1989
ಕಾನ್‍ಸ್ಟೇಬಲ್ ನಾಗರಾಜ್ ಠಾಣೆಯೊಳಗೆ ಓಡೋಡಿ ಬಂದು ನೆಲದ ಮೇಲೆ ಬಿದ್ದ ಹೊರಳಾಡತೊಡಗಿದರು. ಯಾರೋ ಮುಖದ ಮೇಲೆ ಬಿಸಿ ನೀರು ಎರಚಿದರು ಸಾರ್ ಎಂದು ಗೋಳಾಡುತ್ತಿದ್ದರು. ನಾವೆಲ್ಲ ಎದ್ದು ಬಂದು ನೋಡಿದರೆ, ಅವರ ಮುಖವೆಲ್ಲ ಸುಟ್ಟು ವಿರೂಪವಾಗಿ ಹೋಗಿತ್ತು. ಸಮವಸ್ತ್ರ ಸಮೇತ ಎದೆ ಭಾಗವೆಲ್ಲ ಸುಟ್ಟಿತ್ತು. ಬಿಸಿ ನೀರು ಎರಚಿದ್ದಲ್ಲ. ಅದು ಆ್ಯಸಿಡ್ ದಾಳಿ ಎನ್ನುವುದು ಖಚಿತವಾಗುತ್ತಲೇ ನಾವು ಅವರನ್ನು ಆಸ್ಪತ್ರೆಗೆ ಸೇರಿಸಿದೆವು. ಇದೇ ರೀತಿ ಆ ಪಾತಕಿ ಏಳು ಮಂದಿ ಪೊಲೀಸರು ಮತ್ತು 9 ಸುಂದರ ಯುವತಿಯರ ಮುಖಗಳನ್ನು ಆ್ಯಸಿಡ್ ಎರಚಿ ವಿರೂಪಗೊಳಿಸಿದ್ದ.
ಪೊಲೀಸರು ಸಂಜೆ ಹೊತ್ತು ಸಮವಸ್ತ್ರದಲ್ಲಿ ಓಡಾಡಲು ಹೆದರುವಂಥ ಪರಿಸ್ಥಿತಿ ನಿರ್ಮಾಣವಾಯಿತು. ಗಾಯಾಳು ಪೊಲೀಸರನ್ನು ಸಂಘಟನೆಯೊಂದು ಮುಖ್ಯಮಂತ್ರಿ ಮತ್ತು ರಾಜ್ಯಪಾಲರ ಮುಂದೆ ನಿಲ್ಲಿಸಿ, ಪೊಲೀಸರ ಪರಿಸ್ಥಿತಿಯೇ ಹೀಗಾಗಿರುವಾಗ ಜನಸಾಮಾನ್ಯರ ಪಾಡೇನು? ಹಿರಿಯ ಪೊಲೀಸ್ ಅಧಿಕಾರಿಗಳು ಬುಲೆಟ್ ಮೋಟಾರ್ ಬೈಕ್, ಜೀಪ್, ಕಾರಲ್ಲಿ ಸುತ್ತಾಡುತ್ತಾರೆ. ಆದರೆ ಯಾವ ಸೌಲಭ್ಯವೂ ಇಲ್ಲದ ಇಂಥ ಪೇದೆಗಳು ಬಲಿಪಶುವಾಗುತ್ತಾರೆ. ಇವರನ್ನು ಕಾಪಾಡಿ’ ಎಂದು ಮನವಿ ಸಲ್ಲಿಸಲಾಯಿತು.
ಬೆಂಗಳೂರಿನಲ್ಲಿ ಪೊಲೀಸರ ಮೇಲೆ ನಡೆಯಲಾರಂಭಿಸಿದ ಸರಣಿ ಆ್ಯಸಿಡ್ ದಾಳಿ ಭಾರಿ ಸುದ್ದಿ ಮಾಡಲಾರಂಭಿಸಿತು. ಪೊಲೀಸ್ ವಲಯದಲ್ಲಿ ತಲ್ಲಣ ಮೂಡಿಸಿತು.
ನಾನಾಗ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಲಾ ಆ್ಯಂಡ್ ಆರ್ಡರ್ ಎಸ್‍ಐ. 1906ರಲ್ಲೇ ಕಾರ್ಯಾರಂಭ ಮಾಡಿದ್ದ ಆ ಠಾಣೆಯ ಬ್ರಿಟಿಷ್ ಶೈಲಿಯ ಕಟ್ಟಡ ಇಂದಿಗೂ ಗಮನ ಸೆಳೆಯುತ್ತದೆ. ಒಂದು ದಿನ-ಆ ಠಾಣೆ ವ್ಯಾಪ್ತಿಯ ಪತ್ತೆಯಾಗದ ಪ್ರಕರಣಗಳನ್ನು ಅವಲೋಕಿಸುತ್ತಿದ್ದೆ. ಆಗ ಅದೇ ಠಾಣೆಯ ಜೈಸಿಂಗ್ ಎಂಬ ಪೇದೆಯ ಮೇಲೆ ಆ್ಯಸಿಡ್ ದಾಳಿ ನಡೆದ ಪ್ರಕರಣ ಗಮನಕ್ಕೆ ಬಂತು. ಆತನನ್ನು ವಿಚಾರಿಸಿದಾಗ-ಕಬ್ಬನ್ ಪಾರ್ಕ್‍ನಲ್ಲಿ ಕುಳಿತಿದ್ದ ಪ್ರೇಮಿಗಳನ್ನು ಬೆದರಿಸಿ ಚಿನ್ನಾಭರಣ ದೋಚುತ್ತಿರುವ ಮಾಹಿತಿ ಸಿಕ್ಕಾಗ ಅಲ್ಲಿ ಧಾವಿಸಿದೆ. ಅಪರಿಚಿತ ವ್ಯಕ್ತಿಯನ್ನು ವಿಚಾರಿಸುತ್ತಿದ್ದಾಗ ಆತ ಚಿಕ್ಕ ಕ್ಯಾನ್‍ನಲ್ಲಿ ಇಟ್ಟುಕೊಂಡಿದ್ದ ಆ್ಯಸಿಡ್‍ಅನ್ನು ಮುಖಕ್ಕೆ ಎರಚಿ ಪರಾರಿಯಾದ. ಮಂಕಿ ಕ್ಯಾಪ್ ಧರಿಸಿದ್ದರಿಂದ ಆತನ ಮುಖದ ಗುರುತು ಸ್ಪಷ್ಟವಾಗಲಿಲ್ಲ ಎಂಬ ಮಾಹಿತ ಕೊಟ್ಟಿದ್ದ.
ಅದೇ ಹೊತ್ತಿಗೆ ಕಬ್ಬನ್ ಪಾರ್ಕ್ ಠಾಣೆ ವ್ಯಾಪ್ತಿಯಲ್ಲಿ ವಾರಕ್ಕೆ 3-4 ಫಿಯೆಟ್ ಕಾರುಗಳು ಕಳುವಾಗಲು ಶುರುವಾದವು. ಕೆಲವು ಕಾರುಗಳು ಆ ಕಾಲದಲ್ಲಿ ಬೆಂಗಳೂರಿನ ಹೊರವಲಯ ಎಂದು ಕರೆಯಲಾಗುತ್ತಿದ್ದ ಕೋರಮಂಗಲ, ಜೆ.ಸಿ. ನಗರ ಮುಂತಾದ ಕಡೆ ಅನಾಥ ಸ್ಥಿತಿಯಲ್ಲಿ ಪತ್ತೆಯಾಗುತ್ತಿದ್ದವು. ಆದರೆ ಅವುಗಳಲ್ಲಿನ ಬೆಲೆ ಬಾಳುವ ಬಿಡಿ ಭಅಗಗಳು, ಟೇಪ್ ರೆಕಾರ್ಡರ್, ಪರ್ಸ್, ಬ್ಯಾಜ್ ಮುಂತಾದವು ನಾಪತ್ತೆಯಾಗಿರುತ್ತಿದ್ದವು. ಆಗ ಅಂಬಾಸಿಡರ್, ಫಿಯಟ್ ಕಾರುಗಳ ಕಾಲ. ಆಗ ತಾನೆ ಮಾರುತಿ-800 ಕಾರುಗಳು ರಸ್ತೆಗಿಳಿಯಲಾರಂಭಿಸಿದ್ದರು.
ಕಾರು ಕಳವು ಎಂದರೆ ಆಗ ಗಂಭೀರ ಸ್ವರೂಪದ ಅಪರಾಧ. ಸರ್ಕಲ್ ಇನ್ಸ್‍ಪೆಕ್ಟರ್ ದರ್ಜೆಯ ಆಧಿಕಾರಿಗಳೇ ಇಂಥ ಪ್ರಕರಣದ ತನಿಖೆ ನಡೆಸಬೇಕಿತ್ತು. ಕಬ್ಬನ್ ಪಾರ್ಕ್ ಠಾಣೆಯಲ್ಲಿ ನಾವು ನಾಲ್ಕು ಜನ ಎಸ್‍ಐಗಳಿದ್ದೆವು.
ದಿನಾ ಸಂಜೆ ಒಬ್ಬರಲ್ಲ ಒಬ್ಬರು ನಮ್ಮ ಠಾಣೆಗೆ ಬಂದು `ಹೋಯ್ತು ಸಾರ್ ಹೋಯ್ತು, ಪಾರ್ಕ್ ಮಾಡಿದ್ದ ಕಾರನ್ನೇ ಕದ್ದುಕೊಂಡು ಹೋಗಿಬಿಟ್ರು ಸಾರ್’ ಎಂದು ಗೋಳಾಡುತ್ತಿದ್ದರು. ನಮ್ಮ ಇನ್ಸ್‍ಪೆಕ್ಟರ್ ಬಿಪಿ ಏರಿ ನಮ್ಮನ್ನು ಗದರಲು ಶುರು ಮಾಡುತ್ತಿದ್ದರು. ನಮಗೆ ದಿಕ್ಕೇ ತೋಚುತ್ತಿರಲಿಲ್ಲ. ಕಾರು ಕಳ್ಳತನ ತಡೆಗೆ ಕಾರ್ಯತಂತ್ರವೊಂದನ್ನು ರೂಪಿಸಲಾಯಿತು. ಆಗ ಎಂ.ಜಿ. ರಸ್ತೆಯ ಓರಿಯಂಟಲ್ ಸರ್ಕನಿಂದ (ಈಗಿನ ಕುಂಬ್ಳೆ ಸರ್ಕಲ್) ಬ್ರಿಗೇಡ್ ರಸ್ತೆಯವರೆಗೆ ಒಂದು ಬದಿಯಲ್ಲಿ ಸುಮಾರು 80 ಕಾರುಗಳನ್ನು ಪಾರ್ಕಿಂಗ್ ಮಾಡಲಾಗುತ್ತಿತ್ತು. 10-15 ಕಾರುಗಳ ನಿಗಾವನ್ನು ಒಬ್ಬೊಬ್ಬ ಪೇದೆಗೆ ವಹಿಸಲಾಯಿತು. ಫಿಯೆಟ್ ಕಾರು ಬಂದು ನಿಂತ ತಕ್ಷಣ ಅದರ ನಂಬರ್ ಮತ್ತು ಚಾಲಕರ ಹೆಸರನ್ನು ಬರೆದಿಟ್ಟುಕೊಳ್ಳಬೇಕಿತ್ತು. ಅವರು ವಾಪಸ್ ಬಂದಾಗ ಇನ್ನೊಮ್ಮೆ, ಆ ಕಾರು ಅವರದ್ದೇ ಹೌದು ಎಂಬುದನ್ನು ಖಚಿತಪಡಿಸಿಕೊಳ್ಳಬೇಕಿತ್ತು. ಈ ಕ್ರಮದಿಂದಾಗಿ ಕಾರುಗಳ ಕಳವು ನಿಂತುಹೋಯಿತು.
ಅಂದು 1990ರ ಜನವರಿ 26. ಬೆಳಗ್ಗೆ ಗಣರಾಜ್ಯೋತ್ಸವದ ಪರೇಡ್‍ಗಾಗಿ ಬಂದೋಬಸ್ತ್ ಮುಗಿದ ಬಳಿಕ ಸಂಜೆ ವೇಳೆ ಕಾರುಗಳ ಭದ್ರತೆ ಬಗ್ಗೆ ಹೆಚ್ಚು ಗಮನ ಹರಿಸಲಾಯಿತು. ರಜೆಯ ದಿನವಾದ್ದರಿಂದ ಅಂದು ಸಂಜೆ ಹೆಚ್ಚು ಕಾರುಗಳನ್ನು ನಿಲ್ಲಿಸಲಾಗಿತ್ತು. ಕ್ವೀನ್ಸ್ ಸರ್ಕಲ್ ಬಳಿಯ ಕಿಂಗ್ಸ್ ರಸ್ತೆಯ ಪಾರ್ಕಿಂಗ್ ಸ್ಥಳದಲ್ಲಿ ಸಂಜೆ 7 ಗಂಟೆ ಸುಮಾರಿಗೆ, ಕಾನ್‍ಸ್ಟೇಬಲ್ ನಾಗರಾಜ್ ಕಾರುಗಳ ನಂಬರ್ ನೋಟ್ ಮಾಡಿಕೊಳ್ಳುತ್ತಿದ್ದರು. ಅಷ್ಟರಲ್ಲಿ ಲೂನಾದಲ್ಲಿ ಬಂದ ಮಂಕಿ ಕ್ಯಾಪ್‍ಧಾರಿ ವ್ಯಕ್ತಿ `ಹಲೋ ಪೊಲೀಸ್ ಎಂದು ಕೂಗಿದ. ಆತನತ್ತ ತಿರುಗುತ್ತಲೇ ಆ ವ್ಯಕ್ತಿ ಪ್ಲಾಸ್ಟಿಕ್ ಪಿಚಕಾರಿ ತೆಗೆದು ಆ್ಯಸಿಡ್ ಎರಚಿ ಪಾರಾರಿಯಾದ.
ಈ ಘಟನೆ ನಡೆದ ಕೆಲವೇ ದಿನಗಳಲ್ಲಿ ಕಬ್ಬನ್ ಪಾರ್ಕ್, ಕಮರ್ಷಿಯಲ್ ಸ್ಟ್ರೀಟ್, ಅಶೋಕನಗರ ಪೊಲೀಸ್ ಠಾಣೆಗಳಲ್ಲಿ ಇನ್ನೂ ಆರು ಪೇದೆಗಳ ಮೇಲೆ ಆ್ಯಸಿಡ್ ದಾಳಿ ನಡೆದು, ಪೊಲೀಸ್ ಇಲಾಖೆ ತಲ್ಲಣಿಸುವಂತಾಯಿತು. ಕಾರು ಕಳವು ತಡೆದಿದ್ದಕ್ಕೆ ಪ್ರತಿಕಾರವಾಗಿ ದುಷ್ಕರ್ಮಿ ಆ್ಯಸಿಡ್ ದಾಳಿ ಆರಂಭಿಸಿದ್ದ.
(ಮುಂದುವರೆಯುವುದು)
Discussion about this post