ಎಫ್‌ಎಸ್‌ಎಲ್ ತಂಡ ಬರುವವರಿಗೆ ಎನ್‌ಕೌಂಟರ್ ನಡೆದ ಸ್ಥಳದಲ್ಲಿನ ಯಾವುದೇ ವಸ್ತುವನ್ನು ಮುಟ್ಟಬೇಡಿ ಎಂದು ಅಂದಿನ ದಕ್ಷ ಡಿಸಿಪಿ ಟಿ. ಜಯಪ್ರಕಾಶ್ ಸೂಚಿಸಿದ್ದರು. ನಾವು ಹಾಗೆಯೇ ನಡೆದುಕೊಂಡಿದ್ದೇವೆ. ಆತ ರೌಡಿಯಾಗಲಿ ಯಾರೇ ಆಗಲಿ, ನಮ್ಮ ಕೈಯಲ್ಲಿ ಅಧಿಕಾರ ಇದೆ ಎಂದುಕೊಂಡು ಸುಮ್ಮ ಸುಮ್ಮನೆ ಗುಂಡಿಟ್ಟು ಸಾಯಿಸುವುದು ‘ಮರ್ಡರ್ ಕೇಸ್’ ಎನ್ನುವುದರ ಅರಿವು ನಮಗಿತ್ತು.
ವಿಧಿ ವಿಜ್ಞಾನ ಪರಿಣಿತರು ಬಂದು ಆಲ್ಕೋಹಾಲ್ ಮಿಶ್ರಿತ ಹತ್ತಿ ಬಳಸಿ ಮೃತ ರೌಡಿಯ ಕೈಯನ್ನು ಒರೆಸಿ ಸಾಕ್ಷ್ಯ ಸಂಗ್ರಹಿಸಿದರು. ಹಾಗೆಯೇ, ಜೇನಿನ ಮೇಣವನ್ನು ಕೈಗೆ ಮೆತ್ತಿ ಗಂಧಕದ ಸೂಕ್ಷ್ಮ ಅಣುಗಳನ್ನು ಒಟ್ಟು ಮಾಡಿದರು. ಆತ ಗುಂಡು ಹಾರಿಸಿದ್ದ ಎನ್ನುವುದಕ್ಕೆ ಇದು ಅತ್ಯಂತ ಮಹತ್ವದ ಸಾಕ್ಷ್ಯ ಒದಗಿಸಿತು.
ಬುಲೆಟ್ ಅಂದರೆ ಒಂದು ಲೋಹದ ಚೂಪು ತುದಿಯ ವಸ್ತು ಅಷ್ಟೆ ಎಂಬುದು ಬಹುತೇಕ ಜನರ ತಿಳಿವಳಿಕೆ. ವಾಸ್ತವವಾಗಿ, ಬುಲೆಟ್‌ನ ಒಳಗೆ ಗಂಧಕ ತುಂಬಿರುತ್ತದೆ. ಗುಂಡಿನ ಹಿಂಬದಿಯ ಮಧ್ಯದಲ್ಲಿ ಮೆತ್ತಗಿನ ಭಾಗ (ಫರ್ಗೂಸನ್ ಕ್ಯಾಪ್) ಇರುತ್ತದೆ. ಬಂದೂಕು ಅಥವಾ ರಿವಾಲ್ವರ್‌ನ ಟ್ರಿಗರ್ ಒತ್ತಿದಾಗ ಆ ಭಾಗದ ಮೇಲೆ ಒತ್ತಡ ಬಿದ್ದು ಗಂಧಕಕ್ಕೆ ಬೆಂಕಿ ಹೊತ್ತಿಕೊಳ್ಳುತ್ತದೆ. ಆ ಒತ್ತಡದ ರಭಸಕ್ಕೆ ಗುಂಡು ಮುಂದಕ್ಕೆ ಚಿಮ್ಮುತ್ತದೆ. ಹೀಗೆ ಗುಂಡು ಸಿಡಿದ ಬಳಿಕ ಅದರೊಳಗಿನ ಗಂಧಕದ ಸೂಕ್ಷ್ಮ ಅಣುಗಳು ಕೈಗೆ ಮೆತ್ತಿಕೊಳ್ಳುತ್ತವೆ. ವ್ಯಕ್ತಿ ಗುಂಡು ಹಾರಿಸಿದ್ದಾನೋ ಇಲ್ಲವೋ ಎನ್ನುವುದಕ್ಕೆ ಇದೇ ನಿರ್ಣಾಯಕ ಸಾಕ್ಷ್ಯ.
ನಾಲ್ಕೈದು ವರ್ಷಗಳ ಹಿಂದೆ ಬೆಂಗಳೂರಿನ ಖಾಸಗಿ ಕಂಪನಿಯೊಂದರ ಮಾಲೀಕರು ತಮ್ಮ ಕಚೇರಿಯ ಚೇಂಬರ್‌ನಲ್ಲೇ ಗುಂಡೇಟಿಗೆ ಬಲಿಯಾಗಿದ್ದರು ಈ ಬಗ್ಗೆ ಆ ಕಂಪನಿಯ ಮಹಿಳಾ ಸಿಬ್ಬಂದಿಯೊಬ್ಬರು ದೂರು ನೀಡಿ, ಅಪರಿಚಿತ ವ್ಯಕ್ತಿ ಇದ್ದಕ್ಕಿದ್ದಂತೆ ಕಚೇರಿಗೆ ನುಗ್ಗಿ ಬಾಸ್ ಮೇಲೆ ಗುಂಡು ಹಾರಿಸಿ ಪರಾರಿಯಾದ ಎಂದಿದ್ದರು. ಈ ಪ್ರಕರಣ ಅತ್ಯಂತ ನಿಗೂಢವಾಗಿತ್ತು. ಯಾವ ಕೋನದಿಂದ ನೋಡಿದರೂ ಸುಳಿವು ಸುಳಿಯುತ್ತಿರಲಿಲ್ಲ. ಆ ಘಟನೆ ನಡೆದ ಠಾಣೆ ವ್ಯಾಪ್ತಿಯ ಇನ್‌ಸ್ಪೆಕ್ಟರ್ ಈ ಬಗ್ಗೆ ನನ್ನಲ್ಲಿ ಚರ್ಚಿಸುತ್ತಿದ್ದಾಗ, ದೂರು ಕೊಟ್ಟ ಆ ಮಹಿಳೆ ಮೇಲೆ ನಿಮಗೆ ಸಂಶಯ ಏಕಿಲ್ಲ ಎಂದೆ. ‘ಛೆ ಛೆ ಆಕೆ ಸಭ್ಯ ಹೆಣ್ಣ ಮಗಳು. ಆಕೆ ಗುಂಡು ಹೊಡೆದು ಸಾಯಿಸಲು ಸಾಧ್ಯವೇ,’ ಎಂದರು. ‘ಸುಮ್ಮನೆ ಒಮ್ಮೆ ಆಕೆಯ ಹಸ್ತವನ್ನು ವಿಧಿ ವಿಜ್ಞಾನ ಪರಿಣಿತರಿಂದ ಟೆಸ್‌ಟ್ ಮಾಡಿಸಿ,’ ಎಂದೆ.
ಆದಾಗಲೇ ಘಟನೆ ನಡೆದು ಎರಡು ದಿನ ಕಳೆದು ಹೋಗಿದ್ದವು. ಯುವತಿಯನ್ನು ಕರೆಸಿ ಫೊರೆನ್ಸಿಕ್ ಟೆಸ್‌ಟ್ಗೆ ಒಳಪಡಿಸಲಾಯಿತು. ಅಚ್ಚರಿಯ ಸತ್ಯವೊಂದು ಹೊರ ಬಿತ್ತು. ಬಾಸ್ ಮೇಲೆ ಗುಂಡು ಹಾರಿಸಿದ್ದು, ಬೇರಾರೂ ಅಲ್ಲ. ಆಕೆಯೇ! ಸ್ನಾನ ಮಾಡಿ, ಹಲವಾರು ಬಾರಿ ಕೈ ತೊಳೆದುಕೊಂಡಿದ್ದರೂ ಉಗುರಿನ ಅಡಿಯಲ್ಲಿ ಗಂಧಕದ ಅಣು ಭದ್ರವಾಗಿ ಕುಳಿತಿತ್ತು. ಮಾಲೀಕ ಮತ್ತು ಆಕೆ ಇಬ್ಬರೂ ವಿವಾಹಿತರೇ. ಆದರೆ ಅವರ ನಡುವೆ ಅನೈತಿಕ ಸಂಬಂಧ ಬೆಳೆದಿತ್ತು. ಆದರೆ ಆ ಕಚೇರಿಗೆ ಆಕೆಗಿಂತ ಚೆಂದಗಿನ ಮತ್ತೊಬ್ಬ ಯುವತಿಯ ಪ್ರವೇಶವಾಯಿತು. ಬಾಸ್ ಈಕೆಯನ್ನು ನಿರ್ಲಕ್ಷಿಸಿ ಆಕೆಯತ್ತ ಒಲಿದ. ಹಾಗಾಗಿ ಈಕೆ ಕುದಿಯುತ್ತಿದ್ದಳು. ಈ ನಡುವೆ ಈಕೆಗೆ ಬೇರೊಬ್ಬಗ ವಿವಾಹಿತ ಶ್ರೀಮಂತನ ಗೆಳೆತನ ಬೆಳೆಯಿತು. ಆತನ ಪಿಸ್ತೂಲ್ ಬಳಸಿ ಈಕೆ ಈ ಕೃತ್ಯ ಎಸಗಿದ್ದಳು. ಫೊರೆನ್ಸಿಕ್ ಪರೀಕ್ಷೆ ಈ ಕೊಲೆಯ ರಹಸ್ಯವನ್ನು ಬಯಲಿಗೆಳೆದಿತ್ತು.
(ಮುಂದುವರೆಯುವುದು)
Discussion about this post