ಅವರೂ ‘ಬಿ’ ರಿಪೋರ್ಟ್ ಸಲ್ಲಿಸಿದರು. ಅಂತೂ ನಾವು ನಕಲಿ ಎನ್‌ಕೌಂಟರ್ ಆರೋಪದ ಕುಣಿಕೆಯಿಂದ ಪಾರಾದೆವು. ಆದರೆ ಇಷ್ಟಾಗುವಷ್ಟರಲ್ಲಿ ನಾಲ್ಕು ವರ್ಷ ಕಳೆದು ಹೋಗಿದ್ದವು. ಅಷ್ಟು ವರ್ಷ ನಾವು ಮಾನಸಿಕ ಕಿರಿಕಿರಿ ಅನುಭವಿಸಿದ್ದಂತೂ ಸತ್ಯ. ಈ ನಡುವೆ ರೌಡಿ ಜಯರಾಜ್ ಹಾಡಹಗಲೇ ನಡುರಸ್ತೆಯಲ್ಲಿ ಕೊಲೆಯಾಗಿ ಹೋದ. ದೂರು ಕೊಡಿಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದ ಆತನ ವಕೀಲ ವರ್ಧಮಾನಯ್ಯ ಕೂಡ ಆತನ ಜೊತೆಗೆ ಬಲಿಯಾದ.
ಆಗ ಹೈಕೋರ್ಟ್ ವಕೀಲರಾಗಿದ್ದ ನ್ಯಾ. ಸಂತೋಷ್ ಹೆಗ್ಡೆ ಅವರು ಒಂದೇ ಒಂದು ರೂಪಾಯಿಯನ್ನು ಪಡೆಯದೆ ಹೈಕೋರ್ಟ್‌ನಲ್ಲಿ ನಮ್ಮ ಪರ ವಾದಿಸಿ, ಸಮಾಜ ಘಾತುಕ ಶಕ್ತಿಗಳ ಹುನ್ನಾರವನ್ನು ವಿಫಲಗೊಳಿಸಿದರು.
(ಮುಂದುವರೆಯುವುದು)
Discussion about this post