ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಹಾವೇರಿ: ಕೊರೋನಾದಂತಹ ಮಾರಕ ರೋಗ ಹರಡಿರುವ ಸಂದರ್ಭದಲ್ಲಿ ಮೆಡಿಕಲ್ ಶಾಪ್’ಗಳಾಗಲೀ, ಖಾಸಗಿ ವೈದ್ಯರು ಆಸ್ಪತ್ರೆಗಳನ್ನಾಗಲೀ ಯಾವುದೇ ಕಾರಣಕ್ಕೂ ಬಂದ್ ಮಾಡಬಾರದು ಎಂದು ಜಿಲ್ಲಾಧಿಕಾರಿಗಳ ಮೂಲಕ ಎಲ್ಲಾ ಖಾಸಗಿ ವೈದ್ಯರಿಗೆ ನೊಟೀಸ್ ನೀಡಲಾಗಿದೆ.
ಒಂದು ವೇಳೆ ಸರ್ಕಾರದ ನೋಟೀಸ್‌ಗೂ ಬೆಲೆಕೊಡದೇ ಯಾರಾದರೂ ವೈದ್ಯರು ಆಸ್ಪತ್ರೆ ತೆರೆಯದೇ ಇದ್ದಲ್ಲಿ ಅಂತಹ ವೈದ್ಯರ ಪರವಾನಿಗೆ ರದ್ದುಪಡಿಸಲಾಗುವುದು ಎಂದು ಕೃಷಿ ಸಚಿವರಾದ ಬಿ.ಸಿ. ಪಾಟೀಲ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಸೋಮವಾರ ಜಿಲ್ಲೆಯ ಹಿರೇಕೆರೂರು ನಗರ, ರಾಣೆಬೆನ್ನೂರು, ರಾಣೆಬೆನ್ನೂರು ಸರ್ಕಾರಿ ಆಸ್ಪತ್ರೆ , ಹಾವೇರಿ ಎಪಿಎಂಸಿ ಸೇರಿದಂತೆ ಹಲವೆಡೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕೊರೊನಾ ಬಗ್ಗೆ ಜನತೆಗೆ ಜಾಗೃತಿ ಮೂಡಿಸಿದರು.
ಬಳಿಕ ಹಾವೇರಿ ನಗರಸಭಾ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೊರೊನಾ ಬಗ್ಗೆ ಜಾಗೃತಿ ಮೂಡಿಸುವುದು ಆರೋಗ್ಯದ ದೃಷ್ಟಿಯಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮಾಡುವುದು ಆರೋಗ್ಯ, ವೈದ್ಯಕೀಯ, ಗೃಹ ಈ ಇಲಾಖೆಗಳದ್ದಷ್ಟೇ ಕೆಲಸ ಎಂದು ಭಾವಿಸದೇ ಜನರು ಈ ಬಗ್ಗೆ ಸ್ವಯಂಪ್ರೇರಿತರಾಗಿ ಜಾಗೃತರಾಗುವುದು ಮುಖ್ಯ ಎಂದು ಕರೆ ನೀಡಿದರು.
ನಮ್ಮ ನಮ್ಮ ಮನೆಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸ್ವದಿಗ್ಬಂಧನ ಹಾಕಿಕೊಳ್ಳುವ ಮೂಲಕ ನಮ್ಮ ಹಾಗೂ ನಮ್ಮ ಕುಟುಂಬದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಜನರ ಆರೋಗ್ಯ ಕಾಪಾಡಲು ಕಟಿಬದ್ಧರಾಗಿದ್ದು ಜನತೆ ಸಾಮಾಜಿಕ ಅಂತರ ಕಾಯ್ದುಕೊಂಡು ಸಹಕರಿಸಬೇಕು. ಅನಾವಶ್ಯಕ ಮನೆಯಿಂದ ಹೊರಬರದೇ ಅತಿ ಜರೂರು ಇದ್ದಲ್ಲಿ ಮಾತ್ರ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಜೊತೆಗೆ ಮನೆಯಿಂದ ಹೊರಬರಬೇಕು ಎಂದು ಮನವಿ ಮಾಡಿದರು.
ಈಗಾಗಲೇ ಅತಿಅವಶ್ಯಕ ವಸ್ತುಗಳಾದ ದಿನಸಿ, ತರಕಾರಿ, ಹಣ್ಣುಹಂಪಲುಗಳನ್ನು ವಾರ್ಡ್‌ವಾರು ತಳ್ಳುವಗಾಡಿಯ ಮೂಲಕ ಮಾರಲು ಅನುಕೂಲ ಮಾಡಿಕೊಡಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಹಾವೇರಿ ಶಾಸಕ ನೆಹರು ಓಲೇಕಾರ್, ಬ್ಯಾಡಗಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಉಪಸ್ಥಿತರಿದ್ದರು.
(ವರದಿ: ಕೃಷಿ ಸಚಿವರ ಮಾಧ್ಯಮ ಕಾರ್ಯದರ್ಶಿ)
Get in Touch With Us info@kalpa.news Whatsapp: 9481252093







Discussion about this post