1988
ಅದು ಕೇರಳದ ಚಂಗನಶೇರಿ ಬಸ್ ನಿಲ್ದಾಣ. ಅಲ್ಲಿಯ ಕಲ್ಲು ಬೆಂಚಿನ ಮೇಲೆ ಇನ್‌ಸ್ಪೆಕ್ಟರ್ ಸುರೇಂದ್ರ ನಾಯಕ್ ಜತೆ ನಾನು ಕೂತಿದ್ದೆ. ಅಂದುಕೊಂಡ ಕೆಲಸ ಆಗದೆ, ಹೊಟ್ಟೆಗೆ ಸರಿಯಾದ ಊಟವಿಲ್ಲದೆ, ಕೈಯಲ್ಲಿ ಕಾಸೂ ಇಲ್ಲದೆ ನಾವು ಜೋಲುಮೋರೆ ಹಾಕಿಕೊಂಡು ಕೂತಿದ್ದೆವು. ಕೊಲೆ ರಹಸ್ಯ ಭೇದಿಸುತ್ತ ಮುಂದಿನ ದಾರಿ ಕಾಣದೆ ಕಂಗಾಲಾಗಿದ್ದೆವು. ಸುರೇಂದ್ರ ನಾಯಕ್ ಪತ್ರಿಕೆಯೊಂದರ ಮೇಲೆ ಕಣ್ಣಾಡಿಸತೊಡಗಿದರು. ಶಾರ್ಜಾ ಕಪ್‌ನಲ್ಲಿ ಭಾರತೀಯ ತಂಡ ಯಥಾಪ್ರಕಾರ ಪಾಕ್ ವಿರುದ್ಧ ಅವಮಾನಕಾರಿಯಾಗಿ ಸೋತಿತ್ತು.
ಭಾರತೀಯ ಕ್ರಿಕೆಟ್ ಆಟಗಾರರು ಸಪ್ಪೆ ಮೋರೆ ಹಾಕಿಕೊಂಡು ಶಾರ್ಜಾದಿಂದ ಭಾರತಕ್ಕೆ ವಾಪಸಾಗುತ್ತಿರುವ ಚಿತ್ರವನ್ನು ಕ್ರೀಡಾ ಪುಟದಲ್ಲಿ ಪ್ರಕಟಿಸಲಾಗಿತ್ತು.
‘ಗಂಟುಮೂಟೆ ಕಟ್ಟಿದ ಇಂಡಿಯನ್ ಕ್ರಿಕೆಟರ್ಸ್’ ಎಂಬ ಧಾಟಿಯ ಹೆಡ್ಡಿಂಗ್ ದಪ್ಪ ಅಕ್ಷರಗಳಲ್ಲಿ ಕಣ್ಣಿಗೆ ಹೊಡೆಯುತ್ತಿತ್ತು. ಆ ಹೆಡ್ಡಿಂಗ್ ಓದಿದ ನಾಯಕ್ ‘ಅಶೋಕ್ ಇಲ್ಲಿ ನೋಡಿ. ಈಗ ನಮ್ಮ ಪರಿಸ್ಥಿತಿ ಇವರಿಗಿಂತ ಹೀನಾಯ. ಹೇಗ್ರೀ ಬೆಂಗಳೂರಿಗೆ ಹೋಗಿ ಮುಖ ತೋರಿಸೋದು.’ ಎಂದು ವ್ಯಂಗ್ಯವಾಗಿ ಹೇಳಿ ನಕ್ಕರು. ಆ ಪರಿಸ್ಥಿತಿಯಲ್ಲೂ ನನಗೆ ನಗು ಬಂತು. ಬೆಂಗಳೂರಿನಲ್ಲಿ ನಡೆದ ಡಬಲ್ ಮರ್ಡರ್‌ನ ಹಂತಕರ ಜಾಡು ಹುಡುಕುತ್ತ ರಬ್ಬರ್ ಎಸ್ಟೇಟ್ ಕೂಲಿಯಾಳುಗಳ ವೇಷದಲ್ಲಿ ಕೇರಳದ ಎಲ್ಲೆಂದರಲ್ಲಿ 25 ದಿನಗಳ ಕಾಲ ಸುತ್ತಿದ್ದೆವು! ಆದರೂ ನಮಗೆ ಕೊಲೆಗಾರರ ಸುಳಿವು ಗಿಕ್ಕಿರಲಿಲ್ಲ.
ಕೇರಳದಲ್ಲಿ ನಾವು ಪಟ್ಟ ಪಾಡು ಅಷ್ಟಿಷ್ಟಲ್ಲ. ಕೊಲೆಗಾರರು ಹೊರಟ ‘ಹೈಲೆಂಡ್ ಎಕ್‌ಸ್ಪ್ರೆಸ್’ ರೈಲನ್ನು ಗುರುಯಾಗಿಸಿಕೊಂಡು ನಾವು ತ್ರಿವೆಂಡ್ರಂಗೆ ಹೊರಟಿದ್ದೇವು. ಆಗ ಈಗಿನಂತೆ ಮೊಬೈಲ್, ಇಂಟರ್‌ನೆಟ್, ಜಿಪಿಆರ್‌ಎಸ್ ತಂತ್ರಜ್ಞಾನ ಇರಲಿಲ್ಲವಲ್ಲ? ಅತಿ ಚಿಕ್ಕ ಮಾಹಿತಿಯನ್ನೂ ಫೀಲ್‌ಡ್ಗೆ ಇಳಿದೇ ಸಂಗ್ರಹಿಸಬೇಕಿತ್ತು. ಇನ್‌ಫರ್ಮೆಷನ್ ಒಬ್ಬರಿಂದ ಮತ್ತೊಬ್ಬರಿಗೆ ತಲುಪಬೇಕಾದರೆ ದಿನಗಟ್ಟಲೆ, ಕೆಲವೊಮ್ಮೆ ವಾರಗಟ್ಟಲೆ ಹಿಡಿಯುತ್ತಿತ್ತು. ಈಗಾದರೆ ಮೊಬೈಲ್ ಟವರ್‌ನ ಸಿಗ್ನಲ್ ಬಳಸಿ, ಆರೋಪಿ ಪಾತಾಳದಲ್ಲಿ ಅಡಗಿದ್ದರೂ ಕ್ಷಣ ಮಾತ್ರದಲ್ಲಿ ಪತ್ತೆ ಹಚ್ಚಬಹುದು. ಈ ಯಾವ ತಂತ್ರಜ್ಞಾನದ ನೆರವೂ ಇಲ್ಲದೆ ಆ ದಿನಗಳಲ್ಲಿ ನಾವು ಆರೋಪಿಗಳನ್ನು ಬೆನ್ನಟ್ಟಿ ಹಿಡಿಯುತ್ತಿದ್ದ ರೀತಿ ನೆನಪಿಸಿಕೊಂಡರೆ ಈಗ ಸೋಜಿಗ ಎನಿಸುತ್ತದೆ. ನಾವು ಅಷ್ಟೊಂದು ದಿನ ಅಲ್ಲಿ ಉಳಿಯಬೇಕಾಗಿ ಬರುತ್ತದೆ ಎಂಬ ಅಂದಾಜೇ ಇರಲಿಲ್ಲ. ಜೇಬಿನಲ್ಲಿದ್ದ ದುಡ್ಡೆಲ್ಲ ಖರ್ಚಾಗಿ ಹೋಯಿತು. ಎರಡು ಹೊತ್ತಿನ ಊಟಕ್ಕೂ ಪರದಾಡಬೇಕಾಯಿತು.
ಈಗಾದರೆ ನಮ್ಮ ಅಕೌಂಟ್‌ಗೆ ಹಣ ಹಾಕಲು ಹೇಳಿ ಎಟಿಎಂ ಮೂಲಕ ಸುಲಭವಾಗಿ ಹಣ ಪಡೆಯಬಹುದು. ಆದರೆ ಆಗ? ಟಾರ್ಗೆಟ್ ರೀಚ್ ಮಾಡದೆ ವಾಪಸ್ ಬೆಂಗಳೂರಿಗೆ ಹೋದರೆ ಅವಮಾನ. ಕೊನೆಗೆ ಬೇರೆ ದಾರಿ ಕಾಣದೆ. ಪಾಪ ಸುರೇಂದ್ರ ನಾಯಕ್ ಅವರು ಬಂಗಾರದ ಉಂಗುರ ಮಾರಿ ಬಿಟ್ಟರು. ಆ ಹಣವನ್ನು ಮಿತವ್ಯಯವಾಗಿ ಖರ್ಚು ಮಾಡತೊಡಗಿದೆವು. ಮಧ್ಯಾಹ್ನ ಮಾತ್ರ ಊಟ ಮಾಡುತ್ತಿದ್ದೆವು. ಬೆಳಿಗ್ಗೆ ಮತ್ತು ಸಂಜೆ ಅಲ್ಲಿ ಅಗ್ಗವಾಗಿ ಸಿಗುತ್ತಿದ್ದ ಗೆಣಸುಗಳನ್ನು ತಿಂದು ದಿನ ದೂಡತೊಡಗಿದೆವು…
ಅದು ಠಾಕೂರ್ ಫ್ಯಾಮಿಲಿ. ಅವರದು ಒಂದು ರೀತಿಯಲ್ಲಿ ‘ಭಾಗ್ ಮಿಲ್ಖಾ ಭಾಗ್’ ಕತೆ. ದೇಶ ಇಬ್ಭಾಗವಾಗಿ ಪಾಕಿಸ್ಥಾನ ಅಸ್ತಿತ್ವಕ್ಕೆ ಬಂದಾಗ ಈ ಕುಟುಂಬ ಅಲ್ಲಿ ಅನುಭವಿಸಿದ ಯಾತನೆ ಅಷ್ಟಿಷ್ಟಲ್ಲ. ತಲೆತಲಾಂತರಗಳಿಂದ ಸಂಪಾದಿಸಿದ್ದ ಆಸ್ತಿ-ಪಾಸ್ತಿ, ಮನೆ-ಮಠ ತೊರೆದು, ಸಂಬಂಧಿಕರನ್ನು ಕಳೆದುಕೊಂಡು, ಜೀವನವನ್ನು ಕೈಯಲ್ಲಿ ಹಿಡಿದುಕೊಂಡು ಭಾರತಕ್ಕೆ ಓಡಿ ಬಂದ ಕುಟುಂಬ ಅದು. ಕೋಲ್ಕೊತಾ, ದಿಲ್ಲಿ, ಮುಂಬಯಿ… ಹೀಗೆ ದೇಶದ ನಾನಾ ಭಾಗಗಳಲ್ಲಿ ಹೊಸ ನೆಲೆ ಅರಸುತ್ತ 1948ರ ಸುಮಾರಿಗೆ ಆ ಕುಟುಂಬ ಬೆಂಗಳೂರಿಗೆ ಕಾಲಿರಿಸಿತ್ತು. ಆ ಕುಟುಂಬಕ್ಕೆ ಬೆಂಗಳೂರಿನ ಹವಾಮಾನ ಶಾಂತಿಧಾಮವಾಗಿ ಕಂಡಿತ್ತು. ಕೆ.ಆರ್. ಮಾರ್ಕೆಟ್‌ನಲ್ಲಿ ಮಾವಿನಹಣ್ಣಿನ ಮಂಡಿ ತೆರೆದು ಸಣ್ಣದಾಗಿ ವ್ಯಾಪಾರ ನಡೆಸುತ್ತ ಹೊಸ ಬದುಕು ಆರಂಭಿಸಿದ ಠಾಕೂರ್, ಭೂ ವ್ಯವಹಾರಕ್ಕೂ ಇಳಿದು ಮತ್ತೆ ಶ್ರೀಮಂತರಾಗಿದ್ದರು. ಶೇಷಾದ್ರಿಪುರಂನ ಅಶೋಕ ಹೋಟೆಲ್ ಹಿಂಭಾಗದಲ್ಲಿ ಆ ಕಾಲದಲ್ಲೇ ಐದು ಮಹಡಿಯ ಬೃಹತ್ ಮನೆ ನಿರ್ಮಿಸಿದ್ದರು.
‘ನನ್ನ ಐವರು ಮಕ್ಕಳಿಗೆ ಐದು ಮನೆ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ಇಬ್ಬರು ಹೆಣ್ಣು ಮಕ್ಕಳು ಮದುವೆಯಾಗಿ ದಿಲ್ಲಿ ಮತ್ತು ಪಂಜಾಬ್‌ನಲ್ಲಿ ನೆಲೆಸಿದರು. ಒಬ್ಬ ಹುಡುಗ ತಿಪಟೂರಿಗೆ ಹೋಗಿ ವಹಿವಾಟು ಆರಂಭಿಸಿದ. ಠಾಕೂರ್ ನಿಧನದ ಬಳಿಕ ಆ ಮನೆಯಲ್ಲಿ ಅವರ ಪತ್ನಿ ಸಾವಿತ್ರಿದೇವಿ ಮತ್ತು ಇಬ್ಬರು ಗಂಡು ಮಕ್ಕಳ ಕುಟುಂಬಗಳು ವಾಸವಿದ್ದವು. ಸುಖ-ಸಮೃದ್ಧಿಯಿಂದಿದ್ದ ಆ ಕುಟುಂಬದ ಇಬ್ಬರು 1988ರ ಸೆ.22ರಂದು ದಾರುಣವಾಗಿ ಕೊಲೆಯಾಗಿ ಹೋದರು. ಆ ಕೊಲೆಗೆ ಮೂಲ -ಠಾಕೂರ್ ಸೊಸೆಯ ಕಲೆಯ ಗೀಳು! ಕಲೆಗಾರನೊಬ್ಬ ಕೊಲೆಗಾರನಾಗಿ ಹೋದ!!
(ಮುಂದುವರೆಯುವುದು)
Discussion about this post