ಅಂದಿನ ಪೊಲೀಸ್ ಆಯುಕ್ತ ಆರ್. ರಾಮಲಿಂಗಂ ಅವರು ಆ್ಯಸಿಡ್ ದಾಳಿಕೋರನನ್ನು ಸೆರೆ ಹಿಡಿಯಲು ಐದು ಸ್ಪೆಷಲ್ ಸ್ಕ್ವಾಡ್ ರಚಿಸಿದರು. ಹಲವಾರು ಪ್ರಕರಣಗಳನ್ನು ಭೇದಿಸಿ ಖ್ಯಾತಿ ಪಡೆದಿದ್ದ ಪೊಲೀಸ್ ಅಧಿಕಾರಿಗಳಾದ ಮೂಡಲಯ್ಯ, ಬಿ.ಕೆ. ಮುನಿಯಪ್ಪ, ಬಿ.ಕೆ. ಶಿವರಾಮ್, ನನಗೆ ಹಾಗೂ ಸಿಸಿಬಿಗೆ ಈ ಕೇಸಿನ ಪತ್ತೆಯ ಹೊಣೆ ಹೊರಿಸಲಾಯಿತು. ಈ ಕೇಸನ್ನು ಭೇದಿಸುವವರಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ, ನಗದು ಬಹುಮಾನ ನೀಡಲಾಗುವುದು ಎಂದು ಕಮಿಷನರ್ ಘೋಷಿಸಿದರು.
ವೆಂಕಟೇಶ್, ಕಟ್ಟಿಮನಿ ಮತ್ತು ವಿಜಯ್‌ಕುಮಾರ್ ಎಂಬ ಪೊಲೀಸ್ ಪೇದೆಗಳನ್ನು ಇಟ್ಟುಕೊಂಡು ನಾನು ಮರುದಿನವೇ ಪಾತಕಿಯ ಬೇಟೆ ಶುರು ಮಾಡಿದೆ. ಚಿಕ್ಕ ಸುಳಿವೂ ಇರಲಿಲ್ಲ. ನಾನು ಅವತ್ತು ಸಂಜೆ ಕಬ್ಬನ್ ಪಾರ್ಕ್ ಠಾಣೆಯಲ್ಲಿ, ತನಿಖೆಯ ದಿಕ್ಕು ತೋಚದೆ ಕುಳಿತಿದ್ದೆ. 9 ಗಂಟೆ ಸುಮಾರಿಗೆ ಎಸ್‌ಐ ಮಂಜುಳಾ ಅವರು, ಒಂದಿಷ್ಟು ಬೀದಿವೇಶ್ಯೆಯರನ್ನು ರೌಂಡಪ್ ಮಾಡಿಕೊಂಡು ಬಂದು ಕೇಸ್ ಹಾಕುತ್ತಿದ್ದರು. ಮಂಜುಳಾ ಅವರು ನನ್ನ ಬ್ಯಾಚ್‌ಮೇಟ್. ಹಾಸನ ಕಡೆಯ ದಿಟ್ಟ ಹೆಣ್ಣು ಮಗಳು, ವೇಶ್ಯೆಯರ ಪೈಕಿ ಒಬ್ಬಳ ಮುಖದ ಎಡಭಾಗ ಸುಟ್ಟು ಹೋಗಿದ್ದು ನನ್ನ ಗಮನಕ್ಕೆ ಬಂತು. ತಕ್ಷಣ ಆಕೆಯನ್ನು ಕರೆದು ವಿಚಾರಿಸಿದಾಗ ಸ್ಫೋಟಕ ಮಾಹಿತಿ ಹೊರಬಿತ್ತು.
‘ಮಂಕಿ ಕ್ಯಾಪ್ ಹಾಕಿಕೊಂಡ ವ್ಯಕ್ತಿಯೊಬ್ಬ ರಾತ್ರಿ ಲೂನಾದಲ್ಲಿ ಬರುತ್ತಾನೆ. ಸೇಂಟ್ ಮಾರ್ಕ್‌ಸ್ ರಸ್ತೆಯ ಫುಟ್‌ಪಾತ್‌ನಲ್ಲಿ ವೇಶ್ಯಾವಾಟಿಕೆಗಾಗಿ ನಿಲ್ಲುವ ಯುವತಿಯರಿಂದ ತಲಾ ನೂರು ರೂ. ವಸೂಲು ಮಾಡುತ್ತಾನೆ. ಕೆಲವೊಮ್ಮೆ ಫಿಯೆಟ್ ಕಾರಿನಲ್ಲಿ ಬಂದು ತನಗಿಷ್ಟದ ಯುವತಿಯನ್ನು ಬಲವಂತವಾಗಿ ಎಳೆದುಕೊಂಡು ಹೋಗುತ್ತಾನೆ. ಅವರನ್ನು ಹೊರವಲಯಕ್ಕೆ ಕರೆದುಕೊಂಡು ಹೋಗಿ ವಿಕೃತವಾಗಿ ಕಾಮತೃಷೆ ತೀರಿಸಿಕೊಳ್ಳೊತ್ತಾನೆ. ಆತ ಹೇಳಿದಂತೆ ಕೇಳದಿದ್ದರೆ ನಿರ್ದಯವಾಗಿ ಆ್ಯಸಿಡ್ ಹಾಕುತ್ತಾನೆ. ಆತ ಎಷ್ಟು ಕ್ರೂರಿ ಎಂದರೆ ಯುವತಿಯೊಬ್ಬಳ ಮರ್ಮಾಂಗಕ್ಕೆ ಆ್ಯಸಿಡ್ ಸುರಿದಿದ್ದ. ಆತನ ಜತೆ ಹೋಗಲು ನಿರಾಕರಿಸಿದ್ದಕ್ಕೆ ನನಗೆ ನೀಡಿದ ಶಿಕ್ಷೆ ಇದು. ಮುಖದ ಸೌಂದರ್ಯವೇ ನಮ್ಮ ಬಂಡವಾಳ. ಆ ಕ್ರೂರಿ ಅದನ್ನೇ ನಾಶ ಮಾಡಿಬಿಟ್ಟ ಸಾರ್…’ ಎಂದು ಲತಾ ಎಂಬ ಆ ಯುವತಿ ಕಣ್ಣೀರು ಹಾಕಿದಳು. ಆಗಲೇ ಗೊತ್ತಾಗಿದ್ದು ಆ ಪಾತಕಿಯ ಹೆಸರು ಸುಂದರ್‌ರಾಜ್ ಅಲಿಯಾಸ್ ಆ್ಯಸಿಡ್ ರಾಜಾ ಅಂತ.
ಲತಾ ಕೊಟ್ಟ ಮಾಹಿತಿ ಅಮೂಲ್ಯವಾಗಿತ್ತು. ಆಕೆಯ ಜತೆಗಿದ್ದ ರೇಷ್ಮಾ ಕೂಡಾ ಸಹಕರಿಸಲು ಮುಂದಾದಳು. ಲೆವೆಲ್ಲೆ ರಸ್ತೆಯ ಸಂಧಿಯಲ್ಲಿ ಗೀತಾ ಎಂಬಾಕೆ ರಾತ್ರಿ 9 ಗಂಟೆ ಸುಮಾರಿಗೆ ಆಗಾಗ ಬಂದು ನಿಲ್ಲುತ್ತಾಳೆ. ಆಕೆಗೆ ರಾಜಾನ ಬಗ್ಗೆ ಖಚಿತ ಮಾಹಿತಿ ಇದೆ ಎಂದಳು. ನಾವು ಆಕೆಯ ಹುಡುಕಾಟದಲ್ಲಿ ತೊಡಗಿದೆವು. ಇವತ್ತು ಗೀತಾ ಬಂದು ನಿಂತಿದ್ದಾಳೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ನಾವೆಲ್ಲ ಅತ್ತ ಧಾವಿಸಿದೆವು. ಇನ್ನೇನು ಸಿಕ್ಕೇ ಬಿಟ್ಟಳು ಎಂಬ ಖುಷಿಯಲ್ಲಿದ್ದೆವು. ಏರ್‌ಲೈನ್‌ಸ್ ಹೋಟೆಲ್ ಸಮೀಪದ ಕ್ರಾಸ್ ರಸ್ತೆಯ ಕತ್ತಲಲ್ಲಿ ಕೆಂಪು ಸೀರೆ ಉಟ್ಟಿದ್ದ ಯುವತಿಯೊಬ್ಬಳು ರಕ್ತದ ಮಡುವಿನಲ್ಲಿ ಒದ್ದಾಡುತ್ತಿರುವುದು ಕಾಣಿಸಿತು. ಆಕೆಯ ಕಿಬ್ಬೊಟ್ಟೆಗೆ ದುಷ್ಕರ್ಮಿಗಳು ತಿವಿದು ಹೋಗಿದ್ದರು. ತತಕ್ಷಣ ಆಕೆಯನ್ನು ಗುರುತಿಸಿದ ರೇಷ್ಮಾ ಹೌಹಾರಿದಳು. ನಾವು ಹುಡುಕುತ್ತಿದ್ದ ಗೀತಾ ಸಾವಿನ ಅಂಚಿನಲ್ಲಿದ್ದಳು. ಬೌರಿಂಗ್ ಆಸ್ಪತ್ರೆಗೆ ಸೇರಿಸಲಾಯಿತಾದರೂ ಆಕೆಯ ಉಸಿರು ನಿಂತು ಹೋಗಿತ್ತು. ಆಕೆ ಬಿದ್ದಿದ್ದ ಸ್ಥಳದಲ್ಲಿ ಒಂದು ಪರ್ಸ್ ಬಿದ್ದಿತ್ತು. ಬಿಚ್ಚಿ ನೋಡಿದರೆ ಅದರೊಳಗೆ 10 ರೂಪಾಯಿಯ ಎರಡು ನೋಟು ಮತ್ತು ಎರಡು ಲಾಲಿಪಾಪ್! ‘ಸಾರ್ ಆಕೆಗೆ ಮೂರು ವರ್ಷದ ಹೆಣ್ಣು ಮಗುವಿದೆ. ಆ ಮಗುವಿಗೆಂದು ಲಾಲಿಪಾಪ್ ಇಟ್ಟುಕೊಂಡಿರಬೇಕು,’ ಎಂದು ರೇಷ್ಮಾ ಹೇಳಿದಾಗ ನನ್ನ ಹೃದಯ ಭಾರವಾಯಿತು.
ಆ ಲಾಲಿಪಾಪ್‌ಗಳನ್ನು ಜೇಬಲ್ಲಿಟ್ಟುಕೊಂಡು ನಾನು ಸಿಬ್ಬಂದಿ ಜತೆ ಗೀತಾಳ ಮನೆ ಹುಡುಕುತ್ತ ಹೊರವಲಯದ ‘ಸೊಳ್ಳೆಪುರ’ ಎಂಬ ಊರು ತಲುಪಿದೆ. ರಾತ್ರಿಯಾಗಿಬಿಟ್ಟಿತ್ತು. ಕೊಲೆಯಾದವಳ ಮುಗ್ಧ ಮಗು ಅಮ್ಮನಿವಾಗಿ ಕಾದು ಕಾದು ನಿದ್ದೆ ಹೋಗಿತ್ತು. ಅವಳನ್ನು ಆ ಮನೆಯಲ್ಲಿ ಏಕಾಂಗಿಯಾಗಿ ಬಿಟ್ಟು, ನಾಲ್ಕು ಕಾಸು ಸಂಪಾದಿಸಲು ಗೀತಾ ಸಿಟಿಗೆ ಕಾಲಿಡುತ್ತಿದ್ದ ಸಂಗತಿ ತಿಳಿದು ದುಃಖವಾಯಿತು. ಆ ಮಗುವನ್ನು ಎಬ್ಬಿಸಿ ಲಾಲಿಪಾಪ್ ಕೈಯಲ್ಲಿಟ್ಟೆ. ಅನಾಥವಾಗಿದ್ದ ಆ ಪುಟಾಣಿಗೆ ಆಸರೆ ಒದಗಿಸಲು ನಿರ್ಧರಿಸಿದೆ.
ಆ ಊರಲ್ಲಿ ವಿಚಿತ್ರ ವಾತಾವರಣ. ಎಲ್ಲೆಡೆ ಸೊಳ್ಳೆಗಳ ಗುಂಯ್ ಎನ್ನುವ ಸದ್ದು. ಮೂಗು, ಬಾಯಿಯೊಳಗೆಲ್ಲ ಅವು ನುಗ್ಗುತ್ತಿದ್ದವು. ಇದರ ಉಪಟಳ ತಡೆಯಲಾರದೆ ಜನ ಕಂಡಕಂಡಲ್ಲಿ ಒಣ ಎಲೆಗಳನ್ನು ರಾಶಿ ಹಾಕಿ ಬೆಂಕಿ ಹಾಕಿದ್ದರು. ಅವುಗಳಿಂದ ಎದ್ದ ಹೊಗೆಯ ಘಾಟಿಗೆ ಉಸಿರು ಕಟ್ಟುತ್ತಿತ್ತು. ಏನಿದು ಇಲ್ಲಿ ಇಷ್ಟೊಂದು ಸೊಳ್ಳೆಗಳು ಎಂದು ಸ್ಥಳೀಯರೊಬ್ಬರಲ್ಲಿ ಕೇಳಿದೆವು. ಅವರು ಬೋರ್ಡ್ ತೋರಿಸಿದರು. ‘ಸೊಳ್ಳೆಪುರ’ ಎಂದು ಬರೆದಿತ್ತು! ಸೊಳ್ಳೆಪುರದಲ್ಲಿ ಸೊಳ್ಳೆಗಳಿರದೆ ಇನ್ನೇನಿರಬೇಕಿತ್ತು ಸ್ವಾಮಿ ಎಂಬಂತಿತ್ತು ಆ ಮನುಷ್ಯನ ಮುಖಭಾವ.
Discussion about this post