1987
ನಾವು ಯಲಹಂಕದ ಬಾರ್‌ಗೆ ಹೋಗಿ ಗಣೇಶ್ ಎಂಬಾತನನ್ನು ವಿಚಾರಿಸಿದೆವು. ಆತ ‘ರೌಡಿಗಳು ರೌಡಿಗಳು’ ಎಂದು ಕಿರುಚುತ್ತ ಓಡತೊಡಗಿದ. ನಾವು ಆತನ ಹಿಂದೆ ಓಡಿ ಹಿಡಿದುಕೊಂಡೆವು. ನಾವೆಲ್ಲ ಮಫ್ತಿಯಲ್ಲಿದ್ದುದರಿಂದ, ಜನ ನಮ್ಮನ್ನು ರೌಡಿಗಳೆಂದೇ ಭಾವಿಸಿ ತಿರುಗಿ ಬಿದ್ದರು. ನನಗೂ ಒಂದಿಷ್ಟು ಗೂಸಾಗಳು ಬಿದ್ದವು! ತತಕ್ಷಣ ನಾನು ಐಡೆಂಟಿಟಿ ಕಾರ್ಡ್ ತೋರಿಸಿ ‘ನಾನು ಎಸ್‌ಐ’ ಎಂದು ಕೂಗಿದೆ. ಆದರೆ ಫೋಟೋದಲ್ಲಿ ಮೀಸೆ ಇತ್ತು. ಪಾತಕಿಗಳ ಸೆರೆ ಕಾರ್ಯಾಚರಣೆಗಿಳಿದಿದ್ದ ನಾನು ಗುರುತು ಸಿಗಬಾರದೆಂದು ಮೀಸೆ ಬೋಲಿಸಿಕೊಂಡಿದ್ದೆ.
ಫೋಟೋನೇ ಬೇರೆ ಇವನೇ ಬೇರೆ ಎನ್ನುತ್ತ ಜನ ಮತ್ತೊಂದಿಷ್ಟು ಏಟು ಕೊಡಲು ಮುಂದಾದರು. ಆಗ ಸರ್ವಿಸ್ ರಿವಾಲ್ವರ್ ತೆಗೆದು ಆ ಗುಂಪನ್ನು ಚದುರಿಸಿ, ಗಣೇಶನನ್ನು ಎಳೆದುಕೊಂಡು ಬಂದೆ. ಈ ಇಡೀ ಪ್ರಕರಣ ಬಯಲಿಗೆಳೆಯಲು ಆತ ನೀಡುವ ಮಾಹಿತಿ ನಿರ್ಣಾಯಕವಾಗಿತ್ತು.
ಆ ದಿನಗಳಲ್ಲಿ ಬೆಂಗಳೂರಿನಲ್ಲಿ ಕೊಲೆ, ದರೋಡೆ ಅಪರೂಪವಾಗಿತ್ತು. ಒಂದು ಕೊಲೆ ನಡೆದರೆ ಮಹಾನಗರ ತಲ್ಲಣಿಸಿ ಹೋಗುತ್ತಿತ್ತು. ಹೀಗಿರುವಾಗ ಕೊಲೆ, ದರೋಡೆ ಕೃತ್ಯಗಳು ಸಾಲುಸಾಲಾಗಿ ನಡೆದರೆ ಹೇಗಾಗಬೇಡ? ನಾನಾಗ ವೈಯಾಲಿಕಾವಲ್ ಠಾಣೆಯಲ್ಲಿ ಎಸ್‌ಐ. ಅಶೋಕನಗರ ಠಾಣೆಯ ಬ್ರಿಗೇಡ್ ರಸ್ತೆಯ ಪೆಟ್ರೋಲ್ ಬಂಕ್‌ವೊಂದರ ಕ್ಯಾಷಿಯರ್ ಆಗಿದ್ದ ಜಾನ್ ಕೆನಡಿ ಎಂಬುವರನ್ನು ಏಳು ಯುವಕರು ತಿವಿದು ಸಾಯಿಸಿದ್ದರು. ಅದೊಂದು ಕ್ಷುಲ್ಲಕ ಜಗಳ. ರಾತ್ರಿ 9ರ ಸುಮಾರಿಗೆ ಬಾಳೆ ಹಣ್ಣಿನ ವ್ಯಾಪಾರಿಯನ್ನು ಯುವಕರು ಪೀಡಿಸುತ್ತಿದ್ದರು. ಆತನ ನೆರವಿಗೆ ಧಾವಿಸಿದ ಕ್ಯಾಷಿಯರ್‌ನ ಹೊಟ್ಟೆಗೆ ಯುವಕರು ಚಾಕುವಿನಿಂದ ತಿವಿದಿದ್ದರು. ಬೇಟ್‌ನಲ್ಲಿದ್ದ ಇಬ್ಬರು ಪೊಲೀಸರು ಕೆನಡಿಯೇ ದುಷ್ಕರ್ಮಿ ಎಂದು ತಪ್ಪಾಗಿ ಭಾವಿಸಿ ಹಿಡಿದುಕೊಂಡಿದ್ದರು. ಅಸಲಿ ದುಷ್ಕರ್ಮಿಗಳು ಹಣದ ಬ್ಯಾಗ್ ಕಿತ್ತುಕೊಂಡು ಪರಾರಿಯಾಗಿದ್ದರು. ಹೊಟ್ಟೆಯಿಂದ ಕರುಳು ಹೊರಬಂದು ರಕ್ತ ಸುರಿಯುತ್ತಿರುವುದನ್ನು ನಂತರ ಗಮನಿಸಿದ ಪೊಲೀಸರು ಆಸ್ಪತ್ರೆಗೆ ಸೇರಿಸುವಷ್ಟರಲ್ಲಿ ಕೆನಡಿ ಮೃತಪಟ್ಟಿದ್ದರು. ಶ್ವಾನದಳವು ಪ್ರಿಮ್ ರೋಸ್ ರಸ್ತೆಯಲ್ಲಿರುವ ಎಸ್‌ಸಿ, ಎಸ್‌ಟಿ ಹಾಸ್ಟೆಲ್ ಬಳಿ ಹೋಗಿ ನಿಂತಿತ್ತು. ರೂಮ್ ನಂ.304ರಲ್ಲಿ ಇಬ್ಬರು ಆರೋಪಿಗಳು ರಕ್ತಸಿಕ್ತ ಚಾಕು ಸಮೇತ ಅಡಗಿ ಕೂತಿದ್ದರು. ಆದರೆ ಹೊರಗಿನಿಂದ ಬೀಗ ಹಾಕಿದ್ದರಿಂದ ಪೊಲೀಸರು ದಾರಿ ತಪ್ಪಿದರು.
ಕೆಲವೇ ದಿನಗಳಲ್ಲಿ ಇದೇ ಗ್ಯಾಂಗ್ ಮಲ್ಲೇಶ್ವರದ ದಿನಸಿ ಅಂಗಡಿಯವನ ಜತೆ ಜಗಳ ತೆಗೆದು, ತಿವಿದು ಕೊಂದು ಹಣ-ಚಿನ್ನ ದೋಚಿತು. ಈ ಪ್ರಕರಣದ ಬೆನ್ನಿಗೇ, ಶಿವಾನಂದ ಸರ್ಕಲ್ ಬಳಿ ಆನಂದ ಎಂಬಾತನ ಮೇಲೆ ಹಲ್ಲೆ ಮಾಡಿ ಹಣ ಮತ್ತು ಚೈನ್ ಕಿತ್ತುಕೊಂಡು ಹೋಗಿದ್ದರು. ಇದಾದ ಕೆಲವೇ ದಿನಗಳಲ್ಲಿ ಶೇಷಾದ್ರಿಪುರಂ ಠಾಣೆ ವ್ಯಾಪ್ತಿಯಲ್ಲಿ ಮಚ್ಚು-ಲಾಂಗ್‌ನೊಂದಿಗೆ ಆಭರಣದ ಅಂಗಡಿಗೆ ನುಗ್ಗಿ. ಮಾಲೀಕನ ತಮ್ಮನನ್ನು ಕೊಂಡು ಲಕ್ಷಾಂತರ ರೂ. ಮೌಲ್ಯದ ಆಭರಣಗಳನ್ನು ಒಂದೂ ಬಿಡದೆ ಗುಡಿಸಿಕೊಂಡು ಹೋಗಿದ್ದರು. ನನ್ನ ಠಾಣೆ ವ್ಯಾಪ್ತಿಗೆ ಈ ಪ್ರಕರಣಗಳು ಬಾರದಿದ್ದರೂ, ಎಫ್‌ಐಆರ್‌ಗಳನ್ನೆಲ್ಲ ಎದುರಿಗಿಟ್ಟುಕೊಂಡು ಆರೋಪಿಗಳ ಬೆನ್ನು ಬಿದ್ದೆ. ಹಲ್ಲೆಗೊಳಗಾದ ಆನಂದ್ ಎಂಬಾತನನ್ನು ವಿಚಾರಿಸಿದಾಗ, ಬನಶಂಕರಿಯಲ್ಲಿರುವ ತನ್ನ ಪತ್ನಿಯ ಮೇಲೂ ಇಬ್ಬರು ಹಲ್ಲೆ ನಡೆಸಿ, ಆಭರಣ ದೋಚಿ ಹಸಿರು ಸ್ಕೂಟರ್‌ನಲ್ಲಿ ಪರಾರಿಯಾದ ಸಂಗತಿ ಬಾಯಿಬಿಟ್ಟ.
ಆತನ ಪತ್ನಿ ವೇಶ್ಯಾವಾಟಿಕೆ ನಡೆಸುತ್ತಿದ್ದರಿಂದ ದೂರು ಕೊಡುವ ಗೋಜಿಗೆ ಹೋಗಿರಲಿಲ್ಲ. ನಾನು ಆ ಮನೆಗೆ ಭೇಟಿ ನೀಡಿದೆ. ಪಕ್ಕದ ಮೈದಾನದಲ್ಲಿ ಒಂದಿಷ್ಟು ಹುಡುಗರು ಕ್ರಿಕೆಟ್ ಆಡುತ್ತಿದ್ದರು. ಸುಮ್ಮನೆ ಅವರನ್ನು ಮಾತನಾಡಿಸಿದೆ. ಅಚ್ಚರಿ ಎಂದರೆ ಅವರಲ್ಲೊಬ್ಬ ಬಾಲಕ ಹಸಿರು ಸ್ಕೂಟರ್‌ನ ನಂಬರನ್ನು ನೋಟ್ ಮಾಡಿಕೊಂಡಿದ್ದ! (ಮುಂದೆ ಆ ಬಾಲಕ ಎಸ್‌ಐ ಆದ!) ಆ ನಂಬರ್‌ನ ಜಾಡು ಹಿಡಿದು ಹೋದ ನನಗೆ ಇಂದಿರಾನಗರದಲ್ಲಿ ಮಹೇಶ್ ಎಂಬಾತ ಪತ್ತೆಯಾದ. ‘ಏಳೂ ಮಂದಿ ಶ್ರೀಮಂತ ಮನೆತನದ ಡ್ರಾಪ್‌ಔಟ್ ವಿದ್ಯಾರ್ಥಿಗಳಾಗಿದ್ದು, ನನ್ನ ಸ್ಕೂಟರ್‌ನ್ನು ಬಲವಂತವಾಗಿ ಆಗಾಗ ತೆಗೆದುಕೊಂಡು ಹೋಗುತ್ತಾರೆ. ಅವರೆಲ್ಲ ಈಗ ಹೊರವಲಯದ ಕೋಗಿಲು ಎಂಬ ಪುಟ್ಟ ಗ್ರಾಮದಲ್ಲಿ ಮನೆ ಮಾಡಿಕೊಂಡಿದ್ದಾರೆ’ ಎಂದ. ಏಳು ಆರೋಪಿಗಳ ಹೆಸರು ಸ್ಪಷ್ಟವಾಯಿತು. ಅರುಣ್, ಈರಪ್ಪ ಗೌಡ, ಜಾನ್ಸನ್, ಪಳನಿ, ಪ್ರಶಾಂತ್, ಆರ್.ಸಿ. ಚಂದ್ರಶೇಖರ್ ಇವರಿಗೆಲ್ಲ ಲೀಡರ್ ಅರ್ಜುನ್ ಬೋಪಯ್ಯ.
ನಾನು ಸಿಬ್ಬಂದಿಗಳಾದ ನರಸಿಂಹಮೂರ್ತಿ, ಇಬ್ರಾಹಿಂ, ನಾಗೇಶ್ ಮತ್ತಿಬ್ಬರ ಜತೆ ಆ ಗ್ರಾಮಕ್ಕೆ ಧಾವಿಸಿದೆ. ಆ ಮನೆಯ ಬಳಿ ರೈತನೊಬ್ಬ ಕುರಿಗಳನ್ನು ಮೇಯಿಸುತ್ತಿದ್ದ. ನಾವೆಲ್ಲ ರೈತರ ವೇಶ ಧರಿಸಿ ಕುರಿ ಕಾಯುವಂತೆ ನಟಿಸತೊಡಗಿದೆವು. ಆರೋಪಿಗಳು ಬರಲೇ ಇಲ್ಲ. ಆ ಮನೆಯ ಮಾಲೀಕನನ್ನು ವಿಚಾರಿಸಿದಾಗ, ಬಾರ್‌ನಲ್ಲಿ ಕೆಲಸ ಮಾಡುತ್ತಿದ್ದ ಗಣೇಶ್ ಎಂಬಾತನ ಬಗ್ಗೆ ಹೇಳಿದರು. ನಾವೆಲ್ಲ ಗೂಸಾ ತಿನ್ನಬೇಕಾಗಿ ಬಂದಿದ್ದು ಆತನನ್ನು ಹಿಡಿಯಲು ಹೋದಾಗಲೇ! ಪಾಲು ಮಾಡುವ ಮೊದಲೇ, ಅರ್ಜುನ್ ಬೋಪಯ್ಯ ಮತ್ತು ಚಂದ್ರಶೇಖರ್ ಆಭರಣಗಳನ್ನೆಲ್ಲ ಹೊತ್ತುಕೊಂಡು ರಾತ್ರೋರಾತ್ರಿ ಪರಾರಿಯಾಗಿದ್ದಾರೆ. ಅವರನ್ನು ಹುಡುಕಿಕೊಂಡು ಉಳಿದ ಐವರು ಮಡಿಕೇರಿಗೆ ಹೋಗಿದ್ದಾರೆ ಎಂಬ ಮಾಹಿತಿ ಕೊಟ್ಟ ಗಣೇಶ. ಆತನನ್ನು ಕರೆದುಕೊಂಡು, ಮತ್ತೊಬ್ಬ ಎಸ್‌ಐ ಚಂದ್ರೇಗೌಡ ಮತ್ತು ಸಿಬ್ಬಂದಿ ಜತೆ ನಾನು ಖಾಸಗಿ ಕಾರ್‌ನಲ್ಲಿ ಮಡಿಕೇರಿಗೆ ತೆರಳಿದೆ. ಅಲ್ಲಿಯ ಎಲ್ಲ ಲಾಡ್‌ಜ್ಗಳನ್ನು ಹುಡುಕಿದರೂ ಸುಳಿವು ಸಿಗಲಿಲ್ಲ. ಸಂಜೆ 5ರ ಸುಮಾರಿಗೆ ನಾವೆಲ್ಲ ಮೇಯ್‌ನ್ ರೋಡ್‌ನ ಫುಟ್‌ಪಾತ್ ಮೇಲೆ ಕುಳಿತು ಮುಂದೇನು ಮಾಡೋದು ಎಂದು ಚಿಂತಿಸುತ್ತಿದ್ದೆವು. ಅಷ್ಟರಲ್ಲಿ ಪವಾಡಸದೃಶ ಘಟನೆಯೊಂದು ನಡೆಯಿತು.
(ಮುಂದುವರೆಯುವುದು)
Discussion about this post